Happy Teachers Day: ನಿಸ್ವಾರ್ಥತೆ, ಪ್ರಾಮಾಣಿಕತೆ, ಮಾನವೀಯತೆ, ಕಲಿಸಿದ ಅವಳು ನನ್ನ ಮೊದಲ ಗುರು

Teachers Day: ಸಮಾಜದ ಸಂಪ್ರದಾಯದಂತೆ ಗಂಡುಮಕ್ಕಳು ಮಾತ್ರ ಹೆಚ್ಚು ಓದಬೇಕೆಂಬ ಕಲ್ಪನೆಯನ್ನು ಹುಸಿಯಾಗಿಸಿದ್ದಳು. ತಾನು ತನ್ನ ಗಂಡ ಅನಕ್ಷರಸ್ಥರು ಎಂಬ ಹಣೆಪಟ್ಟಿಯನ್ನು ತಮ್ಮ ಮಕ್ಕಳನ್ನು ಓದಿಸುವುದರ ಮೂಲಕ ಕಳಚಬೇಕೆಂದು ಪಣತೊಟ್ಟ ಹೆಂಗಸು ಆಕೆ.

Happy Teachers Day: ನಿಸ್ವಾರ್ಥತೆ, ಪ್ರಾಮಾಣಿಕತೆ, ಮಾನವೀಯತೆ, ಕಲಿಸಿದ ಅವಳು ನನ್ನ ಮೊದಲ ಗುರು
Happy Teachers Day
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 05, 2022 | 12:46 PM

ತೀರಾ ಬಡತನದ ಕುಟುಂಬ ಆಕೆಯದು. ಬೆಳೆದ ಮನೆ ಬೆಳಗಿದ ಮನೆ ಎರಡೂ ಕೂಡ. ಗಂಡ ಹೆಂಡಿರ ಇಬ್ಬರ ದುಡಿತವೂ ಅಷ್ಟೇ. ಮೂರು ಮಕ್ಕಳನ್ನು ಹಾಗೋ ಹೀಗೋ ಅಷ್ಟರ ಮಟ್ಟಿಗೆ ಓದಿಸಿದ್ದಳು. ಸಮಾಜದ ಸಂಪ್ರದಾಯದಂತೆ ಗಂಡುಮಕ್ಕಳು ಮಾತ್ರ ಹೆಚ್ಚು ಓದಬೇಕೆಂಬ ಕಲ್ಪನೆಯನ್ನು ಹುಸಿಯಾಗಿಸಿದ್ದಳು. ತಾನು ತನ್ನ ಗಂಡ ಅನಕ್ಷರಸ್ಥರು ಎಂಬ ಹಣೆಪಟ್ಟಿಯನ್ನು ತಮ್ಮ ಮಕ್ಕಳನ್ನು ಓದಿಸುವುದರ ಮೂಲಕ ಕಳಚಬೇಕೆಂದು ಪಣತೊಟ್ಟ ಹೆಂಗಸು ಆಕೆ. ಅವಳು ತನ್ನ ಹರಕು ಮುರುಕಾದ ಸೂಪಿಗೆ(ಕರಾವಳಿಯಲ್ಲಿ ಮಹಿಳೆಯರು ಬೀಡಿ ಕಟ್ಟಲು ಉಪಯೋಗಿಸುವ ಸಾಧನ) ಪೇಪರನ್ನು ಹಾಕಿ ಒಂದಿಷ್ಟು ಎಲೆ, ಹೊಗೆಸೊಪ್ಪು ಬಸೆದು ಗಂಟೆ 12 ರವರೆಗೂ ಒಂದೊಂದು ಬಾರಿ ಖಾಲಿ ಹೊಟ್ಟೆಯಲ್ಲಿ ಕೂತು ಅವರು ಮಕ್ಕಳನ್ನ ಓದಿಸುವ ಪ್ರಯತ್ನದಲ್ಲಿರುವವವಳು.

