ಟ್ಯಾಕ್ಸ್ ಎಕ್ಸೆಂಪ್ಷನ್, ಟ್ಯಾಕ್ಸ್ ಡಿಡಕ್ಷನ್, ಟ್ಯಾಕ್ಸ್ ರಿಬೇಟ್ ಎಂದರೇನು? ಅವುಗಳ ಮಧ್ಯೆ ವ್ಯತ್ಯಾಸವೇನು, ತಿಳಿಯಿರಿ

|

Updated on: Jun 20, 2024 | 4:02 PM

Tax Exemption, Tax Deduction and Tax Rebate differences: ಐಟಿ ರಿಟರ್ನ್ ಸಲ್ಲಿಸಲು ಜುಲೈ 31ರವರೆಗೂ ಕಾಲಾವಕಾಶ ಇದೆ. ಈ ವೇಳೆ ಟ್ಯಾಕ್ಸ್ ಎಕ್ಸೆಂಪ್ಷನ್, ಟ್ಯಾಕ್ಸ್ ಡಿಡಕ್ಷನ್, ಟ್ಯಾಕ್ಸ್ ರಿಬೇಟ್ ಬಗ್ಗೆ ಕೆಲವರಿಗೆ ಗೊಂದಲ ಇರಬಹುದು. ಟ್ಯಾಕ್ಸ್ ಎಕ್ಸೆಂಪ್ಷನ್ ಎಂಬುದು ನಿರ್ದಿಷ್ಟ ಪ್ರಮಾಣದ ಆದಾಯಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಟ್ಯಾಕ್ಸ್ ಡಿಡಕ್ಷನ್ ಎಂದರೆ ನಿರ್ದಿಷ್ಟ ಹೂಡಿಕೆಗಳಿಂದ ಪಡೆಯಬಹುದಾದ ತೆರಿಗೆ ವಿನಾಯಿತಿಯಾಗಿರುತ್ತದೆ. ಇನ್ನು ಟ್ಯಾಕ್ಸ್ ರಿಬೇಟ್ ಎಂಬುದು ಕಟ್ಟಬೇಕಾದ ಒಟ್ಟಾರೆ ತೆರಿಗೆಯಲ್ಲಿ ಸಿಗುವ ರಿಯಾಯಿತಿ.

ಟ್ಯಾಕ್ಸ್ ಎಕ್ಸೆಂಪ್ಷನ್, ಟ್ಯಾಕ್ಸ್ ಡಿಡಕ್ಷನ್, ಟ್ಯಾಕ್ಸ್ ರಿಬೇಟ್ ಎಂದರೇನು? ಅವುಗಳ ಮಧ್ಯೆ ವ್ಯತ್ಯಾಸವೇನು, ತಿಳಿಯಿರಿ
ಆದಾಯ ತೆರಿಗೆ
Follow us on

ಈಗ ಹಿಂದಿನ ಹಣಕಾಸು ವರ್ಷದ ಆದಾಯ ತೆರಿಗೆ ಚುಕ್ತಗೊಳಿಸುವ ಕಾಲ. ಐಟಿ ರಿಟರ್ನ್ಸ್ ಫೈಲ್ (IT Returns filing) ಮಾಡಲು ಜುಲೈ 31ರವರೆಗೆ ಕಾಲಾವಕಾಶ ಇದೆ. ಮುಂಬರುವ ಬಜೆಟ್​ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಪ್ರಕಾರ ಎರಡೂವರೆ ಲಕ್ಷ ರೂ ಇರುವ ತೆರಿಗೆ ವಿನಾಯಿತಿ ಮಿತಿಯನ್ನು (exemption limit) ಐದು ಲಕ್ಷ ರೂಗೆ ಏರಿಸಬಹುದು ಎನ್ನಲಾಗಿದೆ. ಅದೇನೇ ಇರಲಿ, ಆದಾಯ ತೆರಿಗೆ ವಿಚಾರದ ಬಗ್ಗೆ ನೀವು ಓದುವಾಗ ತೆರಿಗೆ ವಿನಾಯಿತಿ ಅಥವಾ ಟ್ಯಾಕ್ಸ್ ಎಕ್ಸೆಂಪ್ಷನ್, ಟ್ಯಾಕ್ಸ್ ಡಿಡಕ್ಷನ್ ಮತ್ತು ಟ್ಯಾಕ್ಸ್ ರಿಬೇಟ್ ಹೆಸರು ಕೇಳಿರುತ್ತೀರಿ. ಈ ಮೂರೂ ಕೂಡ ತೆರಿಗೆ ಹೊರೆ ಕಡಿಮೆ ಮಾಡುವ ಅವಕಾಶ ಕೊಡುವಂಥವು. ಅಂತೆಯೇ ಸಾಕಷ್ಟು ಜನರಿಗೆ ಇವುಗಳ ನಡುವಿನ ವ್ಯತ್ಯಾಸ ಏನು ಎಂಬ ಗೊಂದಲ ಇರಬಹುದು.

ಟ್ಯಾಕ್ಸ್ ಎಕ್ಸೆಂಪ್ಷನ್ ಎಂದರೇನು?

ಟ್ಯಾಕ್ಸ್ ಎಕ್ಸೆಂಪ್ಷನ್ (Tax exemption) ಎಂದರೆ ತೆರಿಗೆ ವಿನಾಯಿತಿ. ಸದ್ಯ ಮೂರು ಲಕ್ಷ ರೂವರೆಗೆ ತೆರಿಗೆ ವಿನಾಯಿತಿ ಮಿತಿ ಇದೆ. ತೆರಿಗೆ ಅನ್ವಯ ಆಗಲು ಅರ್ಹವಾಗಿರುವ ನಿಮ್ಮ ಒಟ್ಟು ಆದಾಯದಲ್ಲಿ ಮೂರು ಲಕ್ಷ ರೂಗೆ ತೆರಿಗೆ ಇರುವುದಿಲ್ಲ.

