AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡು ಹಣ್ಣಿನ ಕೂಗು : ಕಾಡುಗಳೇ ನಾಶವಾಗುತ್ತಿರುವಾಗ ‘ಕಾಡುಹಣ್ಣು’ಗಳ ಸಂಭ್ರಮವೆಲ್ಲಿ?

ವಿವಿಧ ರಾಸಾಯನಿಕಗಳಿಂದ ಮಿಂದೆದ್ದು ನಗುನಗುತ್ತಾ ಕುಣಿಯುತ್ತಿರುವ ಹಣ್ಣುಗಳ ‘ಗುಣಮಟ್ಟ’ವನ್ನೇ ಶ್ರೇಷ್ಠ ಎನ್ನುವ ಕಾಲಮಾನದಲ್ಲಿ ಬದುಕುತ್ತಿದ್ದೇವೆ. ಮಕ್ಕಳಿಗೆ ಕಾಡು ಹಣ್ಣುಗಳ ಕತೆಗಳನ್ನು ಅಪ್ಪ ಹೇಳಿದರೆ ಆಕಳಿಕೆ ಬರುತ್ತದೆ. ಕೈಯಲ್ಲಿರುವ ರಿಮೋಟ್ ಸದ್ದು ಮಾಡುತ್ತದೆ.

ಕಾಡು ಹಣ್ಣಿನ ಕೂಗು : ಕಾಡುಗಳೇ ನಾಶವಾಗುತ್ತಿರುವಾಗ ‘ಕಾಡುಹಣ್ಣು’ಗಳ ಸಂಭ್ರಮವೆಲ್ಲಿ?
ಕಾಡು ಹಣ್ಣುಗಳು
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 03, 2022 | 9:07 AM

Share

ಇನ್ನೇನು ವಸಂತ ಮಾಸ ಸಮನಿಸುತ್ತಿದೆ. ಪ್ರಕೃತಿಯು ನಲಿನಲಿವ ತಿಂಗಳು. ಹೂವರಳುವ, ಕಾಯಿ ಬಿಡುವ ಸುಸಮಯ. ಕಾಡುಹೂಗಳು, ಕಾಡು ಹಣ್ಣುಗಳು ಒಂದು ಕಾಲಘಟ್ಟದಲ್ಲಿ ಬದುಕಿನೊಂದಿಗೆ ಮಿಳಿತವಾದವುಗಳು. ಮಾವು, ಹಲಸುಗಳ ಜತೆಗೆ ಅವೆಲ್ಲ ಸಾಥ್ ನೀಡುತ್ತಿದ್ದುವು. ಬಾಲ್ಯದ ಒಂದೊಂದು ಕ್ಷಣಗಳ ನೆನಪಿನೊಳಗೆ ಕಾಡುಹಣ್ಣುಗಳ ಕತೆಗಳಿವೆ. ವಿಷರಹಿತವಾದ, ನೈಸರ್ಗಿಕವಾದ ಹಣ್ಣುಗಳು ಆರೋಗ್ಯಕ್ಕೂ ದೊಡ್ಡ ಕಾಣ್ಕೆ ನೀಡಿತ್ತು.  ಶಾಲಾರಂಭದಿಂದ ಶೈಕ್ಷಣಿಕ ಅವಧಿ ಮುಗಿಯುವ ತನಕ ಕಾಡು ಹಣ್ಣುಗಳ ಅರಸುವಿಕೆ ಮತ್ತು ಸೇವನೆ ಪಠ್ಯಕ್ಕಂಟಿಕೊಂಡೇ ಸಾಗುವ ಬದುಕು. ಜೂನ್ ತಿಂಗಳಲ್ಲಿ ಕುಂಟಾಲ ಹಣ್ಣಿನ (ಕುಂಟು ನೇರಳೆ) ಋತು. ಮುಂದಿನ ಮೇಯಲ್ಲಿ ‘ನಾಯಿ ನೇರಳೆ’ ಹಣ್ಣು. ಇವುಗಳ ಮಧ್ಯದ ಋತುಗಳಲ್ಲಿ ವಿವಿಧ ವೈವಿಧ್ಯ ಹಣ್ಣುಗಳು.

