ಅಕ್ಕನೆಂಬ ಮಮತೆಗೆ ನಮ್ಮ ಮನೆಯಿಂದ ವಿದಾಯದ ಕ್ಷಣ, ನೀ ನನ್ನ ಜೀವನದ ಸ್ಪೂರ್ತಿ ಅಕ್ಕಮ್ಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 30, 2022 | 8:47 AM

ನಿನಗೆ ಗೊತ್ತಿಲ್ಲ ನೀನು ನನಗೆ ಬಹಳ ವಿಷಯಕ್ಕೆ ಸ್ಪೂರ್ತಿ ಎಂದು. ನೀನೊಂದು ಭರಿಸಲಾಗದ ಒಂದು ಪಾತ್ರ. ನಿನ್ನ ಮದುವೆ ದಿನ ನಿನ್ನ ತಂದೆಗೆ ಅತ್ಯಂತ ಖುಷಿಯ ಕ್ಷಣ ಹಾಗೂ ದುಃಖದ ಕ್ಷಣ ನಿನ್ನ ಕೊನೆಯ ವಿದಾಯ ಆಗಿತ್ತು.

ಅಕ್ಕನೆಂಬ ಮಮತೆಗೆ ನಮ್ಮ ಮನೆಯಿಂದ ವಿದಾಯದ ಕ್ಷಣ, ನೀ ನನ್ನ ಜೀವನದ ಸ್ಪೂರ್ತಿ ಅಕ್ಕಮ್ಮ
ಸಾಂದರ್ಭಿಕ ಚಿತ್ರ
Follow us on

ಅವಳ ಜೊತೆ ಬೆಳೆದಿದ್ದೇನೆ, ಆಡಿದ್ದೇನೆ, ಜಗಳ ಆಡಿದ್ದೇನೆ, ನಕ್ಕಿದ್ದೇನೆ, ಅತ್ತಿದ್ದೇನೆ, ಕೊನೆಯ ಹದಿನೆಂಟು ವರುಷ ಆಕೆಯೊಂದಿಗೆ ಕಳೆದಿದ್ದೇನೆ. ಅವಳು ನನ್ನ ಅಕ್ಕ. ಅಲ್ಲ ನನ್ನ ಸ್ವಂತ ಅಕ್ಕ ಅಲ್ಲ. ನನ್ನ ಸೋದರ ಮಾವನ ಮಗಳು. ನಾನು ಅಜ್ಜಿಯ ಮನೆಯಲ್ಲಿ ಬೆಳೆದ ಕಾರಣ ನನ್ನ ಸೋದರ ಮಾವನ ಮಕ್ಕಳ ಜೊತೆ ಬೆಳೆದಿದ್ದೇನೆ. ಎಲ್ಲರಿಗಿಂತ ದೊಡ್ಡವಳಾದ ನನ್ನ ಅಕ್ಕ. ಮನೆಯ ಹಿರಿಯ ಮೊಮ್ಮಗಳು. ಆಕೆಯ ಮದುವೆ ಎಂದು ಹಾರಾಟ ಆಡುತ್ತಿದ್ದೆ. ಮದುವೆಯ ನಂತರ ಆಕೆ ನಮ್ಮ ಜೊತೆ ಅಲ್ಲ ಆಕೆಯ ಗಂಡನ ಜೊತೆ ಇರುತ್ತಾಳೆ ಎನ್ನುವ ಸಣ್ಣ ಕಲ್ಪನೆಯು ನನ್ನಲ್ಲಿ ಇರಲಿಲ್ಲ.

ಆವತ್ತು ಕಾಲೇಜು ಬಿಡುವಾಗ ತಡವಾಯಿತು ಎಂದು ಅಕ್ಕನಿಗೆ ಕರೆ ಮಾಡಿ ಹೇಳಿದೆ. ಆಕೆ ಬಂದು ಬಾ ನಾವು ಮಾಸಾಲ್ ಪುರಿ ತಿನ್ನುವ ಅಂತ ಹೇಳಿ ಹೋಟೆಲ್​​ಗೆ ಕರೆದು ಕೊಂಡು ಹೋದಳು. ಅದೇನೂ ಹೊಸತಲ್ಲ ನಾನು ಪ್ರತಿ ಬಾರಿ ತಡವಾದಾಗ ಹೊಟೇಲ್​ಗೆ ಕರೆದು ಕೊಂಡು ಹೋಗುತ್ತಾಳೆ. ಮಸಾಲ್ ಪುರಿ ತಿಂದು ಜ್ಯೂಸ್ ಕುಡಿದು ಹೊರಗೆ ಬಂದು ಗಾಡಿ ಹತ್ತಿ ಕುಳಿತಿದ್ದೆ. ನನ್ನ ಮನದಲ್ಲಿ ಎನೋ ಒಂದು ತಳಮಳ ಅಂದು ನಾನೂ ಅಕ್ಕನನ್ನು ಕಂಡು ಕಣ್ಣೀರು ಬಂತು.

