ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್
ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದೆ.
ಪ್ರಯಾಣಿಕರ ಬಳಕೆಯ ಕಾರುಗಳ ಜೊತೆಗೆ ವಾಣಿಜ್ಯ ವಾಹನಗಳ (Tata commercial vehicles) ಉತ್ಪಾದನೆಯಲ್ಲೂ ಮುಂಚೂಣಿ ಹೊಂದಿರುವ ಟಾಟಾ ಮೋಟಾರ್ಸ್ (Tatat Motors) ಕಂಪನಿ ಇದೀಗ ಹೊಸ ಮೈಲಿಗಲ್ಲು ಸಾಧಿಸಿದೆ. ಲಕ್ನೋನಲ್ಲಿರುವ ತನ್ನ ಅತಿದೊಡ್ಡ ವಾಣಿಜ್ಯ ವಾಹನ ಉತ್ಪಾದನಾ ಘಟಕದಲ್ಲಿ ಬರೋಬ್ಬರಿ 9 ಲಕ್ಷ ವಾಹನಗಳ ಉತ್ಪಾದನೆ ಮಾಡುವ ಹೊಸ ಮೈಲಿಗಲ್ಲು ಸಾಧಿಸಿದ್ದು, ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಂಡಿದೆ.
1992ರಲ್ಲಿ ಆರಂಭವಾಗಿದ್ದ ಲಕ್ನೋ ವಾಣಿಜ್ಯ ವಾಹನ ಉತ್ಪಾದನಾ ಘಟಕವು ಟಾಟಾ ಮೋಟಾರ್ಸ್ ನ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಲಕ್ನೋ ಘಟಕದಲ್ಲಿ ಲಘು ವಾಣಿಜ್ಯಗಳು, ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳು ಮತ್ತು ಭಾರೀ ಗಾತ್ರದ ವಾಣಿಜ್ಯ ವಾಹನಗಳನ್ನು ತಯಾರಿಸಲಾಗುತ್ತಿದೆ. ಜೊತೆಗೆ ಇದೇ ವಾಹನ ಉತ್ಪಾದನಾ ಘಟಕದಲ್ಲಿ ಎಲೆಕ್ಟ್ರಿಕ್ ಬಸ್ ಮತ್ತು ಇತರೆ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಸಹ ಉತ್ಪಾದನೆಯನ್ನು ಸಹ ಕೈಗೊಳ್ಳಲಾಗುತ್ತಿದೆ.
ಈ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ದೇಶದ ಪ್ರಮುಖ ಕಡೆಗಳಲ್ಲಿ ಕಾರ್ಯ ನಿರ್ವಹಣೆಯಲ್ಲಿರುವ ತನ್ನ ವಿವಿಧ ವಾಣಿಜ್ಯ ವಾಹನ ಉತ್ಪಾದನಾ ಘಟಕಗಳ ಮೂಲಕ ಉತ್ಪಾದನೆ ಮತ್ತು ಮಾರಾಟದಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಟಾಟಾ ಹೊಸ ವಾಣಿಜ್ಯ ವಾಹನಗಳು ಕಾರಿನಲ್ಲಿರುವಂತೆ ವಿವಿಧ ಫೀಚರ್ಸ್ ಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ಇನ್ನು ಗ್ರಾಹಕರ ನಿರೀಕ್ಷೆಗಳನ್ನು ಮೀರಿದ ಉನ್ನತ ಗುಣಮಟ್ಟದ ವಾಹನಗಳನ್ನು ಉತ್ಪಾದಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಲ್ಲೂ ಭರ್ಜರಿ ಬೇಡಿಕೆ ಹೊಂದಿದೆ. ಇತ್ತೀಚೆಗೆ ಬಿಡುಗಡೆಯಾಗಲಿರುವ ಹೊಸ ವಾಣಿಜ್ಯ ವಾಹನಗಳು ಟಾಟಾ ಮೋಟಾರ್ಸ್ ಕಂಪನಿಗೆ ಭಾರೀ ಆದಾಯ ತಂದುಕೊಡುತ್ತಿದ್ದು, ಮಹೀಂದ್ರಾ ವಾಣಿಜ್ಯ ವಾಹನಗಳೊಂದಿಗೆ ಭಾರೀ ಪೈಪೋಟಿ ನೀಡುತ್ತಿದೆ.
ಟಾಟಾ ಮೋಟಾರ್ಸ್ ಹೊಸ ವಾಣಿಜ್ಯ ವಾಹನಗಳು ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಮಾಲೀಕರಿಗೆ ಹೆಚ್ಚಿನ ಲಾಭ ತಂದುಕೊಡುತ್ತಿದ್ದು, ಉದ್ಯಮದ ಕಾರ್ಯಾಚರಣೆಯನ್ನು ಸುಲಭಗೊಳಿಸಲು 24 ಗಂಟೆಗಳ ರಸ್ತೆ ಬದಿ ಸೇವೆಗಳನ್ನು ಖಾತ್ರಿಪಡಿಸುತ್ತಿದೆ. ಜೊತೆಗೆ ಹೊಸ ವಾಹನಗಳ ಮೇಲೆ ಸರಿಸಾಟಿಯಿಲ್ಲದ ವಾರಂಟಿಗಳನ್ನು ಘೋಷಣೆ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫ್ಲಿಟ್ ಕಾರ್ಯಾಚರಣೆಗೆ ತಕ್ಕಂತೆ ವಾಣಿಜ್ಯಗಳ ನಿರ್ಮಾಣ ಮಾಡಿ ಪೂರೈಸುತ್ತಿದೆ.