
ನವದೆಹಲಿ, ಜುಲೈ 23: ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನವೇ, ಈ ಬಾರಿಯ ಬಜೆಟ್ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪ್ರಸ್ತುತಪಡಿಸುವ ಬಗ್ಗೆ ಕೇಂದ್ರೀಕರಿಸುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಪ್ರಸ್ತುತ ಸರ್ಕಾರದ ಮುಂದೆ ಹಲವು ಸವಾಲುಗಳಿವೆ. ಬಳಕೆ ವೆಚ್ಚದಲ್ಲಿನ ಕೊರತೆಯನ್ನು ಸರಿದೂಗಿಸಲು, ಹೆಚ್ಚಿನ ಸಾಮಾನ್ಯ ಜನರ ಕೈಯಲ್ಲಿ ಹಣಕಾಸು ಹರಿವು ಹೆಚ್ಚಿರುವಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಸರ್ಕಾರಕ್ಕಿದೆ. ಇದಕ್ಕಾಗಿ ಸರ್ಕಾರ ತೆರಿಗೆ ವಿನಾಯಿತಿ ನೀಡಬೇಕಾಗುತ್ತದೆ. ಕಾರ್ಪೊರೇಟ್ ಹೂಡಿಕೆಗೆ ಸ್ಥಿರತೆಯನ್ನು ತರುವುದು ಸರ್ಕಾರಕ್ಕೆ ಮತ್ತೊಂದು ಪ್ರಮುಖ ಸವಾಲಾಗಿದೆ. ಏಕೆಂದರೆ ಹೂಡಿಕೆಯು ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತದೆ. ಪ್ರತಿಯೊಂದು ಕ್ಷೇತ್ರವೂ ಬಜೆಟ್ನಿಂದ ನಿರೀಕ್ಷೆಗಳನ್ನು ಹೊಂದಿದೆ. ಹೀಗಿರುವಾಗ ಇಂದು ವಿತ್ತ ಸಚಿವರು ಏನು ಉಡುಗೊರೆ ನೀಡುತ್ತಾರೋ ಎಂದು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.
ಇದನ್ನೂ ಓದಿ: ಅಭಿವೃದ್ಧಿ ಹಾದಿಯಲ್ಲಿ ಭಾರತಕ್ಕಿರುವ ಸವಾಲು ಯಾರಿಗೂ ಎದುರಾಗಿರಲಿಲ್ಲ: ಸಿಇಎ ಅನಂತನಾಗೇಶ್ವರನ್
ರೈತರು, ಉತ್ಪಾದನಾ ವಲಯಕ್ಕೆ ಸಂಬಂಧಿಸಿದ ಜನರು ಮತ್ತು ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಬಜೆಟ್ನಲ್ಲಿ ತಮಗೆ ಕೊಡುಗೆ ದೊರೆಯಬಹುದು ಎಂದು ಭರವಸೆಯಿಂದ ಕಾಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಸಾಧ್ಯ. ಉಳಿತಾಯಕ್ಕಾಗಿ ಹೊಸ ಕ್ರಮಗಳನ್ನು ಕೈಗೊಳ್ಳಬಹುದು. ಎಂನರೇಗಾ ಯೋಜನೆಗೆ ಅನುದಾನ ಹಂಚಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊತ್ತವನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಮಧ್ಯಮ, ಸಣ್ಣ ಗಾತ್ರದ ಉದ್ದಿಮೆಗಳಿಗೆ ಸಾಲದ ಮಾರ್ಗವನ್ನು ಸುಲಭಗೊಳಿಸಬಹುದು ಎಂಬ ನಿರೀಕ್ಷೆ ಇದೆ. ಮಹಿಳೆಯರೂ ವಿಶೇಷ ಕೊಡುಗೆಯ ನಿರೀಕ್ಷೆಯಲ್ಲಿದ್ದಾರೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅಡಿಯಲ್ಲಿ ನೀಡಲಾಗುತ್ತಿರುವ 5 ಕೆಜಿ ಉಚಿತ ಆಹಾರ ಧಾನ್ಯಗಳ ವಿತರಣೆಯ ಗಡುವನ್ನು 5 ವರ್ಷಗಳವರೆಗೆ ವಿಸ್ತರಣೆ ಮಾಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಣೆ ಮಾಡಿದರು. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50 ಸಾವಿರದಿಂದ 75 ಸಾವಿರಕ್ಕೆ ಸರ್ಕಾರ ಹೆಚ್ಚಿಸಿಸಲಾಗಿದೆ. ಕುಟುಂಬ ಪಿಂಚಣಿ ಮೇಲಿನ ವಿನಾಯಿತಿ ಮಿತಿಯನ್ನು 15 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ. ಈ ಎರಡು ಬದಲಾವಣೆಗಳಿಂದ ನಾಲ್ಕು ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವರು ಹೇಳಿದರು.
