India-Pak: ಭಾರತದ ಮೇಲೆ ಪಾಕಿಸ್ತಾನ ಅವಲಂಬನೆ ಎಷ್ಟು? ಸಂಬಂಧ ಪೂರ್ತಿ ಕಡಿತವಾದರೆ ಪಾಕ್ಗೆ ಆಗೋ ನಷ್ಟವೆಷ್ಟು?
India Pakistan economic impact: ಕಾಶ್ಮೀರದಲ್ಲಿನ ಉಗ್ರ ದಾಳಿಯ ನಂತರ, ಭಾರತವು ಪಾಕಿಸ್ತಾನದೊಂದಿಗಿನ ಸಂಬಂಧಗಳನ್ನು ಕಡಿದುಕೊಳ್ಳುವ ಸಾಧ್ಯತೆಯಿದೆ. ಇದರಿಂದ ಪಾಕಿಸ್ತಾನಕ್ಕೆ ಆರ್ಥಿಕವಾಗಿ ಹೆಚ್ಚಿನ ನಷ್ಟವಾಗುವ ಸಾಧ್ಯತೆಯಿದೆ. ಭಾರತದಿಂದ ಪಾಕಿಸ್ತಾನಕ್ಕೆ ರಫ್ತಾಗುವ ಔಷಧಿಗಳು, ಲಸಿಕೆಗಳು, ಕೃಷಿ ಉತ್ಪನ್ನಗಳು ಮತ್ತು ಇತರ ಅಗತ್ಯ ವಸ್ತುಗಳ ಮೇಲೆ ಪಾಕಿಸ್ತಾನ ಅತಿ ಹೆಚ್ಚು ಅವಲಂಬಿತವಾಗಿದೆ. ಸಿಂಧೂ ಜಲ ಒಪ್ಪಂದದ ರದ್ದತಿಯು ಪಾಕಿಸ್ತಾನದ ಕೃಷಿ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪರಿಣಾಮವಾಗಿ, ಪಾಕಿಸ್ತಾನದ ಜಿಡಿಪಿಗೆ ಗಣನೀಯ ಹಿನ್ನಡೆಯಾಗುವ ಸಾಧ್ಯತೆ ಇದೆ.

ನವದೆಹಲಿ, ಏಪ್ರಿಲ್ 24: ಮಂಗಳವಾರ ಕಾಶ್ಮೀರದ ಪಹಲ್ಗಾಮ್ನಲ್ಲಿ ರೆಸಿಸ್ಟೆನ್ಸ್ ಫ್ರಂಟ್ ಹೆಸರಿನ ಸಂಘಟನೆಯ ಉಗ್ರಗಾಮಿಗಳು ಪ್ರವಾಸಿಗರನ್ನು ಬಲಿತೆಗೆದುಕೊಂಡ ಘಟನೆ (Pahalgam terror attack) ಸಿಕ್ಕಾಪಟ್ಟೆ ಆಕ್ರೋಶಕ್ಕೆ ಕಾರಣವಾಗಿದೆ. ಪುಲ್ವಾಮ ದಾಳಿ ಬಳಿಕ ಕಾಶ್ಮೀರದಲ್ಲಿ ನಡೆದ ಭೀಕರ ಉಗ್ರದಾಳಿ ಅದು. ಪಹಲ್ಗಾಮ್ ದಾಳಿಯಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ. ಪುಲ್ವಾಮ ದಾಳಿ ವಿಚಾರದಲ್ಲಿ ಪಾಕಿಸ್ತಾನ ಅದೇ ರಾಗ ಹಾಡಿತ್ತು. ಆದರೆ, ಪಾಕ್ ಕುಮ್ಮಕ್ಕಿನಿಂದ ಪುಲ್ವಾಮದಲ್ಲಿ ಘಟನೆ ಸಂಭವಿಸಿದ್ದಕ್ಕೆ ಸಾಕ್ಷಿಗಳಿವೆ. ಪಹಲ್ಗಾಮ್ನಲ್ಲೂ ಪಾಕಿಸ್ತಾನದ ಪಾತ್ರ ಇಲ್ಲವೆನ್ನಲು ಕಷ್ಟ. ಅದೇನೇ ಇರಲಿ, ಭಾರತವು ಈಗ ಪಾಕಿಸ್ತಾನಕ್ಕೆ ಪಾಠ ಕಲಿಸುವ ಸಂಕಲ್ಪ ತೊಟ್ಟಿದೆ. ಸಿಂಧೂ ಜಲ ಒಪ್ಪಂದವನ್ನು ಮುಲಾಜಿಲ್ಲದೆ ರದ್ದುಗೊಳಿಸಿದೆ. ಪಾಕಿಸ್ತಾನದೊಂದಿಗೆ ಭಾರತ ಎಲ್ಲಾ ರಾಜಕೀಯ, ಆರ್ಥಿಕ ಸಂಬಂಧಗಳನ್ನು ಕತ್ತರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹಾಗೊಂದು ವೇಳೆ ಆದಲ್ಲಿ ಪಾಕಿಸ್ತಾನಕ್ಕೆ ಎಷ್ಟು ನಷ್ಟವಾಗಬಹುದು?
