Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ದೇಶವೇ ಚರ್ಚಿಸುವ ಮತ್ತೊಂದು ಕೇಸ್​ ಬಯಲಿಗೆ: ಸಂದರ್ಶನದಲ್ಲಿ ಸುಳಿವು ನೀಡಿದ ಸ್ನೇಹಮಯಿ ಕೃಷ್ಣ

ಮುಡಾ ಹಗರಣ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಮುಡಾ ಹಗರಣದ ಪ್ರಕರಣವನ್ನು ಸಿಬಿಐಗೆ ನೀಡಲು ಹೈಕೋರ್ಟ್​ ನಿಕಾರಿಸಿದ್ದು, ದೂರುದಾರ ಸ್ನೇಹಮಯಿ ಕೃಷ್ಣಗೆ ಹಿನ್ನಡೆಯಾಗಿದೆ. ಇನ್ನು ಮುಡಾದಲ್ಲಿ ಹಗರಣ ನಡೆದಿರುವ ಬಗ್ಗೆ ಸ್ನೇಹಮಯಿ ಕೃಷ್ಣಗೆ ಹೇಗೆ ಸುಳಿವು ಸಿಕ್ತು?, ಯಾರು ಈ ಸ್ನೇಹಮಯಿ ಕೃಷ್ಣ, ಇವರಿಗೆ ಸ್ನೇಹಮಯಿ ಅಂತ ಹೆಸರು ಬರಲು ಕಾರಣವೇನು? ಇಲ್ಲಿದೆ ಸ್ನೇಹಮಯಿ ಕೃಷ್ಣರ ವಿಶೇಷ ಸಂದರ್ಶನ.

ಇಡೀ ದೇಶವೇ ಚರ್ಚಿಸುವ ಮತ್ತೊಂದು ಕೇಸ್​ ಬಯಲಿಗೆ: ಸಂದರ್ಶನದಲ್ಲಿ ಸುಳಿವು ನೀಡಿದ ಸ್ನೇಹಮಯಿ ಕೃಷ್ಣ
Muda, Snehamayi Krishan
Follow us
ವಿವೇಕ ಬಿರಾದಾರ
|

Updated on:Feb 10, 2025 | 1:16 PM

ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ವ್ಯಕ್ತಿ ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತರಾಗಿ, ದೇಶಕ್ಕೆ ಅಂಟಿಕೊಂಡಿರುವ ಭ್ರಷ್ಟಾಚಾರದ ಪಿಡುಗನ್ನು ಕಿತ್ತೆಸೆಯಲು 70ರ ಇಳಿಯ ವಯಸ್ಸಿನಲ್ಲಿ ಕಚ್ಚೆ ಕಟ್ಟಿ ನಿಂತವರು ಅಣ್ಣಾ ಹಜಾರೆ. ಇವರಂತೆ, ಸಮಾಜದಲ್ಲಿನ ಅವ್ಯವಸ್ಥೆಯನ್ನು ಕಂಡು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿದ್ದ ವ್ಯಕ್ತಿ ಸ್ವಯಂ ಪ್ರೇರಿತಗೊಂಡು ಕೆಟ್ಟ ಆಲೋಚನೆಯಿಂದ ಹಿಂದೆ ಸರಿದು, ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ ಪರವಾಗಿ ಹೋರಾಡಬೇಕು, ಕೆಟ್ಟ ವ್ಯವಸ್ಥೆಯನ್ನು ಸರಿ ಪಡಿಸಬೇಕೆಂದು ಟೊಂಕ ಕಟ್ಟಿ ನಿಂತವರು ಸ್ನೇಹಮಯಿ ಕೃಷ್ಣ.

