White Paper: ಆ 10 ವರ್ಷ, ಈ 10 ವರ್ಷ; ವಿಪಕ್ಷಗಳಿಗೆ ಕೌಂಟರ್ ಕೊಡಲು ಸರ್ಕಾರದಿಂದ ಬರಲಿದೆ ಶ್ವೇತಪತ್ರ

|

Updated on: Feb 02, 2024 | 2:17 PM

Union Budget 2024: 2014ಕ್ಕೆ ಮುಂಚಿನ 10 ವರ್ಷಗಳ ಯುಪಿಎ ಆಡಳಿತ ಹಾಗೂ 2014ರ ನಂತರದ ಎನ್​ಡಿಎ ಆಡಳಿತದ ತುಲನೆಗೆ ಸರ್ಕಾರ ಹೊರಟಿದೆ. ಆ 10 ವರ್ಷ, ಮತ್ತು ಈ 10 ವರ್ಷದ ಆಡಳಿತ ನಿರ್ವಹಣೆ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲು ನಿರ್ಧರಿಸಿದೆ. ಫೆ. 1ರ ಮಧ್ಯಂತರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಶ್ವೇತಪತ್ರದ ವಿಚಾರವನ್ನು ವಿವರಿಸಿದ್ದಾರೆ.

White Paper: ಆ 10 ವರ್ಷ, ಈ 10 ವರ್ಷ; ವಿಪಕ್ಷಗಳಿಗೆ ಕೌಂಟರ್ ಕೊಡಲು ಸರ್ಕಾರದಿಂದ ಬರಲಿದೆ ಶ್ವೇತಪತ್ರ
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ, ಫೆ. 2: ಕಳೆದ ಇಪ್ಪತ್ತುಗಳ ವರ್ಷಗಳ ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ನಿರ್ವಹಣೆ ಹೇಗಾಯಿತು ಎಂಬುದನ್ನು ತಿಳಿಸಿ ಸರ್ಕಾರ ಶ್ವೇತಪತ್ರ (White paper) ಹೊರತರಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮಧ್ಯಂತರ ಬಜೆಟ್ (Interim Budget) ಮಂಡನೆ ವೇಳೆ ಈ ವಿಚಾರವನ್ನು ಪ್ರಕಟಪಡಿಸಿದ್ದಾರೆ. ಸರ್ಕಾರ ಈ ಸದನದ ಮುಂದೆ ಶ್ವೇತ ಪತ್ರ ಪ್ರಸ್ತುತಪಡಿಸಲಿದೆ ಎಂದಿದ್ದಾರೆ. ‘2014ರವರೆಗೆ ನಾವು ಎಲ್ಲಿದ್ದೆವು, ಈಗ ಎಲ್ಲಿದ್ದೇವೆ ಎಂಬುದನ್ನು ನೋಡಬೇಕು. ಆ ವರ್ಷಗಳಲ್ಲಿ ನಿರ್ವಹಣೆಯಲ್ಲಿ ಯಡವಟ್ಟಾಗಿದ್ದು ಹೇಗೆ ಎಂಬುದನ್ನು ಗಮನಿಸಬೇಕು,’ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಕೇಂದ್ರ ಸಚಿವೆ ಹೇಳಿದ್ದಾರೆ.

2004ರಿಂದ 2014ರವರೆಗೆ 10 ವರ್ಷ ಕಾಲ ಯುಪಿಎ ಮೈತ್ರಿಕೂಟ ಆಡಳಿತದಲ್ಲಿತ್ತು. 2014ರಿಂದ ಇಲ್ಲಿಯವರೆಗೆ 10 ವರ್ಷ ಕಾಲ ಎನ್​ಡಿಎ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ, ಎರಡೂ ಪಕ್ಷಗಳಿಗೆ ಸಮಾನ ಅವಧಿಯ ಆಡಳಿತ ಸಿಕ್ಕಿದೆ. ಇದು ಆಡಳಿತ ನಿರ್ವಹಣೆ ವಿಚಾರದಲ್ಲಿ ತುಲನೆ ಮಾಡಲು ಹೆಚ್ಚು ಸಾಂದರ್ಭಿಕತೆಯನ್ನು ತಂದಿದೆ.

ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ 2014ರಲ್ಲಿ ಇದ್ದ ಸ್ಥಿತಿ ಹಾಗೂ ಅಂದಿನ ಹೊಸ ಸರ್ಕಾರದ ಮುಂದಿದ್ದ ಸವಾಲುಗಳೇನು ಎಂದು ತಿಳಿಸಿದ್ದಾರೆ. ‘2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆರ್ಥಿಕತೆಯನ್ನು ಹಂತ ಹಂತವಾಗಿ ಸರಿಪಡಿಸುವ ಮತ್ತು ಆಡಳಿತ ವ್ಯವಸ್ಥೆಯನ್ನು ಒಂದು ಹಳಿಗೆ ತರುವ ಹೊಣೆಗಾರಿಕೆ ಬಹಳ ಹೆಚ್ಚಿತ್ತು. ಜನರಿಗೆ ಆಶಯ ಮೂಡಿಸುವಂತಹ, ಹಾಗೂ ಹೂಡಿಕೆಗಳನ್ನು ಆಕರ್ಷಿಸುವಂತಹ ಹಾಗೂ ಅತ್ಯಗತ್ಯ ಸುಧಾರಣೆಗಳಿಗೆ ನೆರವಿನ ವ್ಯವಸ್ಥೆ ನಿರ್ಮಿಸುವಂತಹ ಕಾರ್ಯಗಳನ್ನು ಮಾಡುವುದು ಬಹಳ ಆದ್ಯತೆಯ ಸಂಗತಿಯಾಗಿತ್ತು

ಇದನ್ನೂ ಓದಿ: ಬಜೆಟ್​ನಲ್ಲಿ ಕಂಡುಬಂದ 1111111 ಎಂಬ ಮ್ಯಾಜಿಕ್ ನಂಬರ್; ಇದರದ್ದು ಧನಾತ್ಮಕ ಪರಿಣಾಮ

‘ದೇಶ ಮೊದಲು ಎನ್ನುವ ನಂಬಿಕೆಯಲ್ಲಿ ಸರ್ಕಾರ ಈ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿತು. ಆ ವರ್ಷಗಳಲ್ಲಿ ಇದ್ದ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ನಿವಾರಿಸಲಾಯಿತು. ಸರ್ವತೋಮುಖಿ ಅಭಿವೃದ್ಧಿಯೊಂದಿಗೆ ಆರ್ಥಿಕತೆಯನ್ನು ಪ್ರಗತಿಯ ಹಳಿಗೆ ತರಲಾಯಿತು ’ ಎಂದು ಹಣಕಾಸು ಸಚಿವೆ ವಿವರಿಸಿದ್ದಾರೆ.

ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳಲಾಯಿತು. ಜನಪರ ಯೋಜನೆಗಳನ್ನು ರೂಪಿಸಿ, ಪ್ರಾಮಾಣಿಕವಾಗಿ ಇವುಗಳನ್ನು ಜಾರಿಗೆ ತರಲಾಯಿತು. ಉದ್ಯೋಗ ಮತ್ತು ಉದ್ಯಮಶೀಲತೆಗೆ ಹೆಚ್ಚು ಅವಕಾಶ ಸಿಗುವಂತಹ ವಾತಾವರಣ ನಿರ್ಮಿಸಲಾಯಿತು. ಆರ್ಥಿಕತೆಗೆ ಹೊಸ ಉತ್ಸಾಹ ಸಿಕ್ಕಿತು. ಅಭಿವೃದ್ಧಿಯ ಪ್ರತಿಫಲವು ಜನರಿಗೆ ಸಿಗತೊಡಗಿದೆ. ಹೊಸ ಭರವಸೆ ಮತ್ತು ಗುರಿ ಈ ದೇಶದ ಮುಂದಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನೋಟ್ ಬ್ಯಾನ್ ಗುರಿತಪ್ಪಿಲ್ಲ ಎನ್ನುವುದಕ್ಕೆ ಈ ಬಜೆಟ್ ಸಾಕ್ಷಿ; ಹೇಗೆ ನೋಡಿ ಈ ಕುತೂಹಲಕಾರಿ ಸಂಗತಿ

ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತನ್ನ ಸಾಧನೆಗಳನ್ನು ಪ್ರಚುರಪಡಿಸಲು ಇದು ಸಕಾಲವಾಗಿದ್ದು, ಅದನ್ನು ಬಜೆಟ್ ಹಾಗೂ ನಂತರದ ದಿನಗಳನ್ನು ಬಳಕೆ ಮಾಡಿಕೊಳ್ಳಲಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Fri, 2 February 24