
ನವದೆಹಲಿ, ಫೆಬ್ರುವರಿ 1: ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ನೀಡಲಾಗುವ ಕಿರು ಸಾಲದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮೂರು ಲಕ್ಷ ರೂ ಇದ್ದ ಸಾಲದ ಮಿತಿಯನ್ನು ಐದು ಲಕ್ಷ ರೂಗೆ ಏರಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಬಜೆಟ್ನಲ್ಲಿ ಈ ಘೋಷಣೆ ಮಾಡಿದ್ದಾರೆ. ಏಳು ಕೋಟಿಗೂ ಹೆಚ್ಚು ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಅವರಿಗೆ ಬಹಳ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.
ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಒತ್ತು ಕೊಡುತ್ತಿರುವುದಾಗಿ ತಿಳಿಸಿದ್ದಾರೆ. ಬೇಳೆಕಾಳು ಇತ್ಯಾದಿಯಲ್ಲಿ ಸ್ವಾವಲಂಬನೆ ಸಾಧಿಸುವ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಬೇಳೆಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸುವ ಆರು ವರ್ಷದ ಮಿಷನ್ ಅನ್ನು ಅವರು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಗಳಾದ ಎನ್ಎಎಫ್ಇಇ, ಎನ್ಸಿಸಿಎಫ್ ಇತ್ಯಾದಿ ಸಂಸ್ಥೆಗಳೊಂದಿಗೆ ರೈತರು ಒಪ್ಪಂದ ಮಾಡಿಕೊಂಡು, ಬೇಳೆಕಾಳುಗಳನ್ನು ಮಾರಬಹುದು. ಇದರಿಂದ ರೈತರಿಗೆ ಸುಲಭ ಮಾರುಕಟ್ಟೆ ಸಿಕ್ಕಂತಾಗುತ್ತದೆ.
ಬಜೆಟ್ನಲ್ಲಿ ಪಿಎಂ ಧನ್ ಧಾನ್ಯ್ ಕೃಷಿ ಯೋಜನೆಯನ್ನು ಪ್ರಕಟಿಸಲಾಗಿದೆ. ಕಡಿಮೆ ಉತ್ಪನ್ನ ಇರುವ 100 ಜಿಲ್ಲೆಗಳನ್ನು ಗುರಿಯಾಗಿಸಿ, ರಾಜ್ಯಗಳ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ. ಬಹುಬೆಳೆ, ಸುಸ್ಥಿರ ಕೃಷಿ ವಿಧಾನ, ನೀರಾವರಿ ಸೌಲಭ್ಯ, ಸಾಲ ಸೌಲಭ್ಯ ಇತ್ಯಾದಿ ಮೂಲಕ ಕೃಷಿ ಉತ್ಪನ್ನವನ್ನು ಹೆಚ್ಚಿಸುವುದು ಈ ಯೋಜನೆ ಗುರಿ. 1.7 ಕೋಟಿ ರೈತರ ಜೀವನಕ್ಕೆ ಇದರಿಂದ ಅನುಕೂಲವಾಗಲಿದೆ.
ಇದನ್ನೂ ಓದಿ: ಬಜೆಟ್ ಮುನ್ನ 200 ಅಂಕಗಳಷ್ಟು ಏರಿದ ಸೆನ್ಸೆಕ್ಸ್; ಒಟ್ಟಾರೆ ಹಸಿರುಬಣ್ಣದಲ್ಲಿ ಷೇರುಪೇಟೆ
ಇಂಡಿಯಾ ಪೋಸ್ಟ್ ಸಂಸ್ಥೆಯನ್ನು ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ ಸಂಸ್ಥೆಯಾಗಿ ಪರಿವರ್ತಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಒಂದೂವರೆ ಲಕ್ಷ ಅಂಚೆ ಕಚೇರಿಗಳನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಆರ್ಥಿಕತೆಗೆ ಅನುಕೂಲವಾಗಲಿದೆ.
ಬಜೆಟ್ ಲೈವ್ ಅಪ್ಡೇಟ್ಸ್ಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:44 am, Sat, 1 February 25