ಮಹಿಳೆಯರಿಗೆ ಉತ್ಸಾಹ ಹೆಚ್ಚಿಸಿದ ಕೇಂದ್ರ ಯೋಜನೆಗಳು; 2025ರ ಬಜೆಟ್​ನಲ್ಲಿ ಮತ್ತಷ್ಟು ಪುಷ್ಟಿ ಸಾಧ್ಯತೆ

|

Updated on: Jan 19, 2025 | 3:36 PM

Union Budget 2025 and Women: 2025ರ ಫೆಬ್ರುವರಿ 1ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್​ನಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಸಿಗಬಹುದು. ಹಿಂದಿನ ಕೆಲ ಬಜೆಟ್​ಗಳಲ್ಲಿ ಮಹಿಳಾ ಮುಖಿ ಯೋಜನೆಗಳಿಗೆ ಒತ್ತು ಕೊಡಲಾಗಿತ್ತು. ಈ ಬಜೆಟ್​ನಲ್ಲೂ ಅದು ಮುಂದುವರಿಯಬಹುದು. ವಿವಿಧ ಪೂರಕ ಯೋಜನೆಗಳು ಮಹಿಳೆಯರ ಒಟ್ಟಾರೆ ಬೆಳವಣಿಗೆಗೆ ಸಹಾಯವಾಗಿವೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.

ಮಹಿಳೆಯರಿಗೆ ಉತ್ಸಾಹ ಹೆಚ್ಚಿಸಿದ ಕೇಂದ್ರ ಯೋಜನೆಗಳು; 2025ರ ಬಜೆಟ್​ನಲ್ಲಿ ಮತ್ತಷ್ಟು ಪುಷ್ಟಿ ಸಾಧ್ಯತೆ
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ, ಜನವರಿ 19: ಇನ್ನೆರಡು ವಾರದೊಳಗೆ ಕೇಂದ್ರ ಸರ್ಕಾರದಿಂದ ಬಜೆಟ್ ಪ್ರಕಟವಾಗಲಿದೆ. 2025-26ರ ಆಯ ಮತ್ತು ವ್ಯಯದ ಲೆಕ್ಕಾಚಾರ ಘೋಷಣೆಗೊಳ್ಳಲಿದೆ. 2024ರ ಬಜೆಟ್​ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರು, ರೈತರು, ಯುವಕರು ಮತ್ತು ಬಡವರು ಈ ನಾಲ್ಕು ವರ್ಗಗಳನ್ನು ನಾಲ್ಕು ಜಾತಿಗಳಾಗಿ ಕರೆದರು. ಹಲವು ವರ್ಷಗಳಿಂದಲೂ ಸರ್ಕಾರವು ನಾರಿಶಕ್ತಿ ಬಗ್ಗೆ ಮಾತನಾಡುತ್ತಿದೆ. ಮಹಿಳೆಯರ ಅಭ್ಯುದಯಕ್ಕೆ ಹಲವು ಯೋಜನೆಗಳನ್ನು ತಂದಿದೆ. ಕಾಕತಾಳೀಯವೋ ಅಥವಾ ಇವುಗಳ ಪರಿಣಾಮವಾಗಿಯೋ, 2024ರ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿದ್ದಂತೂ ಹೌದು. ಈ ಜಾಗೃತ ಮಹಿಳೆಯರಿಗೆ 2025ರ ಬಜೆಟ್​ನಲ್ಲಿ ಸರ್ಕಾರ ಏನಾದರೂ ಉಡುಗೊರೆ ಕೊಡಲು ಮುಂದಾದರೆ ಅಚ್ಚರಿ ಅನಿಸೋದಿಲ್ಲ.

ಎಸ್​ಬಿಐ ವರದಿಯೊಂದರ ಪ್ರಕಾರ 2019ರಲ್ಲಿ ಚಲಾವಣೆಯಾಗಿದ್ದ ಮಹಿಳಾ ಮತಗಳ ಸಂಖ್ಯೆಗಿಂತ 2024ರ ಚುನಾವಣೆಯಲ್ಲಿ 1.8 ಕೋಟಿ ಹೆಚ್ಚು ಮತ ಚಲಾವಣೆ ಆಗಿದೆ. ಇನ್ಕಮ್ ಟ್ರಾನ್ಸ್​ಫರ್ ಸ್ಕೀಮ್​ಗಳು, ಮುದ್ರಾ ಯೋಜನೆಯಡಿ ಸಿಗುತ್ತಿರುವ ಸಾಲ, ಪಿಎಂ ಆವಾಸ್ ಯೋಜನೆ ಅಡಿ ಮನೆಗಳು ಸಿಗುತ್ತಿರುವುದು, ನೈರ್ಮಲ್ಯೀಕರಣ ಯೋಜನೆಗಳು, ಸಾಕ್ಷರತಾ ಸ್ಕೀಮ್​ಗಳು ಇವೇ ಮುಂತಾದ ಪ್ರಯತ್ನಗಳು ಮಹಿಳೆಯರಿಗೆ ಬಲ ನೀಡಿವೆ ಎಂದು ಈ ಎಸ್​ಬಿಐನ ವರದಿ ಹೇಳುತ್ತದೆ.