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹೆಚ್ಚೇನೂ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಭಾರತದ ಮೇಲೆ ಇದು ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಆದರೆ, ಪಾಕಿಸ್ತಾನಕ್ಕೆ ಹೆಚ್ಚು ನಷ್ಟವಾಗುವ ಸಾಧ್ಯತೆ ಹೆಚ್ಚು. ನಿಯಂತ್ರಣಕ್ಕೆ ಬಂದಿರುವ ಹಣದುಬ್ಬರ ಮತ್ತೆ ಕೈಮೀರುವ ಸಾಧ್ಯತೆ ಇದೆ. ಪಾಕಿಸ್ತಾನದ ಜಿಡಿಪಿಗೆ ಕೆಲ ಪ್ರತಿಶತಗಳಷ್ಟು ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ರಾಜಕೀಯ ಬೆಂಬಲ ಕಡಿಮೆಗೊಳ್ಳಬಹುದು.
ಭಾರತದ ಮೇಲೆ ಪಾಕಿಸ್ತಾನ ಹೆಚ್ಚು ಅವಲಂಬಿತವಾಗಿರುವುದು ಯಾವುದರಲ್ಲಿ?
ಪಾಕಿಸ್ತಾನಕ್ಕೆ ಬೇಕಾದ ಶೇ. 40ರಷ್ಟು ಲಸಿಕೆಗಳು ಭಾರತೀಯ ಕಂಪನಿಗಳಿಂದ ಸರಬರಾಜಾಗುತ್ತವೆ. ಶೇ. 30ರಷ್ಟು ಸರ್ಜಿಕಲ್ ಸಲಕರಣೆಗಳು ಭಾರತದಿಂದ ಹೋಗುತ್ತವೆ. ಹಾಗೆಯೇ, ಶೇ. 12ರಷ್ಟು ಲೂಬ್ರಿಕೆಂಟ್ ಆಯಿಲ್ ಭಾರತೀಯ ಕಂಪನಿಗಳಿಂದ ಸಿಗುತ್ತದೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ, ಸರ್ವಪಕ್ಷ ಸಭೆ ಕರೆದ ಪ್ರಧಾನಿ ಮೋದಿ
ಅಟ್ಟಾರಿ-ವಾಘಾ ಗಡಿ ಮೂಲಕ ಸಾವಿರಾರು ಕೋಟಿ ರೂ ವ್ಯಾಪಾರ
ಪಾಕಿಸ್ತಾನದ ವ್ಯಾಪಾರ ವಹಿವಾಟಿಗೆ ವಾಘಾ-ಅಟಾರಿ ಗಡಿ ಮುಖ್ಯ ರಹದಾರಿ ಎನಿಸಿದೆ. 2023-24ರಲ್ಲಿ ₹3,886.53 ಕೋಟಿ ಮೌಲ್ಯದ ವ್ಯಾಪಾರ ನಡೆದಿತ್ತು. 6,871 ಸರಕುಗಳು ಈ ಮಾರ್ಗದಲ್ಲಿ ಸಾಗಣೆ ಆಗಿದ್ದವು. ಈಗ ಭಾರತವು ಅಟಾರಿ ಗಡಿಯನ್ನು ಮುಚ್ಚುವುದರಿಂದ, ಸರಕು ಸಾಗಣೆ ಬಾಗಿಲು ಬಂದ್ ಆದಂತಾಗುತ್ತದೆ. ಪಾಕಿಸ್ತಾನವು ಶೇ. 40ರಷ್ಟು ಡ್ರೈಫ್ರೂಟ್ಗಳನ್ನು ಅಫ್ಗಾನಿಸ್ತಾನದಿಂದ ಆಟಾರಿ-ವಾಘಾ ಗಡಿ ಮೂಲಕ ಆಮದು ಮಾಡಿಕೊಳ್ಳುತ್ತದೆ. ಈಗ ಇರಾನ್ ಮಾರ್ಗದ ಮೂಲಕ ಅದನ್ನು ಸಾಗಿಸಬೇಕಾಗುತ್ತದೆ. ಇದರಿಂದ ಪಾಕಿಸ್ತಾನಕ್ಕೆ ಹೆಚ್ಚು ವೆಚ್ಚವಾಗುತ್ತದೆ.
ಪಾಕಿಸ್ತಾನದಿಂದ ಭಾರತಕ್ಕೆ ಸರಬರಾಜಾಗುತ್ತಿದ್ದ ಸರಕುಗಳು
ಒಣಗಿದ ಹಣ್ಣುಗಳು (ಡ್ರೈಫ್ರೂಟ್ಸ್), ಒಣಗಿದ ಖರ್ಜೂರ, ಜಿಪ್ಸಮ್, ಸಿಮೆಂಟ್, ಗಾಜು, ರಾಕ್ ಸಾಲ್ಟ್, ಔಷಧೀಯ ಸಸ್ಯಗಳು ಪಾಕಿಸ್ತಾನದಿಂದ ಭಾರತಕ್ಕೆ ಸರಬರಾಜಾಗುತ್ತವೆ. ಇವುಗಳು ನಿಲ್ಲುವುದರಿಂದ ಪಾಕಿಸ್ತಾನದ ಸ್ಥಳೀಯ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಬಹುದು.