ಮುಳ್ಳು ಅಂಕೋಲೆ ಹಣ್ಣು, ಮುಳ್ಳಿನೆಡೆಯಿಂದ ಇಣುಕುವ ‘ಬೆಲ್ಲಮುಳ್ಳು’, ಹುಳಿಮಜ್ಜಿಗೆ ಕಾಯಿ, ಕೇಪುಳ ಹಣ್ಣು, ಕಡು ಕೇಸರಿ ವರ್ಣದ ‘ಮಣ್ಣಮಡಿಕೆ ಹಣ್ಣು’, ಜೇಡರ ಬಲೆಯ ಒಳಗಿರುವಂತೆ ಕಾಣುವ ‘ಜೇಡರ ಹಣ್ಣು’, ನೆಲ್ಲಿಕಾಯಿ, ಹುಣಸೆ, ಅಂಬಟೆ, ನಾಣಿಲು, ಚೂರಿ ಮುಳ್ಳಿನ ಹಣ್ಣು, ಅಬ್ಳುಕ, ಪೇರಳೆ, ಹೆಬ್ಬಲಸು, ಪುನರ್ಪುಳಿ, ರಂಜೆ, ಕೊಟ್ಟೆಮುಳ್ಳು, ಶಾಂತಿಕಾಯಿಗಳ ಸಿಹಿ-ಹುಳಿ ರುಚಿಗಳನ್ನು ಸವಿದ ನಾಲಗೆಗಳ ಭಾಗ್ಯ. ಮಲೆನಾಡಿಗರಿಗೆ ಮೊಗೆದು ತಿನ್ನುವಷ್ಟು ಹಣ್ಣುಗಳ ಸಂಪತ್ತಿದೆ. (ಇವೆಲ್ಲ ಪ್ರಾದೇಶಿಕ ಹೆಸರುಗಳು.) ರಸ್ತೆಗಳು ಇಲ್ಲ. ಶಾಲೆ ಒಂದೆಡೆ, ಮನೆ ಇನ್ನೊಂದೆಡೆ. ಮೈಲುಗಟ್ಟಲೆ ಕಾಡು ದಾರಿಯ ಕಾಲ್ನಡಿಗೆ. ಹತ್ತು ಗಂಟೆಗೆ ಶಾಲಾರಂಭ. ಎಂಟು ಗಂಟೆಗೆ ಬುತ್ತಿ ಕಟ್ಟಿಸಿಕೊಂಡು ಹೆಗಲಿಗೆ ಚೀಲ ಸಿಕ್ಕಿಸಿ ಹೊರಟರೆ ಸಾಕು, ದಾರಿಯುದ್ದಕ್ಕೂ ಕಾಡು ಹಣ್ಣುಗಳ ಬೇಟೆ. ಕುಂಟಾಲ ಮತ್ತು ನೇರಳೆ ಹೊರತು ಪಡಿಸಿ, ಮಿಕ್ಕೆಲ್ಲಾ ಹಣ್ಣುಗಳನ್ನು ತಿಂದ ಸುಳಿವು ಕೂಡಾ ಅಧ್ಯಾಪಕರಿಗೆ ಸಿಗದು.

