ಪ್ಯಾನ್ ಕಾರ್ಡ್​-ಆಧಾರ್​ ಕಾರ್ಡ್ ಲಿಂಕ್ ಮಾಡುವ ಗಡುವು ಮತ್ತೆ ವಿಸ್ತರಣೆ: ಜೂನ್ 30ರವರೆಗೆ ಅವಕಾಶ

|

Updated on: Mar 31, 2021 | 9:09 PM

PAN Card Aadhaar Card link: ಕೊರೊನಾ ಸಂಕಷ್ಟದಿಂದ ಕೆಲ ನಾಗರಿಕರಿಗೆ ಆಧಾರ್​-ಪ್ಯಾನ್ ಲಿಂಕ್ ಮಾಡಲು ಸಾಧ್ಯವಾಗಿರಲಿಲ್ಲ. ಇದನ್ನು ಗಮನಿಸಿರುವ ಕೇಂದ್ರ ಸರ್ಕಾರವು ಜೂನ್ 30ರವರೆಗೆ ಜೋಡಣೆಗೆ ಗಡುವು ವಿಸ್ತರಿಸಿ ಆದೇಶ ಹೊರಡಿಸಿದೆ.

ಪ್ಯಾನ್ ಕಾರ್ಡ್​-ಆಧಾರ್​ ಕಾರ್ಡ್ ಲಿಂಕ್ ಮಾಡುವ ಗಡುವು ಮತ್ತೆ ವಿಸ್ತರಣೆ: ಜೂನ್ 30ರವರೆಗೆ ಅವಕಾಶ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಪ್ಯಾನ್ ಕಾರ್ಡ್​ ಸಂಖ್ಯೆಯನ್ನು ಆಧಾರ್​ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ. ಇಂದು (ಮಾರ್ಚ್ 31) ಎರಡೂ ಸಂಖ್ಯೆಗಳನ್ನು ಲಿಂಕ್​ ಮಾಡಲು ಕೊನೆಯದಿನ ಎಂದು ಈ ಹಿಂದೆ ಹೇಳಲಾಗಿತ್ತು. ಕೊರೊನಾ ಸಂಕಷ್ಟದಿಂದ ಕೆಲ ನಾಗರಿಕರಿಗೆ ಆಧಾರ್​-ಪ್ಯಾನ್ ಲಿಂಕ್ ಮಾಡಲು ಸಾಧ್ಯವಾಗಿರಲಿಲ್ಲ. ಇದನ್ನು ಗಮನಿಸಿರುವ ಕೇಂದ್ರ ಸರ್ಕಾರವು ಜೂನ್ 30ರವರೆಗೆ ಜೋಡಣೆಗೆ ಗಡುವು ವಿಸ್ತರಿಸಿ ಆದೇಶ ಹೊರಡಿಸಿದೆ.

ಇದರ ಜೊತೆಗೆ ಆದಾಯ ತೆರಿಗೆ ಕಾಯ್ದೆ 1961ರ 148ನೇ ವಿಧಿಯ ಅನ್ವಯ ನೊಟೀಸ್ ಜಾರಿಗೊಳಿಸುವ ದಿನಾಂಕ, ವಿವಾದ ಇತ್ಯರ್ಥ ಮಂಡಳಿಯಿಂದ ಹೊರಡಿಸಬೇಕಾದ ಆದೇಶ ಮತ್ತು ಲೆವಿ ಸ್ಟೇಟ್​ಮೆಂಟ್​ಗಳನ್ನು ನೀಡುವ ಗಡುವನ್ನೂ 30ನೇ ಏಪ್ರಿಲ್, 2021ಕ್ಕೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

ಲಿಂಕ್ ಮಾಡದಿದ್ರೆ ಹಲವು ಸಮಸ್ಯೆ
ಆಧಾರ್​ ಕಾರ್ಡ್-ಪಾನ್​ ಕಾರ್ಡ್​ ಲಿಂಕ್​ ಮಾಡಿಕೊಳ್ಳದಿದ್ದರೆ ನಿಮ್ಮ ಪ್ಯಾನ್​ ಕಾರ್ಡ್ ನಿಷ್ಕ್ರಿಯ ಆಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿತ್ತು. ಮಾರ್ಚ್ 31ರ ಒಳಗೆ ಲಿಂಕ್ ಮಾಡದಿದ್ದರೆ ದಂಡ ವಿಧಿಸುವ ಬಗ್ಗೆಯೂ ಪ್ರಸ್ತಾಪಿಸಿತ್ತು. ಈಗೇನೋ ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್​ ಮತ್ತು ಆಧಾರ್​ ಕಾರ್ಡ್​ ಜೋಡಣೆಗೆ ಜೂನ್ 30ರವರೆಗೆ ಗಡುವು ವಿಸ್ತರಿಸಿದೆ. ಕೊನೆಯ ದಿನಾಂಕದವರೆಗೂ ಏಕೆ ಕಾಯ್ತೀರಿ? ಈವರೆಗೆ ಲಿಂಕ್ ಮಾಡಿಕೊಳ್ಳದಿದ್ದರೆ ಇಂದೇ ಲಿಂಕ್ ಮಾಡಿಕೊಳ್ಳಿ. ಲಿಂಕ್ ಮಾಡಿಕೊಳ್ಳದಿದ್ದರೆ ಹಲವು ತೊಂದರೆಗಳು ಎದುರಾಗಬಹುದು.