ಸದ್ಯ, ರಾಜ್ಯದಲ್ಲಿ ಈ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಹಗರಣವನ್ನು ಬಯಲಿಗೆ ತಂದಿದ್ದಲ್ಲದೇ, ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪಾತ್ರವೂ ಇದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದವರು ಇದೇ ಸ್ನೇಹಮಯಿ ಕೃಷ್ಣ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಿರುವ ಈ ಸ್ನೇಹಮಯಿ ಕೃಷ್ಣ ಯಾರು? ಇವರ ಹಿನ್ನಲೆ ಏನು? ಇಷ್ಟೊಂದು ದೊಡ್ಡ ಹೋರಾಟ ಮಾಡುತ್ತಿರುವ ಇವರಿಗೆ ಬೆನ್ನೆಲುಬಾಗಿ ನಿಂತವರು ಯಾರು? ಇವರ ಹಿಂದೆ ಇರುವ ಕಾಣದ ಕೈ ಯಾರದ್ದು? ಮುಖ್ಯಮಂತ್ರಿಗಳನ್ನೇ ಎದುರು ಹಾಕಿಕೊಳ್ಳುವಂತಹ ದೈರ್ಯ ಹೇಗೆ ಬಂತು? ಇದರಿಂದ ಇವರಿಗೇನು ಲಾಭ? ಹೀಗೆ ಹತ್ತು ಹಲವು ಪ್ರಶ್ನೆಗಳು ಹಲವರ ತಲೆಯಲ್ಲಿ ಓಡುತ್ತಿವೆ. ಈ ಎಲ್ಲ ಪ್ರಶ್ನೆಗಳಿಗೆ ಈ ವಿಶೇಷ ಸಂದರ್ಶನದ ಮೂಲಕ ಉತ್ತರ ನೀಡುವ ಪ್ರಯತ್ನ ಟಿವಿ9 ಡಿಜಿಟಲ್​ ಮಾಡಿದೆ.

ಟಿವಿ9: ನೀವು ಹುಟ್ಟಿ ಬೆಳದ ಊರು ಯಾವುದು? ನಿಮ್ಮ ಬಾಲ್ಯ ಹೇಗೆ ಇತ್ತು?

ಸ್ನೇಹಮಯಿ ಕೃಷ್ಣ: ನಾನು ಹುಟ್ಟಿದ್ದು ಮಂಡ್ಯದಲ್ಲಿ. ಆದರೆ, ಬೆಳೆದಿದ್ದೆಲ್ಲವೂ ಮೈಸೂರಿನಲ್ಲಿ. ನಮ್ಮ ತಂದೆ ಮೆಣಸಿಕಾಯಿ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರದಲ್ಲಿ ನಷ್ಟವಾಗಿ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಯಿತು. ನಾವು ನಾಲ್ಕು ಜನ ಅಣ್ಣತಮ್ಮಂದಿರು. ನಾನು 10ನೇ ತರಗತಿಯವರೆಗು ಓದಿದೆ. ಮನೆಯಲ್ಲಿನ ಆರ್ಥಿಕ ಸಮಸ್ಯೆಗಳಿಂದ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗಲಿಲ್ಲ. ಮನೆಗೆ ಆಧಾರವಾಗಲು ಕೆಲಸಕ್ಕೆ ಸೇರಿಕೊಂಡೆ

ದಿನಗಳು ಉರುಳಿದಂತೆ ವಿವಿಧ ಕೆಲಸಗಳನ್ನು ಮಾಡಲು ಆರಂಭಿಸಿದೆ. ಈ ಸಂದರ್ಭದಲ್ಲಿ ಸಮಾಜದಲ್ಲಿನ ಕೆಟ್ಟ ಅವಸ್ಥೆಯನ್ನು ನೋಡಿ, ಇಂತಹ ಸಮಾಜದಲ್ಲಿ ಬದುಕುವ ಅವಶ್ಯಕತೆ ಇದೆಯಾ? ಎಂಬ ಪ್ರಶ್ನೆ ಉದ್ಭವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಆಲೋಚಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಹೊಳೆದಿದ್ದು, ನಾನು ಆತ್ಮಹತ್ಯೆ ಮಾಡಿಕೊಂಡರೆ ಸಮಾಜ ಸರಿ ಹೋಗುತ್ತಾ? ಎಂಬ ಪ್ರಶ್ನೆ ಕಾಡಿತು. ಹೀಗಾಗಿ, ಆತ್ಮಹತ್ಯೆಯಿಂದೆ ಹಿಂದೆ ಸರಿದು ಸಮಾಜದಲ್ಲಿ ಸುಧಾರಣೆ ತರೋಣ ಅಂತ ಯೋಚಿಸಿ ಹೋರಾಟ ಮನೋಭಾವನೆ ಬೆಳೆಸಿಕೊಂಡೆ. 2006ರಿಂದ ಹೋರಾಟ ಆರಂಭಿಸಿದೆ.

