India vs China: ಚೀನಾ ಜಿಡಿಪಿ ಸಖತ್ತಾಗಿದ್ದರೂ ಷೇರು ಮಾರುಕಟ್ಟೆ ಲತ್ತೆ ಹೊಡೆಯುತ್ತಿರೋದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಡಾಟಾ
China vs India Stock Market: ಭಾರತದ ಷೇರುಪೇಟೆ ಓವರ್ವ್ಯಾಲ್ಯೂಡ್ ಆಗಿದೆ, ಚೀನಾ ಬಜಾರು ಅಂಡರ್ವ್ಯಾಲ್ಯೂಡ್ ಆಗಿದೆ. ಚೀನೀ ಷೇರುಗಳು ಆಕರ್ಷಕ ಬೆಲೆ ಹೊಂದಿವೆ ಎಂದು ಹೇಳಲಾಗುತ್ತದೆ. ಆದರೆ, 2007ರಿಂದ 2024ರ ಅವಧಿಯಲ್ಲಿ ಚೀನಾದ ಜಿಡಿಪಿ ಎರಡು ಪಟ್ಟು ಹೆಚ್ಚಳವಾಗಿದೆ. ಆದರೆ, ಅದರ ಷೇರುಮಾರುಕಟ್ಟೆ ಕೊಟ್ಟ ರಿಟರ್ನ್ಸ್ ಶೂನ್ಯ. ಇದಕ್ಕೆ ಹೋಲಿಸಿದರೆ ಭಾರತದ ನಿಫ್ಟಿ50 ಕಳೆದ 18 ವರ್ಷದಲ್ಲಿ ಶೇ. 500ರಷ್ಟು ಬೆಳೆದಿದೆ.

ನವದೆಹಲಿ, ಏಪ್ರಿಲ್ 25: ಕೆಲ ವಾರಗಳ ಹಿಂದಿನವರೆಗೂ ಭಾರತದ ಷೇರು ಮಾರುಕಟ್ಟೆ (stock market) ಗಿರಗಿರನೆ ತಿರುಗಿ ಬೀಳುವ ದೃಶ್ಯ ಇತ್ತು. ವಿದೇಶೀ ಹೂಡಿಕೆದಾರರು (ಎಫ್ಐಐ) ಭಾರತದ ಮಾರುಕಟ್ಟೆಯಿಂದ ಕಾಲ್ತೆಗೆದು ಚೀನಾದತ್ತ (China) ದೌಡಾಯಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಚೀನಾದ ಈಕ್ವಿಟಿ ಮಾರುಕಟ್ಟೆಯಲ್ಲಿ ಅತ್ಯಂತ ಆಕರ್ಷಕ ಬೆಲೆಗಳಲ್ಲಿ ಷೇರುಗಳು ಲಭ್ಯ ಇವೆ. ಭಾರತದಲ್ಲಿರುವ ಷೇರುಗಳ ಬೆಲೆ ದುಬಾರಿಯಾಯಿತು ಎಂಬಂತಹ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಮಾತು ಅರ್ಧ ಸತ್ಯ. ಚೀನಾದ ಷೇರುಗಳು ಕಡಿಮೆ ಬೆಲೆಯಲ್ಲಿ ಲಭ್ಯ ಇರುವುದು ನಿಜ. ಆದರೆ, ಇನ್ನರ್ಧ ಸತ್ಯ ಎಂದರೆ, ಕಳೆದ ಎರಡು ದಶಕದಲ್ಲಿ ಚೀನಾದ ಷೇರು ಬೆಲೆ ಇದೇ ಪರಿಸ್ಥಿತಿಯಲ್ಲಿವೆ. ಅದರ ಮೌಲ್ಯ ಹೆಚ್ಚೇ ಆಗಿಲ್ಲ. ಷೇರಿನ ಬೆಲೆ ಕಾಲಾನಂತರದಲ್ಲಿ ಹೆಚ್ಚೇ ಆಗುತ್ತಿಲ್ಲ ಎಂದರೆ ಅದರ ಬೆಲೆ ಎಷ್ಟಿದ್ದರೆ ಏನು?
