Infosys GST Case: ಇನ್ಫೋಸಿಸ್​ಗೆ ಜಿಎಸ್​ಟಿ ನೋಟೀಸ್; ಸರ್ಕಾರದಿಂದ ಇಲ್ಲ ವಿನಾಯಿತಿ

ಐದು ವರ್ಷದ ಅವಧಿಯಲ್ಲಿ ಇನ್ಫೋಸಿಸ್ 32,000 ಕೋಟಿ ರೂ ಜಿಎಸ್​ಟಿ ಪಾವತಿಸಿಲ್ಲ ಎಂದು ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಕೊಡಲಾಗಿದೆ. ಇದು ಟ್ಯಾಕ್ಸ್ ಟೆರರಿಸಂ ಎಂಬ ಟೀಕೆಗಳ ಮಧ್ಯೆ, ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿರಲು ನಿರ್ಧರಿಸಿದೆ. 2017ರಿಂದ 2022ರವರೆಗೆ ಇನ್ಫೋಸಿಸ್ ತನ್ನ ವಿದೇಶೀ ಕಚೇರಿಗಳಿಂದ ಪಡೆದ ಸೇವೆಗಳಿಗೆ ಜಿಎಸ್​ಟಿ ಕಟ್ಟಿಲ್ಲ ಎಂದು ನೋಟೀಸ್ ಕೊಡಲಾಗಿತ್ತು.

Infosys GST Case: ಇನ್ಫೋಸಿಸ್​ಗೆ ಜಿಎಸ್​ಟಿ ನೋಟೀಸ್; ಸರ್ಕಾರದಿಂದ ಇಲ್ಲ ವಿನಾಯಿತಿ
ಜಿಎಸ್​ಟಿ
Follow us
|

Updated on: Aug 07, 2024 | 10:55 AM

ಬೆಂಗಳೂರು, ಆಗಸ್ಟ್ 7: ಇನ್ಫೋಸಿಸ್ ವಿರುದ್ಧ 32,000 ಕೋಟಿ ರೂ ಮೊತ್ತದ ಜಿಎಸ್​ಟಿ ನೀಡಿರುವ ಪ್ರಕರಣದಲ್ಲಿ ಯಾವುದೇ ರಿಯಾಯಿತಿ ತೋರದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿ ಮಾಧ್ಯಮಗಳಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಸರಕು ಮತ್ತು ಸೇವಾ ತೆರಿಗೆ ನಿಯಮಗಳ ಪ್ರಕಾರವಾಗಿ ತೆರಿಗೆ ಕೇಳಲಾಗುತ್ತಿದೆ ಎಂದು ಸರ್ಕಾರದ ಮೂಲವೊಂದನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಕಳೆದ ವಾರ ಜಿಎಸ್​ಟಿ ಪ್ರಾಧಿಕಾರದಿಂದ ಇನ್ಫೋಸಿಸ್ ವಿರುದ್ಧ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಹೋಗಿದೆ. 32,400 ಕೋಟಿ ರೂ ತೆರಿಗೆ ಕಟ್ಟಬೇಕಿದೆ ಎಂದು ತನಗೆ ಕಳೆದ ವಾರ ಜಿಎಸ್​ಟಿ ಪ್ರಾಧಿಕಾರದಿಂದ ನೋಟೀಸ್ ಬಂದಿದ್ದಾಗಿ ಆಗಸ್ಟ್ 3ರಂದು ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಇನ್ಫೋಸಿಸ್ ತಿಳಿಸಿತ್ತು. ಸದ್ಯ ಇನ್ಫೋಸಿಸ್​ ಈ ನೋಟೀಸ್​ಗೆ ಉತ್ತರಿಸಲು 10 ದಿನ ಕಾಲಾವಕಾಶ ಪಡೆದಿದೆ.

2017ರ ಜುಲೈನಿಂದ ಹಿಡಿದು 2021-22ರ ಹಣಕಾಸು ವರ್ಷಾಂತ್ಯದವರೆಗೆ ಇನ್ಫೋಸಿಸ್ ಸಂಸ್ಥೆ ವಿದೇಶಗಳಲ್ಲಿರುವ ತನ್ನ ಕಚೇರಿಗಳಿಂದ ಪಡೆದ ಸೇವೆಗಳಿಗೆ ಜಿಎಸ್​ಟಿ ಪಾವತಿಸಿಲ್ಲ ಎಂಬುದು ಈಗ ಸಲ್ಲಿಸಲಾಗಿರುವ ನೋಟೀಸ್​ನಲ್ಲಿರುವ ಅಂಶ.

