ನಿಷ್ಕ್ರಿಯ ಇಪಿಎಫ್ ಖಾತೆಗಳಿಗೆ ಹೊಸ ನಿಯಮ; ದುರ್ಬಳಕೆ ತಪ್ಪಿಸಲು ಈ ಕ್ರಮ
Rules updated for inoperative epf accounts: ನಿಷ್ಕ್ರಿಯವಾಗಿರುವ ಇಪಿಎಫ್ ಖಾತೆಗಳನ್ನು ಯಾರಾದರೂ ದುರ್ಬಳಕೆ ಮಾಡಿಕೊಳ್ಳುವುದನ್ನು ನಿಯಂತ್ರಿಸಲು ಸರ್ಕಾರ ನಿಯಮ ಬದಲಾವಣೆ ಮಾಡಿದೆ. ಮೂರು ವರ್ಷಗಳಿಂದ ಬಳಕೆ ಆಗದೇ ಉಳಿದಿರುವ ಇಪಿಎಫ್ ಖಾತೆಗಳನ್ನು ಇನಾಪರೇಟಿವ್ ಎಂದು ಪರಿಗಣಿಸಲಾಗುತ್ತದೆ. ಅಂಥ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ. ಅದನ್ನು ಅನ್ಬ್ಲಾಕ್ ಮಾಡಲು ಖಾತೆದಾರರು ಅರ್ಜಿ ಹಾಕಬೇಕಾಗುತ್ತದೆ.
ನವದೆಹಲಿ, ಆಗಸ್ಟ್ 7: ರಿಟೈರ್ ಆಗಿ ಇನ್ನೂ ಹಣ ಹಿಂಪಡೆಯಲಾಗದೇ ಉಳಿದಿರುವ ಇಪಿಎಫ್ ಖಾತೆಗಳನ್ನು ವಂಚಕರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಸರ್ಕಾರ ನಿಯಮ ರೂಪಿಸಿದೆ. ನಿಷ್ಕ್ರಿಯ ಅಥವಾ ನಿಂತು ಹೋಗಿರುವ ಇಪಿಎಫ್ ಖಾತೆಗಳಿಗೆ ನಿಯಮ ಬದಲಾವಣೆ ಮಾಡಲಾಗಿದೆ. ಕಳೆದ ವಾರ ಇಪಿಎಫ್ಒ ಹೊರಡಿಸಿದ ಸುತ್ತೋಲೆಯಲ್ಲಿ ಇನಾಪರೇಟಿವ್ ಆಗಿರುವ ಇಪಿಎಫ್ ಖಾತೆಗಳಿಗೆ ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಇಂಥ ಇನಾಪರೇಟಿವ್ ಇಪಿಎಫ್ ಅಕೌಂಟ್ಗಳಿದ್ದರೆ ಫೀಲ್ಡ್ ಆಫೀಸ್ಗಳು ವಿಚಾರಣೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಒಂದು ಇಪಿಎಫ್ ಖಾತೆಯಲ್ಲಿ ಸರ್ಕಾರದಿಂದ ಬಡ್ಡಿ ಜಮಾವಣೆ ಹೊರತುಪಡಿಸಿ ಬೇರಾವ ಹಣವೂ ಮೂರು ವರ್ಷದಿಂದ ಬೀಳದೇ ಇದ್ದರೆ ಅಂಥ ಖಾತೆಯನ್ನು ನಿಷ್ಕ್ರಿಯ ಖಾತೆ ಅಥವಾ ವಹಿವಾಟು ರಹಿತ ಖಾತೆ ಎಂದು ಪರಿಗಣಿಸಲಾಗುತ್ತದೆ. ಖಾತೆದಾರರ ವಯಸ್ಸು 58 ವರ್ಷ ಆದ ಬಳಿಕ ಅವರ ಇಪಿಎಫ್ ಖಾತೆಯನ್ನು ಇನಾಪರೇಟವ್ ಎಂದು ಪರಿಗಣಿಸಿ ಬ್ಲಾಕ್ ಮಾಡಿಡಲಾಗುತ್ತದೆ. ಇದನ್ನು ಬೇರೆ ಯಾರೂ ದುರ್ಬಳಕೆ ಮಾಡಿಕೊಳ್ಳದಂತೆ ಭದ್ರತಾ ಎಚ್ಚರಿಕೆಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಇನ್ಕಮ್ ಟ್ಯಾಕ್ಸ್ ನೋಟೀಸ್ ಬಂದಿದೆಯಾ? ಭಯ ಬೀಳದೆ ಹೀಗೆ ಮಾಡಿ…
ಬ್ಲಾಕ್ ಆದ ಇಪಿಎಫ್ ಖಾತೆಯನ್ನು ಅನ್ಬ್ಲಾಕ್ ಮಾಡಲು ಖಾತೆದಾರರು ಅರ್ಜಿ ಹಾಕಬೇಕು. 20-25 ದಿನದಲ್ಲಿ ಖಾತೆ ಅನ್ಬ್ಲಾಕ್ ಆಗಬಹುದು.