ಟಿವಿ9: ಮೊದಲಿಗೆ ನೀವು ಕೈಗೆತ್ತಿಕೊಂಡ ಹೋರಾಟ ಯಾವುದು?

ಸ್ನೇಹಮಯಿ ಕೃಷ್ಣ: ಮೈಸೂರಿನ ಚಾಂಮುಂಡಿ ಬೆಟ್ಟ ರಸ್ತೆಯಲ್ಲಿ ಜೆಸಿ ಬಡವಾಣೆ ನಿರ್ಮಿಸಿದ ಕೆಆರ್​ಪಿ ಮೌಂಟ್​ ಆ್ಯಂಡ್ ನೌಕರರ ಸಂಘದಲ್ಲಿ ನಡೆದ ಅಕ್ರಮ ವಿರುದ್ಧ ಹೋರಾಟ ಮಾಡಿದೆ. ಈ ಹೋರಾಟದ ಸಂದರ್ಭದಲ್ಲಿ ನನ್ನ ಮೇಲೆ ಮೊದಲ ಸುಳ್ಳು ಪ್ರಕರಣ ದಾಖಲಿಸಲಾಯಿತು.

ಟಿವಿ9: ನಿಮ್ಮ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ?

ಸ್ನೇಹಮಯಿ ಕೃಷ್ಣ: ನನ್ನ ವಿರುದ್ಧ ಒಟ್ಟು 25 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 9 ಪ್ರಕರಣಗಳು ಸುಳ್ಳು ಎಂದು ಸಾಬೀತಾಗಿವೆ. 8 ಪ್ರಕರಣಗಳಲ್ಲಿ ನಿರಪರಾಧಿ ಅಂತ ತೀರ್ಪು ಬಂದಿದೆ. 4 ಪ್ರಕರಣಗಳು ನ್ಯಾಯಾಲಯದಲ್ಲಿವೆ ಮತ್ತು 3 ಪ್ರಕರಣಗಳು ತನಿಖಾ ಹಂತದಲ್ಲಿವೆ. ನನ್ನ ವಿರುದ್ಧ ದೂರುಗಳು ದಾಖಲಾಗುತ್ತಾ ಹೋದಂತೆ ನಾನು ಕಾನೂನು ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ. ಹೀಗಾಗಿ, ನನ್ನ ವಿರುದ್ಧ ದಾಖಲಾದ ಪ್ರಕರಣಗಳಿಗೆ ನಾನೇ ವಾದ ಮಂಡಿಸುತ್ತೇನೆ.

ಟಿವಿ9: ಸ್ನೇಹಮಯಿ ಅಂತ ಹೆಸರು ಹೇಗೆ ಬಂತು? ಹಿಂದಿನ ಕಾರಣವೇನು?

ಸ್ನೇಹಮಯಿ ಕೃಷ್ಣ: 90ರ ದಶಕದಲ್ಲಿ ನಾನು ಹೆಚ್ಚು ಪುಸ್ತಕಗಳನ್ನು ಓದುತ್ತಿದ್ದೆ. ನಾನು ಓದಿದ ಪುಸ್ತಗಳಲ್ಲಿ ಲೇಖಕರ ವಿಳಾಸ ಇರುತ್ತಿತ್ತು. ಅವರ ವಿಳಾಸಕ್ಕೆ ನಾನು ಪತ್ರ ಬರೆಯುತ್ತಿದ್ದೆ. ಪತ್ರದ ಮೂಲಕ ಲೇಖಕರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೆ. ಮುಂದಿನ ದಿನಗಳಲ್ಲಿ ಸ್ನೇಹಿತರಾಗುತ್ತಿದೇವು. ಪತ್ರದ ಮೂಲಕವೇ ನಮ್ಮ ಸಂಭಾಷಣೆಗಳು ನಡೆಯುತ್ತಿದ್ದವು. ವರ್ಷಕ್ಕೆ ಒಂದು ಬಾರಿ ನಾವೆಲ್ಲ ಸ್ನೇಹಿತರು ಒಂದು ಕಡೆ ಸೇರಬೇಕೆಂದು ನಿರ್ಧರಿಸಿದೆವು. ಅದರಂತೆ 1993 ಮೊದಲ ಬಾರಿಗೆ ಮೈಸೂರಿನಲ್ಲಿ ಪತ್ರಮಿತ್ರ ಸಮ್ಮೇಳನ ಮಾಡಿದೆ. ನಂತರ, ವಿಜಯಪುರದ ಸಿಂದಗಿಯಲ್ಲಿ ಮಾಡಿದೆ. ನನ್ನ ಈ ಚಟುವಟಿಗಳನ್ನು ಗಮನಿಸಿ ಕೆಲವು ದಿನಪತ್ರಿಗಳಲ್ಲಿ ನನ್ನ ಬಗ್ಗೆ ಮಾದರಿ ಸ್ನೇಹಮಯಿಅಂತ ಲೇಖನ ಪ್ರಕಟವಾಯಿತು. ನಂತರ ನ್ನನ್ನ ಎಲ್ಲರೂ ಸ್ನೇಹಮಯಿ ಕೃಷ್ಣ ಅಂತ ಕರೆಯಲು ಆರಂಭಿಸಿದರು. ಆದರೆ, ನನ್ನ ಮೂಲ ಹೆಸರು ಎಸ್​. ಕೃಷ್ಣ. ಸ್ನೇಹಮಯಿ ಕೃಷ್ಣ ಹೆಸರು ಚೆನ್ನಾಗಿದೆ ಅಂತ ಅನ್ನಿಸಿ ಅಧಿಕೃತ ಮಾಡಿಕೊಂಡೆ.

