- Kannada News Photo gallery Cricket photos Rishabh Pant Cracks Top 10 ICC Test Batsmen Rankings: virat Kohli and shubman Gill Slip
ICC Rankings: ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಟಾಪ್ 10 ರೊಳಗೆ ಇಬ್ಬರು ಭಾರತೀಯರು
ICC Rankings: ಐಸಿಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ರಿಷಬ್ ಪಂತ್ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರ ಪ್ರದರ್ಶನ ಅಷ್ಟೊಂದು ಅದ್ಭುತವಾಗಿರದಿದ್ದರೂ, ಸಿಡ್ನಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅವರ 61 ರನ್‌ಗಳ ಇನ್ನಿಂಗ್ಸ್ ಈ ಯಶಸ್ಸಿಗೆ ಕಾರಣ. ಭಾರತದ ಜೈಸ್ವಾಲ್ ಕೂಡ ಟಾಪ್ 10ರಲ್ಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಶುಭ್‌ಮನ್ ಗಿಲ್ ಅವರ ಶ್ರೇಯಾಂಕ ಕುಸಿದಿದೆ.
Updated on: Jan 08, 2025 | 3:02 PM

ಐಸಿಸಿ ಇಂದು ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅಗ್ರ 10 ಬ್ಯಾಟ್ಸ್‌ಮನ್‌ಗಳಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ರ 10 ಬ್ಯಾಟ್ಸ್‌ಮನ್‌ಗಳ ಪೈಕಿ ಸ್ಥಾನ ಪಡೆದಿರುವ ಏಕೈಕ ವಿಕೆಟ್‌ಕೀಪರ್ ರಿಷಬ್ ಪಂತ್ ಎಬುದು ಇಲ್ಲಿ ವಿಶೇಷ.

ಆಸ್ಟ್ರೇಲಿಯಾ ವಿರುದ್ಧದ ಇಡೀ ಸರಣಿಯಲ್ಲಿ ರಿಷಬ್ ಪಂತ್ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ, ಸಿಕ್ಕ ಉತ್ತಮ ಆರಂಭವನ್ನು ಬಿಗ್ ಇನ್ನಿಂಗ್ಸ್ ಆಗಿ ಬದಲಿಸುವಲ್ಲಿ ವಿಫಲರಾದರು. ಅದರಲ್ಲೂ ಪಂತ್ ಬೇಡದ ಶಾಟ್ ಆಡುವ ಯತ್ನದಲ್ಲಿ ವಿಕೆಟ್ ಕೈಚೆಲ್ಲಿದ್ದು, ಆಡಳಿತ ಮಂಡಳಿ ಹಾಗೂ ಮಾಜಿ ಆಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು.

ಆದಾಗ್ಯೂ ಸಿಡ್ನಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಪಂತ್, ಕೇವಲ 33 ಎಸೆತಗಳಲ್ಲಿ 61 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಂಡದ ಪರ ಕೊಂಚ ಹೋರಾಟದ ಇನ್ನಿಂಗ್ಸ್ ಆಡಿದರು. ಇದಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿಯೂ ಅವರು 40 ರನ್ ಗಳಿಸಿದ್ದು. ಹೀಗಾಗಿ ಈಗ ಇದರ ಲಾಭ ಪಡೆದಿರುವ ಪಂತ್, ಐಸಿಸಿ ರ್ಯಾಂಕಿಂಗ್ನಲ್ಲಿ ಮೂರು ಸ್ಥಾನ ಮೇಲೇರಿ 739 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ ಐಸಿಸಿ ಬಿಡುಗಡೆ ಮಾಡಿರುವ ಈ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಜೋ ರೂಟ್ 895 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದರೆ, ಇಂಗ್ಲೆಂಡ್‌ನ ಮತ್ತೊಬ್ಬ ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರಿ ಬ್ರೂಕ್ 876 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 867 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಭಾರತದ ಯಶಸ್ವಿ ಜೈಸ್ವಾಲ್ ಅವರು 847 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಟಾಪ್ 10 ರೊಳಗೆ ಕಾಣಿಸಿಕೊಂಡಿರುವ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ರಿಷಬ್ ಪಂತ್ ಹಾಗೂ ಜೈಸ್ವಾಲ್ರನ್ನು ಬಿಟ್ಟರೆ ಭಾರತದ ಇನ್ನ್ಯಾವ ಆಟಗಾರನಿಗೂ ಟಾಪ್ 10 ರೊಳಗೆ ಸ್ಥಾನ ಸಿಕ್ಕಿಲ್ಲ.

ಇಡೀ ಸರಣಿಯಲ್ಲಿ ಏಕೈಕ ಶತಕವನ್ನು ಸಿಡಿಸಿದನ್ನು ಬಿಟ್ಟರೆ, ಉಳಿದಂತೆ ಒಂದಂಕಿ ದಾಟುವುದಕ್ಕೂ ಕಷ್ಟಪಟ್ಟಿದ್ದ ವಿರಾಟ್ ಕೊಹ್ಲಿ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಕುಸಿತ ಕಂಡಿದ್ದು, ಮೂರು ಸ್ಥಾನ ಕಳೆದುಕೊಳ್ಳುವುದರೊಂದಿಗೆ 27ನೇ ಸ್ಥಾನಕ್ಕೆ ಜಾರಿದ್ದರೆ, ಇತ್ತ ಶುಭ್‌ಮನ್ ಗಿಲ್ ಕೂಡ 3 ಸ್ಥಾನ ಕಳೆದುಕೊಂಡು 23ನೇ ಸ್ಥಾನದಲ್ಲಿದ್ದಾರೆ.



















