ಟಾಟಾ ಕರ್ವ್ ಇವಿ ಬ್ಯಾಟರಿ ಮಾಹಿತಿ ಬಹಿರಂಗ- ಪ್ರತಿ ಚಾರ್ಜ್ ಗೆ 550 ಕಿ.ಮೀ ಮೈಲೇಜ್ ಪಕ್ಕಾ!
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಕರ್ವ್ ಇವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಇದೀಗ ಹೊಸ ಕಾರಿನ ಬ್ಯಾಟರಿ ಆಯ್ಕೆಗಳ ಮಾಹಿತಿಯನ್ನು ಹಂಚಿಕೊಂಡಿದೆ.
ವಿನೂತನ ಕಾರು ಮಾದರಿಗಳ ಮೂಲಕ ಎಸ್ ಯುವಿ ವಿಭಾಗದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಬಹುನೀರಿಕ್ಷಿತ ಕರ್ವ್ ಇವಿ ಅನಾವರಣಗೊಳಿಸಿದ್ದು, ಇದೀಗ ಕಂಪನಿಯು ಹೊಸ ಕಾರಿನ ಬ್ಯಾಟರಿ ಆಯ್ಕೆಯ ಮಾದರಿಯನ್ನು ಹಂಚಿಕೊಂಡಿದೆ. ಹೊಸ ಕರ್ವ್ ಇವಿ ಮಾದರಿಗಾಗಿ ಎರಡು ಬ್ಯಾಟರಿ ಆಯ್ಕೆ ಲಭ್ಯವಿರಲಿದ್ದು, ಹೊಸ ಕಾರಿನ ಆರಂಭಿಕ ಮಾದರಿಯಾಗಿ 40.5 ಕೆವಿಹೆಚ್ ಮತ್ತು ಟಾಪ್ ಎಂಡ್ ಮಾದರಿಯಲ್ಲಿ 55 ಕೆವಿಹೆಚ್ ಬ್ಯಾಟರಿ ಆಯ್ಕೆ ಪಡೆದುಕೊಳ್ಳಲಿದೆ.
40.5 ಕೆವಿಹೆಚ್ ಬ್ಯಾಟರಿ ಪ್ಯಾಕ್ ಈಗಾಗಲೇ ನೆಕ್ಸಾನ್ ಇವಿ ಮಾದರಿಯಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಹೊಸದಾಗಿ ನೀಡಲಾಗುತ್ತಿರವ 55 ಕೆವಿಹೆಚ್ ಬ್ಯಾಟರಿ ಹೆಚ್ಚಿನ ಮೈಲೇಜ್ ನೀಡುತ್ತದೆ. ಈ ಮೂಲಕ ಹೊಸ ಕಾರಿನ ಆರಂಭಿಕ ಮಾದರಿಯು ಪ್ರತಿ ಚಾರ್ಜ್ ಗೆ 465 ಕಿ.ಮೀ ಮೈಲೇಜ್ ನೀಡಿದಲ್ಲಿ ಟಾಪ್ ಎಂಡ್ ಮಾದರಿಯು 550 ಕಿ.ಮೀ ಮೈಲೇಜ್ ನೀಡಲಿದೆ.
ಕರ್ವ್ ಹೊಸ ಕಾರಿನ ಟಾಪ್ ಎಂಡ್ ಮಾದರಿಯು ಹೆಚ್ಚಿನ ಮಟ್ಟದ ಫೀಚರ್ಸ್ ಜೊತೆಗೆ ಭರ್ಜರಿ ಮೈಲೇಜ್ ನೀಡಲಿದ್ದು, ಇದರ ಬೆಲೆ ಕೂಡಾ ತುಸು ದುಬಾರಿಯಾಗಿದೆ. ಹೀಗಾಗಿ ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ಮಾದರಿಯ ಬ್ಯಾಟರಿ ಆಯ್ಕೆ ಮಾಡಬಹುದಾಗಿದ್ದು, ಆರಂಭಿಕ ಮಾದರಿಗೂ ಅನ್ವಯಿಸುವಂತೆ ಹಲವಾರು ಫೀಚರ್ಸ್ ಗಳನ್ನು ನೀಡಲಾಗಿದೆ.
