AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ!, ಮರಳಿ ಬರಬಹುದೇ ನಿನ್ನ ಮುದ್ದಾಡಿದ ಆ ಕ್ಷಣ

ಪಿಳಿ ಪಿಳಿ ಕಣ್ಣುಗಳಿಂದ ಪುಟ್ಟ ಹೆಜ್ಜೆಯನ್ನಿಟ್ಟು ನನ್ನ ಬಳಿ ನೀ ಬಂದು ನಿಂತಾಗ ಅದೇನೋ ಖುಷಿ. ಹೊಸ ಅತಿಥಿಯಂತೆ ನಿನ್ನನ್ನು ಅಮ್ಮ ಮನೆ ತುಂಬೆಲ್ಲಾ ಓಡಾಡುತ್ತಾ ಪರಿಚಯ ಮಾಡುತ್ತಿದ್ದ ಪರಿ ನನಗೆ ಇಂದಿಗೂ ನೆನಪಿದೆ.

ಪ್ರೀತಿ!, ಮರಳಿ ಬರಬಹುದೇ ನಿನ್ನ ಮುದ್ದಾಡಿದ ಆ ಕ್ಷಣ
ಶ್ವಾನ Image Credit source: TV9 kannada
TV9 Web
| Edited By: |

Updated on:Dec 27, 2022 | 8:28 AM

Share

ಇದೊಂದು ಪ್ರಶ್ನೆ ಇಂದು ನನ್ನಲ್ಲಿ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ. ಅಂದು ಮನೆಯಂಗಳದಲ್ಲಿ ನಿನ್ನನ್ನು ಕಂಡಾಗ ನನಗೆ ಎಲ್ಲಿಲ್ಲದ ಸಂತೋಷ. ಪಿಳಿ ಪಿಳಿ ಕಣ್ಣುಗಳಿಂದ ಪುಟ್ಟ ಹೆಜ್ಜೆಯನ್ನಿಟ್ಟು ನನ್ನ ಬಳಿ ನೀ ಬಂದು ನಿಂತಾಗ ಅದೇನೋ ಖುಷಿ. ಹೊಸ ಅತಿಥಿಯಂತೆ ನಿನ್ನನ್ನು ಅಮ್ಮ ಮನೆ ತುಂಬೆಲ್ಲಾ ಓಡಾಡುತ್ತಾ ಪರಿಚಯ ಮಾಡುತ್ತಿದ್ದ ಪರಿ ನನಗೆ ಇಂದಿಗೂ ನೆನಪಿದೆ. ಪ್ರತಿಬಾರಿ ಅಮ್ಮ ನಿನ್ನನ್ನು ನನ್ನ ಸಣ್ಣ ಮಗನೆಂದು ಬಿಂಬಿಸುತ್ತಿದ್ದಾಗ , ಅದು ಯಾಕೆ ಅಮ್ಮ ನಿನ್ನನ್ನು ಅಷ್ಟೊಂದು ಮುದ್ದಿಸುತ್ತಾಳೆಂದು ಒಂದು ದಿನವೂ ನನ್ನಲ್ಲಿ ಅಸೂಯೆ ಹುಟ್ಟಿರಲ್ಲಿಲ್ಲ, ಕಾರಣ ನಿನ್ನದು ನಿಷ್ಕಲ್ಮಶ ಹೃದಯ . ನನಗಿನ್ನೂ ನೆನಪಿದೆ , ಮೊದಲ ಬಾರಿ ನಿನಗೆ ಅಪಘಾತವಾದಾಗ ನನಗರಿವಿಲ್ಲದಂತೆ ನಾನು ಕುಂದುಹೋಗಿದ್ದೆ. ನಿನ್ನನ್ನು ಉಳಿಸಬೇಕೆಂಬ ಹಠಕ್ಕೆ ಬಿದ್ದಿದ್ದೆ. ಯಾವಾಗ ನೀ ನನ್ನ ಜೊತೆ ಮೊದಲಿನಂತೆ ಆಟ ಆಡುತ್ತೀಯೋ ಎಂದು ಹಾತೊರೆಯುತ್ತಿದ್ದೆ. ಡಾಕ್ಟರ್ ನಿನಗೆ ಇಂಜೆಕ್ಷನ್ ಕೊಟ್ಟಾಗ ಅದೆಷ್ಟು ಮೂಖವೇದನೆ ನೀ ಅನುಭವಿಸಿರುವೆ ಎಂದು ನಾ ಅರಿಯಬಲ್ಲೆ. ಒಂದೂವರೆ ತಿಂಗಳ ನಂತರ ಆ ನರಕಯಾತನೆಯಿಂದ ಚೇತರಿಸಿಕೊಂಡು ಮತ್ತೇ ನಿನ್ನ ಕಾಲುಗಳು ನನ್ನ ಬಳಿ ಬಂದು ನಿಂತಾಗ ಜಗತ್ತೇ ಗೆದ್ದಷ್ಟು ಖುಷಿ ಪಟ್ಟಿದ್ದೆ.