2007ರಿಂದ ಭಾರತದ ಷೇರುಗಳು ಕೊಟ್ಟ ರಿಟರ್ನ್ಸ್ ಶೇ. 500
ಭಾರತ ಮತ್ತು ಚೀನಾ ಷೇರುಮಾರುಕಟ್ಟೆಯ ಬೆಳವಣಿಗೆಯನ್ನು ಹೋಲಿಸಿದರೆ ಒಂದು ಇಂಟರೆಸ್ಟಿಂಗ್ ವಿಚಾರ ಬೆಳಕಿಗೆ ಬರುತ್ತದೆ. ಚೀನಾ ಷೇರು ಬಜಾರಿನ ಪ್ರಮುಖ ಸೂಚ್ಯಂಕವಾದ ಶಾಂಘ ಕಾಂಪೊಸಿಟ್ ಇಂಡೆಕ್ಸ್ 2007ರಲ್ಲಿ ಇದ್ದ ಮಟ್ಟದಲ್ಲೇ ಈಗಲೂ ಇದೆ. ಟಿಕ್ ಟಾಕ್ನಂತಹ ಉತ್ಪನ್ನಗಳನ್ನು ನೀಡಿದ ಟೆನ್ಸೆಂಟ್, ಆಲಿಬಾಬ, ಮೇಟುವಾನ್ ಮೊದಲಾದ ದಿಗ್ಗಜ ಚೀನೀ ಕಂಪನಿಗಳ ಷೇರುಗಳು ಈ ಇಂಡೆಕ್ಸ್ನಲ್ಲಿ ಇವೆ ಎನ್ನುವುದು ಗಮನಾರ್ಹ. ಆದರೂ ಕೂಡ 18 ವರ್ಷದಲ್ಲಿ ಯಾವ ಏರಿಕೆಯನ್ನೂ ಕಂಡಿಲ್ಲ ಈ ಇಂಡೆಕ್ಸ್.
ಇದನ್ನೂ ಓದಿ: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ? ಇಲ್ಲಿವೆ ರೋಚಕ ಅಂಶಗಳು
ಭಾರತದ ಷೇರುಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾದ ನಿಫ್ಟಿ50 ಇಂಡೆಕ್ಸ್ ಇದೇ ಅವಧಿಯಲ್ಲಿ ಶೇ 500ರಷ್ಟು ಬೆಳವಣಿಗೆ ಕಂಡಿದೆ. ಅಮೆರಿಕದ ಷೇರುಬಜಾರ್ನ ಪ್ರಮುಖ ಸೂಚ್ಯಂಕವಾದ ಎಸ್ ಅಂಡ್ ಪಿ 500 ಇಂಡೆಕ್ಸ್ ಈ 18 ವರ್ಷದಲ್ಲಿ ಶೇ. 250ರಷ್ಟು ಬೆಳೆದಿದೆ. ಇಲ್ಲಿ ಚೀನಾದ ಶಾಂಘೈ ಇಂಡೆಕ್ಸ್ನಲ್ಲಿ ನೀವು 2007ರಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ, ನಿಮ್ಮ ಹಣ ಈಗ ಅಷ್ಟೇ ಇರುತ್ತಿತ್ತು. ಅದೇ ನೀವು ನಿಫ್ಟಿ50 ಯಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಹಣ 50 ಲಕ್ಷ ರೂಗೆ ಬೆಳೆದಿರುತ್ತಿತ್ತು. ಆ ಮಟ್ಟಿಗೆ ಚೀನಾ ಷೇರು ಮಾರುಕಟ್ಟೆ ಕಳಪೆ ಪ್ರದರ್ಶನ ತೋರಿದೆ.