ಸಂಜೆ ನಾಲ್ಕು ಗಂಟೆಗೆ ಶಾಲೆ ಬಿಟ್ಟರೆ, ಮನೆ ತಲಪುವಾಗ ಆರು ದಾಟಿರುತ್ತದೆ. ಅಪ್ಪಾಮ್ಮನಲ್ಲಿ ಸುಳ್ಳು ಹೇಳಿದರೂ ಅಂಗಿಯಲ್ಲಿರುವ ‘ಬೇಟೆಯ ಕುರುಹು’ ನಿಜಬಣ್ಣ ಬಯಲು ಮಾಡುತ್ತದೆ. ಸಾಹಸಕ್ಕೆ ಸಾಕ್ಷಿಯಾಗುತ್ತದೆ. ಸೈಕಲ್ ಕಲಿಯಲು ಇನ್ನೊಬ್ಬರ ಅವಲಂಬನೆ ಬೇಕು. ಆದರೆ ಮರಹತ್ತಲು? ಬೇಡ, ಹಣ್ಣಿನ ನೆವದಿಂದ ಮರಗಳೇ ಮರ ಹತ್ತಿಸುವ ಟ್ರೈನಿಂಗ್ ಕೊಡುತ್ತವೆ. ಶರೀರಕ್ಕೆ ಬೇಕಾದ ವಿಟಮಿನ್‍ಗಳು ಹಣ್ಣಿನ ಸಹವಾಸದಲ್ಲಿ ಲಭ್ಯ. ‘ಎ’, ‘ಬಿ’.. ಮಿಟಮಿನ್ ಅಂತ ಹೆಸರಿಸಲು ಬಾರದಿರಬಹುದು. ಆದರೆ ಸಣ್ಣಪುಟ್ಟ ದೇಹದ ಆರೋಗ್ಯದ ವ್ಯತ್ಯಾಸಗಳಿಗೆ ಇಂತಹುದೇ ಹಣ್ಣು ತಿನ್ನಬೇಕು ಎಂಬುದು ಹಿರಿಯರಿಗೆ ಗೊತ್ತಿತ್ತು. ಉದಾ: ಬಾಯಿಹುಣ್ಣು ಬಂದಾಗ ‘ಕೊಟ್ಟೆಮುಳ್ಳು ಹಣ್ಣು’ ತಿನ್ನಲೇ ಬೇಕು ಅಂತ ಅಮ್ಮ ಹೇಳುತ್ತಿದ್ದುರು.

ಹಳ್ಳಿಗೆ ರಸ್ತೆಗಳು ಬಂದಿವೆ. ಕಾಡು ದಾರಿ ಮಾಯವಾಗಿದೆ. ಸೇಬು, ದ್ರಾಕ್ಷಿ, ದಾಳಿಂಬೆಗಳು.. ಹಳ್ಳಿಯ ಚಹದಂಗಡಿಯಲ್ಲೂ ಮಾರಾಟಕ್ಕೆ ಸಿಗುತ್ತದೆ. ರಸ್ತೆ ನಿರ್ಮಾಣಕ್ಕೆ ಕಾಡುಗಳು ನಾಶವಾಗಿವೆ. ಹಣ್ಣುಗಳ ಸಹವಾಸದಲ್ಲಿ ಬದುಕಿದ ವಿದ್ಯಾರ್ಥಿಗಳು ಪ್ರೌಢರಾಗಿದ್ದು ಕೆಲವರು ನಗರ ಸೇರಿದ್ದಾರೆ. ಅವರಿಗೆ ಮದುವೆಯಾಗಿದೆ. ಅವರ ಮಕ್ಕಳನ್ನು ಅಳಿದುಳಿದ ಕಾಡು ಹಣ್ಣಿನ ಮರಗಳು ಕೈಬೀಸಿ ಕರೆಯುತ್ತಿವೆ, ‘ಉತ್ಕಷ್ಟವಾದ ಹಣ್ಣುಗಳಿವೆ, ತಿನ್ನಿ’ ಅಂತ ಕೂಗುತ್ತಿವೆ. ಹಣ ಕೊಟ್ಟರೆ ಸಾಕು, ಕಿಲೋಗಟ್ಟಲೆ ಕೊಳ್ಳಬಹುದಾದ ರಂಗುರಂಗಿನ ಹಣ್ಣುಗಳ ಮಧ್ಯೆ ಹಣ್ಣಿನ ಕೂಗು ಕೇಳಿಸುವುದಿಲ್ಲ.

