Budget 2023: ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ, ತೆರಿಗೆ ವಿನಾಯಿತಿ ಮಿತಿ ಬಗ್ಗೆ ಜನ ಹೇಳುವುದೇನು? ಇಲ್ಲಿದೆ ನೋಡಿ

ಕೋವಿಡ್​ ಸಾಂಕ್ರಾಮಿಕದ ಹೊಡೆತದಿಂದ ದೇಶ ಚೇತರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಇನ್ನಷ್ಟು ಕೊಡುಗೆಗಳನ್ನು ನೀಡಬೇಕಿತ್ತು ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಶೇ 50ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

Budget 2023: ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ, ತೆರಿಗೆ ವಿನಾಯಿತಿ ಮಿತಿ ಬಗ್ಗೆ ಜನ ಹೇಳುವುದೇನು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Feb 03, 2023 | 12:07 PM

ನವದೆಹಲಿ: ಕೇಂದ್ರ ಬಜೆಟ್​​​ನಲ್ಲಿ (Budget 2023) ಆರೋಗ್ಯ (Healthcare) ಕ್ಷೇತ್ರಕ್ಕೆ ನೀಡಿರುವ ಅನುದಾನ, ತೆರಿಗೆ ವಿನಾಯಿತಿ ಮಿತಿ (Tax Exemption) ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸಿರುವುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಕೋವಿಡ್​ ಸಾಂಕ್ರಾಮಿಕದ ಹೊಡೆತದಿಂದ ದೇಶ ಚೇತರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಇನ್ನಷ್ಟು ಕೊಡುಗೆಗಳನ್ನು ನೀಡಬೇಕಿತ್ತು ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಶೇ 50ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ. ತೆರಿಗೆ ವಿನಾಯಿತಿ ಬಗ್ಗೆ ಶೇ 39ರಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದು ‘ಲೋಕಲ್​ಸರ್ಕಲ್ಸ್’ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವುದಕ್ಕಾಗಿ ಮತ್ತು ಉದ್ಯೋಗ ಸೃಷ್ಟಿಗಾಗಿ ಮೂಲಸೌಕರ್ಯ ಯೋಜನೆಗಳಿಗೆ 10 ಲಕ್ಷ ಕೋಟಿ ರೂ. ವೆಚ್ಚ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​​ನಲ್ಲಿ ಘೋಷಿಸಿದ್ದರು. ಇದು ಒಟ್ಟು ಜಿಡಿಪಿಯ ಶೇ 3.3ರಷ್ಟಾಗಲಿದೆ. 2023-24ನೇ ಸಾಲಿಗೆ ವಿತ್ತೀಯ ಕೊರತೆಯನ್ನು ಶೇ 5.9ಕ್ಕೆ ತಗ್ಗಿಸುವ ಗುರಿಯನ್ನೂ ಅವರು ಬಜೆಟ್​​ನಲ್ಲಿ ಹಾಕಿಕೊಂಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಶೇ 6.4ರಷ್ಟಿದೆ. ಮತ್ತೊಂದೆಡೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ಕಡಿಮೆ ಮಾಡಲಾಗಿದೆ.

ಇದನ್ನೂ ಓದಿ: Income Tax Slabs: ಆದಾಯ ತೆರಿಗೆ ಸ್ಲ್ಯಾಬ್​ ಬದಲಾವಣೆ; ಗೊಂದಲವಿದೆಯಾ? ಇಲ್ಲಿದೆ ಹಳೆದು, ಹೊಸದರ ನಡುವಣ ಪೂರ್ಣ ವ್ಯತ್ಯಾಸ

ಸಮೀಕ್ಷೆಯಲ್ಲಿ ಭಾಗಿಯಾದ ಶೇ 41ರಷ್ಟು ಮಂದಿ ಬಜೆಟ್​ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 28ರಷ್ಟು ಮಂದಿ ಬಜೆಟ್ ಸಾಧಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 49ರಷ್ಟು ಮಂದಿ ಮೂಲಸೌಕರ್ಯ ಕ್ಷೇತ್ರಕ್ಕೆ ಘೋಷಿಸಿರುವ ಅನುದಾನದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಶೇ 33ರಷ್ಟು ಮಂದಿ ಗೃಹ ಬಳಕೆಯ ವೆಚ್ಚಕ್ಕೆ ಪ್ರೋತ್ಸಾಹ ದೊರೆತಿದೆ ಎಂದು ಹೇಳಿದ್ದಾರೆ. ಆದರೆ ಆರೋಗ್ಯ ಕ್ಷೇತ್ರ, ಶಿಕ್ಷಣ ಮತ್ತು ಪರಿಸರಕ್ಕೆ ನೀಡಿರುವ ಕೊಡುಗೆಗಳು ಸಾಲದು ಎಂದು ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟಾಗಿಯೂ ಹೆಚ್ಚಿನವರು ಒಟ್ಟಾರೆಯಾಗಿ ಬಜೆಟ್ ಮೇಲೆ ಭರವಸೆ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 1ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದ ನಿರ್ಮಲಾ ಸೀತಾರಾಮನ್, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು (ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ) 7 ಲಕ್ಷ ರೂ.ಗೆ ವಿಸ್ತರಣೆ ಮಾಡಿದ್ದರು. ಹೊಸ ತೆರಿಗೆ ಪದ್ಧತಿಯೇ ಡಿಫಾಲ್ಟ್ ತೆರಿಗೆ ಪದ್ಧತಿಯಾಗಿರುತ್ತದೆ ಎಂದೂ ಹೇಳಿದ್ದರು. ಹಳೆ ತೆರಿಗೆ ಪದ್ಧತಿಯಡಿ ತೆರಿಗೆ ಸ್ಲ್ಯಾಬ್​​ಗಳನ್ನು ಬದಲಾವಣೆ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:40 am, Fri, 3 February 23