ಉದ್ಯೋಗ ನೇಮಕಾತಿ ಅಧಿಸೂಚನೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಓಹ್ ಆ ಕೆಲಸಕ್ಕೆ ಅಷ್ಟೊಂದು ಸಂಬಳವಾ ಅಥವಾ ಅಷ್ಟೊಂದು ಡಿಮ್ಯಾಂಡಾ ಅಂತೆಲ್ಲ ಅಂದುಕೊಳ್ಳಬೇಡಿ. ಜತೆಗೆ ಈ ವರದಿಯಲ್ಲಿ ಟ್ವಿಸ್ಟ್ ಸಹ ಇದೆ. ಎಚ್ಡಿಎಫ್ಸಿ ಗೊತ್ತಲ್ಲಾ? ಅದರಿಂದ ಉದ್ಯೋಗ ನೇಮಕಾತಿಯ ಸುತ್ತೋಲೆ ಹೊರಡಿಸಲಾಗಿದ್ದು, 2021ರಲ್ಲಿ ತೇರ್ಗಡೆಯಾದ ಪದವೀಧರರು ಈ ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಲು ಅರ್ಹರಲ್ಲ ಎಂಬ ಒಕ್ಕಣೆ ಇದ್ದು, ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಗಿರಕಿ ಹೊಡೆಯುತ್ತಿದೆ. ದೇಶದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್ಡಿಎಫ್ಸಿಯಿಂದ ಸ್ಪಷ್ಟನೆ ನೀಡುವಂಥ ಸ್ಥಿತಿ ಬಂದಿದೆ. “ಟೈಪ್ ಮಾಡುವಾಗ ಆಗಿರುವಂಥ ತಪ್ಪಿದು. ಅದಕ್ಕಾಗಿ ವಿಷಾದಿಸುತ್ತೇವೆ,” ಎಂದು ಎಚ್ಡಿಎಫ್ಸಿ ವಕ್ತಾರರು ಟ್ವಿಟ್ಟರ್ ಬಳಕೆದಾರರೊಬ್ಬರಿಗೆ ಆಗಸ್ಟ್ 3ನೇ ತಾರೀಕಿನಂದು ಪ್ರತಿಕ್ರಿಯಿಸಿದ್ದಾರೆ.
ಆ ವಕ್ತಾರರು ಇನ್ನೂ ಮುಂದುವರಿದು, ವಯೋಮಿತಿಯ ಮಾನದಂಡವನ್ನು ಪೂರ್ತಿಗೊಳಿಸುವುದಾದರೆ ಯಾವುದೇ ವರ್ಷ ಪದವಿ ಪಡೆದಂಥವರು ಸಹ ಅರ್ಜಿ ಹಾಕಿಕೊಳ್ಳಬಹುದು ಎಂದು ಸಹ ಹೇಳಿದ್ದಾರೆ. ಮದುರೈನಲ್ಲಿ 28 ವರ್ಷದೊಳಗಿನವರನ್ನು ವಾಕ್-ಇನ್ ಸಂದರ್ಶನಕ್ಕಾಗಿ ಕರೆದಂಥ ನಿಯತಕಾಲಿಕೆ ಜಾಹೀರಾತಿನಲ್ಲಿ ಈ ಅಂಶ ಒಳಗೊಂಡಿದೆ. “ನಾವು ಈಗಾಗಲೇ ಸರಿಯಾದ ಜಾಹೀರಾತನ್ನು ಇಲ್ಲಿ ಹಂಚಿಕೊಂಡಿದ್ದೇವೆ,” ಎಂದು ಎಚ್ಡಿಎಫ್ಸಿಯಿಂದ ಹೇಳಲಾಗಿದೆ. ಆದರೆ ಈ ಸ್ಪಷ್ಟನೆ ನೀಡುವ ಹೊತ್ತಿಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಈ ಜಾಬ್ ಅಡ್ವರ್ಟೈಸ್ಮೆಂಟ್ ಸಿಕ್ಕಾಪಟ್ಟೆ ಸದ್ದು ಮಾಡಿಯಾಗಿತ್ತು.
This is atrocitious! @HDFC_Bank pic.twitter.com/2erLBtuG9Z
— Tr Gayathri Srikanth (@Tr_Gayathri) August 2, 2021
ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2020-21ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ನೇರವಾಗಿ ಶಿಕ್ಷಣ ಪಡೆಯಲು ಸಾಧ್ಯವಾಗಿಯೇ ಇಲ್ಲ. ಪರೀಕ್ಷೆಗಳು ಸರಿಯಾಗಿ ನಡೆದಿಲ್ಲ. ಮತ್ತೆ ಕೆಲವು ಕಡೆ ಪಠ್ಯಕ್ರಮದ ಪ್ರಮಾಣವನ್ನೇ ಇಳಿಕೆ ಮಾಡಿ, ಪರೀಕ್ಷೆಗಳನ್ನು ನಡೆಸಿ, ಪಾಸ್ ಮಾಡಲಾಗಿದೆ. ಈ ಪರೀಕ್ಷೆ ಹಾಗೂ ಪಾಸ್ ಮಾಡುವ ವಿಧಾನದ ಬಗ್ಗೆಯೇ ಗೇಲಿ, ತಮಾಷೆ ಹಾಗೂ ಲೇವಡಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಡಿಎಫ್ಸಿಯ ಉದ್ಯೋಗ ನೇಮಕಾತಿ ಸುತ್ತೋಲೆಯನ್ನು ನೋಡಿದಾಗ, ಮತ್ತೂ ಹೆಚ್ಚಿನ ಚರ್ಚೆಗೆ ಹಾದಿ ಮಾಡಿಕೊಟ್ಟಿದೆ.
ಇದನ್ನೂ ಓದಿ: HDFC Bank: 2013ರಿಂದ 2020ರ ಮಧ್ಯೆ ಎಚ್ಡಿಎಫ್ಸಿ ಬ್ಯಾಂಕ್ ವಾಹನ ಸಾಲ ಪಡೆದವರಿಗೆ ಒಂದಿಷ್ಟು ಹಣ ರೀಫಂಡ್; ಯಾರಿಗೆ?
(2021 Passed Out Candidates Are Not Eligible Goes Viral On Social Media Here Is The Clarification By HDFC)
Published On - 12:55 pm, Wed, 4 August 21