ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬುಧವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಬಜೆಟ್ (Budget 2023) ನಂತರ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘2047ರ ಹೊತ್ತಿಗೆ ಭಾರತವನ್ನು ಸಮೃದ್ಧ ಹಾಗೂ ಸರ್ವಾಂಗೀಣ ವಿಕಸಿತ ದೇಶವಾಗಿಸುವ ಕನಸಿಗೆ ಈ ಬಜೆಟ್ ಪೂರಕವಾಗಿದೆ. ಸಮಾಜದ ಮಹತ್ವಾಕಾಂಕ್ಷೆಗಳಿಗೆ ಬಲತುಂಬುವ ಬಜೆಟ್ ಇದು’ ಎಂದು ಹೇಳಿದ್ದಾರೆ.
‘ಭಾರತದ ಪ್ರಗತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಮಹಿಳಾ ಸ್ವಸಹಾಯ ಸಂಘಗಳ ಸರ್ವಾಂಗೀಣ ವಿಕಾಸಕ್ಕಾಗಿ ಹೊಸ ಕ್ರಮಗಳನ್ನು ಘೋಷಿಸಲಾಗಿದೆ. ಮಹಿಳೆಯರಿಗಾಗಿ ಘೋಷಿಸಿರುವ ವಿಶೇಷ ಉಳಿತಾಯ ಯೋಜನೆಯಿಂದ ಸಾಮಾನ್ಯ ತಾಯಂದಿರುವ, ಸೋದರಿಯರಿಗೆ ಅನುಕೂಲವಾಗಲಿದೆ. ಜನ್ಧನ್ ಅಕೌಂಟ್ಗಳ ಜಾಲ ವ್ಯಾಪಕವಾಗಿರುವುದರಿಂದ ಈ ಯೋಜನೆಯ ಲಾಭ ಎಲ್ಲರಿಗೂ ತಲುಪಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರದ ಅಭಿವೃದ್ಧಿಗೆ, ರೈತರನ್ನು ಸಬಲರನ್ನಾಗಿಸಲು ಸರ್ಕಾರ ಬದ್ಧವಾಗಿದೆ. ಈ ಬಾರಿಯ ಬಜೆಟ್ನಲ್ಲಿ ಹೊಸ ಪ್ರಾಥಮಿಕ ಸಹಕಾರ ಸಂಘಗಳನ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಕೃಷಿಯ ಜೊತೆಗೆ ಹಾಲು ಹಾಗೂ ಮೀನುಗಾರಿಕೆಗೂ ಪ್ರೋತ್ಸಾಹ ಸಿಗಲಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸುವ ದೃಷ್ಟಿಯಿಂದ ಹಾಗೂ ರೈತರಿಗೂ ಡಿಜಿಟಲ್ ಆರ್ಥಿಕತೆಯ ಲಾಭ ದೊರಕಿಸಿಕೊಡುವ ಉದ್ದೇಶದಿಂದ ಈ ಬಜೆಟ್ನಲ್ಲಿ ‘ಡಿಜಿಟಲ್ ಅಗ್ರಿಕಲ್ಚರ್’ ಮೂಲಸೌಕರ್ಯಕ್ಕೆ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
‘ಇಂದು ವಿಶ್ವವು ಸಿರಿಧಾನ್ಯಗಳತ್ತ ತಿರುಗಿ ನೋಡುತ್ತಿದೆ. ಮನೆಮನೆಗೆ ಸಿರಿಧಾನ್ಯಗಳು ತಲುಪುತ್ತಿದೆ. ಇದರ ಅತಿಹೆಚ್ಚು ಲಾಭ ಭಾರತದ ಸಾಮಾನ್ಯ ರೈತರಿಗೆ ಸಿಗಬೇಕು. ಇದಕ್ಕಾಗಿ ಹೊಸ ಚಿಂತನೆ ಅಗತ್ಯವಾಗಿದೆ. ‘ಶ್ರೀ ಅನ್ನ’ ಎನ್ನುವ ಸೂಪರ್ ಫುಡ್ ಘೋಷಿಸಲಾಗಿದೆ. ಇದರಿಂದ ದೇಶದ ಸಣ್ಣ ರೈತರು, ಆದಿವಾಸಿಗಳಿಗೆ ಆರ್ಥಿಕ ಲಾಭ ಸಿಗುತ್ತದೆ. ದೇಶದ ಜನರ ಆರೋಗ್ಯ ಸುಧಾರಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಎಲ್ಲ ಕ್ರಮಗಳೂ ಪರಿಸರಕ್ಕೆ ಪೂರಕವಾಗಿರಬೇಕು. (ಪರಿಸರ ಸ್ನೇಹಿ) ಹಸಿರು ಆರ್ಥಿಕತೆ, ಹಸಿರು ತಂತ್ರಜ್ಞಾನ ಹಾಗೂ ಹಸಿರು ಉದ್ಯೋಗಗಳಿಗೆ ಈ ಬಜೆಟ್ ಒತ್ತು ನೀಡಿದೆ. ರಸ್ತೆ, ರೈಲು, ಜಲ ಮಾರ್ಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಧುನಿಕ ಮೂಲಸೌಕರ್ಯ ಬೇಕಿದೆ. ಮೂಲ ಸೌಕರ್ಯದ ಮೇಲಿನ ವೆಚ್ಚ ಕಳೆದ 10 ವರ್ಷಗಳಲ್ಲಿ 400 ಪಟ್ಟು ಹೆಚ್ಚಾಗಿದೆ. ₹ 10 ಲಕ್ಷ ಕೋಟಿಯಷ್ಟು ದೊಡ್ಡ ಮೊತ್ತವನ್ನು ಮೂಲಸೌಕರ್ಯ ಅಭಿವೃದ್ಧಿಗಾಗಿ ಹೂಡಿಕೆ ಮಾಡಲಾಗಿದೆ. ಈ ಹೂಡಿಕೆಯು ಯುವಜನರಿಗೆ ಹೊಸ ಉದ್ಯೋಗ ಸೃಷ್ಟಿಸುವ ಜೊತೆಗೆ ಆರ್ಥಿಕತೆಗೆ ಹೊಸ ವೇಗವನ್ನೂ ನೀಡಲಿದೆ ಎಂದು ಹೇಳಿದರು.
