ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತನಾ? ಆಕೆಗೆ ಅವಳಿಗಿರುವ ಸಮಾನತೆ ನೀಡಿ

International Women's Day 2023: ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ, ಕುಟುಂಬದ ಜವಾಬ್ದಾರಿಗೆ ಹೆಗಲಾಗುವವಳಿಗೆ, ಸಮಾಜದ ಸಮಾನತೆಯ ಬಗ್ಗೆ ಹೋರಾಡುವವರಿಂದಲೇ ಗಂಡುಬೀರಿ ಎಂಬ ಪಟ್ಟ.

ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತನಾ? ಆಕೆಗೆ ಅವಳಿಗಿರುವ ಸಮಾನತೆ ನೀಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Mar 09, 2023 | 2:56 PM

ಮುಂಜಾವಿನಿಂದ ಇಲ್ಲಿವರೆವಿಗೂ ಭರಪೂರ ಶುಭಾಶಯಗಳು ಹರಿದು ಬರುತ್ತಲೇ ಇವೆ. ಅದೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂಬುದಕ್ಕಾಗಿ. ಆದರೆ ನನಗೇನು ಅಂತಾ ವಿಶೇಷ ಅನಿಸಲಿಲ್ಲ. ಮಾತಿಗಷ್ಟೇ ಮಹಿಳಾ ದಿನಾಚರಣೆ ಆಗಿದೆ ಅದರ ಹಿಂದಿನ ಸಕಾರಣದ ಪಾಲನೆಗೆ ಮುಂದಾದವರು ಕೇವಲ ಬೆರಳೆಣಿಕೆಯಷ್ಟೇ.

  • ಫಿಮೇನಿಸಂಗೆ ಅಂತಾರಾಷ್ಟ್ರೀಯ ಅಥವಾ ರಾಷ್ಟ್ರೀಯ ಮಹಿಳಾ ದಿನಾಚರಣೆಗಳ ವಿಶೇಷ ವ್ಯತ್ಯಾಸವೇನಿದೆ.
  • ಇಂದೊಂದು ದಿನ ಕೇವಲ ವಾಟ್ಸಪ್ ಸ್ಟೇಟಸ್, ಫೇಸ್ಬುಕ್ ಮತ್ತು ಇನ್ಟಾಗ್ರಾಂ ಸ್ಟೋರಿಗಳನ್ನು ಹಾಕಲಿಕ್ಕಾಗಿ ಕೇಕ್ ಕಟ್, ಸರ್ಪ್ರೈಸ್ ಎಂಬೆಲ್ಲಾ ನಾಟಕೀಯತೆ ಅರ್ಥವಿಲ್ಲದೆ ಕೆಲವರು ಮಂಡಿಯೂರಿರುವುದು ಅರ್ಥಹೀನವೇ ಸರಿ.
  • ಸಾರ್ವಜನಿಕ ಬಸ್​ಗಳಲ್ಲಿ ಪ್ರತಿನಿತ್ಯ ಹೆಣ್ಣಂಬುವವಳ ಮೇಲೆ ಪುರುಷ ಎಂಬ ಪ್ರಾಣಿಯು ಕಾಮುಕತೆಯ ಕ್ರೌರ್ಯಕ್ಕೆ ಸಾಕ್ಷಿಯಾಗುತ್ತಲೇ ಇತ್ತ ಮಹಿಳಾ ದಿನಾಚರಣೆ ಶುಭಾಶಯ ಕೋರುವುದರಲ್ಲಿಯೇ ಅಡಗಿದೆ‌ ಅರ್ಥಗರ್ಭಿತ ಮಹಿಳಾ ದಿನಾಚರಣೆ.
  • ದಿನಪ್ರತಿ ಮಹಿಳೆಯ‌ ಉಡುಗೆ-ತೊಡುಗೆ-ನಡುಗೆಯ ಕುರಿತು ಕಾಮೆಂಟ್ ಮಾಡುವ ಮೂರ್ಖರ ಗುಂಪಿನ ಹೀರೋವಿನಿಂದ ಮಹಿಳಾ‌ ದಿನಾಚರಣೆಯ ಬಗ್ಗೆ ಭಾಷಣ.
  • ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ, ಕುಟುಂಬದ ಜವಾಬ್ದಾರಿಗೆ ಹೆಗಲಾಗುವವಳಿಗೆ, ಸಮಾಜದ ಸಮಾನತೆಯ ಬಗ್ಗೆ ಹೋರಾಡುವವರಿಂದಲೇ ಗಂಡುಬೀರಿ ಎಂಬ ಪಟ್ಟ.
  • ಜೀವಿ ಎಂಬುವವರಿಗೆ ಅನ್ವಯಿಸುವ ಪ್ರಕೃತಿಯ ಸಹಜ ಕಾರ್ಯಗಳಿಗೂ ಸ್ವತಂತ್ರವಾಗಿ ಕೇಳಲಾರದ ಸ್ವಾತಂತ್ರ್ಯ ಹೊಂದಿದ ಸಬಲೆ ಸ್ತ್ರೀ.
  • ಸೃಷ್ಟಿಗೆ ಕಾರಣವಾದ ಮುಟ್ಟಿನ ಕುರಿತಾದ ಮೌಢ್ಯಕ್ಕೆ ಪದೇ ಪದೇ ಬಲಿಯಾಗುವ ಮಿಕ ಆಕೆ.
  • ಕೆಲಸಕ್ಕೆ ಹೋಗುತ್ತಿದ್ದರೂ ಕಿಂಚಿತ್ತೂ ಕಷ್ಟವಿಲ್ಲದೆ, ಮನೆಯ ಸಕಲ ಕೆಲಸಗಳಿಗೂ ಅಲಿಖಿತ ಜೀತದಾಳು ಅವಳು.