ಹೊಸ ವಿಧಾನದಲ್ಲಿ ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ತುಸು ಬದಲಾವಣೆ ಮಾಡಲಾಗಿದೆ. ವಿವರ ಹೀಗಿದೆ;
ಸದ್ಯ ಮೂರನೇ 2 ಭಾಗದಷ್ಟು ಜನರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ತೆರಿಗೆ ವ್ಯವಸ್ಥೆಯ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ವಿವಿಧ ಪಾವತಿಗಳಿಗೆ ಐದು ಪ್ರತಿಶತ ಟಿಡಿಎಸ್ ಬದಲಿಗೆ ಎರಡು ಪ್ರತಿಶತ ಟಿಡಿಎಸ್ ಅನ್ನು ಒದಗಿಸಲಾಗುತ್ತದೆ ಎಂದರು. ಮ್ಯೂಚುವಲ್ ಫಂಡ್ ಅಥವಾ ಯುಟಿಐ ಮರುಖರೀದಿಯಲ್ಲಿ ಟಿಡಿಎಸ್ ಅನ್ನು ಶೇಕಡಾ 20ರಷ್ಟು ಹಿಂಪಡೆಯಲಾಗಿದೆ. ಇ-ಕಾಮರ್ಸ್ ಆಪರೇಟರ್ಗಳಿಗೆ TDS ಅನ್ನು ಶೇಕಡಾ 1 ರಿಂದ 0.1 ಕ್ಕೆ ಇಳಿಸಲಾಗಿದೆ. ಅಲ್ಲದೆ, ಟಿಡಿಎಸ್ ತುಂಬುವಲ್ಲಿ ವಿಳಂಬವನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದರು.
ಮೂರು ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ ಡ್ಯೂಟಿ ತೆರವುಗೊಳಿಸಲಾಗಿದೆ. ಅಂದರೆ ಈ ಮೂರು ಔಷಧಿಗಳು ಅಗ್ಗವಾಗಲಿವೆ. ಎಕ್ಸ್-ರೇ ಟ್ಯೂಬ್ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 6 ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ರಷ್ಟು ಕಡಿಮೆ ಮಾಡಲಾಗುವುದು ಎಂದು ಹಣಕಾಸು ಸಚಿವರು ಬಜೆಟ್ನಲ್ಲಿ ಘೋಷಿಸಿದ್ದಾರೆ.
ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಮೊಬೈಲ್ ಹಾಗೂ ಚಾರ್ಜರ್ಗಳ ಮೇಲಿನ ತೆರಿಗೆ ಇಳಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ.
ಎನ್ಟಿಪಿಸಿ ಮತ್ತು ಬಿಎಚ್ಇಎಲ್ ನಡುವಿನ ಜಂಟಿ ಉದ್ಯಮವು AUSC (ಅಡ್ವಾನ್ಸ್ಡ್ ಅಲ್ಟ್ರಾ ಸೂಪರ್ಕ್ರಿಟಿಕಲ್) ತಂತ್ರಜ್ಞಾನವನ್ನು ಬಳಸಿಕೊಂಡು 100 MW ವಾಣಿಜ್ಯ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಿದೆ. ದೇಶದಲ್ಲಿ ಸಣ್ಣ ರಿಯಾಕ್ಟರ್ಗಳ ಸ್ಥಾಪನೆ, ಸಣ್ಣ ಮಾಡ್ಯುಲರ್ ರಿಯಾಕ್ಟರ್ಗಳ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಪರಮಾಣು ಶಕ್ತಿಗಾಗಿ ಹೊಸ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಭಾರತವು ಖಾಸಗಿ ವಲಯದೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಿದೆ. ಮಹಾಬೋಧಿ ದೇವಾಲಯಕ್ಕೆ ಕಾರಿಡಾರ್ ನಿರ್ಮಾಣವನ್ನು ಘೋಷಿಸಲಾಗಿದೆ. ಗಯಾದ ವಿಷ್ಣುಪಾದ ದೇವಸ್ಥಾನಕ್ಕೆ ಕಾರಿಡಾರ್ ನಿರ್ಮಿಸಲಾಗುವುದು. ಇದು ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ಧಿಯ ಮಾದರಿಯಲ್ಲಿರಲಿದೆ.
