ನವದೆಹಲಿ, ಜುಲೈ 19: ಆಹಾರ, ಶಿಕ್ಷಣ, ಬಾಡಿಗೆ, ಸಾರಿಗೆ ಇತ್ಯಾದಿ ಎಲ್ಲಾ ಅಗತ್ಯ ವಸ್ತು ಮತ್ತು ಸೇವೆಗಳ ಬೆಲೆ ಸ್ಥಿರವಾಗಿ ಹೆಚ್ಚುತ್ತಲೇ ಇದೆ. ಮಧ್ಯಮ ವರ್ಗದವರ ಜೀವನ ವೆಚ್ಚ ಹೆಚ್ಚುತ್ತಿದೆ. ಆದರೆ, ಆದಾಯ ಮಾತ್ರ ಹೆಚ್ಚೂಕಡಿಮೆ ನಿಂತ ನೀರಾಗಿದೆ. ಖರ್ಚಿಗೆ ಹಣ ಸಾಲದಾಗಿ ಜನರು ತಮ್ಮ ಇಪಿಎಫ್ ಇತ್ಯಾದಿ ಉಳಿತಾಯ ಹಣವನ್ನು ಹಿಂಪಡೆಯುವುದೋ, ಸಾಲ ಮಾಡುವುದೋ ಅಥವಾ ಆಸ್ತಿ ಮಾರುವುದೋ ಅನಿವಾರ್ಯವಾಗಿದೆ. ಇಪಿಎಫ್ ಹಿಂಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಇದರ ಸೂಚಕವಾಗಿರಬಹುದು. ಲೋಕಲ್ಸರ್ಕಲ್ಸ್ ಎಂಬ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಮನೆಮನೆಗಳ ಸಮೀಕ್ಷೆ ನಡೆಸಿದ್ದು, ಅವರ ಆದಾಯ ಮತ್ತು ಉಳಿತಾಯ ಎಷ್ಟಿದೆ ಎಂಬುದರ ದತ್ತಾಂಶ ಪಡೆಯಲು ಯತ್ನಿಸಿದೆ. ಇದರ ವರದಿಯಲ್ಲಿ ಈ ಮಧ್ಯಮವರ್ಗದವರ ಆದಾಯ ಇಳಿಮುಖವಾಗುತ್ತಿರುವುದು ಮತ್ತು ಖರ್ಚು ಹೆಚ್ಚಾಗುತ್ತಿರುವುದು ವ್ಯಕ್ತವಾಗಿದೆ.
ಲೋಕಲ್ ಸರ್ಕಲ್ಸ್ ಸಂಸ್ಥೆ ದೇಶಾದ್ಯಂತ 327 ಜಿಲ್ಲೆಗಳಿಂದ 21,000 ಜನರನ್ನು ಸಂದರ್ಶಿಸಿದೆ. ಆದಾಯಕ್ಕೆ ಹೋಲಿಸಿದರೆ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ಈ ಹಣಕಾಸು ವರ್ಷದಲ್ಲಿ ಸರಾಸರಿ ಗೃಹ ಉಳಿತಾಯ ಕಡಿಮೆ ಆಗಬಹುದು ಎಂಬುದನ್ನು ಈ ಸಮೀಕ್ಷೆ ಗ್ರಹಿಸಿದೆ. ಜೀವನ ವೆಚ್ಚ ಹೆಚ್ಚಾಗುತ್ತಿರುವುದರಿಂದ ಜನರು ತಮ್ಮ ಉಳಿತಾಯ ಹಣವನ್ನು ಬಳಸುತ್ತಿದ್ದಾರೆ. ತಮ್ಮ ಹಣಕಾಸು ಅವಶ್ಯಕತೆ ಪೂರ್ಣಗೊಳಿಸಲು ಆಸ್ತಿಯನ್ನು ಅಡ ಇಟ್ಟು ಸಾಲ ಪಡೆಯುತ್ತಿದ್ದಾರೆ. ಹಲವರು ತಮ್ಮ ಆಸ್ತಿಯನ್ನು ಮಾರಿ ಆ ಹಣವನ್ನು ತಮ್ಮ ವೆಚ್ಚಕ್ಕಾಗಿ ಬಳಸುತ್ತಿರುವ ಸಂಗತಿಯನ್ನು ಈ ಸಮೀಕ್ಷೆ ಗುರುತಿಸಿದೆ.
2020-21ರಿಂದ 2022-23ರವರೆಗೆ ಮೂರು ವರ್ಷದಲ್ಲಿ ಭಾರತದಲ್ಲಿ ನಿವ್ವಳ ಗೃಹ ಉಳಿತಾಯ 14.16 ಟ್ರಿಲಿಯನ್ ಡಾಲರ್ನಷ್ಟಿದೆ ಎಂದು ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ನ್ಯಾಷನಲ್ ಅಕೌಂಟ್ ಸ್ಟಾಟಿಸ್ಟಿಕ್ಸ್ 2024 ವರದಿಯಲ್ಲಿ ತಿಳಿಸಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಗೃಹ ಉಳಿತಾಯದಲ್ಲಿ 9 ಟ್ರಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಕೋವಿಡ್ ಬರುವ ಮುನ್ನ ಜನರು ಹೊಂದಿದ್ದ ಉಳಿತಾಯ ಹಣದ ಮಟ್ಟವನ್ನು ಈಗಲೂ ತಲುಪಲು ಆಗಿಲ್ಲದಿರುವುದ ಈ ವರದಿಯಿಂದ ದೃಢಪಟ್ಟಿದೆ.
ಈ ಬಾರಿಯ ಬಜೆಟ್ನಲ್ಲಿ ಸರ್ಕಾರ ತೆರಿಗೆ ಹೊರೆಯನ್ನು ಇಳಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಮಧ್ಯಮವರ್ಗದವರಿದ್ದಾರೆ. ಟ್ಯಾಕ್ಸ್ ಸ್ಲ್ಯಾಬ್ ದರಗಳ ಇಳಿಕೆ ಮತ್ತು ತೆರಿಗೆ ವಿನಾಯಿತಿ ಮಿತಿ ಏರಿಕೆ ಇವು ಈ ಮಧ್ಯಮ ವರ್ಗದವರ ಪ್ರಮುಖ ಬೇಡಿಕೆ. 2023ರ ಬಜೆಟ್ನಲ್ಲಿ ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ 7 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ನೀಡಿ, ಶೂನ್ಯ ತೆರಿಗೆ ಅವಕಾಶ ನೀಡಲಾಗಿತ್ತು. ಈ ರಿಬೇಟ್ಗೆ ಆದಾಯ ಮಿತಿಯನ್ನು ಹೆಚ್ಚಿಸಲಿ ಎನ್ನುವ ಕೂಗು ಇದೆ.
ಇದನ್ನೂ ಓದಿ: ಬೈಸಿಕಲ್ನಿಂದ ಹಿಡಿದು ಬ್ರಹ್ಮೋಸ್ವರೆಗೆ, ಜಾಗತಿಕವಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹವಾ ಹೇಗಿದೆ ನೋಡಿ
ಹಾಗೆಯೇ, ಹಳೆಯ ಟ್ಯಾಕ್ಸ್ ಸಿಸ್ಟಂ ಬಳಸುವವರು ಟ್ಯಾಕ್ಸ್ ಡಿಡಕ್ಷನ್ ಪ್ರಮಾಣವನ್ನು ಒಂದೂವರೆ ಲಕ್ಷ ರೂಗಿಂತ ಮೇಲೆ ಹೆಚ್ಚಿಸಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