Train Toilet Video: ರೈಲ್ವೆ ಟಾಯ್ಲೆಟ್ ಮೊದಲು ಹೇಗಿತ್ತು, ಈಗ ಹೇಗಿದೆ? ಸಚಿವರ ಟ್ವೀಟ್ ವೈರಲ್
Railway Minister Ashwini Vaishnav's Tweet: ಸಾಮಾನ್ಯ ರೈಲುಗಳ ಬೋಗಿಗಳಲ್ಲಿರುವ ಟಾಯ್ಲೆಟ್ಗಳಿಗೆ ನಾವೀನ್ಯತೆಯ ಸ್ಪರ್ಶ ಕೊಡಲಾಗಿದೆ. ಸಚಿವರು ಖುದ್ದಾಗಿ ಟ್ರೈನುಗಳಿಗೆ ಹೋಗಿ ಶೌಚಾಲಯಗಳ ಪರಿಶೀಲನೆ ನಡೆಸಿದ್ದಾರೆ. ಇದರ ವಿಡಿಯೋವೊಂದನ್ನು ಸಚಿವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನವದೆಹಲಿ: ಭಾರತೀಯ ರೈಲ್ವೆಯ ಟ್ರೈನುಗಳು (Indian Railway) ಯಾವ ರೀತಿಯಲ್ಲಿ ಸುಧಾರಣೆಗಳನ್ನು ಕಂಡಿವೆ ಎಂಬುದಕ್ಕೆ ನಿದರ್ಶನವಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನಿನ್ನೆ ಮಾಡಿದ ಟ್ವೀಟ್ ಈಗ ವೈರಲ್ ಆಗಿದೆ. ಸಾಮಾನ್ಯ ರೈಲುಗಳ ಬೋಗಿಗಳಲ್ಲಿರುವ ಟಾಯ್ಲೆಟ್ಗಳಿಗೆ (Railway Toilet) ನಾವೀನ್ಯತೆಯ ಸ್ಪರ್ಶ ಕೊಡಲಾಗಿದೆ. ಸಚಿವರು ಖುದ್ದಾಗಿ ಟ್ರೈನುಗಳಿಗೆ ಹೋಗಿ ಶೌಚಾಲಯಗಳ ಪರಿಶೀಲನೆ ನಡೆಸಿದ್ದಾರೆ. ಇದರ ವಿಡಿಯೋವೊಂದನ್ನು ಸಚಿವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರ ಈ ವಿಡಿಯೋಗೆ ಸುಮಾರು 3 ಲಕ್ಷದಷ್ಟು ವೀಕ್ಷಣೆಗಳಾಗಿವೆ.
ಬಹಳಷ್ಟು ಜನರು ಸಚಿವ ಅಶ್ವಿನಿ ವೈಷ್ಣವ್ ಅವರ ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದು, ರೈಲ್ವೆ ಸೌಲಭ್ಯಗಳಲ್ಲಿನ ಸುಧಾರಣೆಗಳನ್ನು ಸ್ವಾಗತಿಸಿದ್ದಾರೆ. ಇದು ಬಹಳ ದಿನಗಳ ಅಪೇಕ್ಷೆಯಾಗಿತ್ತು ಎಂದು ಹಲವರು ಹೇಳಿದರೆ, ಇದೇ ರೀತಿಯ ಸ್ವಚ್ಛತೆಯನ್ನು ಮುಂದಿನ ದಿನಗಳಲ್ಲೂ ಕಾಪಾಡಿಕೊಂಡು ಹೋಗುವುದು ಸವಾಲಿನ ಕೆಲಸ ಎಂದು ಕೆಲವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Railway Budget 2023: ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ 2.4 ಲಕ್ಷ ಕೋಟಿ ರೂ; ಇತಿಹಾಸದಲ್ಲೇ ಹೆಚ್ಚು
ರೈಲಿನೊಳಗೆ ಸ್ವಚ್ಛತೆ ಉಳಿಸಿಕೊಳ್ಳಬೇಕಾದರೆ ರೈಲ್ವೆ ಸಿಬ್ಬಂದಿ ಜೊತೆಗೆ ಜನರೂ ಜವಾಬ್ದಾರಿಯುತವಾಗಿ ವರ್ತಿಸಬೇಕು. ತಮ್ಮ ಮನೆಗಳ ರೀತಿಯಲ್ಲೇ ರೈಲಿನಲ್ಲೂ ಸ್ವಚ್ಛತೆ ಕಾಪಾಡಿಕೊಳ್ಳುವುದು ಜನರ ಜವಾಬ್ದಾರಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
Inspected the new upgraded toilet designs for existing coaches. pic.twitter.com/2v426YZiEy
— Ashwini Vaishnaw (@AshwiniVaishnaw) January 31, 2023
ಇತ್ತೀಚೆಗೆ ವಂದೇ ಭಾರತ್ ರೈಲಿನ ಬೋಗಿಗಳಲ್ಲಿ ಕಸದ ರಾಶಿ ತುಂಬಿರುವ ದೃಶ್ಯದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು.
ನಿನ್ನೆ ಸಚಿವ ಅಶ್ವಿನಿ ವೈಷ್ಣವ್ ಮಾಡಿದ ಪೋಸ್ಟ್ನಲ್ಲೇ ವ್ಯಕ್ತಿಯೊಬ್ಬರು ಬೇರೆ ಕೆಲ ರೈಲುಗಳಲ್ಲಿರುವ ಅವ್ಯವಸ್ಥೆಯ ದೃಶ್ಯಗಳ ಫೋಟೋವನ್ನು ಹಾಕಿದ್ದಾರೆ. ಅದರಲ್ಲಿ ಹಳೆಯ ರೈಲುಗಳ ಗಲೀಜಿ ಎದ್ದು ಕಾಣುತ್ತದೆ. ಸಾಧಾರಣ ರೈಲು ಬೋಗಿಗಳಲ್ಲಿ ಹೆಚ್ಚೇನೂ ಬದಲಾವಣೆ ಆಗಿಲ್ಲ ಎನ್ನುವಂತೆ ಅವರು ಅಭಿಪ್ರಾಯಪಟ್ಟಿದ್ದಾರೆ.
Published On - 4:01 pm, Wed, 1 February 23