ಇನ್ನು ಅನಾವರಣಗೊಂಡಿರುವ ಟಾಟಾ ಕರ್ವ್ ಇವಿ ಮುಂದಿನ ತಿಂಗಳು ಅಗಸ್ಟ್ 7ರಂದು ಅಧಿಕೃತವಾಗಿ ಬಿಡುಗಡೆಯಾಗುತ್ತಿದ್ದು, ಹೊಸ ಕಾರು ಏರೋಡೈನಾಮಿಕ್ ವಿನ್ಯಾಸದೊಂದಿಗೆ ಸಖತ್ ಸ್ಪೋರ್ಟಿಯಾಗಲಿದೆ. ಹೊಸ ಕಾರಿನಲ್ಲಿ ಎತ್ತರದ ವ್ಹೀಲ್ ನೊಂದಿಗೆ ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯೆರೆನ್ಸ್ ನೀಡಲಾಗಿದ್ದು, ಇದು ವೇಗ ಚಾಲನೆಯ ಸಂದರ್ಭದಲ್ಲೂ ಅತ್ಯುತ್ತಮ ರೀತಿಯಲ್ಲಿ ನಿಯಂತ್ರಣ ಹೊಂದಿರಲಿದೆ. ಹಾಗೆಯೇ ಹೊಸ ಕರ್ವ್ ಇವಿ ಕಾರು ಮಾದರಿಯು ನೆಕ್ಸಾನ್ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣಗೊಂಡಿದ್ದು, ಇದು ವಿನೂತನ ಫೀಚರ್ಸ್ ಗಳೊಂದಿಗೆ ಕೂಪೆ ಎಸ್ ಯುವಿ ವೈಶಿಷ್ಟ್ಯತೆ ಹೊಂದಿದೆ.
ಜೊತೆಗೆ ಹೊಸ ಇವಿ ಮಾದರಿಯಲ್ಲಿ ನೆಕ್ಸಾನ್ ಇವಿಗಿಂತೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಮತ್ತು ಹೊಸ ಮಾನದಂಡಗಳನ್ನು ಒಳಗೊಂಡ ಸುರಕ್ಷಾ ಫೀಚರ್ಸ್ ಗಳನ್ನು ನೀಡಲಾಗುತ್ತಿದ್ದು, ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಬಯಸುವ ಗ್ರಾಹರಿಗೆ ಪನೊರಮಿಕ್ ಗ್ಲಾಸ್ ರೂಫ್ ಸೇರಿ ಹಲವಾರು ಫೀಚರ್ಸ್ ನೀಡಲಾಗಿದೆ. ಇದಲ್ಲದೆ ಕ್ಯಾಬಿನ್ ಒಳಭಾಗದಲ್ಲೂ ಹೆಚ್ಚಿನ ಮಟ್ಟದ ಫೀಚರ್ಸ್ ನೀಡಲಾಗಿದ್ದು, ಇದು ದೂರದ ಪ್ರಯಾಣಕ್ಕೂ ಅನೂಕರವಾಗುವಂತಹ ಸ್ಥಳಾವಕಾಶ ಹೊಂದಿದೆ.
ಈ ಮೂಲಕ ಹೊಸ ಕರ್ವ್ ಕಾರು ಎಲೆಕ್ಟ್ರಿಕ್ ನಲ್ಲಿ ಮಾತ್ರವಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲೂ ಖರೀದಿಗೆ ಲಭ್ಯವಾಗುತ್ತಿದೆ. ಆದರೆ ಸದ್ಯ ಟಾಟಾ ಕಂಪನಿಯು ಕರ್ವ್ ಇವಿ ಮಾತ್ರ ಬಿಡುಗಡೆ ಮಾಡುತ್ತಿದ್ದು, 2025 ಮಧ್ಯಂತರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳನ್ನು ಪರಿಚಯಿಸಲಿದೆ. ಹೀಗಾಗಿ ಕರ್ವ್ ಇವಿ ಮುಂಬರುವ ಕೆಲವೇ ದಿನಗಳಲ್ಲಿ ಗ್ರಾಹಕರ ಕೈಸೇರಲಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 17 ಲಕ್ಷದಿಂದ ರೂ. 22 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.