ಕೇಂದ್ರ ಬಜೆಟ್ (Union Budget) ಎಂಬುದು ಪ್ರತಿ ವರ್ಷ ಭಾರತದಲ್ಲಿ ಬಿಡುಗಡೆ ಆಗುವ ಅತಿ ಮುಕ್ಯವಾದ ದಾಖಲಾತಿ. ಆದರೆ ಬಹಳ ಮಂದಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಬಜೆಟ್ನ ಅತಿ ಮುಖ್ಯವಾದ ಸಂಖ್ಯೆಗಳ ವಿವರ ಇಲ್ಲಿದೆ. ಇತರ ಸಂಖ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಒತ್ತಟ್ಟಿಗಿರಲಿ, ಬಹಳ ಸುಲಭಕ್ಕೆ ಅರ್ಥ ಆಗುವುದು ಬಜೆಟ್ನ ಗಾತ್ರ.
ಬಜೆಟ್ ಗಾತ್ರ
ಹೀಗಂದರೆ ಒಂದು ಹಣಕಾಸು ವರ್ಷದಲ್ಲಿ ಸರ್ಕಾರದಿಂದ ಮಾಡುವ ಅಂದಾಜು ವೆಚ್ಚ. 2021- 22ನೇ ಸಾಲಿನಲ್ಲಿ ಬಜೆಟ್ನ ಗಾತ್ರ 34,83,236 ಕೋಟಿ (34.83 ಲಕ್ಷ ಕೋಟಿ ರೂಪಾಯಿ).
ವೆಚ್ಚ
ಅಂದಹಾಗೆ ವೆಚ್ಚವನ್ನು ಎರಡು ವಿಭಾಗದಲ್ಲಿ ವರ್ಗೀಕರಿಸಲಾಗುತ್ತದೆ. ಒಂದು, ಆದಾಯ ವೆಚ್ಚ ಮತ್ತು ಇನ್ನೊಂದು ಬಂಡವಾಳ ವೆಚ್ಚ. ಬಂಡವಾಳ ವೆಚ್ಚ ಅಂದರೆ, ಅತಿ ದೊಡ್ಡ ಪ್ರಮಾಣದ ಒಂದು ಸಲದ ಖರೀದಿ ಮತ್ತು ವೆಚ್ಚಗಳು. ಆದಾಯ ವೆಚ್ಚ ಅಂದರೆ, ನಿಯಮಿತವಾಗಿ ಸರ್ಕಾರದ ಕಾರ್ಯಾಚರಣೆಗಾಗಿ ಮಾಡುವಂಥ ಖರ್ಚು. ಕಳೆದ ಬಜೆಟ್ನಲ್ಲಿ ಆದಾಯ ವೆಚ್ಚ 29,29,000 ಕೋಟಿ ರೂಪಾಯಿ, ಬಂಡವಾಳ ವೆಚ್ಚ 5,54,236 ಕೋಟಿ ಅಂತ ಅಂದಾಜಿಸಲಾಗಿತ್ತು.
ತೆರಿಗೆ ಆದಾಯ
ತೆರಿಗೆ ಆದಾಯ ಅಂದರೆ ವಿವಿಧ ತೆರಿಗೆಗಳ ಮೂಲಕ ಸರ್ಕಾರವು ಸಂಗ್ರಹಿಸುವಂಥ ಹಣ. ತೆರಿಗೆ ಎಂಬುದು ಭಾರತ ಸರ್ಕಾರದ ಪ್ರಾಥಮಿಕ ಆದಾಯ ಮೂಲ. ಗ್ರಾಸ್ (ಸಗಟು) ತೆರಿಗೆ ಆದಾಯವನ್ನು 2021-22ರ ಹಣಕಾಸು ವರ್ಷದಲ್ಲಿ 22,17,029 ಕೋಟಿ ರೂಪಾಯಿ ಅಂದಾಜಿಸಲಾಗಿತ್ತು.
ತೆರಿಗೆಯೇತರ ಆದಾಯ
ತೆರಿಗೆಯು ಆದಾಯದ ಪ್ರಮುಖ ಮೂಲವಾದರೂ ಇತರ ಆದಾಯ ಹರಿವು ಸಹ ಸರ್ಕಾರಕ್ಕೆ ಇದೆ. ಇದನ್ನು ತೆರಿಗೆಯೇತರ ಆದಾಯ ಎನ್ನಲಾಗುತ್ತದೆ. 2021-22ರಲ್ಲಿ ತೆರಿಗೆಯೇತರ ಆದಾಯ 2,43,028 ಕೋಟಿ ರೂಪಾಯಿ ಇತ್ತು.
