Budget 2023: ಕೇಂದ್ರ ಬಜೆಟನ್ನು ಹಾಡಿಹೊಗಳಿದ ಕಿರಣ್ ಮಜುಂದಾರ್ ಶಾ; ಕಾರಣ ಇಲ್ಲಿದೆ

|

Updated on: Feb 03, 2023 | 11:19 AM

ನೇರ ತೆರಿಗೆ ನಿಯಮದ ಪರಿಷ್ಕರಣೆಯಿಂದ ಜನರ ವ್ಯಯಿಸುವ ಸಾಮರ್ಥ್ಯ ಹೆಚ್ಚಾಗಲಿದೆ. ಔಷಧ, ಆರೋಗ್ಯ ಕ್ಷೇತ್ರಕ್ಕೆ ಈ ಬಾರಿ ಘೋಷಿಸಿರುವ ಅನುದಾನ ಸರಿಯಾದ ದಿಕ್ಕಿನಲ್ಲಿದೆ ಎಂದು ಮಜುಂದಾರ್ ಶಾ ಹೇಳಿದ್ದಾರೆ.

Budget 2023: ಕೇಂದ್ರ ಬಜೆಟನ್ನು ಹಾಡಿಹೊಗಳಿದ ಕಿರಣ್ ಮಜುಂದಾರ್ ಶಾ; ಕಾರಣ ಇಲ್ಲಿದೆ
ಕಿರಣ್ ಮಜುಂದಾರ್ ಶಾ
Follow us on

ಬೆಂಗಳೂರು: ಕೇಂದ್ರ ಬಜೆಟ್​ ಬಗ್ಗೆ ಬಯೋಕಾನ್ (Biocon Limited) ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (Kiran Mazumdar-Shaw) ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಎಲ್ಲರನ್ನೂ ಒಳಗೊಳ್ಳುವ, ಅಭಿವೃದ್ಧಿ ಆಧಾರಿತ ಬಜೆಟ್ ಎಂದು ಬಣ್ಣಿಸಿದ್ದಾರೆ. ಔಷಧ ಕ್ಷೇತ್ರದಲ್ಲಿನ ಆವಿಷ್ಕಾರ ಮತ್ತು ಸಂಶೋಧನೆಗಾಗಿ ಹೊಸ ಯೋಜನೆಯನ್ನು ಘೋಷಿಸಿದ್ದು ಉತ್ತಮ ಬೆಳವಣಿಗೆ. ಆಯ್ದ ಐಸಿಎಂಆರ್​ಗಳನ್ನು ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸಿಬ್ಬಂದಿಯ ಸಂಶೋಧನೆಗೆ ಮುಕ್ತಗೊಳಿಸುವುದು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ಬಜೆಟ್​​ನಲ್ಲಿ ಗಮನಹರಿಸಿರುವುದರೊಂದಿಗೆ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇರಿಸಿದಂತಾಗಿದೆ. ಇದರಿಂದ ಜೈವಿಕ ಅನ್ವೇಷಣೆ, ಔಷಧ ಉತ್ಪಾದನೆಯ ಹಬ್ ಆಗಿ ಭಾರತ ಹೊರಹೊಮ್ಮಲಿದೆ ಎಂದು ಅವರು ಹೇಳಿದ್ದಾರೆ.

ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ, ಆರ್ಥಿಕ ಸುಧಾರಣೆ ಈ ಏಳು ಅಂಶಗಳ ಆಧಾರದಲ್ಲಿ ಕೇಂದ್ರ ಬಜೆಟ್​ ಸಿದ್ಧಪಡಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇದನ್ನು ಸ್ವಾಗತಿಸಿರುವ ಮಜುಂದಾರ್ ಶಾ, ಇದರಿಂದ ಎಲ್ಲ ಭಾರತೀಯರಿಗೆ ಆರೋಗ್ಯ, ಶಿಕ್ಷಣ, ಶುದ್ಧ ವಾತಾವರಣ ಲಭಿಸಲಿದ್ದು, ಸುಸ್ಥಿರ ಜೀವನ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ನೇರ ತೆರಿಗೆ ನಿಯಮದ ಪರಿಷ್ಕರಣೆಯಿಂದ ಜನರ ವ್ಯಯಿಸುವ ಸಾಮರ್ಥ್ಯ ಹೆಚ್ಚಾಗಲಿದೆ. ಔಷಧ, ಆರೋಗ್ಯ ಕ್ಷೇತ್ರಕ್ಕೆ ಈ ಬಾರಿ ಘೋಷಿಸಿರುವ ಅನುದಾನ ಸರಿಯಾದ ದಿಕ್ಕಿನಲ್ಲಿದೆ ಎಂದು ಮಜುಂದಾರ್ ಶಾ ಹೇಳಿದ್ದಾರೆ.

ಇದನ್ನೂ ಓದಿ: Budget 2023: ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ, ತೆರಿಗೆ ವಿನಾಯಿತಿ ಮಿತಿ ಬಗ್ಗೆ ಜನ ಹೇಳುವುದೇನು? ಇಲ್ಲಿದೆ ನೋಡಿ

ಭಾರತವು ಜಾಗತಿಕ ನಾಯಕತ್ವ ವಹಿಸುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಲಾ ಅವರು ಬಜೆಟ್ ಮಂಡಿಸಿದ್ದಾರೆ ಎಂದು ಮಜುಂದಾರ್ ಶಾ ಬಣ್ಣಿಸಿದ್ದಾರೆ. ಡಿಜಿಟಲ್ ರೂಪಾಂತರ, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು, ಹಸಿರು ಆರ್ಥಿಕತೆ ಮೂಲಕ ಹವಾಮಾನದ ಬಗ್ಗೆ ಗಮನಹರಿಸಿರುವುದು, ಇಂಧನ ರೂಪಾಂತರ ಮತ್ತು ಉದ್ಯಮಕ್ಕೆ ಪೂರಕ ವಾತಾವರಣ ನಿರ್ಮಿಸಲು ಬಜೆಟ್​ನಲ್ಲಿ ಒತ್ತು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 1ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದ ನಿರ್ಮಲಾ ಸೀತಾರಾಮನ್, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು (ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ) 7 ಲಕ್ಷ ರೂ.ಗೆ ವಿಸ್ತರಣೆ ಮಾಡುವುದರ ಜತೆಗೆ ಮಧ್ಯಮವರ್ಗದ ಜನತೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಕ್ರಮಗಳನ್ನು ಪ್ರಕಟಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:18 am, Fri, 3 February 23