ಇದನ್ನೂ ಓದಿ: ಇನ್ಫೋಸಿಸ್​ನಿಂದ 32,403 ಕೋಟಿ ರೂ ಜಿಎಸ್​ಟಿ ಬಾಕಿ ಇದೆಯಾ? ಇಲ್ಲ ಎನ್ನುತ್ತಿದೆ ಐಟಿ ಸಂಸ್ಥೆ; ಯಾತಕ್ಕಾಗಿ ಈ ತೆರಿಗೆ?

ಇನ್ಫೋಸಿಸ್ ಸಂಸ್ಥೆ ತಾನು ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳುತ್ತಿದೆ. 4 ಬಿಲಿಯನ್ ಡಾಲರ್ ಅಥವಾ 32,400 ಕೋಟಿ ರೂ ಹಣ ಸಣ್ಣ ಮೊತ್ತವಲ್ಲ. ಇನ್ಫೋಸಿಸ್​ಗೆ ಒಂದು ತ್ರೈಮಾಸಿಕ ಅವಧಿಯಲ್ಲಿ ಸಿಗುವ ಆದಾಯಕ್ಕೆ ಬಹುತೇಕ ಸಮ ಆಗುತ್ತದೆ.

ಜಿಎಸ್​ಟಿ ನೋಟೀಸ್: ಕಾಂಗ್ರೆಸ್ ಟೀಕೆ

ಇನ್ಫೋಸಿಸ್ ವಿರುದ್ಧ ಬಂದಿರುವ 32,000 ಕೋಟಿ ರೂ ಜಿಎಸ್​ಟಿ ನೋಟೀಸ್ ಕ್ರಮವನ್ನು ಕಾಂಗ್ರೆಸ್ ಪಕ್ಷ ಟೀಕಿಸಿದೆ. ನಾರಾಯಣಮೂರ್ತಿ ಅವರು ಭಾರತದ ಆರ್ಥಿಕ ಸ್ಥಿತಿ ಬಗ್ಗೆ ಕನ್ನಡಿ ಹಿಡಿದ ಕಾರಣಕ್ಕೆ ಸರ್ಕಾರ ಈ ದ್ವೇಷ ಸಾಧಿಸುತ್ತಿದೆ ಎಂದು ಮಹಾರಾಷ್ಟ್ರ ಘಟಕದ ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ: ನಿಮಗೆ ರೀಫಂಡ್ ಆಗಿದೆ ಎಂದು ಬಂದ ಮೆಸೇಜ್​ನಲ್ಲಿರುವ ಲಿಂಕ್ ಕ್ಲಿಕ್ ಮಾಡದಿರಿ, ಜೋಕೆ; ಐಟಿ ಇಲಾಖೆ ಎಚ್ಚರಿಕೆ

ಭಾರತದಕ್ಕಿಂತ ಚೀನಾ 6 ಪಟ್ಟು ಹೆಚ್ಚು ಜಿಡಿಪಿ ಹೊಂದಿದೆ. ಹೀಗಿರುವಾಗ ಭಾರತ ಉತ್ಪಾದನಾ ಅಡ್ಡೆಯಾಗಬಲ್ಲುದು ಎಂದು ನಂಬುವುದು ಕಷ್ಟ ಎಂದು ಇನ್ಫೋಸಿಸ್​ನ ಸಹ-ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದರು. ಅದರ ಬೆನ್ನಲ್ಲೇ ಮೋದಿ ಸರ್ಕಾರದ ಸೂಚನೆ ಮೇರೆಗೆ ಜಿಎಸ್​ಟಿ ಇಂಟೆಲಿಜೆನ್ಸ್​ನ ಮಹಾನಿರ್ದೇಶನಾಲಯದಿಂದ ಇನ್ಫೋಸಿಸ್​ಗೆ ಜಿಎಸ್​ಟಿ ನೋಟೀಸ್ ಸಲ್ಲಿಕೆ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಗೋಪಾಲ್ ತಿವಾರಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