ಕಾಬೂಲ್: ಭಾರತದ 2023-24ನೇ ಸಾಲಿನ ಬಜೆಟ್ಗೆ (Budget 2023) ಅಫ್ಘಾನಿಸ್ತಾನದ ತಾಲಿಬಾನ್ (Taliban) ನಾಯಕರೂ ಹರ್ಷ ವ್ಯಕ್ತಪಡಿಸಿದ್ದಾರೆ. ಬಜೆಟ್ ಅನ್ನು ಸ್ವಾಗತಿಸಿರುವ ತಾಲಿಬಾನ್ ನಾಯಕರು, ಎರಡೂ ದೇಶಗಳ ನಡುವಣ ಬಾಂಧವ್ಯ ಸುಧಾರಿಸಲು ಮತ್ತು ಅಪನಂಬಿಕೆ ತೊಡೆದು ಹಾಕುವಲ್ಲಿ ಈ ಬಜೆಟ್ ಮುಖ್ಯ ಪಾತ್ರವಹಿಸಲಿದೆ ಎಂದು ಬಣ್ಣಿಸಿದ್ದಾರೆ. ಇದಕ್ಕೆ ಕಾರಣವಿಷ್ಟೇ, ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ 200 ಕೋಟಿ ರೂ. ನೆರವು ನೀಡುವ ಬಗ್ಗೆ ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ. ಅಫ್ಘಾನಿಸ್ತಾನದ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಸಹಾಯದ ಪ್ಯಾಕೇಜ್ ಆಗಿ 200 ಕೋಟಿ ರೂ. ನೀಡುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಅಫ್ಘಾನಿಸ್ತಾನದ ಆಡಳಿತದ ಮೇಲೆ ತಾಲಿಬಾನ್ ಸಂಪೂರ್ಣ ಹಿಡಿತ ಸಾಧಿಸಿದ ಬಳಿಕ ಭಾರತ ನೆರವು ಘೋಷಿಸಿರುವುದು ಇದು ಎರಡನೇ ವರ್ಷವಾಗಿದೆ. ಕಳೆದ ವರ್ಷದ ಬಜೆಟ್ನಲ್ಲಿ ಆರಂಭಿಕ ಪ್ಯಾಕೇಜ್ ಘೋಷಿಸಲಾಗಿತ್ತು.
‘ಅಫ್ಘಾನಿಸ್ತಾನದ ಅಭಿವೃದ್ಧಿಗೆ ಭಾರತದ ಕೊಡುಗೆಯನ್ನು ನಾವು ಸ್ವಾಗತಿಸುತ್ತೇವೆ. ಇದು ಉಭಯ ದೇಶಗಳ ನಡುವಣ ನಂಬಿಕೆ ಮತ್ತು ಬಾಂಧವ್ಯ ವೃದ್ಧಿಗೆ ಕಾರಣವಾಗಲಿದೆ. ಭಾರತವು ಅನುದಾನ ಒದಗಿಸುತ್ತಿರುವ ಅನೇಕ ಯೋಜನೆಗಳು ಅಫ್ಘಾನಿಸ್ತಾನದಲ್ಲಿವೆ. ಭಾರತವು ಈ ಯೋಜನೆಗಳನ್ನು ಮುಂದುವರಿಸಿದರೆ ಎರಡೂ ದೇಶಗಳ ನಡುವಣ ಸಂಬಂಧ ವೃದ್ಧಿಯಾಗುವುದರ ಜತೆಗೆ ಅಪನಂಬಿಕೆಗಳು ಇಲ್ಲವಾಗಲಿವೆ’ ಎಂದು ತಾಲಿಬಾನ್ನ ಸಂವಹನ ವಿಭಾಗದ ಮಾಜಿ ಸದಸ್ಯ ಸುಹೈಲ್ ಶಹೀನ್ ಹೇಳಿದ್ದಾರೆ.
ಇದನ್ನೂ ಓದಿ: Budget 2023: ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ, ತೆರಿಗೆ ವಿನಾಯಿತಿ ಮಿತಿ ಬಗ್ಗೆ ಜನ ಹೇಳುವುದೇನು? ಇಲ್ಲಿದೆ ನೋಡಿ
2021ರಲ್ಲಿ ಅಫ್ಘಾನಿಸ್ತಾನದ ಸಂಪೂರ್ಣ ನಿಯಂತ್ರಣವನ್ನು ತಾಲಿಬಾನ್ ತೆಗೆದುಕೊಂಡ ಮೇಲೆ ಭಾರತ ಅಲ್ಲಿ ನಡೆಸುತ್ತಿದ್ದ ಅಭಿವೃದ್ಧಿ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿದ್ದವು.
ಫೆಬ್ರವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ್ದರು. ಕೇಂದ್ರದ ಎನ್ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಕಳೆದ ಎರಡು ವರ್ಷಗಳಂತೆಯೇ ಈ ವರ್ಷವೂ ಕಾಗದರಹಿತ ಬಜೆಟ್ ಮಂಡನೆ ಮಾಡಲಾಗಿತ್ತು. ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ಹೆಚ್ಚಳ ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿತ್ತು.
Published On - 11:54 am, Fri, 3 February 23