ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಮತ್ತು ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಅಂತ ಸಿನಿಮಾದಲ್ಲಿ ಹೇಳುವ ರವಿ ಮಾಮ, ಉಪ್ಪಿ ಸರ್, ಶಾರೂಕ್ ಖಾನ್ ಸಿನಿಮಾ ನೋಡುತ್ತಾ ಬೆಳದಿರುವ ನನಗೆ ಪ್ರೀತಿಯ ಅನ್ನೋದು ಕೆಲವೊಮ್ಮೆ ಲಾಜಿಕ್ ಇಲ್ಲದ ಮ್ಯಾಜಿಕ್ ಅಂತ ಅನಿಸುತ್ತಿದೆ. ಸಿನಿಮಾದಲ್ಲಿ ಹೀರೋಗೆ ಎರಡು, ಮೂರು ಹೀರೋಯಿನ್ ಇರುತ್ತಾರೆ, ಬಣ್ಣದ ಪ್ರಪಂಚದಲ್ಲಿ ಎಲ್ಲವೂ ಸಾಧ್ಯ. ಆದರೆ ನಿಜ ಜೀವನದಲ್ಲಿ ವಯಸ್ಸಾದರೂ ಕೆಲ ಜನರು ಸಂಗಾತಿಯ ಹುಡುಕಾಟದಲ್ಲಿ ಇರುತ್ತಾರೆ.
ಹೇ ಗುರು ವಿಚಾರ ಏನೆಂದರೆ, ಅದೊಂದು ದಿನ ಎಂದಿನಂತೆ ಬೆಳಗ್ಗೆ ಎದ್ದು ಕಾಲೇಜಿಗೆ ಹೋಗಿ, ಮಧ್ಯಾಹ್ನದ ಊಟಕ್ಕಾಗಿ ಎಂದಿನಂತೆ ಕೆಫೆಟೇರಿಯಾ ಹೋದಾಗ ಅಲ್ಲಿ ಅನಿರೀಕ್ಷಿತವಾಗಿ ನಾಲ್ಕು ಸುಂದರಿಯರನ್ನು ಕಂಡೆ. ನಾಲ್ವರಲ್ಲಿ ಮೂವರು ಜೊತೆ ಕಣ್ಣಿನ ಮೀಲನವಾಯಿತು, ಅವರಲ್ಲೊಬ್ಬಳು ಹೊರಡುವ ಮುನ್ನ ನಗೆ ಬೀರಿದಳು. ಆ ದಿನ ಒಂದು ಕ್ಷಣ ಮಾಯದ ಲೋಕಕ್ಕೆ ಬಂದಿದ್ದೇನೆ ಅಂತ ಅನಿಸಿತು. ಸಂಜೆ ರೂಮಿಗೆ ಬಂದಾಗ ಮಾತ್ರ ಯಾರೊಬ್ಬರ ಚಿತ್ರವು ನೆನಪಿಗೆ ಬರುತ್ತಿಲ್ಲ ಕಾರಣ, ಈ ಹಿಂದೆ ಅವರನ್ನು ಭೇಟಿ ಆಗಿರಲಿಲ್ಲ. ಮರುದಿನ ಮಧ್ಯಾಹ್ನದ ಊಟಕ್ಕೆ ಕೆಫೆಟೇರಿಯಾದಲ್ಲಿ ಆ ನಾಲ್ಕರ ಹಾಜರಿ ಇತ್ತು. ಮತ್ತೆ ಕಣ್ಣ ಸಲಿಗೆ ಹೆಚ್ಚಾಗಿ ಅವರ ಮಧ್ಯೆ ನನ್ನ ಬಗ್ಗೆ ಏನೋ ಚರ್ಚೆಯಾಯಿತು, ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಬಾಲೆ ಹಿಂತಿರುಗಿ ನೋಡಿದಳು. ಹೊರಡುವ ಮುನ್ನ ಅವಳ ಮುಗುಳು ನಗೆ ಈ ಬಾರಿ ಮನಸ್ಸಿನಲ್ಲಿ ಒಂದು ಛಾಯೆ ಮೂಡಿಸಿತು. ಎರಡು ದಿನ ಭೇಟಿಯಾದರು ಮಾತನಾಡಲಿಲ್ಲ ಅನ್ನುವ ಬೇಸರ ಮನದಲ್ಲಿ ಇತ್ತು. ಅದಕ್ಕೆ ಸರಿಯಾಗಿ ಮೂರನೇ ದಿನವೂ ಕೆಫೆಟೇರಿಯದಲ್ಲಿ ಪಟಾಕಿಯಂತೆ ಮಾತನಾಡಬೇಕು ಎಂದು ಹೋಗಿದಾಗ ಪಟಾಕಿ ಸುದ್ದು ಮಾಡುವುದಕ್ಕೆ ಅಂದು ನಾಲ್ವರು ಬಂದಿರಲಿಲ್ಲ.
