AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲಕೃಷಿಯಲ್ಲಿ ಮಲ್ಲಿಗೆ ಬೆಳೆದ ಜೋಸೆಫ್ !

ಭೂಮಿಯ ಸಹಾಯವಿಲ್ಲದೆ ಕೃಷಿ ಮಾಡಲು ಸಾಧ್ಯ ಎಂದು ತೋರಿಸಿದ್ದಾರೆ ಕರಾವಳಿಯ ಶಂಕರಪುರದ ಜೋಸೆಫ್ ಲೋಬೋ. ಮಣ್ಣಿನ ಸಹಾಯವಿಲ್ಲದೆ ಕೇವಲ ಹೈಡ್ರೋಪೋನಿಕ್ಸ್ ಅಂದರೆ ಜಲಕೃಷಿಯ ಮೂಲಕ ಹೂ, ಹಣ್ಣು ಮತ್ತು ತರಕಾರಿಗಳನ್ನು ಬೆಳೆದು, ಜಲಕೃಷಿಯಲ್ಲಿ ಮಲ್ಲಿಗೆ ಬೆಳೆದ ಮೊದಲ ಕರಾವಳಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಲಕೃಷಿಯಲ್ಲಿ ಮಲ್ಲಿಗೆ ಬೆಳೆದ ಜೋಸೆಫ್ !
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Feb 07, 2022 | 6:21 PM

Share

ಕೈ ಕೆಸರಿನಿಂದ ಬಾಯಿ ಮೊಸರಾಗಿಸುವ ರೈತರು ನಮಗೆಲ್ಲ ಚಿರಪರಿಚಿತರು. ಭೂಮಿಯನ್ನು ಹದಗೊಳಿಸಿ, ನಾಟಿಮಾಡಿ, ಕಳೆಕಿತ್ತು, ಔಷಧಿ ಸಿಂಪಡಿಸಿ ಕೊನೆಗೆ ಫಸಲು ಕೊಯ್ದು ಮಾರಾಟ ಮಾಡುವುದನ್ನು ನಾವು ನೋಡುವ ಸಾಮಾನ್ಯ ಭೂ ಕೃಷಿ ವಿಧಾನ. ಆದರೆ ಇತ್ತೀಚೆಗೆ ಕೃಷಿ ಮಾಡಲು ಭೂಮಿಯ ಕೊರತೆ, ಲಭ್ಯವಿರುವ ಭೂಮಿಯು ಫಲವತ್ತತೆ ಹೊಂದಿರದಿರುವ ಕಾರಣ ಇಂದು ಅದೆಷ್ಟೋ ಮಂದಿ ಕೃಷಿಯಿಂದ ದೂರ ಉಳಿದಿದ್ದಾರೆ. ಇದಕ್ಕೆ ಪರ್ಯಾಯವಾಗಿ ಭೂಮಿಯ ಸಹಾಯವಿಲ್ಲದೆ ಕೃಷಿ ಮಾಡಲು ಸಾಧ್ಯ ಎಂದು ತೋರಿಸಿದ್ದಾರೆ ಕರಾವಳಿಯ ಶಂಕರಪುರದ ಜೋಸೆಫ್ ಲೋಬೋ. ಮಣ್ಣಿನ ಸಹಾಯವಿಲ್ಲದೆ ಕೇವಲ ಹೈಡ್ರೋಪೋನಿಕ್ಸ್ ಅಂದರೆ ಜಲಕೃಷಿಯ ಮೂಲಕ ಹೂ, ಹಣ್ಣು ಮತ್ತು ತರಕಾರಿಗಳನ್ನು ಬೆಳೆದು, ಜಲಕೃಷಿಯಲ್ಲಿ ಮಲ್ಲಿಗೆ ಬೆಳೆದ ಮೊದಲ ಕರಾವಳಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಲಕೃಷಿ ಎಂದರೆ ಮಣ್ಣನ್ನು ಬಳಸದೆ ಕೇವಲ ನೀರು ಅಥವಾ ಪೊಷಕಾಂಶಯುಕ್ತ ವಸ್ತುಗಳನ್ನು ಬಳಸಿ ಮಾಡುವ ಕೃಷಿ. ಇದು ಜಪಾನ್ ಹಾಗೂ ಇಸ್ರೇಲ್ ದೇಶಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಕೃಷಿ ವಿಧಾನ. ನಮ್ಮ ಭಾರತದಲ್ಲಿ ಈ ವಿಧಾನವು ಕಡಿಮೆ ಪ್ರಮಾಣದಲ್ಲಿ ಚಾಲ್ತಿಯಲ್ಲಿದೆ. ಆದರೆ ಕರ್ನಾಟಕದ ಕರಾವಳಿಯ ರೈತ ಜೋಸೆಫ್ ಲೋಬೋ ಜಲಕೃಷಿ ವಿಧಾನದಲ್ಲಿ ಬೆಳೆ ಬೆಳೆದು ಲಾಭ ಗಳಿಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು.

