ಫ್ಯಾಷನ್ ಟೈಕೂನ್ ಆದ ಬರ್ನಾರ್ಡ್ ಅರ್ನಾಲ್ಟ್ ಅಮೆಜಾನ್ನ ಜೆಫ್ ಬೆಜೋಸ್ ಹಾಗೂ ಟೆಸ್ಲಾದ ಎಲಾನ್ ಮಸ್ಕ್ರನ್ನು ಮೀರಿ ವಿಶ್ವದ ಅತ್ಯಂತ ಸಿರಿವಂತ ಎನಿಸಿಕೊಂಡಿದ್ದಾರೆ. ಫೋರ್ಬ್ಸ್ನ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಅರ್ನಾಲ್ಟ್ ನಿವ್ವಳ ಆಸ್ತಿ ಮೌಲ್ಯ ಗುರುವಾರ 19,910 ಕೋಟಿ ಅಮೆರಿಕನ್ ಡಾಲರ್ ಇತ್ತು. ಈ ಮಧ್ಯೆ ಬೆಜೋಸ್ ರಿಯಲ್ ಟೈಮ್ ನಿವ್ವಳ ಆಸ್ತಿ ಮೌಲ್ಯ 19,380 ಕೋಟಿ ಅಮೆರಿಕನ್ ಡಾಲರ್ ಇದ್ದರೆ, ಎಲಾನ್ ಮಸ್ಕ್ ನಿವ್ವಳ ಆಸ್ತಿ ಮೌಲ್ಯ 18,470 ಕೋಟಿ ಯುಎಸ್ಡಿ ಇತ್ತು. 72 ವರ್ಷದ ಅರ್ನಾಲ್ಟ್ ವಿಶ್ವದ ಪ್ರಮುಖ ಫ್ಯಾಷನ್ ಕಂಪೆನಿಯೊಂದರ ಮುಖ್ಯ ಹುದ್ದೆಯಲ್ಲಿದ್ದಾರೆ. LVMH ಮೊಯೆಟ್ ಹೆನಿಸ್ಸಿ ಲೂಯಿಸ್ ವ್ಯೂಟನ್ ಎಂಬ ವಿಲಾಸಿ ವಸ್ತುಗಳ ಮಾರಾಟದ ಮುಂಚೂಣಿಯಲ್ಲಿರುವ ಕಂಪೆನಿಯನ್ನು ಈ ಶತಕೋಟ್ಯಧಿಪತಿ ಮುನ್ನಡೆಸುತ್ತಾರೆ. ಈ ಕಂಪೆನಿಯು 70 ಬ್ರ್ಯಾಂಡ್ಗಳ್ನು ನೋಡಿಕೊಳ್ಳುತ್ತದೆ. ಅದರಲ್ಲಿ ಲೂಯಿಸ್ ವ್ಯೂಟನ್, ಮೊಯಿಟ್, ಫೆಂಡಿ, ಕ್ರಿಶ್ಚಿಯನ್ ಡಿಯಾರ್, ಗಿವೆಂಚಿ ಮತ್ತು ಸೆಫೊರಾ ಸಹ ಒಳಗೊಂಡಿದೆ.
2021ರ ಮೊದಲ ಆರು ತಿಂಗಳಲ್ಲಿ LVMH ಪ್ರಬಲ ಮಾರಾಟ ಮಾಡಿದ್ದು, ಉತ್ತಮ ಲಾಭವನ್ನು ಗಳಿಸಿದೆ. ಕಳೆದ ವರ್ಷ ಕೊರೊನಾದಿಂದ ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಪರಿಣಾಮ ಆಗಿತ್ತು. ಈ ಸಮೂಹದ ನಿವ್ವಳ ಲಾಭವು ವಾರ್ಷಿಕ ಆಧಾರದಲ್ಲಿ ತಳಮಟ್ಟದಿಂದ 10 ಪಟ್ಟು ಹೆಚ್ಚಳವಾಗಿ, 630 ಕೋಟಿ ಅಮೆರಿಕನ್ ಡಾಲರ್ ಮುಟ್ಟಿತ್ತು. ಅದು ಈ ವರ್ಷದ ಜನವರಿಯಿಂದ ಜೂನ್ ತಿಂಗಳ ಲೆಕ್ಕಾಚಾರ. ವರ್ಷದ ಮೊದಲರ್ಧ ಆದಾಯವು 12 ತಿಂಗಳ ಆಧಾರದಲ್ಲಿ ಶೇ 53ರಷ್ಟು ಹೆಚ್ಚಾಗಿದೆ. ವಿಶ್ಲೇಷಕರ ನಿರೀಕ್ಷೆಯನ್ನೂ ಮೀರಿದೆ. ಗುರುವಾರದಂದು GMT ಮಧ್ಯಾಹ್ನ 1.10ರ ಹೊತ್ತಿಗೆ LVMH ಷೇರಿನ ಬೆಲೆಯಲ್ಲಿ ಶೇ 2.4ರಷ್ಟು ಮೇಲೇರಿ 697.10 ಅಮೆರಿಕನ್ ಡಾಲರ್ನಲ್ಲಿ ವಹಿವಾಟು ನಡೆಸುತ್ತಿತ್ತು/ ಮಾರುಕಟ್ಟೆ ಬಂಡವಾಳ 352.22 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿತ್ತು.
