ಒಂದೇ ದಿನ 15 ವಿಕೆಟ್‌ಗಳು ಪತನವಾದರೂ ಸಿಡ್ನಿ ಮೈದಾನಕ್ಕೆ ಕ್ಲೀನ್ ಚಿಟ್ ನೀಡಿದ ಐಸಿಸಿ
ICC Pitch Rating: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಎಲ್ಲಾ ಪಿಚ್ಗಳ ರೇಟಿಂಗ್ ಅನ್ನು ಐಸಿಸಿ ಬಿಡುಗಡೆ ಮಾಡಿದೆ. ಅದರಲ್ಲಿ ಕೊನೆಯ ಟೆಸ್ಟ್ ಪಂದ್ಯ ನಡೆದಿದ್ದ ಸಿಡ್ನಿ ಪಿಚ್‌ಗೆ ಐಸಿಸಿ "ತೃಪ್ತಿದಾಯಕ" ರೇಟಿಂಗ್ ನೀಡಿರುವುದು ಅನೇಕ ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪಂದ್ಯದ ವೇಳೆಯೆ ಗ್ಲೆನ್ ಮೆಕ್‌ಗ್ರಾತ್ ಮತ್ತು ಸುನಿಲ್ ಗವಾಸ್ಕರ್ ಅವರು ಪಿಚ್‌ನ ಗುಣಮಟ್ಟದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಸಿಡ್ನಿಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‌ಗಳಿಂದ ಗೆದ್ದು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು. ಇದೀಗ ಈ ಪಂದ್ಯ ಸೇರಿದಂತೆ ಇಡೀ ಸರಣಿಯಲ್ಲಿ ಬಳಸಲಾದ ಪಿಚ್‌ನ ರೇಟಿಂಗ್ ಅನ್ನು ಐಸಿಸಿ ಬಿಡುಗಡೆ ಮಾಡಿದೆ. ಆ ಪ್ರಕಾರ, ಪರ್ತ್, ಅಡಿಲೇಡ್, ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್‌ನ ಪಿಚ್‌ಗಳನ್ನು ‘ವೆರಿ ಗುಡ್’ ಎಂದು ರೇಟ್ ಮಾಡಲಾಗಿದೆ. ಆದರೆ ಕೊನೆಯ ಟೆಸ್ಟ್ಗೆ ಆತಿಥ್ಯ ನೀಡಿದ್ದ ಸಿಡ್ನಿ ಪಿಚ್‌ಗೆ ಐಸಿಸಿ ‘ತೃಪ್ತಿದಾಯಕ’ ರೇಟಿಂಗ್ ನೀಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಪಂದ್ಯದ ಮೊದಲ ದಿನ 11 ವಿಕೆಟ್‌ಗಳು ಬಿದ್ದರೆ, ಎರಡನೇ ದಿನ 15 ವಿಕೆಟ್‌ಗಳು ಬಿದ್ದವು. ಗ್ಲೆನ್ ಮೆಕ್‌ಗ್ರಾತ್ ಮತ್ತು ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ಅನುಭವಿಗಳು ಈ ಪಿಚ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು ಮತ್ತು ಪ್ರಶ್ನೆಗಳನ್ನು ಸಹ ಎತ್ತಿದ್ದರು. ಇದರ ಜೊತೆಗೆ ಇದನ್ನು ಅತ್ಯಂತ ಕೆಟ್ಟ ಪಿಚ್ ಎಂದು ಕರೆದಿದ್ದರು.