ಟಿವಿ9: ಮುಡಾದಲ್ಲಿ ಹಗರಣ ನಡೆದಿದೆ ಎಂದು ಹೇಗೆ ತಿಳಿಯಿತು

ಸ್ನೇಹಮಯಿ ಕೃಷ್ಣ: ತುಂಬಾ ತಿಂಗಳ ಹಿಂದೆ ನನ್ನ ಕೆಲ ಸ್ನೇಹಿತರು ಮತ್ತು ಸಮಾಜಿಕ ಹೋರಾಟಗಾರರು, ಮುಡಾದಲ್ಲಿ ಹಗರಣ ನಡೆದಿದೆ. ಸಿದ್ದರಾಮಯ್ಯ ಅವರು ಅಕ್ರಮವಾಗಿ ತಮ್ಮ ಪತ್ನಿಯ ಹೆಸರಿನಲ್ಲಿ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಿ ಎಂದು ನನಗೆ ದಾಖಲೆಗಳನ್ನು ನೀಡಿದರು. ಆ ಸಮಯದಲ್ಲಿ ನನಗೆ ಬೇರೆ ಬೇರೆ ಕೆಲಸದ ಒತ್ತಡ ಇದ್ದಿದ್ದರಿಂದ ಹೋರಾಟ ಮಾಡಲ್ಲ ಎಂದು ವಾಪಸ್​ ಕಳುಹಿಸಿದ್ದೆ. ಆದರೆ, 3 ತಿಂಗಳು ಬಿಟ್ಟು ಮತ್ತೆ ನನ್ನ ಬಳಿಗೆ ಬಂದು, ಅಂತಹ ದೊಡ್ಡ ವ್ಯಕ್ತಿಯ ವಿರುದ್ಧ ನಮಗೆ ಹೋರಾಟ ಮಾಡಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ನೀನೇ ಸೂಕ್ತ, ಹೋರಾಟ ಮಾಡು ಎಂದು ಒತ್ತಾಯಿಸಿದರು. ಆಗ, ನಾನು ದಾಖಲೆಗಳನ್ನು ಪರಿಶೀಲಿಸಿದಾಗ ದೊಡ್ಡ ಪ್ರಮಾಣದ ಅಕ್ರಮ ನಡೆದಿರುವುದು ತಿಳಿಯಿತು. ಮತ್ತು ಇದರಲ್ಲಿ ಸಾಕಷ್ಟು ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವುದು ತಿಳಿಯಿತು. ಬಳಿಕ, ದಾಖಲೆಗಳನ್ನು ಸಂಗ್ರಹಿಸಿ ಹೋರಾಟ ಮುಂದುವರೆಸಿದ್ದೇನೆ.

ಟಿವಿ9: ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿದವರು ನಿಮಗೆ ದಾಖಲೆಗಳನ್ನು ನೀಡಿದ್ರಾ?

ಸ್ನೇಹಮಯಿ ಕೃಷ್ಣ: ಇಲ್ಲ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ.

