ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಬಂಪರ್: ಏನಿದು ಯೋಜನೆ? ಯಾರಿಗೆಲ್ಲ ಲಾಭ?
ಭದ್ರಾ ಮೇಲ್ದಂಡೆ ಯೋಜನೆಗೆ ಬರೋಬ್ಬರಿ ರೂ. 5,300 ಕೋಟಿ ಅನುದಾನವನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಏನಿದು ಯೋಜನೆ? ಯಾರಿಗೆ ಲಾಭ?
ಬೆಂಗಳುರು: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023) ರಣೋತ್ಸಾಹದಲ್ಲಿ ಇರುವಾಗಲೇ ಪ್ರಧಾನಿ ಮೋದಿ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ರಾಜ್ಯದ ಜನರ ದಾಹ ನೀಗಿಸಲು, ಅನ್ನದಾತರ ಬದುಕು ಹಸನು ಮಾಡಲು ಕೇಂದ್ರ ಸರ್ಕಾರ ಮಹತ್ವದ ಘೊಷಣೆ ಮಾಡಿದೆ. ನೀರಾವರಿ ಉದ್ದೇಶಕ್ಕಾಗಿ ಜಾರಿಗೊಳಿಸಿರುವ ಭದ್ರಾ ಮೇಲ್ದಂಡೆ ಯೋಜನೆಗೆ(upper bhadra irrigation project) ಇಂದಿನ ಕೇಂದ್ರ ಬಜೆಟ್‌ನಲ್ಲಿ (Union Budget 2023-24) 5,300 ಕೋಟಿ ರೂಪಾಯಿ ಮೀಸಲಿಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಏನಿದು ಮೇಲ್ದಂಡೆ ಯೋಜನೆ? ಯಾರಿಗೆ ಲಾಭ? ಎನ್ನುವ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.
ಮಳೆಯಾಧಾರಿತ ಕೃಷಿ ಜಿಲ್ಲೆಗಳಿಗೆ ವರದಾನ
ಈ ಯೋಜನೆಗಾಗಿ ರಾಜ್ಯ ಸರ್ಕಾರ ಕೇಂದ್ರದ ಬಳಿ 23 ಸಾವಿರ ಕೋಟಿ ರೂಪಾಯಿ ಬೇಡಿಕೆ ಇಟ್ಟಿತ್ತು. ಆದರೆ, ಬಜೆಟ್‌ನಲ್ಲಿ 5300 ಕೋಟಿ ರೂಪಾಯಿ ಅನುದಾನ ನೀಡಿರುವುದು ರಾಜ್ಯದ ಜನತೆ ಖುಷಿ ತಂದಿದೆ. ಮಧ್ಯ ಕರ್ನಾಟಕದ ಕುಡಿಯುವ ನೀರು ಹಾಗೂ ನೀರಾವರಿಯ ಉದ್ದೇಶಕ್ಕಾಗಿ ಜಾರಿಗೊಳಿಸಲಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರಿಂದ ಆ ಯೋಜನೆಗೆ ಮತ್ತಷ್ಟು ಬಲ ಬರಲಿದ್ದು, ಚಿತ್ರದುರ್ಗ ಸೇರಿದಂತೆ ಮಧ್ಯ ಕರ್ನಾಟಕದ ಹಲವಾರು ಮಳೆಯಾಧಾರಿತ ಕೃಷಿ ಜಿಲ್ಲೆಗಳಿಗೆ ವರದಾನವಾಗಲಿದೆ. ಇದರಿಂದ ಯೋಜನೆಯನ್ನು ತ್ವರಿತವಾಗಿ ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ, ಭದ್ರಾ ನದಿಯಿಂದ 29.90 ಟಿ.ಎಂ.ಸಿ. ನೀರಿನ ಬಳಕೆ ಮಾಡಲು ಅವಕಾಶವಿದೆ. ಅದಕ್ಕೆ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ (2,25,515 ಹೆಕ್ಟೇರ್) ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಜೊತೆಗೆ, ಜಿಲ್ಲೆಗಳ 367 ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ.
ಎರಡು ಹಂತದ ಯೋಜನೆ
ಭದ್ರಾ ಮೇಲ್ದಂಡೆ ಯೋಜನೆ ಎರಡು ಹಂತದಲ್ಲಿ ನಡೆಯಲಿದ್ದು, ಮೊದಲನೇಯ ಹಂತದಲ್ಲಿ ಮೂರು ಪ್ಯಾಕೇಜ್ ಗಳಲ್ಲಿ ನಡೆಯಲಿದೆ. ಮೊದಲನೇ ಹಂತದ ಮೊದಲ ಪ್ಯಾಕೇಜ್ ತುಂಗಾ ನದಿಯಿಂದ 17.40 ಟಿ.ಎಂ.ಸಿ ನೀರನ್ನು ಲಿಫ್ಟ್ ಮಾಡಲಿದೆ. ಈ ಮೂಲಕ ಭದ್ರಾ ಜಲಾಶಯಕ್ಕೆ ನೀರು ಹರಿಸುತ್ತದೆ. ಸದ್ಯ ಈ ಕಾಮಾಗಾರಿ ಪ್ರಗತಿಯಲ್ಲಿದೆ. ಇನ್ನು ಪ್ಯಾಕೇಜ್ 2ರಲ್ಲಿ ಭದ್ರಾ ಜಲಾಶಯದಿಂದ 29.90 ಟಿ.ಎಂ.ಸಿ. ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಇದನ್ನು ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವ ಕಾಮಗಾರಿಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿದೆ.
ಕೊನೆಯ ಹಾಗೂ ಮೂರನೇ ಪ್ಯಾಕೇಜ್ ನಲ್ಲಿ ಅಜ್ಜ೦ಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವುದು. ಇದು ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಇನ್ನು ಎರಡನೇಯ ಹಂತದಲ್ಲೂ ತರೀಕೆರೆ ಏತ ನೀರಾವರಿ, ಚಿತ್ರದುರ್ಗ ಶಾಖಾ ಕಾಲುವೆ, ತುಮಕೂರು ಶಾಖಾ ಕಾಲುವೆ ಹಾಗೂ ಕೆರೆ ತುಂಬಿಸುವ ಕಾಮಗಾರಿಗಳು ನಡೆಯುತ್ತಿವೆ.
2000ರಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಘೋಷಣೆ
ಇನ್ನು 2000ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಘೋಷಿಸಲಾಯ್ತು. 2003ರಲ್ಲಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. 2008ರಲ್ಲಿ ಯೋಜನೆಗೆ ಚಾಲನೆ ದೊರಕಿತ್ತು. ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳುವುದು ವಿಳಂಬವಾಯಿತು. ಅಲ್ಲದೇ ವೆಚ್ಚ ಹೆಚ್ಚಳ ಸೇರಿದಂತೆ ನಾನಾ ಕಾರಣಗಳಿಂದ ಯೋಜನೆ ಇನ್ನೂ ನಿಧಾನಗತಿಯಲ್ಲಿ ಸಾಗುತ್ತಿದೆ. ಸದ್ಯ ಕೇಂದ್ರದ ನೆರವಿನಿಂದ ಮತ್ತಷ್ಟು ಉತ್ತೇಜನ ದೊರೆತಿದ್ದು, ವೇಗವಾಗಿ ಕಾಮಗಾರಿ ನಡೆಯುವ ನಿರೀಕ್ಷೆ ಇದೆ.
Published On - 10:10 pm, Wed, 1 February 23