ವಿವಿಧ ರಾಸಾಯನಿಕಗಳಿಂದ ಮಿಂದೆದ್ದು ನಗುನಗುತ್ತಾ ಕುಣಿಯುತ್ತಿರುವ ಹಣ್ಣುಗಳ ‘ಗುಣಮಟ್ಟ’ವನ್ನೇ ಶ್ರೇಷ್ಠ ಎನ್ನುವ ಕಾಲಮಾನದಲ್ಲಿ ಬದುಕುತ್ತಿದ್ದೇವೆ. ಮಕ್ಕಳಿಗೆ ಕಾಡು ಹಣ್ಣುಗಳ ಕತೆಗಳನ್ನು ಅಪ್ಪ ಹೇಳಿದರೆ ಆಕಳಿಕೆ ಬರುತ್ತದೆ. ಕೈಯಲ್ಲಿರುವ ರಿಮೋಟ್ ಸದ್ದು ಮಾಡುತ್ತದೆ, ಮೊಬೈಲ್‍ನ ರಿಂಗ್‍ಟೋನ್‍ಗಳು ರಿಂಗಿಸುತ್ತವೆ! ಹುಡುಕಿ ತಂದ ಹಣ್ಣುಗಳನ್ನು ಮಕ್ಕಳ ಕೈಗಿತ್ತರೆ ‘ಇಸ್ಸೀ’ ಅನ್ನುತ್ತಾ ಎಸೆಯುವ ಮನಸ್ಸುಗಳನ್ನು ಬದಲಾದ ಜೀವನ ಶೈಲಿಯು ನುಂಗಿ ನೊಣೆದಿದೆ.

ಬೇಸಿಗೆ ರಜೆ ಬಂದಾಗ ನಗರದಲ್ಲಿ ‘ಬದುಕು ಬದಲಾಯಿಸುವ’ ತರಬೇತಿಗಳ ಜಾಹೀರಾತು ಫ್ಲೆಕ್ಸಿಗಳು ದಿಢೀರ್ ಕಾಣಸಿಗುತ್ತವೆ. ಶಿಬಿರಗಳು ಮೈಲಿಗೊಂದು ರೂಪುಗೊಳ್ಳುತ್ತವೆ. ಎಂದಾದರೂ ನಗರದ ಮಕ್ಕಳಿಗೆ ಹಳ್ಳಿಗಳನ್ನು ತೋರಿಸುವ ಕೆಲಸಗಳನ್ನು ಶಿಬಿರಗಳು ಮಾಡಿದ್ದಿವೆಯೇ? ನಗರದ ಮಕ್ಕಳನ್ನು ಹಳ್ಳಿಗೆ ಕರೆದೊಯ್ದು; ಹಳ್ಳಿಯ ಬದುಕು, ಹಣ್ಣುಗಳು, ಸಸ್ಯಗಳ ಪರಿಚಯ, ಜೇನುಕುಟುಂಬ, ಈಜುಗಾರಿಕೆ, ಚಾರಣ.. ಹೀಗೆ ನೈಸರ್ಗಿಕ ಬದುಕನ್ನು ಕಟ್ಟಿಕೊಳ್ಳಬಹುದಾದ ಉಪಾಧಿಗಳನ್ನು ಪರಿಚಯಿಸಬಹುದು. ಕೆಲವೊಂದು ಸಂಸ್ಥೆಗಳು ಈ ಕೆಲಸಗಳನ್ನು ಮಾಡುತ್ತಿವೆ.

ಕಾಡುಗಳೇ ನಾಶವಾಗುತ್ತಿರುವಾಗ ‘ಕಾಡುಹಣ್ಣು’ಗಳ ಸಂಭ್ರಮವೆಲ್ಲಿ? ಇದನ್ನು ಅನುಭವಿಸುವ ಮಕ್ಕಳೇ ಇಲ್ಲದಿರುವಾಗ ಮರಗಳಿಗೂ ಬದುಕು ಸಾಕಾಗಿದೆ! ಹಾಗಾಗಿಯೇ ನೋಡಿ, ‘ನಾಡಿನ ಅಭಿವೃದ್ಧಿ’ಗಾಗಿ ತಮ್ಮ ಕೊರಳನ್ನು ಕೊಡಲಿಗೆ ಅರ್ಪಿಸುತ್ತಿವೆ! ಕಾಡುಗಳು ದೂರ ಸಾಗುತ್ತಿವೆ. ಅವು ದೂರ ಹೋದಷ್ಟೂ ಭವಿಷ್ಯದ ಸಂಕಷ್ಟದ ಸರಮಾಲೆಗೆ ಸಾಕ್ಷಿಗಳಾಗುತ್ತಿದ್ದೇವೆ.

ನಾ. ಕಾರಂತ ಪೆರಾಜೆ

ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