ಬರೆಯಲೊರಟರೆ ಬರವಣಿಗೆಗೆ ಅಂತ್ಯವಿಲ್ಲದಷ್ಟು ಅಕ್ಷರಗಳು ಅಣಿಯಾಗಬಹುದೇನೋ ಮಾನಿನಿನ ಮನದಿ ಅಳಲ ಕುರಿತು. ಸಾಂದರ್ಭಿಕವಾಗಿ ಸ್ತ್ರೀಯರನ್ನು ಗೌರವಿಸಲು ಈ ದಿನಾಚರಣೆಗಳಿವೆ, ಹಾಗಂತ ಕೇವಲ ಇದೊಂದೇ ದಿನ ಅವಳನ್ನು ಗೌರವಿಸಬೇಕು, ಆರಾಧಿಸಬೇಕು ಎಂದಲ್ಲ. ಬದಲಿಗೆ ಅವಳನ್ನು ಅವಳಾಗೇ ಅವಳಿಗಿರುವ ಸಮಾನತೆಯಿಂದ ನೋಡಿ.

ಆಕೆ ದೇಶದ ಪ್ರಥಮ ಪ್ರಜೆಯಾಗಿ ಅಧಿಕಾರವನ್ನು ಚಲಾಯಿಸಲೂ ಬಲ್ಲಳು. ತನ್ನ ಸುತ್ತಮುತ್ತಲಿನ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಲೂ ಬಲ್ಲಳು.

ಆಕೆ ಅಡುಗೆ ಮನೆಯಿಂದಲೇ ಆರೋಗ್ಯಕರವಾಗಿಸಲೂ ಬಲ್ಲಳು. ಯುದ್ಧ ಭೂಮಿಯಲ್ಲಿ ಶತ್ರುಗಳೆದೆಗೆ ಗುಂಡಿಳಿಸಲೂ ಬಲ್ಲಳು.

ಆಕೆ ಅಲೆಯಾಗಲೂ ಬಲ್ಲಳು ಆಕೆ ಸುನಾಮಿಯಾಗಲೂ ಬಲ್ಲಳು ಆಕೆ ಅನ್ನಪೂರ್ಣೆಯಾಗಲೂ ಬಲ್ಲಳು ಆಕೆ ಭದ್ರಕಾಳಿಯಾಗಲೂ ಬಲ್ಲಳು

ಪವಿತ್ರಾ, ಕೋಲಾರ (ಮಾಗಿದ ಮನಸ್ಸು)

Published On - 2:56 pm, Thu, 9 March 23