Ola Electric Bikes: ನಾಲ್ಕು ಹೊಸ ಓಲಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಗಳು ಅನಾವರಣ
ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಆವೃತ್ತಿಗಳನ್ನು ಅನಾವರಣಗೊಳಿಸಿದ್ದು, ಹೊಸ ಇವಿ ಬೈಕ್ ಮಾದರಿಗಳನ್ನು 2024ರ ಹೊತ್ತಿಗೆ ಬಿಡುಗಡೆ ಮಾಡುವ ಸುಳಿವು ನೀಡಿದೆ.
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಓಲಾ ಎಲೆಕ್ಟ್ರಿಕ್(Ola Electric) ಕಂಪನಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ವಾಹನಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಅರಿತಿರುವ ಓಲಾ ಕಂಪನಿಯು ಗ್ರಾಹಕರ ಬೇಡಿಕೆ ಆಧರಿಸಿ ನಾಲ್ಕು ಹೊಸ ಇವಿ ಬೈಕ್ ಮಾದರಿಗಳನ್ನು ಸಿದ್ದಪಡಿಸುತ್ತಿದೆ. ಹೊಸ ಇವಿ ಬೈಕ್ ಬಿಡುಗಡೆಗೂ ಮುನ್ನ ಅನಾವರಣಗೊಳಿಸಲಾಗಿದ್ದು, ಇವು ಇವಿ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ನೀರಿಕ್ಷೆಯಲ್ಲಿವೆ.
ಹೌದು, ಸದ್ಯ ಇವಿ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇವಿ ಬೈಕ್ ಮಾದರಿಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದೆ. ಹೊಸ ಇವಿ ಬೈಕ್ ಬಿಡುಗಡೆಗೂ ಮುನ್ನ ಕಾನ್ಸೆಪ್ಟ್ ಆವೃತ್ತಿಗಳನ್ನು ಅನಾವರಣಗೊಳಿಸಲಾಗಿದ್ದು, ಇವು ಕ್ರೂಸರ್, ಅಡ್ವೆಂಚರ್ ಮತ್ತು ರೋಡ್ ಸ್ಟರ್ ಬೈಕ್ ವಿಭಾಗದಲ್ಲಿ ಸದ್ದು ಮಾಡಲಿವೆ. ಓಲಾ ಹೊಸ ಬೈಕ್ ಮಾದರಿಗಳು ಫ್ಯೂಚರಿಸ್ಟಿಕ್ ವಿನ್ಯಾಸ ಮತ್ತು ತಾಂತ್ರಿಕ ಸೌಲಭ್ಯಗಳೊಂದಿಗೆ ಸ್ಪೋರ್ಟಿ ಲುಕ್ ಹೊಂದಿದ್ದು, ಇವು ಸಾಮಾನ್ಯ ರೈಡಿಂಗ್ ಉದ್ದೇಶಕ್ಕೆ ಮಾತ್ರವಲ್ಲದೆ ಪರ್ಫಾಮೆನ್ಸ್ ವಿಭಾಗದಲ್ಲೂ ಗಮನಸೆಳೆಯಲಿವೆ.
ಇದನ್ನೂ ಓದಿ: ಅತಿ ಕಡಿಮೆ ಬೆಲೆಗೆ ಓಲಾ ಎಸ್1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಹೊಸ ತಲೆಮಾರಿನ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಓಲಾ ಕಾನ್ಸೆಪ್ಟ್ ಇವಿ ಬೈಕ್ ಮಾದರಿಗಳು ಸುರಕ್ಷಿತ ಚಾಲನೆಗೆ ಸಹಕಾರಿಯಾಗುವ ಹಲವಾರು ಫೀಚರ್ಸ್ ಹೊಂದಿವೆ. ಹೊಸ ಇವಿ ಬೈಕ್ ಮಾದರಿಗಳಲ್ಲಿ ಟೆಸ್ಲಾ ಸೈಬರ್ ಟ್ರಕ್ ಪ್ರೇರಣೆ ಹೊಂದಿರುವ ದೊಡ್ಡದಾದ ವೀಂಡ್ ಸ್ಕ್ರೀನ್, ಎಲ್ ಇಡಿ ಸ್ಟ್ರೀಪ್ ಹೆಡ್ ಲ್ಯಾಂಪ್, ಕ್ಲಿಪ್ ಆನ್ ಹ್ಯಾಂಡಲ್ ಬಾರ್, ಡಿಜಿಟಲ್ ಡಿಸ್ ಪ್ಲೇ, ದೊಡ್ಡದಾದ ಸ್ವಿಂಗ್ ಆರ್ಮ್, ಮುಂಭಾಗದ ಚಕ್ರದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ. ಆದರೆ ಕಾನ್ಸೆಪ್ಟ್ ಮಾದರಿಗಳಲ್ಲಿ ನೀಡಲಾಗಿರುವ ಕೆಲವು ಫೀಚರ್ಸ್ ಗಳು ಉತ್ಪಾದನಾ ಆವೃತ್ತಿಯಲ್ಲಿ ಬದಲಾವಣೆಗೊಳಿಸುವ ಸಾಧ್ಯತೆಗಳಿದ್ದು, ಬ್ಯಾಟರಿ ಪ್ಯಾಕ್ ಕುರಿತಾಗಿ ಯಾವುದೇ ಮಾಹಿತಿ ನೀಡಲಾಗಿಲ್ಲ.
ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಗಳಿಗಾಗಿ ಓಲಾ ಕಂಪನಿಯು ಈಗಾಗಲೇ ಸುಧಾರಿತ ತಂತ್ರಜ್ಞಾನ ಪ್ರೇರಿತ ವಿವಿಧ ಬ್ಯಾಟರಿ ಪ್ಯಾಕ್ ನಿರ್ಮಾಣ ಮಾಡಲಾಗುತ್ತಿದ್ದು, ಇವು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಆಗುವ ಮೂಲಕ ಹೆಚ್ಚಿನ ಮೈಲೇಜ್ ಹಿಂದಿರುಗಿಸಲಿವೆ. ಹೊಸ ಇವಿ ಬೈಕ್ ಮಾದರಿಗಳಲ್ಲಿ ಓಲಾ ಕಂಪನಿಯು 5 ಕೆವಿಹೆಚ್ ನಿಂದ 15 ಕೆವಿಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡುವ ಸಾಧ್ಯತೆಗಳಿದ್ದು, ಇವು 250 ಕಿ.ಮೀ ನಿಂದ 400 ಕಿ.ಮೀ ಮೈಲೇಜ್ ಹಿಂದಿರುಗಿಸಲಿವೆ.
ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!
ಹೊಸ ಇವಿ ಬೈಕ್ ಮಾದರಿಗಳಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ವಿವಿಧ ಹಂತದ ಬ್ಯಾಟರಿ ಪ್ಯಾಕ್ ಆಯ್ಕೆ ಪರಿಚಯಸಿಲಿದ್ದು, ಇದರಿಂದ ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಗಳನ್ನು ಖರೀದಿಸಲು ಸಹಕಾರಿಯಾಗಿದೆ. ಜೊತೆಗೆ ಹೊಸ ಇವಿ ಬೈಕ್ ಮಾದರಿಗಳು ವಿವಿಧ ವಿಭಾಗಗಳಲ್ಲಿ ಖರೀದಿಗೆ ಲಭ್ಯವಾಗುವುದರಿಂದ ಗ್ರಾಹಕರ ಆಯ್ಕೆ ಹೆಚ್ಚಿಸಲಿದ್ದು, 2024ರ ವೇಳೆಗೆ ಇವು ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಹೊಸ ಇವಿ ಬೈಕ್ ಮಾದರಿಗಳನ್ನು ಓಲಾ ಕಂಪನಿಯು ಹಂತ-ಹಂತವಾಗಿ ಬಿಡುಗಡೆ ಮಾಡಲಿದ್ದು, ವಿವಿಧ ಸೆಗ್ಮೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿವೆ.
ಇನ್ನು ಓಲಾ ಎಲೆಕ್ಟ್ರಿಕ್ ಕಂಪನಿಯು ಹೊಸ ಇವಿ ಬೈಕ್ ಮಾದರಿಗಳನ್ನು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಎಕ್ಸ್ ಶೋರೂಂ ಪ್ರಕಾರ ರೂ. 1.50 ಲಕ್ಷದಿಂದ ರೂ. 2.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ಮಾಡುವ ಸಾಧ್ಯತೆಗಳಿದ್ದು, ಇವು ಸಾಮಾನ್ಯ ಪೆಟ್ರೋಲ್ ಬೈಕ್ ಮಾದರಿಗಳಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರಲಿವೆ. ಹೀಗಾಗಿ ಭವಿಷ್ಯದಲ್ಲಿ ಇವು ಭಾರೀ ಬೇಡಿಕೆಯೊಂದಿಗೆ ಅಗ್ರಸ್ಥಾನ ಕಾಯ್ದುಕೊಳ್ಳಲಿದ್ದು, ಇದಕ್ಕಾಗಿ ಓಲಾ ಕಂಪನಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.
Published On - 7:17 pm, Fri, 18 August 23