ಅದು ಆಕೆಗೆ ಗೊತ್ತೇ ಇರಲ್ಲಿಲ್ಲ. ಆಕೆ ಇನ್ನು ಅವಳದೇ ಮನೆಗೆ ಅತಿಥಿ ಆಗುತ್ತಾಳೆ. ಇದೇ ರೀತಿ ಆತ್ಮೀಯತೆ ಇನ್ನು ಮುಂದುವರಿಯಬಹುದಾ? ಅಥವಾ ಅತಿಥಿಯಾಗುತ್ತಾಳಾ ಎಂಬ ಕೊಂಚ ಹಿಂಜರಿಕೆ. ಮದುವೆ ದಿನದ ಬೆಳಿಗ್ಗೆ ಆಕೆಯನ್ನು ಮದುಮಗಳ ರೂಪದಲ್ಲಿ ಕಂಡ ನನಗೆ ಇದೇ ಅಕ್ಕನ ಜೊತೆ ನಾನು ಆಡಿ ಬೆಳೆದಿದ್ದು ಅಲ್ವ? ಈಕೆಯ ಜೊತೆ ಜಗಳ ಆಡಿದ್ದು ಅಕ್ಕ ನನ್ನಲ್ಲಿ ಹೊಸ ಬಟ್ಟೆ ಇಲ್ಲ ಅಂದಾಗ ಹುಡುಕಿ ಹುಡುಕಿ ಅವಳ ಬಟ್ಟೆಯನ್ನು ಕೊಡುತ್ತಿದ್ದಳು. ಈಗ ಅದೇ ನನ್ನ ಅಕ್ಕ ಮದುಮಗಳು ಆ ದಿನ ಆಕೆಯನ್ನು ನೋಡುತ್ತಾ ಕಣ್ಣಲ್ಲಿ ಮತ್ತೆ ಮೆಲ್ಲನೇ ನೀರು. ಅದು ಖುಷಿಯ ಕಣ್ಣೀರೋ ಅಥವಾ ದುಃಖದ ಸಂಕೇತವೋ ಗೊತ್ತಿಲ್ಲ. ಆಕೆಯನ್ನು ಕೊನೆಯ ಬಾರಿಗೆ ತಬ್ಬಿಕೊಳ್ಳಲು ನನ್ನ ಮನಸ್ಸು ಹಂಬಲಿಸುತ್ತಾ ಇತ್ತು.

ಇದನ್ನು ಓದಿ:ಪ್ರೀತಿ!, ಮರಳಿ ಬರಬಹುದೇ ನಿನ್ನ ಮುದ್ದಾಡಿದ ಆ ಕ್ಷಣ

ನಾನು ಆಕೆಯನ್ನು ಎಷ್ಟು ಹಚ್ಚಿಕೊಂಡದ್ದೇನೆ ಎಂದು ಇಲ್ಲಿಯವರೆಗೆ ಅವಳ ಬಳಿ ಹೇಳಿಕೊಂಡಿಲ್ಲ. ಆಕೆಗೆ ವಿದಾಯ ಹೇಳುವ ಸಮಯ ನಾನು ಇರಲಿಲ್ಲ ಎಂದು ನೆನಪಿಸಿಕೊಂಡಾಗ ಮನಸ್ಸಿಗೆ ಬೇಸರವೆನಿಸುತ್ತದೆ. ಅವಳ ಜೊತೆ ಕಳೆದ ಪ್ರತಿ ಕ್ಷಣ ಇನ್ನು ಕೇವಲ ನೆನಪು ಅಷ್ಟೇ ಹೊರತು ಮತ್ತೊಮ್ಮೆ ಆ ಕ್ಷಣ ಬರುವುದಿಲ್ಲ. “ಅಕ್ಕ” ಎಂದು ಮೊದಲು ನಾನು ಕರೆದದ್ದು ಆಕೆಯನ್ನೆ . ಧನ್ಯವಾದ ಅಕ್ಕ ನನ್ನ ಬಾಲ್ಯವೆಂಬ ಉದ್ಯಾನದಲ್ಲಿ ಹೂವಾಗಿದಕ್ಕೆ , ಧನ್ಯವಾದ ಅಕ್ಕ ಯೌವನ ಎಂಬ ಆಟದಲ್ಲಿ ನನ್ನ ತರಬೇತುದಾರಾಗಿದಕ್ಕೆ. ಬಹುಶಃ ನಿನಗೆ ಗೊತ್ತಿಲ್ಲ ನೀನು ನನಗೆ ಬಹಳ ವಿಷಯಕ್ಕೆ ಸ್ಪೂರ್ತಿ ಎಂದು. ನೀನೊಂದು ಭರಿಸಲಾಗದ ಒಂದು ಪಾತ್ರ. ನಿನ್ನ ಮದುವೆ ದಿನ ನಿನ್ನ ತಂದೆಗೆ ಅತ್ಯಂತ ಖುಷಿಯ ಕ್ಷಣ ಹಾಗೂ ದುಃಖದ ಕ್ಷಣ ನಿನ್ನ ಕೊನೆಯ ವಿದಾಯ ಆಗಿತ್ತು.

ನಿಶಾ ಶೆಟ್ಟಿ

ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