ಇದನ್ನೂ ಓದಿ: ಮಹಿಳಾ ತೆರಿಗೆ ಪಾವತಿದಾರರು, ಮಹಿಳಾ ಸಂಬಂಧಿತ ಯೋಜನೆಗಳಿಗೆ ಬಜೆಟ್​ನಲ್ಲಿ ಪ್ರೋತ್ಸಾಹ ಸಿಗುವ ಸಾಧ್ಯತೆ

ಈ ಮೇಲಿನ ಅಂಶಗಳು ಮೇಲ್ನೋಟಕ್ಕೆ ಕಾಕತಾಳೀಯವೆಂಬಂತೆ ತೋರಬಹುದು. ಆದರೆ, ಎಸ್​ಬಿಐ ವರದಿ ಒಂದು ಕುತೂಹಲಕಾರಿ ಮಾಹಿತಿ ತೆರೆದಿಟ್ಟಿದೆ. ಮಹಿಳೆಯರನ್ನು ಗುರಿಯಾಗಿಸಿ ನಡೆಸಲಾದ ಸಾಕ್ಷರತೆ, ಉದ್ಯೋಗ, ವಸತಿ, ನೈರ್ಮಲ್ಯ ಯೋಜನೆಗಳನ್ನು ಅಳವಡಿಸಿದ ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ 1.5 ಕೋಟಿಯಷ್ಟು ಹೆಚ್ಚಾಗಿದೆ. ಈ ಯೋಜನೆಗಳನ್ನು ಜಾರಿಗೊಳಿಸದ ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದ್ದು 30 ಲಕ್ಷ ಮಾತ್ರ.

2024ರ ಬಜೆಟ್​ನಲ್ಲಿ ಕೇಂದ್ರ ಸರ್ಕಾರವು ಮಹಿಳೆ ಮತ್ತು ಬಾಲಕಿಯರಿಗೆ ಅನುಕೂಲವಾಗುವ ವಿವಿಧ ಯೋಜನೆಗಳಿಗೆ ಬರೋಬ್ಬರಿ ಮೂರು ಲಕ್ಷ ರುಪಾಯಿಯನ್ನು ನೀಡಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಬಜೆಟ್ ಶೇ. 3ರಷ್ಟು ಹೆಚ್ಚಾಗಿ 26,092 ಕೋಟಿ ರೂ ಮುಟ್ಟಿತ್ತು.

ಮಿಷನ್ ಶಕ್ತಿ, ಸಂಬಾಳ್, ಸಾಮರ್ಥ್ಯ ಇತ್ಯಾದಿ ಮಹಿಳಾ ಮುಖಿ ಯೋಜನೆಗಳಿಗೆ ಸರ್ಕಾರದ ಧನಸಹಾಯ ಹೆಚ್ಚಾಗಿದೆ. ಕೆಲಸ ಮಾಡುವ ಮಹಿಳೆಯರಿಗೆಂದು ಇರುವ ಹಾಸ್ಟೆಲ್​ಗಳಲ್ಲಿ ಹೆಚ್ಚಿನ ಸುರಕ್ಷತೆ ವಹಿಸಲಾಗಿದೆ. ಮಹಿಳೆಯರನ್ನು ಕೆಲಸಕ್ಕೆ ಸೇರಲು ಉತ್ತೇಜಿಸುವ ಕಾರ್ಯ, ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಕಾರ್ಯಗಳಿಗೆ ಬಜೆಟ್​ನಲ್ಲಿ ಗಮನ ಕೊಡಲಾಗಿತ್ತು.

ಇದನ್ನೂ ಓದಿ: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಠೇವಣಿ ಮೊತ್ತ, ಅವಧಿ, ಬಡ್ಡಿ ಇತ್ಯಾದಿ ವಿವರ

ಇದೇ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು 2025-26ರ ಬಜೆಟ್ ಮಂಡಿಸಲಿದ್ದು, ಇಲ್ಲಿಯೂ ಕೂಡ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