ಯಾರಾದರೂ ನನಗೆ ಹೊಡೆದರೆ ಅದೆಷ್ಟು ಕೋಪ ಅವರಲ್ಲಿ ನೀ ತೋರಿಸುತ್ತಿದ್ದೆ. ಪ್ರತಿದಿನ ಕಾಲೇಜ್​ಗೆ ಹೋಗುವಾಗ ನನ್ನನ್ನು ಬೀಳ್ಕೊಡಲು ಬರುತ್ತಿದ್ದೆ ಮತ್ತೇ ಮುಸ್ಸಂಜೆ ನೀ ನನಗಾಗಿಯೇ ಬಂದು ಗೇಟಿನ ಬಳಿ ನಿಂತಾಗ ನನ್ನನ್ನು ಕಂಡೊಡನೆ ಓಡೋಡಿ ಬಂದು ಸಂತೋಷ ವ್ಯಕ್ತಪಡಿಸುತ್ತಿದ್ದೆ. ನಾನೇನಾದರೂ ಬಣ್ಣ ಬಣ್ಣದ ಉಡುಗೆ ತೊಟ್ಟು ನಿಂತರೆ ಸಪ್ಪೆ ಮುಖ ಹಾಕಿ ಹೊರಹೋಗದಂತೆ ತಡೆಯುತ್ತಿದ್ದೆ. ಅದೆಷ್ಟೋ ಬಾರಿ ನಿನ್ನೆದರು ನನ್ನೆಲ್ಲಾ ನೋವನ್ನು ತೋಡಿಕೊಂಡಾಗ ನಿನ್ನ ಕೈಗಳು ಹೊಸಭರವಸೆಯೊಂದಿಗೆ ನನ್ನನ್ನು ಸಾಂತ್ವಾನಗೊಳಿಸುತ್ತಿದ್ದವು.

ಅಂದು ನಿನಗೆ ಜೊತೆಗಾರನಾಗಿ ಪುಟ್ಟ ನಾಯಿಮರಿಯೊಂದನ್ನು ಮನಗೆ ತಂದಾಗ ಎಲ್ಲಿ ನಿನ್ನನ್ನು ನಾವು ದೂರಮಾಡಿ ಬಿಡುತ್ತೇವೋ ಎಂದು ಒಂದೆರಡು ವಾರ ಯಾರೊಡನೆ ಮಾತನಾಡದೆ ಮೌನಿಯಾಗಿದ್ದೇ. ಪ್ರತಿದಿನವೂ ನನ್ನ ಬರುವಿಕೆಗಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ನಿನ್ನನ್ನು ಕಾಣದೆ ಕಂಗಾಲಾಗಿದ್ದ ನಾನು, ಅಮ್ಮನ ಬಳಿ ನಿನ್ನ ಬಗ್ಗೆ ವಿಚಾರಿಸಿದಾಗ ನಿನಗೆ ಆಕ್ಸಿಡೆಂಟ್ ಆಗಿದೆಂದು ಅವಳು ಬಿಕ್ಕಿ ಅಳುವಾಗ ನನಗೆ ಬರಸಿಡಿಲೇ ಬಡಿದಂತಾಯಿತು. ಎದ್ದೇಳಲು ಸಾಧ್ಯವಾಗದೆ ಬಲಹೀನಗೊಂಡಿದ್ದ ನಿನ್ನ ಪುಟ್ಟ ಕೈ ಕಾಲುಗಳು ನನ್ನನ್ನು ಏಕಚಿತ್ತದಿಂದ ನೋಡುತ್ತಾ ಅಕ್ಕಾ ನನ್ನನ್ನು ಈ ನೋವಿನಿಂದ ಪಾರು ಮಾಡಿ ಬಿಡು ಎಂದು ಬೇಡಿಕೊಳ್ಳುವಂತಿತ್ತು

ಇದನ್ನು ಓದಿ: ಭಾರತದ ಹಳೆಯ ಸಂಸ್ಕೃತಿಯನ್ನು ನೆನಪಿಸಿದ ಜಾಂಬೂರಿ, ಅದ್ಭುತವಾಗಿತ್ತು ಪ್ರಾಚ್ಯ ವಸ್ತು ಸಂಗ್ರಹ

ನಿನ್ನ ಚೇತರಿಕೆಗಾಗಿ ಪ್ರಾರ್ಥಿಸದ ದೇವರಿಲ್ಲ , ಬೇಡದ ಹರಕೆಗಳಿಲ್ಲ , ಆದರೆ ಅದು ಯಾವುದು ಫಲಿಸಲಿಲ್ಲ, ಕಾಲದ ಕರೆಗೆ ಓಗೊಟ್ಟು ನನ್ನನ್ನು ಒಬ್ಬಂಟಿಯನ್ನಾಗಿಸಿ ಬಿಟ್ಟು ಹೋದೆ. ಇಂದು ನಿನ್ನ ಗೈರು ಹಾಜರಿ ನನ್ನ ಎದೆಗೆ ಕತ್ತರಿ ಹಾಕಿದಂತಾಗಿದೆ. ನಿನ್ನ ಸಮಾಧಿಯ ಮೇಲೆ ಹೂವಿಟ್ಟು ವಿದಾಯ ಹೇಳುವುದು ನನಗೆ ಬಲು ಕಠಿಣವಾಗಿಹೋಗಿದೆ.

ನೀತಾ ರವೀಂದ್ರ

ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 am, Tue, 27 December 22