ಚೀನಾ ಜಿಡಿಪಿ ಎರಡು ಪಟ್ಟು ಹೆಚ್ಚಳ…
2008ರಿಂದ 2024ರ ನಡುವೆ ಚೀನಾದ ಜಿಡಿಪಿ ಎರಡು ಪಟ್ಟು ಹೆಚ್ಚಾಗಿದೆ. ತಂತ್ರಜ್ಞಾನ ಆವಿಷ್ಕಾರ, ಮೂಲಸೌಕರ್ಯ ಅಭಿವೃದ್ಧಿ, ರಫ್ತು ಇತ್ಯಾದಿಯಲ್ಲಿ ಚೀನಾ ಅಭೂತಪೂರ್ವ ಬೆಳವಣಿಗೆ ಹೊಂದಿದೆ. ಆದರೂ ಕೂಡ ಅದಕ್ಕೆ ಅನುಗುಣವಾಗಿ ಷೇರು ಮಾರುಕಟ್ಟೆ ಬೆಳೆದಿಲ್ಲ ಎನ್ನುವುದು ಗಮನಾರ್ಹ. ಕೋವಿಡ್ ಬಳಿಕ ನೆಲ ಕಚ್ಚಿದ ಮಾರುಕಟ್ಟೆ ಮತ್ತೆ ಏರಿಕೆಯನ್ನೇ ಕಂಡಿಲ್ಲ.
ಚೀನಾ ಷೇರುಬಜಾರಿನ ಹೀನಾಯ ಪ್ರದರ್ಶನಕ್ಕೆ ಕಾರಣವೇನು?
ಅಮೆರಿಕ ಬಿಟ್ಟರೆ ಚೀನಾ ದೇಶವೇ ಅತಿದೊಡ್ಡ ಷೇರು ಮಾರುಕಟ್ಟೆ ಹೊಂದಿರುವುದು. ಅದರ ವಿವಿಧ ಷೇರು ವಿನಿಮಯ ಕೇಂದ್ರಗಳಲ್ಲಿ ಐದು ಸಾವಿರಕ್ಕೂ ಅಧಿಕ ಕಂಪನಿಗಳು ಲಿಸ್ಟ್ ಆಗಿವೆ. ಅದರ ಒಟ್ಟಾರೆ ಮಾರುಕಟ್ಟೆ ಮೌಲ್ಯವು ಜಿಡಿಪಿಯ ಶೇ. 64ರಷ್ಟು ಮಾತ್ರವೇ ಇರುವುದು. ಆದರೆ, ಯಾಕೆ ಈ ಷೇರುಗಳು ಹೂಡಿಕೆದಾರರನ್ನು ಆಕರ್ಷಿಸಲು ವಿಫಲವಾಗಿವೆ?
ಇದನ್ನೂ ಓದಿ: ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಅಟ್ಟಾರಿ ಗಡಿ, ಸಿಂಧೂ ಜಲ ಒಪ್ಪಂದ ಮುಚ್ಚಿದ್ದು ಶಾಕ್ ಕೊಟ್ಟಿತಾ?
ಒಂದು ತರ್ಕ ಎಂದರೆ, ಚೀನಾದಲ್ಲಿ ಲಿಸ್ಟ್ ಆಗಿರುವ ಕಂಪನಿಗಳಲ್ಲಿ ಹೆಚ್ಚಿನವು ಸರ್ಕಾರಿ ನಿಯಂತ್ರಿತವಾಗಿರುವಂಥವೇ. ಸರ್ಕಾರದ ಅಣತಿ ಮೇರೆಗೆ ಇವು ಕೆಲಸ ಮಾಡುತ್ತವೆ. ಇವುಗಳಿಗೆ ಲಾಭಕ್ಕಿಂತ ಸರ್ಕಾರದ ನಿರ್ದೇಶನ ಪಾಲಿಸುವುದೇ ಮುಖ್ಯವಾಗಿರುತ್ತದೆ. ಹೀಗಾಗಿ, ಇವುಗಳ ಮೇಲೆ ವಿಶ್ವಾಸ ಇಡಲು ಕಷ್ಟ ಎನ್ನುವ ಅನಿಸಿಕೆ ಹೂಡಿಕೆದಾರರ ವಲಯದಲ್ಲಿದೆ. ಹೀಗಾಗಿ, ಟೆನ್ಸೆಂಟ್ನಂತಹ ಅದ್ಭುತ ಟೆಕ್ ಕಂಪನಿಯ ಷೇರುಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








