ಬೆಂಗಳೂರು: ಕರ್ನಾಟಕ ಸರ್ಕಾರದ 2022-23ನೇ ಸಾಲಿನ ಅಯವ್ಯಯವನ್ನು (Karnataka Budget 2022) ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಮಾರ್ಚ್ 4ರಂದು ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನವು ಮೂರು ವಾರಗಳ ಕಾಲ ನಡೆಯಲಿದೆ. ಇದು ಮುಖ್ಯಮಂತ್ರಿ ಬೊಮ್ಮಾಯಿ ಅವರ ಚೊಚ್ಚಿಲ ಬಜೆಟ್. ನಗರದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯು ಬಜೆಟ್ ಮಂಡನೆಗೆ ಅನುಮೋದನೆ ನೀಡಿತು. ಆದರೆ ಈವರೆಗೆ ಬಜೆಟ್ ದಿನಾಂಕದ ಬಗ್ಗೆ ಮುಖ್ಯಮಂತ್ರಿ ಅಧಿಕೃತ ಹೇಳಿಕೆ ನೀಡಿಲ್ಲ. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಎಲ್ಲ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಬಜೆಟ್ ಮೀಟಿಂಗ್ ಕರೆದಿದ್ದೇನೆ. ಇನ್ನೂ ಪ್ರಮುಖ ಸಂಘ ಸಂಸ್ಥೆಗಳ ಜೊತೆ ಚರ್ಚೆ ಮಾಡಬೇಕು. ಅನಂತರವೇ ಬಜೆಟ್ ಮಂಡನೆ ಕುರಿತು ನಿರ್ಧಾರ ಮಾಡಲಾಗುವುದು ಎಂದರು. ಬಜೆಟ್ ದಿನಾಂಕದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇಂದು ಮಧ್ಯಾಹ್ನ 12.30ಕ್ಕೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ದಿನಾಂಕವನ್ನು ಸಚಿವರು ಒಪ್ಪಿಕೊಂಡರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ದಿನಗಳಿಂದ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕೊವಿಡ್ ಪಿಡುಗಿನ ಹಿಡಿತಕ್ಕೆ ಸಿಲುಕಿದ್ದ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿಲ್ಲ. ಕರ್ನಾಟಕ ಸರ್ಕಾರದ ಖಜಾನೆಯು ನಿರೀಕ್ಷಿತ ಪ್ರಮಾಣದಲ್ಲಿ ತುಂಬಿಲ್ಲ ಎಂಬ ಮಾತುಗಳು ಅಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿದೆ. ಏರಿದ ಹಣದುಬ್ಬರ ಮತ್ತು ಬೆಲೆಏರಿಕೆಯಿಂದ ಕಂಗಾಲಾಗಿರುವ ಜನರು ಸಹ ಬಜೆಟ್ ಮೇಲೆ ನಿರೀಕ್ಷೆಗಳನ್ನು ಬೆಳೆಸಿಕೊಂಡಿದ್ದಾರೆ. ಎಂದಿನಂತೆ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ವಲಯಗಳಿಗೆ ಹೆಚ್ಚಿನ ಮಹತ್ವ ಸಿಗಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಬಜೆಟ್ ಪ್ರಕ್ರಿಯೆ ಶುರುವಾಗಿದ್ದು ಇಲಾಖಾವಾರು ಸಭೆ ನಡೆಸಿದ್ದೇನೆ. ಫೆಬ್ರವರಿ 25ರ ನಂತರ ಎಲ್ಲಾ ಇಲಾಖೆಗಳ ಬೇಡಿಕೆ ಗಮನಿಸಿ ಬಜೆಟ್ ಸಿದ್ಧಪಡಿಸಲಾಗುವುದು. ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆ ಗಮನಿಸಿ ಬಜೆಟ್ ಸಿದ್ಧಪಡಿಸುತ್ತೇನೆ. ಬಜೆಟ್ನಲ್ಲಿ ರೂಪಿಸುವ ಯೋಜನೆಗಳು ಹೇಗಿರುತ್ತೆ ಎಂದು ಮೊದಲೇ ಹೇಳಲು ಆಗುವುದಿಲ್ಲ ಎಂದು ಬೊಮ್ಮಾಯಿ ಈ ಮೊದಲು ಹೇಳಿದ್ದರು.
ಬಜೆಟ್ಗೆ ಪೂರ್ವಭಾವಿಯಾಗಿ ಫೆ.25ರವರೆಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ವಿವಿಧ ವರ್ಗಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲು ನಿರ್ಧರಿಸಿರುವುದಾಗಿ ಬೊಮ್ಮಾಯಿ ಹೇಳಿದ್ದಾರೆ. ಈಗಾಗಲೇ ಕಂದಾಯ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಲೋಕೋಪಯೋಗಿ ಇಲಾಖೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು.
ಕಂದಾಯ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ತಮ್ಮ ಪ್ರಸ್ತಾವ ಸಲ್ಲಿಸಿದರು. ಕಳೆದ ಬಜೆಟ್ನಲ್ಲಿ ಮೀಸಲಿಟ್ಟ ಅನುದಾನದ ಬಳಕೆ ವಿವರ ಹಾಗೂ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ವಿವರಣೆ ನೀಡಿದರು. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯಿಂದ ಬಜೆಟ್ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರ್ನಾಟಕದಲ್ಲಿ 60ರಿಂದ 100 ವರ್ಷದ ದಾಖಲೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಅವನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಡಿಜಿಟಲ್ ರೂಪದ ದಾಖಲಾತಿಗೆ ವ್ಯವಸ್ಥೆ ಮಾಡಬೇಕು. ಎಲ್ಲ ಕಡೆ ಡ್ರೋಣ್ ಸಮೀಕ್ಷೆ ಮಾಡಬೇಕು. ಹೊಸ ತಾಲೂಕುಗಳಲ್ಲಿ ಆಡಳಿತ ಸೌಧ ನಿರ್ಮಿಸಬೇಕು. ಮನೆ ಬಾಗಿಲಿಗೆ ಪಿಂಚಣಿ ಕೊಡುವ ವ್ಯವಸ್ಥೆ ತರಬೇಕು. ಇಲಾಖೆಗೆ 1 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ನಾವು ಕೋರಿರುವ ಅನುದಾನದಲ್ಲಿ ಕೊವಿಡ್ ಪರಿಹಾರದ ಮೊತ್ತವೂ ಸೇರಿದೆ. ಈ ಹಿಂದೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎನ್ಡಿಆರ್ಎಫ್ ನಿಯಮಕ್ಕಿಂತಲೂ ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಹೆಕ್ಟೇರ್ಗೆ ₹ 6 ಸಾವಿರ ರೂಪಾಯಿಯಂತೆ ಒಟ್ಟು ₹ 1135 ಕೋಟಿ ಮೊತ್ತವನ್ನು ಇಂದು ಮತ್ತು ನಾಳೆ ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು; ಆಗ ಸಮಸ್ಯೆ ಬಗೆಹರಿಸಲು ಸಾಧ್ಯ: ಬಸವರಾಜ ಬೊಮ್ಮಾಯಿ