AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂರೋಪ್​ನ ಕಾರ್ಬನ್ ಟ್ಯಾಕ್ಸ್​ನಿಂದ ಭಾರತಕ್ಕೆ ಜಿಡಿಪಿಯ ಶೇ. 0.05ರಷ್ಟು ನಷ್ಟ; ಇಯು ವಿರುದ್ದವೂ ಪ್ರತಿಯಾಗಿ ತೆರಿಗೆ ವಿಧಿಸಲು ಶಿಫಾರಸು

EU vs India carbon tax: ಕಲ್ಲಿದ್ದಲು ಇತ್ಯಾದಿ ಬಳಸಿ ತಯಾರಾಗುವ ಉಕ್ಕು, ಅಲೂಮಿನಿಯಂ ಇತ್ಯಾದಿ ಉತ್ಪನ್ನಗಳಿಗೆ ಐರೋಪ್ಯ ಒಕ್ಕೂಟವು ಕಾರ್ಬನ್ ಟ್ಯಾಕ್ಸ್ ವಿಧಿಸಲಿದೆ. ಸಿಮೆಂಟ್, ಕಬ್ಬಿಣ, ರಸಗೊಬ್ಬರ ಇತ್ಯಾದಿ ವಸ್ತುಗಳನ್ನು ಈ ರೀತಿ ಫಾಸಿಲ್ ಇಂಧನ ಉಪಯೋಗಿಸಿ ತಯಾರಿಸಲಾಗುತ್ತದೆ. ಭಾರತ, ಚೀನಾ ಸೇರಿದಂತೆ ಅಭಿವೃದ್ಧಿಶೀಲ ದೇಶಗಳು ಈ ಉತ್ಪನ್ನಗಳನ್ನು ಯೂರೋಪಿಯನ್ ಯೂನಿಯನ್ ದೇಶಗಳಿಗೆ ರಫ್ತು ಮಾಡುತ್ತವೆ.

ಯೂರೋಪ್​ನ ಕಾರ್ಬನ್ ಟ್ಯಾಕ್ಸ್​ನಿಂದ ಭಾರತಕ್ಕೆ ಜಿಡಿಪಿಯ ಶೇ. 0.05ರಷ್ಟು ನಷ್ಟ; ಇಯು ವಿರುದ್ದವೂ ಪ್ರತಿಯಾಗಿ ತೆರಿಗೆ ವಿಧಿಸಲು ಶಿಫಾರಸು
ಕಾರ್ಬನ್ ಟ್ಯಾಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 18, 2024 | 4:18 PM

Share

ನವದೆಹಲಿ, ಜುಲೈ 18: ಪರಿಸರಕ್ಕೆ ಹಾನಿಕಾರಕವಾಗುವ ಕಲ್ಲಿದ್ದಲು ಇತ್ಯಾದಿ ಬಳಸಿ ತಯಾರಾಗುವ ಕಬ್ಬಿಣ, ಉಕ್ಕು ಇತ್ಯಾದಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವಾಗ ಕಾರ್ಬನ್ ಟ್ಯಾಕ್ಸ್ ವಿಧಿಸಲು ಐರೋಪ್ಯ ಒಕ್ಕೂಟ ನಿರ್ಧರಿಸಿದೆ. ಭಾರತ, ಚೀನಾ ಒಳಗೊಂಡಂತೆ ಅಭಿವೃದ್ದಿಶೀಲ ದೇಶಗಳಿಗೆ ತೆರಿಗೆ ಬರೆ ಬಿದ್ದಂತಾಗಲಿದೆ. ಉಕ್ಕು, ಕಬ್ಬಿಣ, ಸಿಮೆಂಟ್, ರಸಗೊಬ್ಬರ, ಅಲೂಮಿನಿಯಂ ಇತ್ಯಾದಿ ಉತ್ಪನ್ನಗಳ ತಯಾರಿಕೆಗೆ ಕಾರ್ಬನ್ ಬಳಕೆ ಮಾಡಿದರೆ ಅದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಅಂಥ ಉತ್ಪನ್ನಗಳಿಗೆ ಕಾರ್ಬಲ್ ಟ್ಯಾಕ್ಸ್ ವಿಧಿಸಲು ಐರೋಪ್ಯ ಒಕ್ಕೂಟವು ಸಿಬಿಎಎಂ (ಕಾರ್ಬನ್ ಬಾರ್ಡರ್ ಅಡ್ಜಸ್ಟ್​ಮೆಂಟ್ ಮೆಕ್ಯಾನಿಸಂ) ವ್ಯವಸ್ಥೆ ಮಾಡಿದೆ.

ಈ ರೀತಿ ಐರೋಪ್ಯ ಒಕ್ಕೂಟವು ಕಾರ್ಬನ್ ಟ್ಯಾಕ್ಸ್ ವಿಧಿಸುವುದರಿಂದ ಭಾರತಕ್ಕೆ ಆಗುವ ನಷ್ಟವು ಅದರ ಜಿಡಿಪಿಯ ಶೇ. 0.05ರಷ್ಟಿದೆ ಎಂದು ಸ್ವತಂತ್ರ ಚಿಂತನೆ ಕೂಟವಾದ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್​ವಿರಾನ್​ಮೆಂಟ್ (ಸಿಎಸ್​ಇ) ಹೇಳಿದೆ. ಭಾರತದಿಂದಲೂ ಇದಕ್ಕೆ ಪ್ರತಿಯಾಗಿ ಐತಿಹಾಸಿಕ ಆಧಾರವಾಗಿ ಮುಂದುವರಿದ ದೇಶಗಳಿಗೆ ತೆರಿಗೆ ವಿಧಿಸಬೇಕು ಎಂದು ಇದೇ ಏಜೆನ್ಸಿ ಸಲಹೆ ನೀಡಿದೆ. ಭಾರತಕ್ಕೆ ಮಾತ್ರವಲ್ಲ, ಕಾರ್ಬನ್ ಟ್ಯಾಕ್ಸ್ ಎದುರಿಸುತ್ತಿರುವ ಚೀನಾ ಸೇರಿದಂತೆ ಎಲ್ಲಾ ಅಭಿವೃದ್ಧಿಶೀಲ ದೇಶಗಳಿಗೂ ಅದು ಈ ಸಲಹೆ ನೀಡಿದೆ.

