2023-24ನೇ ಸಾಲಿನ ಕೇಂದ್ರ ಬಜೆಟ್​ ಅತ್ಯಂತ ನಿರಾಶಾದಾಯಕ ಬಜೆಟ್​ ಎಂದು ಅಂಕಿ-ಅಂಶದೊಂದಿಗೆ ವಿವರಿಸಿದ ಸಿದ್ಧರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 01, 2023 | 5:35 PM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು(ಫೆ. 1) ಬಜೆಟ್​ ಮಂಡನೆ ಮಾಡಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ ಕಟುವಾಗಿ ಟೀಕಿಸುವದರೊಂದಿಗೆ ಅತ್ಯಂತ ನಿರಾಶಾದಾಯಕ ಬಜೆಟ್‌ ಎಂದು ಹೇಳಿದ್ದಾರೆ.

2023-24ನೇ ಸಾಲಿನ ಕೇಂದ್ರ ಬಜೆಟ್​ ಅತ್ಯಂತ ನಿರಾಶಾದಾಯಕ ಬಜೆಟ್​ ಎಂದು ಅಂಕಿ-ಅಂಶದೊಂದಿಗೆ ವಿವರಿಸಿದ ಸಿದ್ಧರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Image Credit source: zeenews.india.com
Follow us on

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2023-24ನೇ ಸಾಲಿನ ಬಜೆಟ್ (Budget 2023) ಬುಧವಾರ(ಫೆ. 1) ಮಂಡನೆ ಮಾಡಿದ್ದಾರೆ. ಈ ಬಾರಿ ಮಂಡನೆ ಮಾಡಲಾದ ಬಜೆಟ್​ನ ಒಟ್ಟು ವೆಚ್ಚ 45,03,097 ಕೋಟಿ ರೂ. ಸದ್ಯ ಈ ಕುರಿತಾಗಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಅತ್ಯಂತ ನಿರಾಶಾದಾಯಕ ಬಜೆಟ್‌. ಕರ್ನಾಟಕಕ್ಕೆ ಬಜೆಟ್‌ನಲ್ಲಿ ಏನೂ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡುತ್ತೇವೆ ಎಂದಿದ್ದಾರೆ. ಆದ್ರೆ ಯೋಜನೆಗೆ ಇನ್ನೂ ನೋಟಿಫಿಕೇಷನ್ ಸಹ ಆಗಿಲ್ಲ. ನೋಟಿಫಿಕೇಷನ್ ಆಗಿಲ್ಲ ಅಂದ್ರೆ 1 ರೂ. ಖರ್ಚು ಮಾಡಲಾಗಲ್ಲ. ರಾಷ್ಟ್ರೀಯ ಯೋಜನೆ ಮಾಡ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ರು. ಆದ್ರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ ಎಂದು ಕೇಂದ್ರ ಬಜೆಟ್‌ ಬಗ್ಗೆ ಟೀಕೆ ಮಾಡಿದರು.

ಸುಮಾರು 3.5 ಲಕ್ಷ ಕೋಟಿ ಆದಾಯ ಕರ್ನಾಟಕದಿಂದ ಹೋಗುತ್ತೆ. ದೇಶದಲ್ಲಿ ತೆರಿಗೆ ಪಾವತಿಯಲ್ಲಿ ಕರ್ನಾಟಕ ರಾಜ್ಯ 3ನೇ ಸ್ಥಾನದಲ್ಲಿದೆ. ಕರ್ನಾಟಕಕ್ಕೆ ಸೆಸ್‌, ಸರ್‌ ಚಾರ್ಜ್‌ನಲ್ಲಿ ಪಾಲು ಇಲ್ಲ. ಈ ಬಗ್ಗೆ ರಾಜ್ಯ ಪ್ರತಿನಿಧಿಸುವ ಬಿಜೆಪಿ ಸಂಸದರು ಪ್ರಶ್ನೆ ಮಾಡುತ್ತಿಲ್ಲ. ರಾಜ್ಯ ಬಿಜೆಪಿ ಸಂಸದರನ್ನು ಹೇಡಿಗಳು ಎಂದು ಸಿದ್ದರಾಮಯ್ಯ ಟೀಕಿಸಿದರು.

