AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್ಚರ..! ವೇಟಿಂಗ್ ಟಿಕೆಟ್ ಇಟ್ಕೊಂಡು ರಿಸರ್ವೇಶನ್ ಕೋಚ್​ಗೆ ನುಗ್ಗಿದ್ರೆ ಕಷ್ಟ ಕಷ್ಟ; ಈ ವೇಟಿಂಗ್ ರಗಳೆ ತಪ್ಪಿಸಲು ಸರ್ಕಾರ ಮಾಸ್ಟರ್​ಪ್ಲಾನ್

Indian Railways new rules and plans: ಕನ್ಫರ್ಮ್ಡ್ ಟಿಕೆಟ್ ಇಲ್ಲದೇ ಹೋದರೆ ನೂರಾರು ರಗಳೆ. ತಮಗೂ ಕಿರಿಕಿರಿ, ಇತರರಿಗೂ ಕಿರಿಕಿರಿ. ಕನ್ಫರ್ಮ್ಡ್ ಟಿಕೆಟ್ ಇಲ್ಲದವರು ಆ ಬೋಗಿಗೆ ಕಾಲಿಡುವಂತಿಲ್ಲ. ಒಂದು ವೇಳೆ ಕನ್ಫರ್ಮ್ಡ್ ಟಿಕೆಟ್​ನ ಬೋಗಿಗೆ ಹತ್ತಿದರೆ ಭಾರೀ ದಂಡ ತೆರಬೇಕಾಗುತ್ತದೆ. ಈ ವೇಟಿಂಗ್ ಟಿಕೆಟ್ ಸಮಸ್ಯೆ ನೀಗಿಸಲು ರೈಲ್ವೆ ಇಲಾಖೆ ಹೆಚ್ಚೆಚ್ಚು ರೈಲುಗಳನ್ನು ಆರಂಭಿಸಲು ಯೋಜಿಸಿದೆ.

ಎಚ್ಚರ..! ವೇಟಿಂಗ್ ಟಿಕೆಟ್ ಇಟ್ಕೊಂಡು ರಿಸರ್ವೇಶನ್ ಕೋಚ್​ಗೆ ನುಗ್ಗಿದ್ರೆ ಕಷ್ಟ ಕಷ್ಟ; ಈ ವೇಟಿಂಗ್ ರಗಳೆ ತಪ್ಪಿಸಲು ಸರ್ಕಾರ ಮಾಸ್ಟರ್​ಪ್ಲಾನ್
ಭಾರತೀಯ ರೈಲ್ವೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 18, 2024 | 6:26 PM

Share

ನವದೆಹಲಿ, ಜುಲೈ 18: ರಿಸರ್ವೇಶನ್ ಕೋಚ್​ನಲ್ಲಿ ಕನ್​ಫರ್ಮ್ಡ್ ಟಿಕೆಟ್ ಇಲ್ಲದವರೂ ನುಗ್ಗಿ ಅಲ್ಲಿರುವ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಬಹಳಷ್ಟು ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಸ್ಲೀಪರ್ ಕೋಚ್​ನಲ್ಲಿ ಬೇರೆಯವರು ಟಿಕೆಟ್ ಬುಕ್ ಮಾಡಿದ ಸೀಟ್​ನಲ್ಲಿ ಕೂರುವುದು, ಅಲ್ಲಿಯೇ ನಿಲ್ಲುವುದು ಇತ್ಯಾದಿ ಘಟನೆಗಳು ರೈಲು ಪ್ರಯಾಣ ಕಿರಿಕಿರಿಯಾಗುವಂತೆ ಮಾಡುತ್ತವೆ. ಇದನ್ನು ತಪ್ಪಿಸಲು ರೈಲ್ವೆ ಇಲಾಖೆ ಹೊಸ ನಿಯಮ ರೂಪಿಸಿದೆ. ಟಿಕೆಟ್ ಬುಕ್ ಮಾಡಿ ಇನ್ನೂ ಕನ್ಫರ್ಮ್ ಆಗದೆ ವೇಟಿಂಗ್ ಟಿಕೆಟ್ ಹೊಂದಿರುವ ಪ್ರಯಾಣಿಕರು ರಿಸರ್ವ್ಸ್ ಕೋಚ್​ಗೆಯೇ ಕಾಲಿಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ವೇಟಿಂಗ್ ಟಿಕೆಟ್ ಹೊಂದಿರುವವರು ರಿಸರ್ವ್ಡ್ ಕೋಚ್​ಗೆ ಹೋದರೆ ಏನಾಗುತ್ತೆ?

ಕನ್ಫರ್ಡ್ ಇಲ್ಲದ ಟಿಕೆಟ್ ಇಟ್ಟುಕೊಂಡು ರಿಸರ್ವ್ಡ್ ಬೋಗಿಗೆ ಹೋಗುವಂತಿಲ್ಲ. ಹಾಗೊಂದು ವೇಳೆ ಹೋದರೆ ಅವರು ಭಾರೀ ಮೊತ್ತದ ದಂಡ ಕಟ್ಟಬೇಕಾಗುತ್ತದೆ. ಹಾಗೂ ಮುಂದಿನ ನಿಲ್ದಾಣದಲ್ಲೇ ಅವರನ್ನು ಕೆಳಗೆ ಇಳಿಸಲಾಗುತ್ತದೆ. ದಂಡದ ಮೊತ್ತ ಕನಿಷ್ಠ 440 ರೂ ಇರುತ್ತದೆ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಎಲ್ಲಾ ಪ್ರಯಾಣಿಕರು ದೃಢೀಕೃತ ರೈಲ್ವೆ ಟಿಕೆಟ್ ಪಡೆಯಬಹುದು: ಅಶ್ವಿನಿ ವೈಷ್ಣವ್

