ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್‌ನಲ್ಲಿ (Union Budget 2023) ರೈಲ್ವೆ ಇಲಾಖೆಗೆ ಭರ್ಜರಿ ಕೊಡುಗೆ ನೀಡಿದ್ಧಾರೆ. 2.4 ಲಕ್ಷ ಕೋಟಿ ರೂ (2.4 Trillion Rs) ಅನ್ನು ರೈಲ್ವೆಗೆ ನೀಡಲಾಗಿದೆ. ಇದು ರೈಲ್ವೆ ಇಲಾಖೆ ತನ್ನ ಇತಿಹಾಸದಲ್ಲೇ ಸಿಕ್ಕಿದ ಗರಿಷ್ಠ ಮೊತ್ತವಾಗಿದೆ. ಬಜೆಟ್ ಮಂಡನೆ ವೇಳೆ ಈ ವಿಷಯ ತಿಳಿಸಿದ ನಿರ್ಮಲಾ ಸೀತಾರಾಮನ್, 2013-14ರ ಬಜೆಟ್‌ನಲ್ಲಿ ಕೊಡಲಾಗಿದ್ದಕ್ಕಿಂತ 9 ಪಟ್ಟು ಹೆಚ್ಚು ಮೊತ್ತವನ್ನು ಈ ಬಾರಿ ಕೊಡಲಾಗಿದೆ ಎಂದಿದ್ದಾರೆ. ಪ್ರಾದೇಶಿಕ ಸಂಪರ್ಕತೆ (Regional Connectivity) ಮತ್ತು ಸರಕು ಸಾಗಣೆ ವ್ಯವಸ್ಥೆಯನ್ನು (Cargo) ಬಲಗೊಳಿಸಲು ಒತ್ತು ಕೊಡಲಾಗುತ್ತಿದೆ. ರೈಲ್ವೆಗೆ ಸಿಕ್ಕಿರುವ 2.4 ಲಕ್ಷ ರೂ ಹಣದಲ್ಲಿ 75 ಸಾವಿರ ಕೋಟಿ ರೂ ಹಣವನ್ನು ಸರಕು ಸಾಗಣೆ ವ್ಯವಸ್ಥೆ ಸುಧಾರಣೆಗೆ ಕೊಡಲಾಗಿದೆ. ಈ ಕ್ರಮದಿಂದ ರೈಲ್ವೆ ಇಲಾಖೆಗೆ ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ.
ಈ ಬಜೆಟ್‌ನಲ್ಲಿ ವಂದೇ ಭಾರತ್ ರೈಲುಗಳ ಮೇಲೆ ಗಮನ ಕೊಡುವ ಸಾಧ್ಯತೆ ಇದೆ. ಈ ವರ್ಷದ ಆಗಸ್ಟ್ ತಿಂಗಳೊಳಗೆ 75 ವಂದೇ ಭಾರತ್ ರೈಲುಗಳನ್ನು ಹೊರಬಿಡಲು ರೈಲ್ವೆ ಇಲಾಖೆ ಯೋಜಿಸಿದೆ. ಈ ನಿಟ್ಟಿನಲ್ಲಿ ಬಜೆಟ್ನಲ್ಲೂ ಇಲಾಖೆಗೆ ಉತ್ತೇಜನ ಸಿಕ್ಕಿದೆ.
ಇದನ್ನೂ ಓದಿ: Budget 2023: ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 5.93 ಲಕ್ಷ ಕೋಟಿ ರೂ ಘೋಷಣೆ, ಕಳೆದ ವರ್ಷಕ್ಕಿಂತ ಶೇ.13ರಷ್ಟು ಹೆಚ್ಚು
ಇನ್ನು, 200 ವಂದೇ ಭಾರತ್ ಸ್ಲೀಪರ್ ರೈಲುಗಳ ತಯಾರಿಕೆಗೆ ಶೀಘ್ರದಲ್ಲೇ ಟೆಂಡರ್ ನೀಡುವ ಸಾಧ್ಯತೆ ಇದೆ. ಶತಾಬ್ದಿ ಎಕ್ಸ್ಪ್ರೆಸ್ ರೈಲುಗಳ ಜಾಗಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ತರಲಾಗುತ್ತಿದೆ. ಸದ್ಯಕ್ಕೆ ಇರುವ ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೈನುಗಳು ಚೇರ್ ಕಾರ್ನದ್ದಾಗಿವೆ. ಈಗ ಸ್ಲೀಪರ್ ಬೋಗಿಗಳಿರುವ ರೈಲುಗಳು ರಾಜಧಾನಿ ಎಕ್ಸ್ಪ್ರೆಸ್ ರೈಲುಗಳಿಗೆ ಬದಲಿಯಾಗಿ ಬರಲಿವೆ.
ವಂದೇ ಭಾರತ್ ರೈಲು ಯೋಜನೆ ಬಹಳ ಮಹತ್ವದ್ದೆಂದು ಸರ್ಕಾರ ಪರಿಗಣಿಸಿ ಹೆಚ್ಚು ಮುತುವರ್ಜಿ ತೋರುತ್ತಿದೆ. ನಿನ್ನೆ ಪ್ರಕಟವಾದ ಆರ್ಥಿಕ ಸಮೀಕ್ಷೆಯಲ್ಲೂ ವಂದೇ ಭಾರತ್ ರೈಲು ಯೋಜನೆಯನ್ನು ಶ್ಲಾಘಿಸಲಾಗಿದೆ. ಈ ರೈಲುಗಳು ಸಮರ್ಪಕ ಹಳಿಗಳ ಮೇಲೆ ಗಂಟೆಗೆ 160 ಕಿಮೀ ವೇಗದವರೆಗೂ ಓಡಬಲ್ಲುದು. ಈ ರೈಲಿನಲ್ಲಿ ಜಿಪಿಎಸ್ ಆಧಾರಿತ ಪ್ಯಾಸೆಂಜರ್ ಇನ್ಫಾರ್ಮೇಶನ್ ಸಿಸ್ಟಂ ಅಳವಡಿಕೆ ಸೇರಿದಂತೆ ಆಧುನಿಕ ತಂತ್ರಜ್ಞಾನ ಮತ್ತು ಸೌಕರ್ಯಗಳು ಇವೆ.
Published On - 12:14 pm, Wed, 1 February 23