ವಿತ್ತೀಯ ಕೊರತೆ
ಸರ್ಕಾರದ ಆದಾಯ ಅಂದಾಜನ್ನು ಖರ್ಚಿಗೆ ಹೋಲಿಸಿದರೆ ಬರುವ ಕೊರತೆಯನ್ನು ವಿತ್ತೀಯ ಕೊರತೆ ಎನ್ನಲಾಗುತ್ತದೆ. ಯಾವಾಗ ಸರ್ಕಾರಕ್ಕೆ ಬರುವ ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತದೋ ಆಗ ಕೊರತೆ ಆಗುತ್ತದೆ. ವಿತ್ತೀಯ ಕೊರತೆಯು ಆದಾಯ ಕೊರತೆಗಿಂತ ಭಿನ್ನವಾದದ್ದು. ಸರ್ಕಾರವು ಅಂದಾಜು ಮಾಡಿದ ಆದಾಯಕ್ಕಿಂತ ಕಡಿಮೆ ಬಂದಲ್ಲಿ ಅದನ್ನು ಆದಾಯ ಕೊರತೆ ಎನ್ನಲಾಗುತ್ತದೆ. 2021- 22ರಲ್ಲಿ ಜಿಡಿಪಿಯ ಶೇ 6.8ರಷ್ಟು ವಿತ್ತೀಯ ಕೊರತೆ ಅಂದಾಜು ಮಾಡಲಾಗಿತ್ತು ಮತ್ತು ಸರ್ಕಾರವು ಮುಂದಿನ ಕೆಲವು ವರ್ಷಗಳಲ್ಲಿ ವಿತ್ತೀಯ ಕೊರತೆಯನ್ನು ಶೇ 4.5ಕ್ಕೆ ಇಳಿಸಲು ಎದುರು ನೋಡುತ್ತಿದೆ.
ಬಜೆಟ್ನ ಇತರ ಮುಖ್ಯ ಅಂಶಗಳು
ಈ ಮೇಲ್ಕಂಡವು ಕೇವಲ ಸಂಖ್ಯೆಗಳಷ್ಟೇ ಅಲ್ಲ. ಆಯಾ ವರ್ಷಕ್ಕೆ ಇತರ ಮುಖ್ಯ ಮಾಹಿತಿಗಳು ಸಹ ಇವೆ.
ವಾರ್ಷಿಕ ಹಣಕಾಸು ಹೇಳಿಕೆ (ಆನ್ಯುಯಲ್ ಫೈನಾನ್ಷಿಯಲ್ ಸ್ಟೇಟ್ಮೆಂಟ್) ಎಂಬುದು ಪ್ರತಿ ಹಣಕಾಸು ವರ್ಷದಲ್ಲಿ ಸಂಸತ್ನಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ. ಹೊಸ ವರ್ಷಕಾಸು ವರ್ಷಕ್ಕೆ ಸರ್ಕಾರ ಎಲ್ಲ ರಸೀದಿ ಮತ್ತು ವೆಚ್ಚದ ಹೇಳಿಕೆಯ ಲೆಕ್ಕಾಚಾರವನ್ನು ಒಳಗೊಂಡಿರುತ್ತದೆ.
ಅನುದಾನಕ್ಕಾಗಿ ಬೇಡಿಕೆ ಎಂಬುದು ಒಟ್ಟಾರೆಯಾಗಿ ಭರಿಸಬೇಕಾದ ವೆಚ್ಚದ ಸಗಟು ಅಂದಾಜು- ವೆಚ್ಚ ಮತ್ತು ಆದಾಯ ಹಾಗೂ ಬಂಡವಾಳ ವೆಚ್ಚ ಎಷ್ಟೆಷ್ಟಾಗುತ್ತದೆ ಎಂಬುದರ ಬಿಡಿಬಿಡಿ ಲೆಕ್ಕಾಚಾರ. ಸಂಸತ್ನಲ್ಲಿ ಈ ದಾಖಲಾತಿಯನ್ನು ಮತಕ್ಕೆ ಹಾಕಲಾಗುತ್ತದೆ.
ಹಣಕಾಸು ಮಸೂದೆ ಎಂಬುದು ಆರ್ಥಿಕ ಶಾಸನ. ಇದರಲ್ಲಿ ವಿವಿಧ ಕಾಯ್ದೆಗಳು ಮತ್ತು ಶಾಸನಗಳ ಬದಲಾವಣೆಗಳು, ತೆರಿಗೆ, ಸುಂಕ, ವಿನಾಯಿತಿಗಳು, ಕಡಿತ ಮತ್ತಷ್ಟು ಸಂಗತಿಗಳ ಜತೆ ವ್ಯವಹರಿಸುತ್ತದೆ.
ಇದನ್ನೂ ಓದಿ: Budget 2022: ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಜಾಗತಿಕ ಹೂಡಿಕೆದಾರರಿಗೆ ಬಜೆಟ್ನಲ್ಲಿ ತೆರಿಗೆ ಅನುಕೂಲ ಸಾಧ್ಯತೆ
Published On - 1:25 pm, Fri, 21 January 22