ಇದನ್ನೂ ಓದಿ: Budget 2023: ಈ ಬಾರಿಯ ಬಜೆಟ್ ಗಾತ್ರ ಎಷ್ಟು? ವಿತ್ತೀಯ ಕೊರತೆ, ಖರ್ಚಿನ ವಿವರ ಇಲ್ಲಿದೆ

2023-24ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಸಿದ್ದರಾಮಯ್ಯ ಕಟು ಟೀಕೆ 

45 ಲಕ್ಷದ 3 ಸಾವಿರ 97 ಕೋಟಿ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಸುಮಾರು 6 ಲಕ್ಷ ಕೋಟಿ ಹೆಚ್ಚಳ. 2023-24ನೇ ಸಾಲಿನಲ್ಲಿ 18 ಲಕ್ಷ ಕೋಟಿ ರೂ. ಸಾಲ ಮಾಡಲಿದ್ದಾರೆ. 2022-23 ಸಾಲಿನಲ್ಲಿ 16.61 ಲಕ್ಷ ಕೋಟಿ ಸಾಲ ಮಾಡ್ತೇವೆ ಎಂದಿದ್ದರು. ಆದ್ರೆ 17 ಲಕ್ಷ ಕೋಟಿಗಿಂತ ಹೆಚ್ಚು ಸಾಲ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯ ಬಡ್ಡಿ ಕಟ್ಟಲೇ ಹೋಗುತ್ತೆ. ಇದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಕೊನೆಯ ಬಜೆಟ್‌. ಮುಂದಿನ ವರ್ಷ ಮಂಡಿಸುವ ಬಜೆಟ್‌ ಚುನಾವಣಾ ಬಜೆಟ್‌. ಕಳೆದ 10 ವರ್ಷದಲ್ಲಿ 118 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಡಾ.ಸಿಂಗ್ ಸರ್ಕಾರದಲ್ಲಿ ಕೇವಲ 54 ಲಕ್ಷ 90 ಸಾವಿರ ಕೋಟಿ ರೂ. ಸಾಲ ಮಾತ್ರ ಇತ್ತು. ಆದ್ರೆ ಕಳೆದ 10 ವರ್ಷದಲ್ಲಿ 118 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯ ಬಡ್ಡಿ ಪಾವತಿಸಲೇ ಹೋಗುತ್ತೆ ಎಂದು ಸಿದ್ದರಾಮಯ್ಯ ಕಟು ಟೀಕೆ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ಯಾವುದೇ ಒತ್ತು ನೀಡಿಲ್ಲ

ಕೇಂದ್ರ ಬಜೆಟ್‌ ಕನ್ನಡಿ ಒಳಗಿನ ಗಂಟು. ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ಯಾವುದೇ ಒತ್ತು ನೀಡಿಲ್ಲ. ಕಾರ್ಪೊರೇಟ್‌, ಆದಾಯ ತೆರಿಗೆಯಿಂದ ಶೇ.30ರಷ್ಟು ಆದಾಯ ಬರುತ್ತೆ. ಜನರು ಕಟ್ಟುವ ತೆರಿಗೆಯಿಂದ ಶೇ.34ರಷ್ಟು ಆದಾಯ ಕೇಂದ್ರಕ್ಕೆ ಬರುತ್ತೆ. ಜನರು ಕಟ್ಟುವ ತೆರಿಗೆಯೇ ಹೆಚ್ಚು. ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲ ಮಾಡಲು ತೆರಿಗೆ ಕಡಿತ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Nirmala Sitharaman Pressmeet: 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನಾವು ಸಾಗುತ್ತಿದ್ದೇವೆ: ನಿರ್ಮಲಾ ಸೀತಾರಾಮನ್

ಇದೇನಾ ಅಚ್ಛೇ ದಿನ ಎಂದು ಕೇಂದ್ರ ಸರ್ಕಾರಕ್ಕೆ ಸಿದ್ದು ಪ್ರಶ್ನೆ

ಕೇಂದ್ರ ಸರ್ಕಾರ ರಸಗೊಬ್ಬರ ಸಬ್ಸಿಡಿ ಕಡಿತ ಮಾಡಲಾಗಿದೆ. ರೈತರ ಆದಾಯ ಡಬಲ್‌ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇದು ರೈತರು, ಕೃಷಿ ಕಾರ್ಮಿಕರಿಗೆ ಮಾಡುವ ದ್ರೋಹ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಮನ್ರೇಗಾ ಯೋಜನೆಗೂ ಕೇಂದ್ರಸರ್ಕಾರ ಹೆಚ್ಚಿನ ಅನುದಾನ ನೀಡಿಲ್ಲ. ಬಜೆಟ್‌ನಲ್ಲಿ ಆಹಾರ ಸಬ್ಸಿಡಿಗೆ ನೀಡುವ ಹಣ ಸಹ ಕಡಿತಗೊಳಿಸಲಾಗಿದೆ. ಇದೇನಾ ಅಚ್ಛೇ ದಿನ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:35 pm, Wed, 1 February 23