ಇದನ್ನೂ ಓದಿ:ಕರಾಟೆ ಚತುರ ವಿ.ಗುಣಶಕ್ತಿ, ಅದ್ವಿತೀಯ ಸಾಧನೆಯತ್ತ ಬಂಟ್ವಾಳದ ಯುವಕ
ನಾಲ್ಕನೇ ದಿನವೂ ಕೆಫೆಟೇರಿಯಾದಲ್ಲಿ ಡಬ್ಬಲ್ ಧಮಾಕ ಎಂಬಂತೆ ನಾಲ್ವರ ಆಗಮನವಾಗಿ ಚೇರ್ ಇಲ್ಲದ ಕಾರಣ ನನ್ನ ಎದುರಿನಲ್ಲಿ ಚೇರ್ ನಲ್ಲಿ ಬಂದು ಕುಳಿತರು, ಆಗ ಮುಖದ ಮೇಲೆ ನಗು ಅರಳಿತು. ಕಣ್ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ ಎಂಬಂತೆ ಕಣ್ಣುಗಳ ಸಮ್ಮಿಲನವಾಗುತಿತ್ತು. ಥರ ಥರ ಹೊಸ ಥರ, ಒಲವಿನ ಅವಸರ ಹೃದಯಾನೆ ಜೋಕಾಲಿ ಎಂಬಂತೆ ಹೃದಯ ಬಡಿತ ಜೋರಾಗುತ್ತಿತು, ಸಮಯ ಮಾತ್ರ ರಾಕೆಟ್ ವೇಗದ ಹಾಗೆ ಕಳೆಯುತ್ತಿತ್ತು. ನಾನು ಹೊರಡುವ ಮುನ್ನ ಕೃಷ್ಣನನ್ನು ನೆನೆದು ಧೈರ್ಯದಿಂದ ಮಾತನಾಡಿಸಿದೆ ಇನ್ನೇನೂ ಮೊಬೈಲ್ ನಂಬರ್ ಕೇಳಬೇಕು ಅನ್ನುವಷ್ಟರಲ್ಲಿ, ಮೊಬೈಲಿನ ಅಲರಾಂ ಸದ್ದು ಮಾಡಿ ನನ್ನನ್ನು ಕನಸಿನ ಪ್ರೇಮಲೋಕಕ್ಕೆ ಭಗ್ನವನ್ನು ಉಂಟು ಮಾಡಿತು.
ನಿಜ ಜೀವನದಲ್ಲಿ ನಾನು ಹೀರೋ ಮತ್ತು ಐಶ್ವರ್ಯ, ತಮನ್ನಾ, ಕಾಜಲ್, ಶ್ರೀಲೀಲಾ ಹಾಗೆ ಇರುವ ನಾಲ್ವರು ಜೊತೆ ಈ “ಕನಸಿನ ಪ್ರೇಮಲೋಕದ” ಕಥೆಯ ಕಿರುಚಿತ್ರಕ್ಕೆ ಮಾಡಿದರೆ ನೀವು ನೋಡುತ್ತೀರಿ ತಾನೇ…?
– ಆನಂದ ಜೇವೂರ್,