ಭಾರತದಿಂದ ಪಾಕಿಸ್ತಾನಕ್ಕೆ ರಫ್ತಾಗುವ ಸರಕುಗಳು
ಭಾರತದಿಂದ ಪಾಕಿಸ್ತಾನಕ್ಕೆ ಸೋಯಾಬಿನ್, ತರಕಾರಿಗಳು, ಕೆಂಪು ಮೆಣಸಿನಕಾಯಿ, ಪ್ಲಾಸ್ಟಿಕ್ ಸಂಬಂಧಿತ ಉತ್ಪಾದನೆ ರಪ್ತು ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಔಷಧ, ಹತ್ತಿ, ಕೀಟನಾಶಕ, ರಸಗೊಬ್ಬರ ಇತ್ಯಾದಿಗಳು ಪಾಕಿಸ್ತಾನವು ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ಲಸಿಕೆಗಳು, ಜೆನೆರಿಕ್ ಮೆಡಿಸಿನ್ಗಳಿಗೆ ಪಾಕಿಸ್ತಾನ ಈಗ ಬೇರೆ ದೇಶಗಳನ್ನು ಹುಡುಕಬೇಕಾಗುತ್ತದೆ.
ಇಂಡಸ್ ವಾಟರ್ ಟ್ರೀಟಿ, ಭಾರತದೊಂದಿಗಿರುವ ಪ್ರಬಲ ಅಸ್ತ್ರ
ಸಿಂಧೂ ಜಲ ಒಪ್ಪಂದವನ್ನು ಭಾರತ ರದ್ದುಗೊಳಿಸಿರುವುದು ಪಾಕಿಸ್ತಾನಕ್ಕೆ ಇಕ್ಕಟ್ಟು ಸೃಷ್ಟಿಸುತ್ತದೆ. ಸಿಂಧೂ ಮತ್ತು ಚಿನಾಬ್ ನದಿಗಳ ಮೇಲೆ ಪಾಕಿಸ್ತಾನ ಬಹಳ ಅಲವಂಬಿತವಾಗಿದೆ. ಹೆಚ್ಚಿನ ಕೃಷಿ ಚಟುವಟಿಕೆಗಳಿಗೆ ಈ ನೀರೇ ಪ್ರಧಾನ ಮೂಲವಾಗಿದೆ.
ಇದನ್ನೂ ಓದಿ: Indus Water Treaty: ಪಾಕಿಸ್ತಾನಕ್ಕೆ ಭಾರತದ ಶಾಕ್; ಏನಿದು ಸಿಂಧೂ ಜಲ ಒಪ್ಪಂದ?
ಭಾರತವು ನೀರು ಬಿಡುಗಡೆ ನಿಲ್ಲಿಸಿದಲ್ಲಿ ಪಾಕಿಸ್ತಾನದ ಅರ್ಧದಷ್ಟು ಕೃಷಿ ಚಟುವಟಿಕೆ ಸ್ತಬ್ಧಗೊಳ್ಳುತ್ತದೆ. ಅದರಲ್ಲೂ ಪಾಕಿಸ್ತಾನ ಕಡೆಯ ಪಂಜಾಬ್ ಪ್ರಾಂತ್ಯದಲ್ಲಿ ರೈತರು ಭತ್ತ ಬೆಳೆಯುತ್ತಿದ್ದು, ಅದಕ್ಕೆ ನೀರಿನ ಅವಶ್ಯಕತೆ ಹೆಚ್ಚಿದೆ. ಒಂದು ಅಂದಾಜು ಪ್ರಕಾರ, ಭಾರತದೊಂದಿಗೆ ಸಂಬಂಧ ಹಳಸುವುದರಿಂದ ಪಾಕಿಸ್ತಾನದ ಜಿಡಿಪಿಗೆ ಶೇ. 10-20ರಷ್ಟಾದರೂ ನಷ್ಟವಾಗಬಹುದು ಎನ್ನಲಾಗುತ್ತಿದೆ.
ರಾಜತಾಂತ್ರಿಕವಾಗಿಯೂ ಪರಿಣಾಮ…
ಆರ್ಥಿಕ ಹಿನ್ನಡೆಯಿಂದ ಈಗತಾನೆ ಸ್ವಲ್ಪ ಸ್ವಲ್ಪವಾಗಿ ಸುಧಾರಿಸಿಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ಈಗ ಮತ್ತೆ ಆರ್ಥಿಕ ಸಂಕಷ್ಟ ಎದುರಾಗಬಹುದು. ಕೆಲ ಮುಸ್ಲಿಂ ದೇಶಗಳೂ ಕೂಡ ಪಾಕಿಸ್ತಾನದಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಬಹುದು. ಚೀನಾ, ಟರ್ಕಿ ಮೇಲೆ ಪಾಕಿಸ್ತಾನ ಹೆಚ್ಚು ಅವಲಂಬಿತವಾಗಬೇಕಾದ ಸ್ಥಿತಿ ಬರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