ಟಿವಿ9: ಸಿದ್ದರಾಮಯ್ಯ ಹಿಂದುಳಿದವ ವರ್ಗದವರು. ಅವರನ್ನು ಮುಗಿಸಬೇಕೆಂದು ಮೇಲ್ವರ್ಗದ ನಾಯಕರು ಸೇರಿ ನಿಮ್ಮನ್ನು ದಾಳವಾಗಿ ಬಿಟ್ಟಿದ್ದಾರಾ?

ಸ್ನೇಹಮಯಿ ಕೃಷ್ಣ: ಖಂಡಿತವಾಗಿಯೂ ಈ ರೀತಿ ಇಲ್ಲ. ನಾನು ಯಾವುದೇ ಜಾತಿ, ಧರ್ಮ ಮತ್ತು ಪಂಥ ಅಂತ ತಲೆಯಲ್ಲಿಟ್ಟುಕೊಂಡು ಹೋರಾಟ ಮಾಡುವುದಿಲ್ಲ. ಸಮಾಜದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ನಾನು ಹೋರಾಟ ಮಾಡುತ್ತೇನೆ. ಜಾತಿಯಿಂದ ನಾನು ಒಕ್ಕಲಿಗ, ನಾನು ಪ್ರಾರಂಭದಲ್ಲಿ ಒಕ್ಕಲಿಗ ಅಧಿಕಾರಿಗಳ ವಿರುದ್ಧವೇ ಹೋರಾಟ ಮಾಡಿದ್ದೇನೆ. ಆಗ ನನಗೆ, ನೀನು ಒಕ್ಕಲಿಗನಾಗಿ ಒಕ್ಕಲಿಗರ ವಿರುದ್ಧ ಹೋರಾಟ ಮಾಡುತ್ತೀಯಾ ಏಕೆ? ಎಂದು ಪ್ರಶ್ನಿಸುತ್ತಿದ್ದರು. ಆಗ ನಾನು, ಒಕ್ಕಲಿಗ ಅಂತ ನನ್ನ ಮೈಮೇಲೆ ಏನಾದರು ಕುರುಹು ಇದೆಯಾ ಎಂದು ಮರು ಪ್ರಶ್ನಿಸುತ್ತಿದ್ದೆ. ಅನ್ಯಾಯ ಕಂಡರೆ ನಾನು ಸಹಿಸಲ್ಲ, ನಾನು ಅನ್ಯಾಯದ ವಿರುದ್ಧ ಹೋರಾಡುತ್ತೇನೆ ಹೊರತು ಜಾತಿ, ಧರ್ಮ ಇನ್ನೊಂದರ ವಿರುದ್ಧವಲ್ಲ.

ಅಷ್ಟು ಸುಲಭವಾಗಿ ಯಾರು ಕೂಡ ನನ್ನ ಅಸ್ತ್ರವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಹೋರಾಟ ಆರಂಭಿಸುವ ಮುನ್ನ ನಾನು ಸಂಪೂರ್ಣ ದಾಖಲೆಗಳನ್ನು ಕಲೆಹಾಕಿ, ಪರಿಶೀಲಿಸಿ ಹೋರಾಟ ಆರಂಭಿಸುತ್ತೇನೆ. ಹೀಗಾಗಿ, ನನ್ನನ್ನು ಯಾರು ಕೂಡ ಅಷ್ಟು ಸುಲಭವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ.

ಟಿವಿ9: ರಾಜ್ಯದ ಮುಖ್ಯಮಂತ್ರಿಗಳ ಎದುರು ಹಾಕಿಕೊಳ್ಳೋಕೆ ಹೆದರಿಕೆ ಆಗಲ್ವಾ?

ಸ್ನೇಹಮಯಿ ಕೃಷ್ಣ: ಖಂಡಿತವಾಗಿಯೂ ಇಲ್ಲ. ನಾನು ಆಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದೇನೆ. ಮತ್ತು ಹುಟ್ಟು ಸಾವಿನ ಬಗ್ಗೆ ನಾನು ತಿಳಿದಿರುವುದರಿಂದ, ನನಗೆ ಸಾವಿನ ಭಯವಿಲ್ಲ. ಹೀಗಾಗಿ, ನನಗೆ ಯಾವುದೇ ಹೆದರಿಕೆಯಾಗುವುದಿಲ್ಲ.