ರೈಲು ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಬುಕ್ ಮಾಡಿ ಖರೀದಿಸಬಹುದು. ಆಫ್​ಲೈನ್​ನಲ್ಲಿ ಕೌಂಟರ್​ನಲ್ಲಿ ಟಿಕೆಟ್ ಪಡೆಯಬಹುದು. ಕೌಂಟರ್​ನಲ್ಲಿ ಟಿಕೆಟ್ ಪಡೆಯುವಾಗ ಕನ್ಫರ್ಮ್ಡ್ ಟಿಕೆಟ್ ಇಲ್ಲದಿದ್ದರೆ ವೇಟಿಂಗ್ ಟಿಕೆಟ್ ಪಡೆಯುವ ಆಯ್ಕೆ ಇರುತ್ತದೆ. ಆನ್​ಲೈನ್​ನಲ್ಲಿ ಟಿಕೆಟ್ ಬುಕ್ ಮಾಡುವಾಗಲೂ ಕನ್ಫರ್ಮ್ಡ್ ಸೀಟು ಇಲ್ಲದಿದ್ದರೆ ವೇಟಿಂಗ್ ಟಿಕೆಟ್ ಪಡೆಯಬಹುದು. ಒಂದು ವೇಳೆ ರೈಲು ಪ್ರಯಾಣದ ದಿನವೂ ಈ ವೇಟಿಂಗ್ ಟಿಕೆಟ್ ಕನ್ಫರ್ಮ್ ಆಗಲಿಲ್ಲವೆಂದರೆ ಹಣ ರೀಫಂಡ್ ಆಗುತ್ತದೆ.

ಈ ವೇಟಿಂಗ್ ಟಿಕೆಟ್ ರಗಳೆ ತಪ್ಪಿಸಲು ರೈಲ್ವೆ ಇಲಾಖೆ ಪ್ಲಾನ್

ಭಾರತೀಯ ರೈಲ್ವೆಯಿಂದ ಒಂದು ದಿನದಲ್ಲಿ 10,754 ಟ್ರೈನ್ ಟ್ರಿಪ್ ನಡೆಯುತ್ತವೆ. ಅಂದರೆ ಅಷ್ಟು ಬಾರಿ ರೈಲುಗಳು ಓಡಾಡುತ್ತವೆ. ಜನರು ಒಂದು ವರ್ಷದಲ್ಲಿ ಒಟ್ಟಾರೆ ಮಾಡುವ ರೈಲು ಪ್ರಯಾಣ 700 ಕೋಟಿಯಷ್ಟಿದೆ. ಇಷ್ಟಾದರೂ ವೇಟಿಂಗ್ ಟಿಕೆಟ್ ಸಮಸ್ಯೆ ಕಾಡುತ್ತಿದೆ. ಅಂದರೆ ರೈಲುಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕಿದೆ. ಈ ಸಮಸ್ಯೆ ನೀಗಿಸಲು ರೈಲ್ವೆ ಇಲಾಖೆ ಪ್ರಯತ್ನ ಮಾಡುತ್ತಿದೆ. ಇನ್ನು, ಮೂರು ವರ್ಷದಲ್ಲಿ 3,000 ಹೊಸ ರೈಲುಗಳನ್ನು ಹಳಿಗೆ ತಂದು ಬಿಡಲು ಯೋಜಿಸಿದೆ. ಇದು ವೇಟ್​ಲಿಸ್ಟಿಂಗ್ ಸಮಸ್ಯೆ ನೀಗಿಸಲು ಸಹಾಯವಾಗಬಹುದು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ವಿಚಾರದ ಬಗ್ಗೆ ಕಳೆದ ವರ್ಷವೂ ಮಾತನಾಡಿದ್ದರು.

ಇದನ್ನೂ ಓದಿ: ಒಂದೇ ರೈಲ್ವೆ ಟಿಕೆಟ್ ಹಲವು ಸೇವೆ; ಊಟ, ಚಿಕಿತ್ಸೆ, ವಿಶ್ರಾಂತಿ ಕೊಠಡಿ, ಡಾರ್ಮಿಟರಿ, ಲಾಕರ್ ರೂಂ ಸೌಲಭ್ಯ

ರೈಲು ಟ್ರಿಪ್ ಸಂಖ್ಯೆ ಶೇ. 30ರಷ್ಟು ಹೆಚ್ಚಾದರೆ ವೇಟ್​ಲಿಸ್ಟಿಂಗ್ ಬಹುತೇಕ ಸೊನ್ನೆಗೆ ಬರುತ್ತದೆ. ಬುಕ್ ಮಾಡಿದ ಬಹುತೇಕ ಎಲ್ಲಾ ಟಿಕೆಟ್​ಗಳು ಕನ್ಫರ್ಮ್ಡ್ ಟಿಕೆಟ್ ಆಗಿರುತ್ತವೆ. ವೇಟಿಂಗ್ ಟಿಕೆಟ್ ಇಟ್ಟುಕೊಂಡು ಆತಂಕದಲ್ಲಿ ಕಾಲ ಕಳೆಯಬೇಕಾದ ಪ್ರಮೇಯ ಕಡಿಮೆ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