ಎರಡೂವರೆ ದಿನಗಳಲ್ಲಿ ಪಂದ್ಯ ಮುಕ್ತಾಯ
ಸಿಡ್ನಿ ಮೈದಾನವನ್ನು ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಈ ಬಾರಿಯೂ ಈ ಪಿಚ್‌ನಿಂದ ಅದೇ ರೀತಿಯ ನಿರೀಕ್ಷೆ ಇತ್ತು. ಆದರೆ ಪಂದ್ಯ ಆರಂಭವಾದ ಬಳಿಕ ಪ್ರತಿ ಬಾಲ್ ಆಡಲು ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಪ್ರಯಾಸಪಡಬೇಕಾಯಿತು. ಇದರ ಫಲವಾಗಿ ಕೇವಲ ಎರಡೂವರೆ ದಿನಗಳಲ್ಲಿ ಪಂದ್ಯ ಮುಗಿದಿತ್ತು. ಕೇವಲ 1141 ಎಸೆತಗಳಲ್ಲಿ ಪಂದ್ಯದ ಫಲಿತಾಂಶ ಪ್ರಕಟವಾಯಿತು.
ಇದಕ್ಕೂ ಮುನ್ನ 1931ರಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ 1184 ಎಸೆತಗಳಲ್ಲಿ ಕೊನೆಗೊಂಡಿತ್ತು. ಆ ಬಳಿಕ 1985 ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವು 911 ಎಸೆತಗಳಲ್ಲಿ ಅಂತ್ಯಗೊಂಡಿತ್ತು. ಹಾಗೆಯೇ 1888 ರಲ್ಲಿ ಈ ಎರಡು ತಂಡಗಳ ನಡುವಿನ ಪಂದ್ಯದ ಫಲಿತಾಂಶವು ಕೇವಲ 1129 ಎಸೆತಗಳಲ್ಲಿ ಹೊರಬಂದಿತ್ತು. ಇದರಿಂದ ಪಿಚ್ ಎಷ್ಟು ಕೆಟ್ಟದಾಗಿರಬಹುದೆಂದು ಅಂದಾಜಿಸಬಹುದು. ಇದರ ಹೊರತಾಗಿಯೂ, ಐಸಿಸಿ ಈ ಪಿಚ್ ಅನ್ನು ‘ತೃಪ್ತಿದಾಯಕ’ ವಿಭಾಗದಲ್ಲಿ ಇರಿಸಿದೆ.
ಅಚ್ಚರಿ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗರು
ಸಿಡ್ನಿ ಪಿಚ್‌ನಲ್ಲಿ ಸಾಕಷ್ಟು ಹುಲ್ಲಿತ್ತು. ಇದರಿಂದಾಗಿ ಬೌಲರ್‌ಗಳು ಸ್ವಿಂಗ್ ಜೊತೆಗೆ ಸಾಕಷ್ಟು ಸೀಮ್ ಮೂವ್‌ಮೆಂಟ್ ಪಡೆಯುತ್ತಿದ್ದರು. ಈ ಕಾರಣಕ್ಕೆ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಹರಸಾಹಸ ಪಡಬೇಕಾಯಿತು. ಕಳೆದ ಹಲವು ವರ್ಷಗಳಿಂದ ಸಿಡ್ನಿಯಲ್ಲಿ ಇಂತಹ ಪಿಚ್ ನೋಡಿರಲಿಲ್ಲ ಎಂದು ಸ್ವತಃ ಆಸ್ಟ್ರೇಲಿಯಾದ ದಿಗ್ಗಜ ಗ್ಲೆನ್ ಮೆಕ್‌ಗ್ರಾತ್ ಹೇಳಿದ್ದರು.