ಉದ್ಯಮಿಗಳು ಸುಲಭವಾಗಿ ವ್ಯವಹಾರ ನಿರ್ವಹಿಸಲು ಸಾಧ್ಯವಾಗುವಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉದ್ಯಮಿಗಳಿಗೆ ಸುಲಭವಾಗಿ ಬಂಡವಾಳ ಸಿಗುವಂತೆ ಮಾಡಲೂ ಕ್ರಮ ವಹಿಸಲಾಗಿದೆ. ಉದ್ಯಮಗಳ ಮೇಲಿನ ತೆರಿಗೆಯಲ್ಲಿ ಸುಧಾರಣೆ ತರಲಾಗಿದೆ. ಹೀಗಾಗಿ ಎಂಎಸ್ಎಂಇಗಳಿಗೆ ದೊಡ್ಡ ಕಂಪನಿಗಳಿಂದ ಸಮಯಕ್ಕೆ ಸರಿಯಾಗಿ ಹಣ ಪಾವತಿಯಾಗುತ್ತದೆ ಎಂದು ವಿವರಿಸಿದರು.
ಭಾರತ ಬದಲಾಗುತ್ತಿದೆ. ಬದಲಾಗುತ್ತಿರುವ ಭಾರತದಲ್ಲಿ ಮಧ್ಯಮವರ್ಗವು ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಮುಖ ಧಾರೆಯಾಗಿದೆ. ಸಮೃದ್ಧ ಹಾಗೂ ವಿಕಸಿತ ಭಾರತದ ಕನಸು ಪೂರ್ಣಗೊಳ್ಳುವುದರಲ್ಲಿ ಈ ವರ್ಗ ಅತ್ಯಂತ ಮಹತ್ವದ್ದಾಗಿದೆ. ಈ ವರ್ಗಕ್ಕೆ ಶಕ್ತಿ ತುಂಬಲು ಹಲವು ಕ್ರಮ ತೆಗೆದುಕೊಂಡಿದ್ದೇವೆ. ಸುಲಲಿತ ಬದುಕಿನ ಸಾಧ್ಯತೆಗಳನ್ನು ಹೆಚ್ಚಿಸಲಾಗಿದೆ. ವೇತನದಾರರಿಗೆ ನೀಡಿರುವ ತೆರಿಗೆ ವಿನಾಯ್ತಿಯಿಂದಲೂ ಈ ವರ್ಗಕ್ಕೆ ಲಾಭವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
This year’s Budget infuses new energy to India’s development trajectory. #AmritKaalBudget https://t.co/lyV2SMgvvs
— Narendra Modi (@narendramodi) February 1, 2023
ಅಭಿವೃದ್ಧಿಗೆ ಒತ್ತು ಕೊಡುವ ಐತಿಹಾಸಿಕ ಬಜೆಟ್ ಕೊಟ್ಟಿದ್ದಕ್ಕೆ ನಿರ್ಮಲಾ ಮತ್ತು ಅವರ ತಂಡಕ್ಕೆ ಶಹಬ್ಬಾಸ್ ಎನ್ನುತ್ತಾನೆ. ಹೊಸ ಬಜೆಟ್ ನಿಮ್ಮೆದುರು ಇದೆ. ಹೊಸ ಹುಮ್ಮಸ್ಸಿನೊಂದಿಗೆ 2047ರ ಹೊತ್ತಿಗೆ ಸಮೃದ್ಧ, ಸರ್ವಾಂಗೀಣ ಅಭಿವೃದ್ಧಿಯ ಭಾರತ ರೂಪಿಸೋಣ ಎಂದು ಮೋದಿ ತಮ್ಮ ಭಾಷಣ ಮುಗಿಸಿದರು.
ಇದನ್ನೂ ಓದಿ: Budget 2023: ಅಮೃತಕಾಲದ ಮೊದಲ ಬಜೆಟ್; ನಿರ್ಮಲಾ ಸೀತಾರಾಮನ್ ಹೇಳಿದ 7 ಬಜೆಟ್ ಆದ್ಯತೆಗಳಿವು
ಬಜೆಟ್ಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Wed, 1 February 23