ಇದನ್ನೂ ಓದಿ: ತೆರಿಗೆ ವಿನಾಯಿತಿ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಸಾಧ್ಯತೆ; ಮಧ್ಯಮ ವರ್ಗದವರಿಗೆ ಸಿಗಲಿದೆ ರಿಲೀಫ್

ಉದಾಹರಣೆಗೆ, ನಿಮ್ಮ ವಾರ್ಷಿಕ ಆದಾಯ 8,00,000 ರೂ ಇದೆ ಎಂದಿಟ್ಟುಕೊಳ್ಳಿ. ಇದರಲ್ಲಿ ತೆರಿಗೆಗೆ ಅರ್ಹವಾಗಿರುವ ಆದಾಯ 7,50,000 ರೂ ಇದೆ ಎಂದಿಟ್ಟುಕೊಳ್ಳಿ. ಇದರಲ್ಲಿ ಮೂರು ಲಕ್ಷ ರೂಗೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಇನ್ನುಳಿದ 4,50,000 ರೂ ಮೊತ್ತಕ್ಕೆ ಆಯಾ ಸ್ಲ್ಯಾಬ್ ದರದ ಪ್ರಕಾರ ತೆರಿಗೆ ಅನ್ವಯ ಆಗುತ್ತದೆ.

ಟ್ಯಾಕ್ಸ್ ಡಿಡಕ್ಷನ್ ಎಂದರೇನು?

ತೆರಿಗೆ ರಿಯಾಯಿತಿ ಕೊಡಬಲ್ಲ ನಿರ್ದಿಷ್ಟ ಹೂಡಿಕೆಗಳಲ್ಲಿ ತೊಡಗಿಸಿರುವ ಆದಾಯ ಇದ್ದರೆ ಆ ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಇದಕ್ಕಾಗಿ ಸೆಕ್ಷನ್ 80ಸಿ, ಸೆಕ್ಷನ್ 80ಡಿ ಮತ್ತು ಸೆಕ್ಷನ್ 80ಇ ಇವೆ. ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್, ಪಿಪಿಎಫ್, ಟ್ಯೂಷನ್ ಫೀ, ಹೋಮ್ ಲೋನ್ ಬಡ್ಡಿ ಇತ್ಯಾದಿಗಳು ಸೆಕ್ಷನ್ 80ಸಿ ಅಡಿಯಲ್ಲಿ ಬರುತ್ತವೆ. ಇದರಲ್ಲಿ ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಇದುವೇ ಟ್ಯಾಕ್ಸ್ ಡಿಡಕ್ಷನ್.

ಸೆಕ್ಷನ್ 80ಡಿ ಅಡಿಯಲ್ಲಿ ಮೆಡಿಕಲ್ ಇನ್ಷೂರೆನ್ಸ್ ಪ್ರೀಮಿಯಮ್​ಗಳಿಗೆ ವಾರ್ಷಿಕ 25,000 ರೂವರೆಗಿನ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶ ಇರುತ್ತದೆ.

ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ಎನ್​ಪಿಎಸ್​ನಲ್ಲಿ ವರ್ಷಕ್ಕೆ 50,000 ರೂವರೆಗಿನ ಹೂಡಿಕೆಗೆ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಬಹುದು.

ಇದನ್ನೂ ಓದಿ: ಎಕ್ಸೆಸ್ ಗ್ರಾಂಟ್, ಇನ್​ಫ್ಲೇಶನ್, ಡೆಫಿಸಿಟ್ ಇತ್ಯಾದಿ ಬಜೆಟ್ ಪದಗಳ ಅರ್ಥ ತಿಳಿಯಿರಿ

ಟ್ಯಾಕ್ಸ್ ರಿಬೇಟ್ ಎಂದರೇನು?

ಟ್ಯಾಕ್ಸ್ ಡಿಡಕ್ಷನ್ ಕಳೆದು ಉಳಿದ ನಿಮ್ಮ ಆದಾಯವನ್ನು ಟ್ಯಾಕ್ಸಬಲ್ ಇನ್ಕಮ್ ಎಂದು ಪರಿಗಣಿಸಲಾಗುತ್ತದೆ. ಅದರೆ ತೆರಿಗೆ ಅರ್ಹವಾದ ಆದಾಯ ಇದು. ಈ ಆದಾಯ 7 ಲಕ್ಷ ರೂ ಒಳಗಿದ್ದರೆ ಆಗ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ಕಟ್ಟಬೇಕಾದ ತೆರಿಗೆ ಮೊತ್ತದಲ್ಲಿ 25,000 ರೂವರೆಗೆ ರಿಯಾಯಿತಿ ಸಿಗುತ್ತದೆ. ಇದು ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಕೊಡಲಾಗಿರುವ ಅವಕಾಶ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಟ್ಯಾಕ್ಸ್ ಡಿಡಕ್ಷನ್ ಎಂಬುದು ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿರುವ ಸೌಲಭ್ಯವಾಗಿದೆ. ಟ್ಯಾಕ್ಸ್ ರಿಬೇಟ್ ಎಂಬುದು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಸಿಗುವ ಫೀಚರ್.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