ಈಗಲೂ ನೆನಪಿದೆ, ಎಲ್ಲ ಮಕ್ಕಳು ಚಾಕಲೇಟು, ಕ್ಯಾಂಡಿಯನ್ನು ತಿನ್ನುತ್ತಿರಬೇಕಾದರೆ ತನ್ನ ಮಕ್ಕಳು ಕೊರಗಬಾರದೆಂದು ತನ್ನ ಸೂಪಿನ ಪೇಪರಿನಡಿಯಲ್ಲಿ ಇಷ್ಟಿಷ್ಟೇ ಕೂಡಿಸಿದ್ದ ಚಿಲ್ಲರೆ ಹಣವನ್ನು ತನ್ನ ಮಕ್ಕಳಿಗೆ ಕೊಟ್ಟವಳು ಆಕೆ. ಪ್ರತೀ ಬಾರಿ ಅಪ್ಪ ಭಾನುವಾರದಂದು ಮನೆಗೆ ಹಣ್ಣನ್ನು ತಂದಾಗ ಪುಟ್ಟ ಮಕ್ಕಳೆಲ್ಲ ಹೊಟ್ಟೆ ತುಂಬಿ ತಿಂದು ಸ್ವಲ್ಪ ಉಳಿಸಿದಾಗ ಅದನ್ನು ಅಪ್ಪನಿಗೆ ಕೊಟ್ಟು ತಾನು ತಿಂದಂತೆ ನಟಿಸಿ ನನಗೆ ಹೊಟ್ಟೆ ತುಂಬಿತು ಎಂದು ಹೇಳುವ ಆಕೆ ಬದುಕಿನಲ್ಲಿ “ನಿಸ್ವಾರ್ಥತೆಯನ್ನು” ಕಲಿಸಿದವಳು. ಪ್ರತಿ ಬಾರಿ ಪರೀಕ್ಷೆಯಲ್ಲಿ ಕಮ್ಮಿ ಅಂಕಗಳನ್ನು ತೆಗೆದು, ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಾಗ ನನ್ನ ಬಳಿ ಬಂದು ಸಮಾಧಾನಗೈದು ನನಗೆ ನಂಬಿಕೆ ಇದೆ ಮುಂದಿನ ಪರೀಕ್ಷೆಯಲ್ಲಿ ನೀನು ಉತ್ತಮ ಅಂಕ ಗಳಿಸುತ್ತೀಯ ಎಂದು ಹೇಳಿ ಬದುಕಿನಲ್ಲಿ “ನಂಬಿಕೆ” ಇರಬೇಕಾದದ್ದು ಎಷ್ಟು ಮುಖ್ಯ ಎಂದು ತಿಳಿಸಿದವಳು ಆಕೆ.

ಒಂದು ಬಾರಿ ಪೇಟೆಗೆ ಹೋಗಿದ್ದಾಗ ತನ್ನ ಹೊಟ್ಟೆಪಾಡಿಗಾಗಿ ಪುಟ್ಟ ಅಂಗಡಿಯಲ್ಲಿ ದೃಷ್ಟಿ ಬಳೆಗಳನ್ನು ಮಾರುತ್ತಾ ಇದ್ದ ಮುದಿ ಅಜ್ಜನಿಗೆ ಗೊತ್ತಾಗದಂತೆ ಒಂದು ಬಳೆಯನ್ನು ಕದ್ದು ಖುಷಿಯಲ್ಲಿ ಆಕೆಗೆ ತೋರಿಸಿದಾಗ ಪೆಟ್ಟನ್ನು ಕೊಟ್ಟು ತಪ್ಪನ್ನು ತಿಳಿ ಹೇಳಿ ತಾತನ ಬಳಿ ಕ್ಷಮೆ ಕೇಳುವಂತೆ ಹೇಳಿ ಜೀವನದಲ್ಲಿ “ಪ್ರಾಮಾಣಿಕತೆ” ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟವಳು ಆಕೆ.