ಇದನ್ನೂ ಓದಿ: ಬೈಸಿಕಲ್​ನಿಂದ ಹಿಡಿದು ಬ್ರಹ್ಮೋಸ್​ವರೆಗೆ, ಜಾಗತಿಕವಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹವಾ ಹೇಗಿದೆ ನೋಡಿ

ಶ್ರೀಮಂತ ದೇಶಗಳಿಗೆ ತೆರಿಗೆ ಯಾಕೆ ವಿಧಿಸಬೇಕು?

ಐತಿಹಾಸಿಕವಾಗಿ ಗಮನಿಸಿದಾಗ ಈಗ ಮುಂದುವರಿದಿರುವ ದೇಶಗಳು ಈ ಪರಿಸ್ಥಿತಿಗೆ ಬರಲು ಕಾರ್ಬನ್ ಇತ್ಯಾದಿ ಪಳೆಯುಳಿಕೆ ಇಂಧನಗಳನ್ನು ಯಥೇಚ್ಛವಾಗಿ ಬಳಸಿಕೊಂಡಿವೆ. 18 ಮತ್ತು 19ನೇ ಶತಮಾನದಲ್ಲಿ ನಡೆದ ಕೈಗಾರಿಕಾ ಕ್ರಾಂತಿಯಲ್ಲಿ ಈ ಮುಂದುವರಿದ ದೇಶಗಳು ಕಾರ್ಬನ್ ಬಳಕೆಯ ಫಲಾನುಭವಿಗಳಾಗಿವೆ. ಅಭಿವೃದ್ಧಿಶೀಲ ದೇಶಗಳು ಈಗ ಈ ಫಾಸಿಲ್ ಇಂಧನವನ್ನು ಬಳಸಿ ಅದರ ಪ್ರಯೋಜನ ಪಡೆಯಲು ಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶ್ರೀಮಂತ ದೇಶಗಳು ಅಭಿವೃದ್ಧಿ ದೇಶಗಳ ಮೇಲೆ ಕಾರ್ಬನ್ ಟ್ಯಾಕ್ಸ್ ವಿಧಿಸುವುದು ಅನ್ಯಾಯ ಎಂಬುದು ಸಿಎಸ್​ಇ ಅನಿಸಿಕೆ.

ಈ ಹಿಂದೆ ಪರಿಸರಕ್ಕೆ ಧಕ್ಕೆ ಮಾಡಿದ ಕಾರಣಕ್ಕೆ ಶ್ರೀಮಂತ ದೇಶಗಳೂ ಕೂಡ ದಂಡ ತೆರಬೇಕಾಗುತ್ತದೆ. ಅಭಿವೃದ್ಧಿ ದೇಶಗಳು ಈ ಸಿರಿವಂತ ದೇಶಗಳಿಗೆ ಪ್ರತಿತೆರಿಗೆ ಹಾಕಬೇಕು. ಆ ಹಣವನ್ನು ಕಾರ್ಬನ್ ಮುಕ್ತ ಉತ್ಪಾದನಾ ವ್ಯವಸ್ಥೆ ಸುಧಾರಿಸಲು ಬಳಸಬೇಕು ಎಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಸಂಸ್ಥೆ ಹೇಳಿದೆ.

ಇದನ್ನೂ ಓದಿ: 25,000 ಜನರಿಗೆ ಕೆಲಸ ಕೊಟ್ಟಿದ್ದೇನೆ, ನನ್ನ ಮಕ್ಕಳು ಕರ್ನಾಟಕದಲ್ಲಿ ಕೆಲಸ ಮಾಡಬಾರದಾ?: ಮೀಸಲಾತಿ ಮಸೂದೆಗೆ ಫೋನ್​ಪೆ ಸಂಸ್ಥಾಪಕರ ಕಿಡಿ

ವಿಶ್ವಸಂಸ್ಥೆ ಆದೇಶದ ಪ್ರಕಾರ ಇಡೀ ಜಗತ್ತು ಕಾರ್ಬನ್ ಮುಕ್ತವಾಗಬೇಕು ಎಂಬ ಗುರಿ ಇಡಲಾಗಿದೆ. ಆ ಗುರಿಸಾಧನೆಯ ಭಾಗವಾಗಿ ಕಾರ್ಬನ್ ಟ್ಯಾಕ್ಸ್ ಒಂದು ಕ್ರಮವಾಗಿದೆ. ಒಂದು ಉತ್ಪನ್ನದ ತಯಾರಿಕೆಗೆ ಎಷ್ಟು ಪರಿಸರ ಹಾನಿಯಾಗುತ್ತದೋ ಅಷ್ಟು ಪ್ರಮಾಣದ ತೆರಿಗೆ ಕಟ್ಟಬೇಕು ಎಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