ಉಡುಪಿಯ ಶಂಕರಪುರ ಕರಾವಳಿಯ ಮಲ್ಲಿಗೆಯ ರಾಜಧಾನಿ ಎಂದೇ ಪ್ರಖ್ಯಾತ. ಇಲ್ಲಿರುವ ರೈತರ ಮೂಲ ಬೆಳೆಯೇ ಮಲ್ಲಿಗೆ. ಆದರೆ ಜೋಸೆಫ್ ಲೋಬೋ ಈ ಎಲ್ಲಾ ರೈತರಿಗಿಂತ ಪ್ರತ್ಯೇಕವಾಗಿ ನಿಲ್ಲುವುದು ಜಲಕೃಷಿ ವಿಧಾನದಿಂದ. ಕೊರೊನಾ ಸಮಯದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಈ ಜಲಕೃಷಿ ಇಂದು ಹಿಂದೆಲ್ಲಾ ವರ್ಷಗಳಿಗಿಂತ ಹೆಚ್ಚು ಇಳುವರಿ ನೀಡುವ ಮೂಲಕ ಜೋಸೆಫ್ ಲೋಬೋ ಅವರನ್ನು ಈ ಪ್ರಯೋಗದಲ್ಲಿ ಯಶಸ್ವಿಯಾಗಿಸಿದೆ.

ಮಣ್ಣನ್ನು ಬಳಸದೆ ತೆಂಗಿನ ನಾರಿನಿಂದ ತಯಾರಾಗುವ ಕೋಕೋ ಪಿಟ್ ಹಾಗೂ ಕೋಕೋ ಮ್ಯಾನ್ಯೂರ್ ಬಳಸಿ ಮಲ್ಲಿಗೆ ಸೇರಿದಂತೆ ಮೂವತ್ತಕ್ಕೂ ಹೆಚ್ಚು ತಳಿಯ ವಿವಿಧ ಹೂ ಮತ್ತು ಹಣ್ಣುಗಳನ್ನು ಬೆಳೆದಿದ್ದಾರೆ. ಮಣ್ಣಿಗಿಂತ ಹೆಚ್ಚು ಕಾಲ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಈ ತೆಂಗಿನ ನಾರಿನ ಪದಾರ್ಥಗಳಲ್ಲಿ ಗಿಡಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಸೇರಿಸಲಾಗಿರುತ್ತದೆ. ಇವು ಹೆಚ್ಚು ಇಳುವರಿ ನೀಡಲು ಸಾಧ್ಯವಾಗುತ್ತದೆ.

ಮಾಡುವುದು ಹೇಗೆ? ರಂಧ್ರಗಳಿರುವ ಬುಟ್ಟಿಯಲ್ಲಿ ಮೊಳಕೆಯೊಡೆದು ಬೇರು ಬಂದಿರುವ ಗಿಡವನ್ನು ಕೋಕೋ ಪಿಟ್, ಕೋ ಕೋ ಮ್ಯಾನ್ಯೂರ್ ನಲ್ಲಿ ನೆಡಬೇಕು. ಒಂದು ಬಕೇಟ್ ನಲ್ಲಿ ನೀರು ಅಥವಾ ಜೀವಾಮೃತ ಎಂದರೆ ಗೋವಿನ ತ್ಯಾಜದಲ್ಲಿ ಗಿಡವನ್ನು ನೆಟ್ಟ ಬುಟ್ಟಿಯನ್ನು ಇರಿಸಿ ಸೂರ್ಯನ ಬೆಳಕು ಕೊಂಚಮಟ್ಟಿಗೆ ಬೀಳುವಂತೆ ನೋಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಗಿಡಗಳು ಅತೀ ಶೀಘ್ರವಾಗಿ ಫಸಲು ನೀಡುತ್ತವೆ.