ಟಿವಿ9: ನಿಮಗೆ ಬೆದರಿಕೆ ಕರೆಗಳು ಬಂದಿವೆಯಾ? ಹಣದ ಆಮಿಷ ಒಡ್ಡಲಾಗಿದೆಯಾ?

ಸ್ನೇಹಮಯಿ ಕೃಷ್ಣ: ಸಾಕಷ್ಟು ಬೆದರಿಕೆ ಕರೆಗಳು ಬಂದಿವೆ. ನನ್ನ ಆತ್ಮೀಯರ ಮೂಲಕ ನನಗೆ ಹಣದ ಆಮಿಷ ಒಡ್ಡಿದ್ದರು. ಆದರೆ ನಾನು ಯಾವುದೇ ಆಮಿಷಕ್ಕೆ ಬಗ್ಗಲಿಲ್ಲ. ಮಾತುಕತೆಗೆ ಕರೆದರು, ನಾನು ಹೋಗಲಿಲ್ಲ.

ಟಿವಿ9: ಸಿದ್ದರಾಮಯ್ಯನವರ ವಿರುದ್ಧ ವೈಯಕ್ತಿ ದ್ವೇಷದಿಂದ ದೂರು ನೀಡಿದ್ದೀರಾ?

ಸ್ನೇಹಮಯಿ ಕೃಷ್ಣ: ಸಿದ್ದರಾಮಯ್ಯನವರ ವಿರುದ್ಧ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಮುಡಾದಿಂದ ಅನುಪಾತದಲ್ಲಿ ಅಕ್ರಮವಾಗಿ ನಿವೇಶನ ಪಡೆದವರ ವಿರುದ್ಧ ನನ್ನ ಹೋರಾಟ. ಸಿದ್ದರಾಮಯ್ಯ ಅವರ ವಿರುದ್ಧದ ಎಲ್ಲ ದಾಖಲೆಗಳು ನನಗೆ ಲಭ್ಯವಾದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದೇನೆ ಅಷ್ಟೇ. ಬಿಟ್ಟರೆ ಅವರ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನನ್ನ ಖಾಸಗಿ ಅರ್ಜಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದೇನೆ, ಮುಡಾದಿಂದ ಯಾರು ಯಾರು ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಅವರೆಲ್ಲರ ವಿರುದ್ಧ ತನಿಖೆ ನಡೆಸಿ ಎಂದು ಮನವಿ ಮಾಡಿದ್ದೇನೆ.

ಟಿವಿ9: ಸಿದ್ದರಾಮಯ್ಯ ಕುಟುಂಬದ ವಿರುದ್ಧ ನೀವು ನೀಡಿರುವ ಬೇನಾಮಿ ಆಸ್ತಿ ದೂರಿಗೂ ಮತ್ತು ಮುಡಾ ಹರಗಣದ ದೂರಿಗೂ ಏನು ವ್ಯತ್ಯಾಸವಿದೆ?

ಸ್ನೇಹಮಯಿ ಕೃಷ್ಣ: ಮುಡಾಕ್ಕೆ ಸಂಬಂಧಿಸಿದ ಜಮೀನುಗಳನ್ನು ತಮ್ಮ ಜಮೀನು ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಬೇನಾಮಿ ಆಸ್ತಿ ಪ್ರಕರಣದಲ್ಲಿ, ಮುಡಾ ವಶಪಡಿಸಿಕೊಂಡಿರುವ ಜಮೀನನ್ನು ಅಕ್ರಮವಾಗಿ ಖರೀದಿ ಮಾಡಿ ಬೇರೊಬ್ಬರಿಗೆ ಮಾರಾಟ ಮಾಡಿ, ಲಾಭ ಮಾಡಿಕೊಂಡಿದ್ದಾರೆ.

ಟಿವಿ9: ಮುಡಾ ಹಗರಣದಲ್ಲಿ ನಿಮ್ಮ ಪ್ರಕಾರ ಎಲ್ಲ ರಾಜಕೀಯ ಪಕ್ಷದವರೂ ಶಾಮೀಲಾಗಿದ್ದಾರಾ?

ಸ್ನೇಹಮಯಿ ಕೃಷ್ಣ: ಎಲ್ಲ ಪಕ್ಷದವರೂ ಶಾಮೀಲಾಗಿದ್ದಾರೆ. ಅವರು, ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆ. ಈ ಬಗ್ಗೆ ದಾಖಲೆಗಳು ದೊರೆಯದ ಹಿನ್ನೆಲೆಯಲ್ಲಿ ಅವರ ಹೆಸರುಗಳು ಆಚೆ ಬಂದಿಲ್ಲ.

