ನವದೆಹಲಿ: ಸಂಸತ್ತಿನ ( Parliament) ಕಲಾಪಕ್ಕೆ ವಿಪಕ್ಷಗಳು ಅಡ್ಡಿಪಡಿಸುತ್ತಿರುವುದನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಖಂಡಿಸಿದ್ದಾರೆ. ಇಂದು ಲೋಕಸಭೆಯಲ್ಲಿ ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕರಿಗೆ (Opposition Parties) ಮನವಿ ಮಾಡಿದ ಪ್ರಲ್ಹಾದ್ ಜೋಶಿ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಕೈಗೊಳ್ಳುವುದು ಅಗತ್ಯವಾಗಿದೆ. ಮಹಿಳಾ ರಾಷ್ಟ್ರಪತಿ ಅವರು ಜಂಟಿ ಅಧಿವೇಶನವನ್ನ (Budget Session) ಉದ್ದೇಶಿಸಿ ಮೊದಲ ಭಾಷಣಕ್ಕೆ ವಂದನಾ ನಿರ್ಣಯ ಕೈಗೊಳ್ಳಲು ಎಲ್ಲ ಸದಸ್ಯರು ಸಹಕರಿಸಬೇಕು ಎಂದು ವಿಪಕ್ಷಗಳಿಗೆ ಕಿವಿಮಾತು ಹೇಳಿದರು.
ಆದರೆ ವಿಪಕ್ಷಗಳು ಅದಾನಿ ಗ್ರೂಪ್ ಬಗೆಗಿನ ಆರೋಪಗಳ ಬಗ್ಗೆ ಚರ್ಚಿಸುವಂತೆ ಪಟ್ಟು ಹಿಡಿದ ಪರಿಣಾಮ ಸದನವನ್ನ ಮುಂದೂಡಲಾಯಿತು. ಸಂಸತ್ತಿನಲ್ಲಿ ವಿಪಕ್ಷಗಳ ವರ್ತನೆಯನ್ನ ಖಂಡಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಬಜೆಟ್ ಅಧಿವೇಶನದಲ್ಲಿ ಬಜೆಟ್ ಮಂಡನೆ ಬಳಿಕ ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚೆ ನಡೆಸುವುದು ಮೊದಲ ಆದ್ಯತೆಯಾಗಿದೆ. ವಿಪಕ್ಷಗಳು ಸದನದ ಸಂಪ್ರದಾಯವನ್ನ ಗಾಳಿಗೆ ತೂರಿ ಗದ್ದಲ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಂಸತ್ತಿನ ಅಧಿವೇಶನದಲ್ಲಿ ಯಾವುದೇ ಮಹತ್ವದ ವಿಚಾರಗಳ ಮೇಲೆ ಚರ್ಚೆಗೆ ಸರ್ಕಾರ ಸಿದ್ಧವಿದೆ. ರಚನಾತ್ಮಕ ಸಲಹೆಗಳನ್ನ ವಿಪಕ್ಷ ನಾಯಕರು ಸದನದಲ್ಲಿ ನೀಡಲಿ. ಆದರೆ ಮೊದಲು ಮಹಿಳಾ ರಾಷ್ಟ್ರಪತಿಯವರ ಪ್ರಥಮ ಭಾಷಣದ ಮೇಲೆ ಸದನದಲ್ಲಿ ಚರ್ಚಿಸಿ ವಂದನಾ ನಿರ್ಣಯ ಕೈಗೊಳ್ಳುವುದು ಅಗತ್ಯ. ಇದನ್ನ ವಿಪಕ್ಷಗಳು ಅರಿತು ಸದನ ನಡೆಯಲು ಸಹಕರಿಸಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದರು
ಇನ್ನ ನವದೆಹಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರೊಂದಿಗೆ ಪ್ರಲ್ಹಾದ್ ಜೋಶಿ ರಾಜ್ಯದ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗಳ ಕುರಿತಾಗಿ ಚರ್ಚೆ ನಡೆಸಿದರು. ಧಾರವಾಡ ಲೋಕಸಭಾ ಕ್ಷೇತ್ರದ ರಸ್ತೆ ಯೋಜನೆಗಳು, ರಿಂಗ್ ರೋಡ್ ಕಾಮಗಾರಿ, ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಹಾಗೂ ಬೈಪಾಸ್ ರಸ್ತೆಯ ಕಾಮಗಾರಿ ಪ್ರಗತಿ ಕುರಿತಂತೆ ನಿತಿನ್ ಗಡ್ಕರಿಯವರ ಜೊತೆ ಪ್ರಲ್ಹಾದ್ ಜೋಶಿ ಚರ್ಚೆ ನಡೆಸಿದ್ದು, ಯೋಜನೆ ಕಾಮಗಾರಿಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿತಿನ್ ಗಡ್ಕರಿ ಸೂಚನೆ ನೀಡಿದ್ದಾರೆ.