ಇವರೊಂದಿಗೆ ಈ ಪಿಚ್ ಬಗ್ಗೆ ಅಸಮಾಧಾನ ಹೊರಹಾಕಿದ್ದ ಸುನಿಲ್ ಗವಾಸ್ಕರ್, ‘ಭಾರತದಲ್ಲಿ ದಿನವೊಂದಕ್ಕೆ 15 ವಿಕೆಟ್‌ಗಳು ಬಿದ್ದರೆ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿತ್ತು. ನನ್ನ ಪ್ರಕಾರ ಈ ಪಿಚ್ ಅನ್ನು ಟೆಸ್ಟ್ ಪಂದ್ಯಕ್ಕಾಗಿ ಸಿದ್ದಪಡಿಸಲಾಗಿಲ್ಲ. ಬದಲಿಗೆ ಹಸುವನ್ನು ಒಂಟಿಯಾಗಿ ಬಿಟ್ಟರೆ ಆರಾಮವಾಗಿ ಮೇವು ತಿನ್ನಬಹುದೆಂಬಷ್ಟು ಹುಲ್ಲು ಪಿಚ್‌ನಲ್ಲಿ ಉಳಿಸಲಾಗಿದೆ ಎಂದು ಆರೋಪಿಸಿದ್ದರು. ಮತ್ತೊಂದೆಡೆ, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಕೂಡ ಪಂದ್ಯದ ನಂತರ ಪಿಚ್ ತುಂಬಾ ಕಷ್ಟಕರವಾಗಿದೆ ಎಂದು ಬಣ್ಣಿಸಿದ್ದರು.
ಪಿಚ್ಗಳಿಗೆ ರೇಟಿಂಗ್ ನೀಡಲು ಮಾನದಂಡಗಳೇನು?
ಐಸಿಸಿ ಯಾವುದೇ ಪಿಚ್‌ಗೆ 6 ವಿಭಾಗಗಳಲ್ಲಿ ರೇಟಿಂಗ್ ನೀಡುತ್ತದೆ. ಅದರಂತೆ ‘ಅತ್ಯುತ್ತಮ’ ರೇಟಿಂಗ್ ಪಡೆದ ಪಿಚ್‌ನಲ್ಲಿ ಬೌಲರ್‌ಗಳು ಹಾಗೂ ಬ್ಯಾಟ್ಸ್‌ಮನ್‌ಗಳು ಸಮಾನ ಸಹಾಯ ಪಡೆದಿರುತ್ತಾರೆ. ‘ಉತ್ತಮ’ ರೇಟಿಂಗ್ ಪಡೆದ ಪಿಚ್ ಬೌಲರ್ ಅಥವಾ ಬ್ಯಾಟ್ಸ್‌ಮನ್ ಈ ಇಬ್ಬರಲ್ಲಿ ಒಬ್ಬರಿಗೆ ಹೆಚ್ಚು ನೆರವಾಗಿರುತ್ತದೆ. ಮತ್ತೊಂದೆಡೆ, ‘ಸರಾಸರಿ’ ರೇಟಿಂಗ್ ಪಡೆದ ಪಿಚ್ ಆಡಲು ಸೂಕ್ತವಾಗಿದ್ದರೂ ಬೌಲರ್ ಹಾಗೂ ಬ್ಯಾಟರ್ ಇಬ್ಬರಿಗೂ ನೆರವಾಗಿರುವುದಿಲ್ಲ.
ಹಾಗೆಯೇ ಪಿಚ್‌ಗೆ ‘ಸರಾಸರಿಗಿಂತ ಕೆಳಗೆ’ ರೇಟಿಂಗ್ ನೀಡಿದರೆ, ಅದನ್ನು ಆಡಲು ಸೂಕ್ತವಲ್ಲವೆಂದು ಪರಿಗಣಿಸಿ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗುತ್ತದೆ. ಆದರೆ ‘ಕಳಪೆ’ ರೇಟಿಂಗ್ ಪಡೆದ ಪಿಚ್ ಅನ್ನು ಅಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಮತ್ತು 3 ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ. ಉಳಿದಂತೆ ಕೊನೆಯದಾಗಿ ‘ಅನ್ಫಿಟ್’ ರೇಟಿಂಗ್ ಪಡೆದ ಪಿಚ್ ಅನ್ನು ಆಡಲು ಅಸುರಕ್ಷಿತವೆಂದು ಘೋಷಿಸಲಾಗುವುದರ ಜೊತೆಗೆ 5 ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