WPL 2026: ರಣರೋಚಕ ಪಂದ್ಯದಲ್ಲಿ ವೀರೋಚಿತ ಸೋಲು ಕಂಡ ಡೆಲ್ಲಿ
Gujarat Giants vs Delhi Capitals: 2026ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಪಂದ್ಯದಲ್ಲಿ, ಡೆಲ್ಲಿ 210 ರನ್ ಗುರಿ ಬೆನ್ನತ್ತಿ ಕೊನೆಯ ಓವರ್‌ನಲ್ಲಿ ಸೋಲುಂಡಿತು. ಕೇವಲ 7 ರನ್‌ಗಳು ಬೇಕಿದ್ದಾಗ, ಸೋಫಿ ಡಿವೈನ್ ತಮ್ಮ ಅದ್ಭುತ ಬೌಲಿಂಗ್ ಮೂಲಕ 2 ವಿಕೆಟ್ ಕಬಳಿಸಿ ಗುಜರಾತ್‌ಗೆ 4 ರನ್‌ಗಳ ಜಯ ತಂದುಕೊಟ್ಟರು. ಇದು ಡೆಲ್ಲಿ ಕ್ಯಾಪಿಟಲ್ಸ್‌ಗೆ ನಿರಾಶಾದಾಯಕ ಸೋಲು.

2026 ರ ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ನಾಲ್ಕನೇ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Gujarat Giants vs Delhi Capitals) ನಡುವೆ ನಡೆಯಿತು. ಈ ಪಂದ್ಯದಲ್ಲಿ 210 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಓವರ್‌ನಲ್ಲಿ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ಇತ್ತ ಬೃಹತ್ ಗುರಿ ನೀಡಿಯೂ ಸೋಲುವ ಆತಂಕದಲ್ಲಿದ್ದ ಗುಜರಾತ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಅನುಭವಿ ಸೋಫಿ ಡಿವೈನ್ ಯಶಸ್ವಿಯಾದರು. ವಾಸ್ತವವಾಗಿ ಈ ಪಂದ್ಯದಲ್ಲಿ ಡೆಲ್ಲಿ ತಂಡದ ಗೆಲುವಿಗೆ 6 ಎಸೆತಗಳಲ್ಲಿ 7 ರನ್ ಬೇಕಿತ್ತು. ಆದರೆ ಈ ವೇಳೆ ದಾಳಿಗಿಳಿದ ಸೋಫಿ, ಕೊನೆಯ ಓವರ್‌ನಲ್ಲಿ 2 ವಿಕೆಟ್ ಉರುಳಿಸಿ ತಂಡಕ್ಕೆ 4 ರನ್‌ಗಳ ಜಯ ತಂದುಕೊಟ್ಟರು.
ಸೋಫಿ ಸಿಡಿಲಬ್ಬರದ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಸೋಫಿ ಡಿವೈನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸೋಫಿ ಡಿವೈನ್ ಮತ್ತು ಬೆತ್ ಮೂನಿ ಮೊದಲ ವಿಕೆಟ್ಗೆ 94 ರನ್‌ಗಳ ಜೊತೆಯಾಟ ನೀಡಿದರು. ಇದರಲ್ಲಿ ಬೆತ್ ಮೂನಿ ಕೊಡುಗೆ 19 ರನ್ಗಳಾಗಿದ್ದರೆ, ಉಳಿದ ರನ್‌ಗಳು ಸೋಫಿ ಅವರ ಬ್ಯಾಟ್ನಿಂದ ಸಿಡಿದವು. ಒಂದು ತುದಿಯಿಂದ ಬಿರುಸಿನ ಆಟವಾಡಿದ ಸೋಫಿ 42 ಎಸೆತಗಳಲ್ಲಿ 95 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿದ್ದವು.
ಹ್ಯಾಟ್ರಿಕ್ ಪಡೆದ ನಂದಿನಿ
ಇವರಲ್ಲದೆ, ನಾಯಕಿ ಆಶ್ಲೀ ಗಾರ್ಡ್ನರ್ ಕೂಡ 26 ಎಸೆತಗಳಲ್ಲಿ 49 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದಿಂದಾಗಿ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 209 ರನ್ ಗಳಿಸಿತು. ಮತ್ತೊಂದೆಡೆ, ನಂದಿನಿ ಶರ್ಮಾ ದೆಹಲಿ ಪರ ಅದ್ಭುತ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ 33 ರನ್‌ಗಳಿಗೆ 5 ವಿಕೆಟ್ ಪಡೆದರು. ಈ ಸಮಯದಲ್ಲಿ, ನಂದಿನಿ ಶರ್ಮಾ ಕೂಡ ಹ್ಯಾಟ್ರಿಕ್ ಪಡೆದರು. ಗುಜರಾತ್ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ನಂದಿನಿ ಶರ್ಮಾ ಒಟ್ಟು 4 ವಿಕೆಟ್ ಪಡೆದರು. ಉಳಿದಂತೆ ಚಿನೆಲ್ಲೆ ಹೆನ್ರಿ ಮತ್ತು ಶ್ರೀ ಚಾರ್ನಿ ತಲಾ 2 ವಿಕೆಟ್ ಪಡೆದರೆ, ಶಫಾಲಿ ವರ್ಮಾ ಕೂಡ 1 ವಿಕೆಟ್ ಪಡೆದರು.
ಕೊನೆಯ ಓವರ್‌ನಲ್ಲಿ ಸೋತ ಡೆಲ್ಲಿ
ಈ ಗುರಿ ಬೆನ್ನಟ್ಟಿದ ದೆಹಲಿ ಕೂಡ ಅದ್ಭುತ ಆರಂಭ ಕಂಡಿತು. ಆರಂಭಿಕ ಆಟಗಾರ್ತಿ ಲಿಜೆಲ್ ಲೀ 54 ಎಸೆತಗಳಲ್ಲಿ 86 ರನ್ ಕಲೆಹಾಕಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಲಾರಾ ವೂಲ್ವಾರ್ಡ್ಟ್ 54 ಎಸೆತಗಳಲ್ಲಿ 86 ರನ್ ಗಳಿಸಿದರಾದರೂ ತಂಡವನ್ನು ಗೆಲ್ಲಿಸುವಲ್ಲಿ ಎಡವಿದರು. ಕೊನೆಯವರೆಗೂ ಹೋರಾಟ ನೀಡಿದ ಲಾರಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹೀಗಾಗಿ ಡೆಲ್ಲಿ ಗೆಲುವಿಗೆ ಅಂತಿಮ ಓವರ್‌ನಲ್ಲಿ ಕೇವಲ 7 ರನ್‌ಗಳ ಅಗತ್ಯವಿತ್ತು. ಆದಾಗ್ಯೂ, ಸೋಫಿ ಡಿವೈನ್ ಆ ಓವರ್‌ನಲ್ಲಿ ಕೇವಲ 2 ರನ್‌ಗಳನ್ನು ಬಿಟ್ಟುಕೊಟ್ಟು 2 ವಿಕೆಟ್‌ಗಳನ್ನು ಪಡೆದು ಗುಜರಾತ್‌ಗೆ ರೋಮಾಂಚಕ ಗೆಲುವು ತಂದುಕೊಟ್ಟರು. ಅಂತಿಮವಾಗಿ ದೆಹಲಿ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 205 ರನ್ ಗಳಿಸಿ 4 ರನ್‌ಗಳಿಂದ ಸೋತಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:22 pm, Sun, 11 January 26