ಒಂದು ವೇಳೆ ಇನಾಪರೇಟಿವ್ ಖಾತೆಗಳಿಗೆ ಯುಎಎನ್ ಇಲ್ಲದೇ ಇದ್ದರೆ ಮೊದಲು ಅದನ್ನು ಸೃಷ್ಟಿಸಬೇಕು. ದೀರ್ಘಾವಧಿಯಿಂದ ಈ ಖಾತೆ ನಿಷ್ಕ್ರಿಯವಾಗಿರುವುದರಿಂದ ಸಾಧಾರಣ ಮಾರ್ಗದಲ್ಲಿ ಯುಎಎನ್ ನಂಬರ್ ರಚಿಸಲು ಆಗುವುದಿಲ್ಲ. ಇಪಿಎಫ್ ಖಾತೆದಾರರು ವೈಯಕ್ತಿಕವಾಗಿ ಫೀಲ್ಡ್ ಆಫೀಸ್ಗೆ ಹೊಸ ಯುಎಎನ್ ಸೃಷ್ಟಿಸಬಹುದು. ಒಂದು ವೇಳೆ ಯುಎಎನ್ ನಂಬರ್ ಇದ್ದೂ ಅದು ಯಾವುದೇ ಇಪಿಎಫ್ ಖಾತೆಗೆ ಲಿಂಕ್ ಆಗಿಲ್ಲದೇ ಇದ್ದರೆ, ಆ ಕೆಲಸವನ್ನೂ ಫೀಲ್ಡ್ ಆಫೀಸ್ನಲ್ಲೇ ಮಾಡಬಹುದು.
ಇಪಿಎಫ್ ಖಾತೆದಾರರು ಫೀಲ್ಡ್ ಆಫೀಸ್ಗೆ ಹೋಗಬೇಕೆಂದರೆ ಮೊದಲು EPFiGMS ಪೋರ್ಟಲ್ನಲ್ಲಿ ಅಪಾಯಿಂಟ್ಮೆಂಟ್ ಪಡೆಯಬೇಕು. ಬಯೋಮೆಟ್ರಿಕ್ ವೆರಿಫಿಕೇಶನ್ ಸ್ಥಳ, ಸಮಯ, ದಿನ, ಟೋಕನ್ ನಂಬರ್ನೊಂದಿಗೆ ಅಪಾಯಿಂಟ್ಮೆಂಟ್ ಸಿಗುತ್ತದೆ. ಅದಾದ ಬಳಿಕ ಯುಎಎನ್ಗೆ ಇಪಿಎಫ್ ಖಾತೆಯನ್ನು ಲಿಂಕ್ ಮಾಡಲಾಗುತ್ತದೆ.
ಇದನ್ನೂ ಓದಿ: ಇಂಡೆಕ್ಸೇಶನ್ ಬೇಕೋ ಬೇಡವೋ? ನಿಮ್ಮ ಆಯ್ಕೆಗೆ ಬಿಟ್ಟಿದ್ದು ಎಂದ ಸರ್ಕಾರ; ಎಷ್ಟು ತೆರಿಗೆ ಹೊರೆ ಇಳಿಸುತ್ತೆ ಈ ಕ್ರಮ?
ಒಂದು ವೇಳೆ ಇಪಿಎಫ್ ಸದಸ್ಯರಿಗೆ ವಯಸ್ಸು ಮತ್ತಿತರ ಕಾರಣಕ್ಕೆ ಫೀಲ್ಡ್ ಆಫೀಸ್ಗೆ ಹೋಗಲು ಸಾಧ್ಯವಾಗದೇ ಹೋದರೆ EPFiGMS ಪೋರ್ಟಲ್ನಲ್ಲಿ ಯುಎಎನ್ ರಚಿಸಲು ಮನವಿ ಸಲ್ಲಿಸಬಹುದು. ಇಪಿಎಫ್ಒ ಕಚೇರಿಯಿಂದ ಪ್ರತಿನಿಧಿಯೊಬ್ಬರು ಇಪಿಎಫ್ ಸದಸ್ಯರ ಸ್ಥಳಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ವೆರಿಫಿಕೇಶನ್ ನಡೆಸುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