ಹೈಡ್ರೋಪೋನಿಕ್ಸ್ ವಿಧಾನದಿಂದ ಸಸ್ಯಗಳು ಅತೀ ಶೀಘ್ರವಾಗಿ ಫಸಲು ನೀಡುತ್ತವೆ. ಅಲ್ಲದೆ ಈ ರೀತಿ ಬೆಳೆದ ಸಸ್ಯಗಳಲ್ಲಿ ರೋಗಗಳು ಕಡಿಮೆ. ಅಲ್ಪಾವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಗಳಿಸುವ ಸುಲಭ ವಿಧಾನವಿದು. ಮಣ್ಣಿಗಿಂತ ಹೆಚ್ಚು ಕಾಲ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಈ ತೆಂಗಿನ ನಾರಿನ ಪದಾರ್ಥಗಳಲ್ಲಿ ಗಿಡಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಸೇರಿಸಲಾಗಿರುತ್ತದೆ. ಇವು ಹೆಚ್ಚು ಇಳುವರಿ ನೀಡಲು ಸಾಧ್ಯವಾಗುತ್ತದೆ. ಈ ವಿಧಾನಕ್ಕೆ ಸಸ್ಯಗಳ ಆಯ್ಕೆ ಅತೀ ಮುಖ್ಯ. ಕುರಚಲು, ಪೋದೆ ಜಾತಿ ಅಲ್ಲದೆ ಕಡಿಮೆ ಎತ್ತರ ಬೆಳೆಯುವ ಸಸ್ಯಗಳು ಜಲಕೃಷಿಗೆ ಸೂಕ್ತ ಎನ್ನುತ್ತಾರೆ ಲೋಬೋ.

ಈ ವಿಧಾನದಲ್ಲಿ ಸಸ್ಯಗಳಿಗೆ ಔಷಧಗಳ ಸಿಂಪಡಣೆ, ಕಳೆ ಸಮಸ್ಯೆ, ಕೀಟಗಳ ಉಪಟಳ ಇರುವುದಿಲ್ಲ. ಮನೆಯ ತಾರಸಿಯ ಮೇಲೆ, ಬಾಲ್ಕನಿಯಂತಹ ಬಿಸಿಲು ಬೀಳುವ ಪ್ರದೇಶಗಳಲ್ಲಿ ಈ ವಿಧಾನ ಬಳಸಿ ಮನೆಗೆ ಬೇಕಾದ ತರಕಾರಿ, ಹಣ್ಣು ಇತ್ಯಾದಿಗಳನ್ನು ಬೆಳೆದುಕೊಳ್ಳಬಹುದು. ನಗರ ಪ್ರದೇಶದ ಜನರು ಅತ್ಯಂತ ಸುಲಭವಾಗಿ ಈ ಜಲಕೃಷಿಯ ಮೂಲಕ ಕೃಷಿಕರಾಗಲು ಸಾಧ್ಯ ಎಂಬುದಕ್ಕೆ ಜೋಸೆಫ್ ಲೋಬೋ ಮಣ್ಣನ್ನು ಬಳಸದೆ ಕೋಕೋ ಪಿಟ್ ಹಾಗೂ ಕೋಕೋ ಮ್ಯಾನ್ಯೂರ್ ಮತ್ತು ನೀರು ಬಳಸಿ ಮಲ್ಲಿಗೆ ಸೇರಿದಂತೆ ಮೂವತ್ತಕ್ಕೂ ಹೆಚ್ಚು ತಳಿಯ ವಿವಿಧ ಹೂ ಮತ್ತು ಹಣ್ಣುಗಳನ್ನು ಬೆಳೆದಿರುವುದು ಸಾಕ್ಷಿ.

ಈ ವಿಧಾನದ ಬಳಕೆ ಆಹಾರದಲ್ಲಿ ವಿಷಯುಕ್ತ ಔಷಧಿಗಳನ್ನು ಕಡಿಮೆ ಮಾಡುವುದರೊಂದಿಗೆ ಪೌಷ್ಟಿಕಾಂಶ ಹೆಚ್ಚಿಸುತ್ತದೆ. ಈ ವಿಧಾನ ಕೆಲ ವರ್ಷಗಳ ಕಾಲ ಅಳವಡಿಸಿಕೊಳ್ಳುವುದರಿಂದ ಭೂಮಿಗೆ ತನ್ನ ಫಲವತ್ತತೆಯನ್ನು ಮರುಗಳಿಸಲು ಅವಕಾಶ ದೊರಕಬಹುದು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಯು ಸಾಧ್ಯವಾಗುತ್ತದೆ.

ಶ್ರೀರಕ್ಷಾ ಶಂಕರ್ ಎಸ್.ಡಿ.ಎಮ್. ಸ್ನಾತಕೋತ್ತರ ಕೇಂದ್ರ, ಉಜಿರೆ

Published On - 6:15 pm, Mon, 7 February 22