ನವದೆಹಲಿ, ಜುಲೈ 8: ರೈಲ್ವೆ ಕಂಪನಿಗಳ ಷೇರುಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ರೈಲ್ ವಿಕಾಸ್ ನಿಗಮ್ (ಆರ್ವಿಎನ್ಎಲ್), ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಶನ್ (ಐಆರ್ಎಫ್ಸಿ) ಷೇರುಗಳು ಸೋಮವಾರ ಹೊಸ ಎತ್ತರಕ್ಕೆ ಏರಿವೆ. ಬೇರೆ ರೈಲ್ವೆ ಸ್ಟಾಕ್ಗಳೂ ಬೇಡಿಕೆ ಪಡೆದಿವೆ. ಆರ್ವಿಎನ್ಎಲ್ನ ಷೇರು ಬೆಲೆ ಶೇ. 15 ರಷ್ಟು ಹೆಚ್ಚಾಗಿ 563 ರೂ ತಲುಪಿದೆ. ಐಆರ್ಎಫ್ಸಿ ಷೇರುಬೆಲೆ ಶೇ. 9ರಷ್ಟು ಹೆಚ್ಚಾಗಿ 202 ರೂ ತಲುಪಿದೆ. ಟೆಕ್ಸ್ಮಾಕೋ ರೈಲ್ ಅಂಡ್ ಎಂಜಿನಿಯರಿಂಗ್ ಷೇರು ಬೆಲೆ ಕೂಡ ಗರಿಷ್ಠ ಎತ್ತರಕ್ಕೆ ಹೋಗಿದೆ. ರೈಲ್ಟೆಲ್ ಸಂಸ್ಥೆಯ ಷೇರು ಬೆಲೆ ದಾಖಲೆಯ 559 ರೂ ಮಟ್ಟ ಮುಟ್ಟಿದೆ.
ಇರ್ಕಾನ್ ಇಂಟರ್ನ್ಯಾಷನಲ್ ಅಂಡ್ ಓರಿಯೆಂಟಲ್ ರೈಲ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ (Ircon International and Oriental Rail Infrastructure) ಮತ್ತು ಆರ್ಐಟಿಇಸ್ (RITES) ಸಂಸ್ಥೆಯ ಷೇರು ಬೆಲೆ ಕ್ರಮವಾಗಿ ಶೇ. 6.64 ಮತ್ತು ಶೇ. 4.5ರಷ್ಟು ಹೆಚ್ಚಾಗಿದೆ. ಐಆರ್ಸಿಟಿಸಿ ಷೇರುಬೆಲೆ ಕೂಡ ಇಂದು ಸೋಮವಾರದ ವಹಿವಾಟಿನಲ್ಲಿ ಶೇ. 2ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಆಯುಷ್ಮಾನ್ ಭಾರತ್ ಸ್ಕೀಮ್: ಇನ್ಷೂರೆನ್ಸ್ ಮೊತ್ತ ಹೆಚ್ಚಿಸಲು ಮತ್ತು ಹೆಚ್ಚು ಜನರಿಗೆ ತಲುಪಿಸಲು ಯತ್ನ ಸಾಧ್ಯತೆ
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 50 ಹೊಸ ಅಮೃತ್ ಭಾರತ್ ರೈಲುಗಳ ಉತ್ಪಾದನೆ ಮಾಡುವ ಯೋಜನೆಯನ್ನು ಪ್ರಕಟಿಸಿದ್ದು ಷೇರು ಮಾರುಕಟ್ಟೆಯಲ್ಲಿ ರೈಲ್ವೆ ಸ್ಟಾಕ್ಗಳಿಗೆ ಭಾರೀ ಬೇಡಿಕೆ ಕುದುರಿಸಿದೆ.
ಅಲ್ಲದೇ ಮುಂಬರುವ ಕೇಂದ್ರ ಬಜೆಟ್ನಲ್ಲಿ ರೈಲ್ವೆ ಸೌಕರ್ಯ ವ್ಯವಸ್ಥೆ ಸುಧಾರಿಸಲು ಹೆಚ್ಚು ಗಮನ ಕೊಡಲಾಗುವುದು ಎಂಬ ನಿರೀಕ್ಷೆ ಇದೆ. ರೈಲು ಟ್ರ್ಯಾಕ್ಗಳ ಅಭಿವೃದ್ಧಿ, ಎಲೆಕ್ಟ್ರಿಫಿಕೇಶನ್, ರೋಲಿಂಗ್ ಸ್ಟಾಕ್ ಉತ್ಪಾದನೆ ಇತ್ಯಾದಿ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಬಜೆಟ್ನಲ್ಲಿ ಹೆಚ್ಚು ಹಣ ನಿಯೋಜಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Union Budget 2024: ಜು. 22ಕ್ಕೆ ಸಂಸತ್ ಅಧಿವೇಶ, ಜು.23ಕ್ಕೆ ಬಜೆಟ್ ಮಂಡನೆ: ಸಚಿವ ಕಿರಣ್ ರಿಜಿಜು
ಮೋದಿ 3.0 ಸರ್ಕಾರ ಬಂದ ಬಳಿಕ ಹಲವು ನಿರೀಕ್ಷೆಗಳು ಮುಂದುವರಿದಿವೆ. ರೈಲ್ವೇಸ್ ಮಾತ್ರವಲ್ಲ, ರಕ್ಷಣಾ ವಲಯ, ವಿದ್ಯುತ್ ಉತ್ಪಾದನೆ ವಲಯದತ್ತ ಸರ್ಕಾರದ ಗಮನ ಹೆಚ್ಚಬಹುದು. ಈ ನಿಟ್ಟಿನಲ್ಲಿ ಈ ವಲಯದ ಕಂಪನಿಗಳಿಗೆ ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಕಳೆದ ವರ್ಷವೂ ರೈಲ್ವೆ ಸ್ಟಾಕ್ಗಳು ಸಖತ್ತಾಗಿ ಏರಿದ್ದವು. ಐಆರ್ಎಫ್ಸಿ ಷೇರುಬಲೆ ಶೇ. 505ರಷ್ಟು ಹೆಚ್ಚಿತ್ತು. ಆರ್ವಿಎನ್ಎಲ್, ರೈಲ್ಟೆಲ್ ಷೇರುಗಳು ಶೇ. 300ರಷ್ಟು ಏರಿದ್ದವು. ಇತರ ರೈಲ್ವೆ ಷೇರುಗಳೂ ಕೂಡ ಗಣನೀಯವಾಗಿ ಏರಿಕೆ ಕಂಡಿದ್ದವು. ಈ ಭರ್ಜರಿ ಓಟ ಈ ವರ್ಷವೂ ಮುಂದುವರಿಯುವುದು ಬಹುತೇಕ ಖಚಿತ ಎಂಬಂತಿದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Mon, 8 July 24