ಟಿವಿ9: ಸಿಬಿಐ ತನಿಖೆ ವಿಚಾರವಾಗಿ ನಿಮ್ಮ ಮುಂದಿನ ಹೋರಾಟ ಹೇಗಿರಲಿದೆ?

ಸ್ನೇಹಮಯಿ ಕೃಷ್ಣ: ಈ ಪ್ರಕರಣ ಸಿಬಿಐಗೆ ನೀಡುವವರೆಗೂ ಹೋರಾಟ ಮಾಡುತ್ತಲೇ ಇರುತ್ತೇನೆ. ಈ ಸಂಬಂಧ ಸುಪ್ರೀಂಕೋರ್ಟವರೆಗೂ ಹೋಗಲು ಸಿದ್ದನಾಗಿದ್ದೇನೆ. ಈ ಪ್ರಕರಣದ ತನಿಖೆಯನ್ನು ಸಿಬಿಐನೇ ನಡೆಸಬೇಕೆಂದು ನನ್ನ ಮೊದಲ ಆಗ್ರಹವಾಗಿದೆ.

ಟಿವಿ9: ಲೋಕಾಯುಕ್ತದ ಮೇಲೆ ನಿಮಗೆ ನಂಬಿಕೆ ಇಲ್ಲವೆ?

ಸ್ನೇಹಮಯಿ ಕೃಷ್ಣ: ಈ ಹಿಂದೆ ಲೋಕಾಯುಕ್ತಕ್ಕೆ ನಾನು ಸಾಕಷ್ಟು ದೂರು ಅರ್ಜಿಗಳನ್ನು ನೀಡಿದ್ದೇನೆ. ಯಾವುದೇ ದೂರು ಅರ್ಜಿಯಲ್ಲಿ ನನಗೆ ನ್ಯಾಯ ದೊರೆತಿಲ್ಲ. ಏನೇನೋ ಕಾರಣಗಳನ್ನು ಹೇಳಿ ಆರೋಪಿಗಳನ್ನು ರಕ್ಷಣೆ ಮಾಡುವುದು ಮತ್ತು ಪ್ರಕರಣ ಮುಚ್ಚಿ ಹಾಕಲಾಗಿದೆ. ಸಾಕಷ್ಟು ವರ್ಷಗಳಿಂದ ಇದನ್ನು ಗಮನಿಸಿಕೊಂಡು ಬಂದಿದ್ದೇನೆ. ಮತ್ತು ಲೋಕಾಯುಕ್ತ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳೇ ಆರೋಪಿಯಾಗಿರುವುದರಿಂದ, ಅವರನ್ನು ಎದುರು ಹಾಕಿಕೊಂಡು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸುವ ಧೈರ್ಯವಂತ ಅಧಿಕಾರಿಯನ್ನು ನಾನು ನೋಡಿಲ್ಲ. ಹೀಗಾಗಿ ಸಿಬಿಐಗೆ ನೀಡಬೇಕೆಂಬುವುದು ನನ್ನ ಒತ್ತಾಯ.

ಟಿವಿ9: ನಿಮ್ಮ ಮುಂದಿನ ಹೋರಾಟ ಯಾವುದು?

ಸ್ನೇಹಮಯಿ ಕೃಷ್ಣ: ದೇಶಾದ್ಯಂತ ಚರ್ಚೆಯಾಗುವ, ಅತಿ ದೊಡ್ಡ ಸಮಸ್ಯೆ ವಿರುದ್ಧ ಹೋರಾಟ ಮಾಡುವುದು ನನ್ನ ಗುರಿಯಾಗಿದೆ. ಯಾವುದೇ ಭ್ರಷ್ಟಾಚಾರ ಅಥವಾ ಹಗರಣದ ಕುರಿತಾಗಲಿ ನನ್ನ ಮುಂದಿನ ಹೋರಾಟವಲ್ಲ. ಅದು ಬ ಆ ಕುರಿತು ತಯಾರಿಯೂ ಆರಂಭಿಸಿದ್ದೇನೆ

Published On - 1:02 pm, Mon, 10 February 25

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್