ಉಚಿತ ಸೌರ ವಿದ್ಯುತ್ ಯೋಜನೆ ಕುರಿತು ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ’ಯನ್ನು ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುವುದು. ಇದರಿಂದಾಗಿ 1 ಕೋಟಿ ಕುಟುಂಬಗಳು 300 ಯೂನಿಟ್ಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.
ದೇಶದಲ್ಲಿ 12 ಹೊಸ ಇಂಡಸ್ಟ್ರಿಯಲ್ ಪಾರ್ಕ್ಗಳ ನಿರ್ಮಾಣ ಮಾಡಲಾಗುವುದು. ಕೈಗಾರಿಕೆಗಳಲ್ಲಿ ಇಂಟರ್ನಶಿಪ್ ಮಾಡುವವರಿಗೆ 5 ಸಾವಿರ ರೂ. ಸಹಾಯಧನ, ಮುದ್ರಾ ಯೋಜನೆಯ ಸಾಲ ₹10 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸಲು ನಿರ್ಧಾರ, ದೇಶಾದ್ಯಂತ 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಯೋಜನೆ, ಗ್ರಾಮೀಣಾವೃದ್ಧಿ ಪ್ರದೇಶದ ಅಭಿವೃದ್ಧಿಗೆ 2.66 ಲಕ್ಷ ಕೋಟಿ ರೂ. ಅನುದಾನವನ್ನು ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಿಸಿದರು.
ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಯೋಜನೆಗಳಿಗೆ ಸರ್ಕಾರ 3 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ವಿನಿಯೋಗಿಸಿದೆ ಎಂದು ಹಣಕಾಸು ಸಚಿವರು ಹೇಳಿದರು. ಕೈಗಾರಿಕಾ ಕಾರ್ಮಿಕರಿಗೆ ವಸತಿ ನಿಲಯದ ಸೌಲಭ್ಯ ಸಿಗಲಿದೆ. ಆಂಧ್ರಪ್ರದೇಶದ ಮೂರು ಜಿಲ್ಲೆಗಳಿಗೆ ಹಿಂದುಳಿದ ಪ್ರದೇಶಗಳ ಅನುದಾನವನ್ನು ಒದಗಿಸಲಾಗುವುದು ಎಂದೂ ಅವರು ಘೋಷಿಸಿದರು.
ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ ಗುರಿ. ನಗರ, ಗ್ರಾಮಾಂತರ ಪ್ರದೇಶದಲ್ಲಿ 3 ಕೋಟಿ ಮನೆಗಳ ನಿರ್ಮಾಣದ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್
ಮುಂದಿನ ಐದು ವರ್ಷಗಳಲ್ಲಿ ಟಾಪ್ 500 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್ಶಿಪ್ ಅವಕಾಶವನ್ನು ಸರ್ಕಾರ ನೀಡಲಿದೆ. ಈ ಇಂಟರ್ನ್ಶಿಪ್ 12 ತಿಂಗಳವರೆಗೆ ಇರುತ್ತದೆ. ಇದರಲ್ಲಿ ಯುವಕರು ವ್ಯಾಪಾರದ ನೈಜ ವಾತಾವರಣವನ್ನು ತಿಳಿದುಕೊಳ್ಳಲು ಮತ್ತು ವಿವಿಧ ವೃತ್ತಿಗಳ ಸವಾಲುಗಳನ್ನು ಎದುರಿಸಲು ಅವಕಾಶವನ್ನು ಪಡೆಯುತ್ತಾರೆ. ಇದರ ಅಡಿಯಲ್ಲಿ ಯುವಕರಿಗೆ ಪ್ರತಿ ತಿಂಗಳು 5,000 ರೂ. ಅಷ್ಟೇ ಅಲ್ಲ ಅವರಿಗೆ ಒಟ್ಟು 6,000 ರೂಪಾಯಿ ಸಹಾಯಧನ ನೀಡಲಾಗುವುದು.
ಕಂಪೆನಿಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ತರಬೇತಿ ವೆಚ್ಚಗಳನ್ನು ಮತ್ತು ಇಂಟರ್ನ್ಶಿಪ್ ವೆಚ್ಚದ ಶೇಕಡಾ 10 ರಷ್ಟು ಭರಿಸಬೇಕಾಗುತ್ತದೆ.
ಎನ್ಡಿಎ ಮಿತ್ರಪಕ್ಷಗಳ ರಾಜ್ಯಗಳಿಗೆ ವಿಶೇಷ ಅನುದಾನ ಘೋಷಿಸಲಾಗಿದೆ. ಆಂಧ್ರಪ್ರದೇಶ, ಬಿಹಾರ ರಾಜ್ಯಗಳಿಗೆ ಕೇಂದ್ರ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಬಿಹಾರದಲ್ಲಿ ನೂತನ ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು ನಿರ್ಮಾಣ, ಆಂಧ್ರಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೂ ಬಜೆಟ್ನಲ್ಲಿ ಘೋಷಣೆಗಳನ್ನು ಮಾಡಲಾಗಿದೆ.
ವಿಶಾಖಪಟ್ಟಣ ಚೆನ್ನೈ ಕೈಗಾರಿಕಾ ಕಾರಿಡಾರ್, ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡುವುದಾಗಿ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. 26 ಸಾವಿರ ಕೋಟಿ ವೆಚ್ಚದಲ್ಲಿ ರೈಲು ಯೋಜನೆಗಳ ಆರಂಭ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದ ಅವರು, ಆಂಧ್ರಪ್ರದೇಶ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಇಂಧನ, ರೈಲು, ರಸ್ತೆ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುವುದು, ಪೋಲಾವರಂ ಪ್ರಾಜೆಕ್ಟ್ಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡಲಾಗುವುದು ಎಂದರು.
5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳನ್ನು ಒದಗಿಸುವ 5 ಯೋಜನೆಗಳು ಮತ್ತು ಉಪಕ್ರಮಗಳಿಗೆ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅನ್ನು ಘೋಷಿಸಲು ಸಂತೋಷವಾಗಿದೆ. ಈ ವರ್ಷ ನಾವು ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂ. ನೀಡಲಿದ್ದೇವೆ: ನಿರ್ಮಲಾ ಸೀತಾರಾಮನ್
ಎಸ್ಸಿ, ಎಸ್ಟಿ, ಕುಶಲಕರ್ಮಿಗಳಿಗೆ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗುವುದು. ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುವುದು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ
ಸರ್ಕಾರದ ಒಂಬತ್ತು ಆದ್ಯತೆಗಳಲ್ಲಿ ಒಂದು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಾಗಿರುವವರಿಗೆ ದೊಡ್ಡ ಸಹಾಯ ದೊರೆಯಲಿದೆ. ಔಪಚಾರಿಕ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದ ವತಿಯಿಂದ ನೀಡಲಾಗುವುದು. ಈ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಗರಿಷ್ಠ ಮೊತ್ತ 15 ಸಾವಿರ ರೂ. ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟವರು ಈ ಭತ್ಯೆ ಪಡೆಯಲಿದ್ದಾರೆ. ಇದರಿಂದ 2.10 ಕೋಟಿ ಯುವಕರಿಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ತಿಳಿಸಿದರು.
ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಬಜೆಟ್ನಲ್ಲಿ 1.52 ಲಕ್ಷ ಕೋಟಿ ರೂ. ಘೋಷಣೆ ಮಾಡಲಾಗಿದೆ. ಈ ನಿಧಿಯಿಂದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ.