ಈ ವರ್ಷದ ಆರಂಭದ ಜನವರಿಯಲ್ಲಿ ಅಮೆರಿಕದ ಆಭರಣ ತಯಾರಿಕಾ ಕಂಪೆನಿಯಾದ ಟಿಫಾನಿ ಅಂಡ್ ಕೋ ಜತೆಗೆ15.8 ಬಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ ಮುಗಿಸಿದ್ದರು. ಇದು ಅತ್ಯಂತ ದೊಡ್ಡ ಮೊತ್ತದ ವಿಲಾಸಿ ಬ್ರ್ಯಾಂಡ್ ಖರೀದಿ ವ್ಯವಹಾರ ಆಗಿದೆ. 2019ರಲ್ಲಿ LVMHನಿಂದ 3.2 ಬಿಲಿಯನ್ ಅಮೆರಿಕನ್ ಡಾಲರ್ಗೆ ವಿಲಾಸಿ ಹಾಸ್ಪಿಟಾಲಿಟಿ ಸಮೂಹ ಬೆಲ್ಮಂಡ್ ಖರೀದಿಸಿದೆ. ಆ ಕಂಪೆನಿಯು 46 ಹೋಟೆಲ್ಗಳು, ರೈಲುಗಳು ಮತ್ತು ನದಿಯ ಕ್ರೂಸ್ಗಳನ್ನು ಹೊಂದಿದೆ ಅಥವಾ ನಿರ್ವಹಿಸುತ್ತದೆ.
ಈ ಮಧ್ಯೆ, ಜೆಫ್ ಬೆಜೋಸ್ ನಿವ್ವಳ ಆಸ್ತಿ ಮೌಲ್ಯವು ಕಳೆದ ವಾರ ಕಡಿಮೆ ಆಗಿದ್ದು, ಎರಡನೇ ತ್ರೈಮಾಸಿಕದ ಗಳಿಕೆ ಫಲಿತಾಂಶ ಹೊರಬಂದ ಮೇಲೆ ಅಮೆಜಾನ್ ಷೇರಿನ ಬೆಲೆಯಲ್ಲಿ ಇಳಿಕೆ ಆಗಿದೆ. ಅಮೆಜಾನ್ ಕಂಪೆನಿಯು 113 ಬಿಲಿಯನ್ ಆದಾಯ ಮತ್ತು 7.8 ಬಿಲಿಯನ್ ಅಮೆರಿಕನ್ ಡಾಲರ್ ಲಾಭ ಗಳಿಸಿದೆ. ಮಾರುಕಟ್ಟೆ ನಿರೀಕ್ಷೆಯನ್ನು ಈ ಸಂಖ್ಯೆಯು ಮುಟ್ಟಿಲ್ಲ.
ಇದನ್ನೂ ಓದಿ: Jeff Bezos: ವಿಶ್ವದ ನಂಬರ್ 1 ಶ್ರೀಮಂತ ಜೆಫ್ ಬೆಜೋಸ್ ಆಸ್ತಿ ಭಾರತದ ರೂಪಾಯಿ ಲೆಕ್ಕದಲ್ಲಿ 15,66,948.60 ಕೋಟಿ
(72 Year Old Bernard Arnault Become Worlds Richest And Surpassed Bezos And Musk)