ನವದೆಹಲಿ, ಆಗಸ್ಟ್ 7: ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದಿಂದ ಪ್ರತೀ ವರ್ಷ ದೇಶಾದ್ಯಂತ ಗಣಿಗಳಿಗೆ ಸ್ಟಾರ್ ರೇಟಿಂಗ್ ಕೊಡಲಾಗುತ್ತದೆ. 2022-23ರ ಸಾಲಿನಲ್ಲಿ 68 ಗಣಿಗಳಿಗೆ ಪೂರ್ಣಾಂಕ ಸಿಕ್ಕಿದೆ. ಅಂದರೆ, 5 ಸ್ಟಾರ್ ರೇಟಿಂಗ್ ಕೊಡಲಾಗಿದೆ. ಇದರಲ್ಲಿ ಕರ್ನಾಟಕದ ಏಳು ಗಣಿಗಳು ಒಳಗೊಂಡಿವೆ. ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ಸತೀಶ್ ಚಂದ್ರ ದುಬೆ ಅವರು ಇಂದು ಬುಧವಾರ ಪ್ರಶಸ್ತಿ ಪ್ರದಾನ ಮಾಡಿದರು. ಆಂಧ್ರ ಮತ್ತು ತೆಲಂಗಾಣದಲ್ಲಿರುವ ಮೈ ಹೋಂ ಇಂಡಸ್ಟ್ರೀಸ್ (My Home Industries), ಜಯಜ್ಯೋತಿ ಸಿಮೆಂಟ್ಸ್ ಸಂಸ್ಥೆಗಳ ಮೂರು ಗಣಿಗಳಿಗೂ ಫೈವ್ ಸ್ಟಾರ್ ರೇಟಿಂಗ್ ಸಿಕ್ಕಿದೆ.
ಜೆ.ಕೆ. ಸಿಮೆಂಟ್ಸ್, ಜೆಎಸ್ಡಬ್ಲ್ಯು ಸಿಮೆಂಟ್ಸ್, ಜೆಎಸ್ಡಬ್ಲ್ಯು ಸ್ಟೀಲ್, ಎಂಎಸ್ಪಿಎಲ್, ಕುಮಾರಸ್ವಾಮಿ ಮಿನರಲ್ ಎಕ್ಸ್ಪೋರ್ಟ್ಸ್, ಸಂಡೂರ್ ಮ್ಯಾಂಗನೀಸ್ ಮೊದಲಾದ ಸಂಸ್ಥೆಗಳ ಕರ್ನಾಟಕದ ಗಣಿಗಳಿಗೆ ಪೂರ್ಣಾಂಕ ಕೊಡಲಾಗಿದೆ. ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಯ 12 ಕಲ್ಲು ಗಣಿಗಳಿಗೂ ಪ್ರಶಸ್ತಿ ಕೊಡಲಾಗಿದೆ.
ಫೈವ್ ಸ್ಟಾರ್ ರೇಟಿಂಗ್ ಪಡೆದ ಗಣಿಗಳ ಪೈಕಿ ಕಲ್ಲು ಗಣಿ ಅಥವಾ ಲೈಮ್ ಸ್ಟೋನ್ ಗಣಿಗಳ ಸಂಖ್ಯೆ ಹೆಚ್ಚಿದೆ. ಕಬ್ಬಿಣ ಅದಿರಿನ ಗಣಿಗಳು ನಂತರದ ಸ್ಥಾನ ಪಡೆದಿವೆ. ಬಾಕ್ಸೈಟ್, ಮ್ಯಾಂಗನೀಸ್, ಲೆಡ್ ಜಿಂಕ್ ಗಣಿಗಳಿಗೂ ಪೂರ್ಣಾಂಕ ಸಿಕ್ಕಿದೆ.
ಇದನ್ನೂ ಓದಿ: ಇಂಡೆಕ್ಸೇಶನ್ ಬೇಕೋ ಬೇಡವೋ? ನಿಮ್ಮ ಆಯ್ಕೆಗೆ ಬಿಟ್ಟಿದ್ದು ಎಂದ ಸರ್ಕಾರ; ಎಷ್ಟು ತೆರಿಗೆ ಹೊರೆ ಇಳಿಸುತ್ತೆ ಈ ಕ್ರಮ?
2016ರಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಗಣಿಗಳ ಗುಣಮಟ್ಟದ ಆಧಾರದ ಮೇಲೆ ಶ್ರೇಯಾಂಕ ನೀಡುವ ಕ್ರಮ ಜಾರಿಗೆ ತಂದಿದೆ. 2014-15ರ ವರ್ಷಕ್ಕೆ 9 ಗಣಿಗಳಿಗೆ 5 ಸ್ಟಾರ್ ಸಿಕ್ಕಿತ್ತು. ಹಿಂದಿನ ವರ್ಷದಲ್ಲಿ, ಅಂದರೆ 2021-22ರಲ್ಲಿ 76 ಗಣಿಗಳಿಗೆ ಸ್ಟಾರ್ ರೇಟಿಂಗ್ ಕೊಡಲಾಗಿತ್ತು. 2019-20 ಮತ್ತು 2020-21ರ ವರ್ಷದಲ್ಲಿ ತಲಾ 40 ಗಣಿಗಳಿಗೆ ಫೈವ್ ಸ್ಟಾರ್ ಶ್ರೇಯಾಂಕ ಕೊಡಲಾಗಿತ್ತು.
ಇದನ್ನೂ ಓದಿ: ಇನ್ಫೋಸಿಸ್ಗೆ ಜಿಎಸ್ಟಿ ನೋಟೀಸ್; ಸರ್ಕಾರದಿಂದ ಇಲ್ಲ ವಿನಾಯಿತಿ
ಗಣಿಗಾರಿಕೆಯಿಂದ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳು ಉದ್ಭವವಾಗುತ್ತವೆ. ಗಣಿ ನೆಲವನ್ನು ಮೂಲ ಸ್ಥಿತಿಗೆ ತರುವುದು, ಗಣಿಗಾರಿಕೆಯಿಂದ ಆದ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಯತ್ನಿಸುವುದು ಇವೇ ಮುಂತಾದ ಅಂಶಗಳನ್ನು ಪರಿಗಣಿಸಿ ಒಂದು ಗಣಿಗೆ ಶ್ರೇಯಾಂಕ ನೀಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