ಮಧ್ಯಂತರ ಬಜೆಟ್ನಲ್ಲಿ ಉಲ್ಲೇಖಿಸಿರುವಂತೆ ನಾವು ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರೈತರಿಗೆ, ನಾವು ಎಲ್ಲಾ ಪ್ರಮುಖ ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದ್ದೇವೆ, ಭರವಸೆಯನ್ನು ಈಡೇರಿಸಿದ್ದೇವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು 5 ವರ್ಷಗಳವರೆಗೆ ಕನಿಷ್ಠ 50% ಮಾರ್ಜಿನ್ ವೆಚ್ಚದಲ್ಲಿ 80 ಕೋಟಿ ಜನರಿಗೆ ಪ್ರಯೋಜನವನ್ನು ನೀಡುತ್ತದೆ.
ಮುಂದಿನ ಒಂದು ವರ್ಷದಲ್ಲಿ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿ ವ್ಯಾಪ್ತಿಗೆ ತರಲಾಗುವುದು ಎಂದು ನಿರ್ಮಲಾ ಘೋಷಣೆ ಮಾಡಿದರು. ಸಾಮಾಜಿಕ ನ್ಯಾಯ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ವಿಕಸಿತ ಭಾರತಕ್ಕಾಗಿ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಸೂಕ್ಷ್ಮ, ಸಣ್ಣ & ಮಧ್ಯಮ ಕೈಗಾರಿಕೆಗಳಿಗೆ ಪೂರಕವಾಗಿದೆ ಈ ಬಜೆಟ್ ಎಂದು ನಿರ್ಮಲಾ ಹೇಳಿದರು.
ಉದ್ಯೋಗ, ಕೌಶಲ್ಯವೃದ್ಧಿ, ಆರ್ಥಿಕತೆ ಬೆಳವಣಿಗೆಗೆ ಪೂರಕ ಬಜೆಟ್ ಇದಾಗಿರಲಿದ್ದು, ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲು ಇಡುತ್ತಿದ್ದೇವೆ: ನಿರ್ಮಲಾ ಘೋಷಣೆ
ಭಾರತದ ಆರ್ಥಿಕತೆ ವೃದ್ಧಿಯಾಗಿದೆ, ಹಣದುಬ್ಬರ ನಿಯಂತ್ರಣದಲ್ಲಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ ಮಾಡುತ್ತೇವೆ: ನಿರ್ಮಲಾ ಸೀತಾರಾಮನ್
ಜನರು ಮೋದಿ ನೇತೃತ್ವದ ಸರ್ಕಾರಕ್ಕೆ ಮೂರನೇ ಬಾರಿ ಆಶೀರ್ವಾದ ಮಾಡಿದ್ದಾರೆ. ನಾವು ಅವರಿಗೆ ಆಭಾರಿಯಾಗಿದ್ದೇವೆ. ಅದೇ ರೀತಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಮೋದಿ ಅವರಿಗೆ ಅಭಿನಂದನೆ: ನಿರ್ಮಲಾ ಸೀತಾರಾಮನ್
ಲೋಕಸಭೆ ಕಲಾಪ ಆರಂಭವಾಗಿದ್ದು, ಕೆಲವೇ ಕ್ಷಣಗಳಲ್ಲಿ ಬಜೆಟ್ ಭಾಷಣ ಆರಂಭವಾಗಲಿದೆ.
ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಭವನಕ್ಕೆ ತೆರಳಿದ ನಿರ್ಮಲಾ ಸೀತಾರಾಮನ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಹಿ ಮೊಸರು ತಿನ್ನಿಸಿ ಶುಭ ಹಾರೈಸಿದ್ದಾರೆ.
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡಲು ಕೆಲವೇ ಕ್ಷಣಗಳಿದ್ದು, ಅದಕ್ಕೂ ಮುನ್ನ ಪ್ರಧಾನಿ ಮೋದಿ ಸಂಸತ್ಗೆ ಆಗಮಿಸಿದರು.