ದಾರಿಯಲ್ಲಿ ಹೋಗುತ್ತಿದ್ದಾಗ ಐಸ್ ಕ್ರೀಮ್ ಬೇಕೆಂದು ನಾನು ಹಟ ಹಿಡಿಯುತಿದ್ದಾಗ ರೋಡಿನಲ್ಲಿ ಅಮ್ಮನಿಲ್ಲದೆ ಹಸಿವಿನಿಂದ ಕಂಗಿಟ್ಟು ನೋವಿನಲ್ಲಿ ಒದ್ದಾಡುತ್ತಿದ್ದ ಪುಟ್ಟ ನಾಯಿಮರಿಯನ್ನು ಕಂಡು ಮರುಗಿ ನನ್ನ ಐಸ್ ಕ್ರೀಮ್ ನ ಹಣದಲ್ಲಿ ಆ ನಾಯಿಮರಿಗೆ ಹೊಟ್ಟೆ ತುಂಬಾ ಆಹಾರವನ್ನು ನೀಡಿ ನನ್ನ ಗಲ್ಲವನ್ನು ಹಿಡಿದು ಮುದ್ದು ಮುಖಕ್ಕೆ ಚುಂಬಿಸಿ “ಮಾನವೀಯತೆ” ಏನೆಂಬುದನ್ನು ಅರಿಕೆ ಮಾಡಿಸಿದವಳು ಆಕೆ.

ಬದುಕಿನುದ್ದಕ್ಕೂ ಜೀವನ ಪಾಠ ಕಲಿಸಿದ ಆಕೆ ತನ್ನ ಬದುಕನ್ನು ಮಬ್ಬು ಚಿಮಿಣಿ( ಬಾಟಲಿಯಾಕಾರದ ಲ್ಯಾಂಪ್) ದೀಪದಡಿಯಲ್ಲಿ ಬದುಕನ್ನು ಸವೆಸಿದವಳು. ಕಷ್ಟಪಟ್ಟು, ಇಷ್ಟಪಟ್ಟು ತನ್ನ ಮಕ್ಕಳನ್ನು ಓದಿಸಿ ಅನಕ್ಷರರು ಎನ್ನುವ ಪಟ್ಟವನ್ನು ಕಳಚಿದವಳು. ನನ್ನೆಲ್ಲಾ ಬದುಕಿನ ಸ್ಪೂರ್ತಿ, ಶಕ್ತಿ ಆಕೆ ನನ್ನ ಮೊದಲ ಗುರು “ಅಮ್ಮ”

ನಾವೆಲ್ಲ ದೊಡ್ಡವರಾಗುತ್ತಿದ್ದಂತೆ ನಮ್ಮ ಶೈಕ್ಷಣಿಕ ಜೀವನದಲ್ಲಿ ಸಲಹೆಗಳನ್ನು ಕೊಡುವುದಕ್ಕೆ ಗುರುಗಳಿರುತ್ತಾರೆ. ನಮ್ಮೆಲ್ಲಾ ಸಮಸ್ಯೆಗಳಿಗೆ ಹಾಗೂ ನಮ್ಮ ಗುರಿಯನ್ನು ತಲುಪುವುದಕ್ಕೆ ಸಹಾಯ ಮಾಡುತ್ತಾರೆ. ಆದರೆ ಬದುಕಿನಲ್ಲಿ ವ್ಯಕ್ತಿತ್ವವನ್ನ ರೂಪಿಸುವ ಮೊದಲ ಗುರು ಅಮ್ಮ. ಆಕೆ ನನ್ನ ಮೊದಲ ಗುರು.

ಮಂಜುಳ ಜೈನ್

ದ್ವಿತೀಯ ಪತ್ರಿಕೋದ್ಯಮ,  ಎಸ್ ಡಿ ಎಂ ಕಾಲೇಜು ಉಜಿರೆ

Published On - 12:46 pm, Mon, 5 September 22