TVS XL EV: ಎಲೆಕ್ಟ್ರಿಕ್ ರೂಪದಲ್ಲಿ ಬರಲಿದೆ ಟಿವಿಎಸ್ ಎಕ್ಸ್ಎಲ್ ಮೊಪೆಡ್
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಬಹುನೀರಿಕ್ಷಿತ ಎಕ್ಸ್ಎಲ್ ಇವಿ ಮೊಪೆಡ್ ಬಿಡುಗಡೆಯ ಸುಳಿವು ನೀಡಿದ್ದು, ಹೊಸ ಇವಿ ಮೊಪೆಡ್ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಲಿದೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಅಬ್ಬರ ಹೆಚ್ಚುತ್ತಿದ್ದು, ಟಿವಿಎಸ್ ಕೂಡಾ ಮತ್ತಷ್ಟು ಹೊಸ ಇವಿ ದ್ವಿಚಕ್ರ ವಾಹನಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಐಕ್ಯೂಬ್ ಮತ್ತು ಎಕ್ಸ್ ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಎಕ್ಸ್ಎಲ್ 100 ಮೊಪೆಡ್ ಮಾದರಿಯ ಇವಿ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.
ಹೊಸ ಇವಿ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗಾಗಿ ಈಗಾಗಲೇ ಅಂತಿಮ ಹಂತದ ಸಿದ್ದತೆ ನಡೆಸಿರುವ ಟಿವಿಎಸ್ ಕಂಪನಿಯು ಇತ್ತೀಚೆಗೆ ಬಿಡುಗಡೆಯಾಗಿರುವ ಕೈನೆಟಿಕ್ ಇ ಲೂನಾಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಿದೆ.
ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳ್ಳಲಿರುವ ಟಿವಿಎಸ್ ಎಕ್ಸ್ಎಲ್ 100 ಮಾದರಿಯು ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಇದು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇ ಲೂನಾ ಮಾದರಿಗೆ ಪೈಪೋಟಿಯಾಗಿ ಹಲವಾರು ಹೊಸ ಫೀಚರ್ಸ್ ಜೋಡಣೆ ಮಾಡಲಾಗುತ್ತಿದ್ದು, ಇದು ಭಾರತದಲ್ಲಿ ಅತ್ಯುತ್ತಮ ಇ ಮೊಪೆಡ್ ಮಾದರಿಯಾಗಿ ಗುರುತಿಸಿಕೊಳ್ಳಲಿದೆ.
ಇದನ್ನೂ ಓದಿ: ಬಿಡುಗಡೆಯಾಗಲಿರುವ ಹೊಸ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?
ಮಾಹಿತಿಗಳ ಪ್ರಕಾರ, ಹೊಸ ಇವಿ ಮೊಪೆಡ್ ಬಿಡುಗಡೆಗಾಗಿ ಟಿವಿಎಸ್ ಕಂಪನಿ ಇ-ಎಕ್ಸ್‌ಎಲ್ ಮತ್ತು ಎಕ್ಸ್‌ಎಲ್ ಇವಿ ಎನ್ನುವ ಎರಡು ಹೆಸರನ್ನು ನೋದಂಣಿ ಮಾಡಿದೆ. ಹೀಗಾಗಿ ಎಕ್ಸ್ಎಲ್ 100 ಇವಿ ಮಾದರಿಯ ಬಿಡುಗಡೆಗಾಗಿಯೇ ನಡೆದ ಸಿದ್ದತೆಯಾಗಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 100 ಕಿ.ಮೀ ಮೈಲೇಜ್ ನೀಡಬಹುದಾದ ಬ್ಯಾಟರಿ ಪ್ಯಾಕ್ ಹೊಂದಿರಲಿದೆ. ವಿಶೇಷವಾಗಿ ಇದನ್ನು ಗ್ರಾಮೀಣ ಭಾಗದ ಗ್ರಾಹಕರನ್ನು ಗುರಿಯಾಗಿಸಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ಪ್ರತಿ ಗಂಟೆಗೆ ಗರಿಷ್ಠ 55 ರಿಂದ 60 ಕಿ.ಮೀ ಟಾಪ್ ಸ್ಪೀಡ್ ಹೊಂದಿರಬಹುದಾಗಿದೆ.
ಇನ್ನು ಇತ್ತೀಚೆಗೆ ಬಿಡುಗಡೆಯಾದ ಇ-ಲೂನಾ ಕೂಡಾ ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಿದೆ. ಹೊಸ ಇವಿ ಮೊಪೆಡ್ ನಲ್ಲಿ ಟು ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೊತೆಗೆ 1.2 ಕೆವಿ ಹಬ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ. ಇದು ಪೂರ್ತಿ ಚಾರ್ಜ್ ಗೆ ಗರಿಷ್ಠ 110 ಕಿ.ಮೀ ಮೈಲೇಜ್ ನೀಡುತ್ತಿದ್ದು, ಗರಿಷ್ಠ ವೇಗವನ್ನು ಪ್ರತಿ ಗಂಟೆಗೆ 50 ಕಿ.ಮೀಗೆ ಮಿತಿಗೊಳಿಸಲಾಗಿದೆ.
ಇದನ್ನೂ ಓದಿ: ಓಲಾ ಎಸ್1 ಸರಣಿ ಇವಿ ಸ್ಕೂಟರ್ ಗಳ ಮೇಲೆ ಭರ್ಜರಿ ಆಫರ್ ಘೋಷಣೆ
ಈ ಮೂಲಕ ಇ ಲೂನಾ ನಿರ್ವಹಣಾ ವೆಚ್ಚದಲ್ಲೂ ಸಾಕಷ್ಟು ಗಮನಸೆಳೆಯುತ್ತಿದ್ದು, ಕೇವಲ 10 ಪೈಸೆ ಖರ್ಚಿನೊಂದಿಗೆ ಪ್ರತಿ ಕಿಲೋಮೀಟರ್ ಕ್ರಮಿಸಬಹುದಾಗಿದೆ. ಇದರೊಂದಿಗೆ ಹೆಚ್ಚಿನ ಉಳಿತಾಯಕ್ಕೆ ಸಹಕಾರಿಯಾಗಿದ್ದು, ಇದಕ್ಕೆ ಪೈಪೋಟಿಯಾಗಿ ಟಿವಿಎಸ್ ಇದೀಗ ಪ್ಲ್ಯಾನ್ ಮಾಡುತ್ತಿದೆ. ಈ ಮೂಲಕ ಮೊಪೆಡ್ ವಿಭಾಗದಲ್ಲಿ ಇ ಲೂನಾಗೆ ಟಕ್ಕರ್ ನೀಡಲು ಎಕ್ಸ್ಎಲ್ 100 ಇವಿ ಬಿಡುಗಡೆ ಮಾಡುತ್ತಿದೆ.