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ, ಪ್ರಮುಖ ಮುಖ್ಯಾಂಶಗಳು ಸೇರಿದಂತೆ 2024 ರ ಬಜೆಟ್ ಸಂಬಂಧಿತ ಎಲ್ಲಾ ಮಾಹಿತಿಯುಳ್ಳ ಪಿಡಿಎಫ್ ಪ್ರತಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಕೆಲವೇ ಹೊತ್ತಿನಲ್ಲಿ ಬಜೆಟ್ ಮಂಡಿಸುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ನೇತ್ವತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಜೆಟ್ಗೆ ಅನುಮೋದನೆ ಪಡೆದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದು, ಸಂಸತ್ತಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿದರು.
ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ತಂಡದೊಂದಿಗೆ ಬಜೆಟ್ ಟ್ಯಾಬ್ಲೆಟ್ ಇರುವ ಬ್ಯಾಗ್ ಹೊತ್ತು ಸಂಸತ್ತಿಗೆ ಆಗಮಿಸಿದರು.
ಹಣಕಾಸು ಸಚಿವಾಲಯದ ಸಿಬ್ಬಂದಿ ಬಜೆಟ್ ಪ್ರತಿಗಳ ಬ್ಯಾಗ್ಗಳನ್ನು ಸಂಸತ್ ಭವನಕ್ಕೆ ತಂದರು. 11 ಗಂಟೆಗೆ ಬಜೆಟ್ ಭಾಷಣ ಆರಂಭವಾಗಲಿದೆ.
ರಾಷ್ಟ್ರಪತಿ ಭವನಕ್ಕೆ ತೆರಳಿದ ನಿರ್ಮಲಾ ಸೀತಾರಾಮನ್ ಬಜೆಟ್ ದಾಖಲೆಗಳನ್ನು ಪ್ರದರ್ಶಿಸಿದರು.
ಬಜೆಟ್ ಮೇಲಿನ ನಿರೀಕ್ಷೆಯೊಂದಿಗೆ ಮುಂಬೈ ಷೇರುಪೇಡೆ ಸೂಚ್ಯಂಕ ಸೆನ್ಸೆಕ್ಸ್ ಮೇಲ್ಮುಖವಾಗಿ ವಹಿವಾಟು ಆರಂಭಿಸಿದೆ. ಸೆನ್ಸೆಕ್ಸ್ 229.89 ಪಾಯಿಂಟ್ ಗಳ ಏರಿಕೆ ಕಂಡು 80,731.97 ಟ್ರೆಂಡಿಂಗ್ ಆರಂಭಿಸಿದೆ.
ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾರೆ.
ಬಜೆಟ್ ಜತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಅಧಿಕಾರಿಗಳ ಫೋಟೊ ಅಪ್ ನಡೆಯಿತು.

ದಕ್ಷಿಣ ಭಾರತದಲ್ಲೇ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ನೀಡಿರುವ ಕರ್ನಾಟಕ, ಮೋದಿ 3ನೇ ಅವಧಿಯ ಮೊದಲ ಬಜೆಟ್ನತ್ತ ಆಸೆಗಣ್ಣಿನಿಂದ ನೋಡುತ್ತಿದೆ. ಹಾಗಾದರೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕೇಂದ್ರದ ಬಜೆಟ್ನಲ್ಲಿ ಕರ್ನಾಟಕಕ್ಕೆ ಇರುವ ನಿರೀಕ್ಷೆಗಳೇನು? ಇಲ್ಲಿದೆ ವಿವರ.
ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವಾಲಯವನ್ನು ತಲುಪಿದ್ದಾರೆ. ಅವರು 11 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ.
ನಿರ್ಮಲಾ ಸೀತಾರಾಮನ್ ಮೊದಲು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲಿದ್ದಾರೆ. ಅವರು ಬೆಳಿಗ್ಗೆ 10 ರಿಂದ 10.30 ರ ನಡುವೆ ಸಂಸತ್ತನ್ನು ತಲುಪಲಿದ್ದಾರೆ ಮತ್ತು ಸಂಪುಟದಿಂದ ಬಜೆಟ್ಗೆ ಅನುಮೋದನೆ ಪಡೆಯಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಹಣಕಾಸು ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಅವರ ಭಾಷಣ ಸುಮಾರು 45 ನಿಮಿಷದಿಂದ 1 ಗಂಟೆ ಇರಬಹುದು ಎಂದು ಅಂದಾಜಿಸಲಾಗಿದೆ.
Published On - 9:12 am, Tue, 23 July 24