ಲಿಂಕ್ ಆಗಿಲ್ಲ ಎಂಬ ಕಾರಣಕ್ಕೆ ಪ್ಯಾನ್ ಕಾರ್ಡ್ ನಿಷ್ಕ್ರಿಯ ಆದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಬ್ಯಾಂಕಿಂಗ್​ ವ್ಯವಹಾರಗಳಿಗೆ ತೊಡಕಾಗುತ್ತದೆ. ಯಾವುದೇ ಬ್ಯಾಂಕ್​ಗಳಲ್ಲಿ 50,000 ರೂ.ಗೂ ಮೇಲ್ಪಟ್ಟು ಹಣದ ವ್ಯವಹಾರ ಮಾಡುವಾಗ ಪ್ಯಾನ್​ ನಂಬರ್ ಬೇಕಾಗುತ್ತದೆ. ಒಮ್ಮೆ ನಿಮ್ಮ ಪ್ಯಾನ್​ ಕಾರ್ಡ್ ನಿಷ್ಕ್ರಿಯಗೊಂಡಿದ್ದರೆ ನಿಮಗೇನಾದರೂ ಎಮರ್ಜನ್ಸಿ ಇದ್ದಾಗ ಹಣ ತೆಗೆಯಲಾಗದೆ ಅಥವಾ ಬೇರೆಯವರ ಖಾತೆಗೆ ಹಾಕಲಾಗದೆ ಪರದಾಡಬೇಕಾಗುತ್ತದೆ.

ಇನ್ನು ಐಟಿ ರಿಟರ್ನ್​ ಮಾಡಲು ಸಾಧ್ಯವಾಗುವುದಿಲ್ಲ. ಹಾಗೇ ಯಾವುದೇ ಬ್ಯಾಂಕ್​ ಅಕೌಂಟ್​ನಲ್ಲಿ ಹೊಸ ಖಾತೆ ತೆರೆಯಲೂ ಸಾಧ್ಯವಾಗುವುದಿಲ್ಲ. ಹೆಚ್ಚಿನ ಮೊತ್ತದ ಟಿಡಿಎಸ್​ ಪಾವತಿಸಬೇಕಾಗುತ್ತದೆ. ಇನ್ನು ಐಟಿ ರಿಟರ್ನ್​ ವೇಳೆಯಲ್ಲಿ ಪ್ಯಾನ್ ನಂಬರ್​ ಒದಗಿಸದೆ ಇದ್ದರೆ 10,000 ರೂ.ವರೆಗೂ ದಂಡ ವಿಧಿಸಬದುದು. 1000 ರೂ. ಆಗಲೀ, 10 ಸಾವಿರವೇ ಆಗಲಿ.. ಮೌಲ್ಯ ಇದ್ದೇ ಇದೆ ತಾನೇ? ಯಾಕೆ ಸುಮ್ಮನೆ ದಂಡಕ್ಕಾಗಿ ಅದನ್ನು ಖಾಲಿ ಮಾಡುತ್ತೀರಿ. ಇಂದೇ ಆಧಾರ್ ಪಾನ್ ಲಿಂಕ್ ಮಾಡಿಕೊಳ್ಳಿ.

ಆಧಾರ್ ಕಾರ್ಡ್​-ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೀಗೆ..
ಆಧಾರ್​ ಕಾರ್ಡ್​ನೊಂದಿಗೆ ಪಾನ್​ ಕಾರ್ಡ್​ ಲಿಂಕ್​ ಮಾಡಲು ತುಸು ಕಾಲಾವಧಿ ವಿಸ್ತರಿಸಿದ್ದರೂ ಇಂದಲ್ಲಾ ನಾಳೆ ನೀವು ಲಿಂಕ್ ಮಾಡಿಕೊಳ್ಳಲೇ ಬೇಕು. ನಿಮ್ಮ ಆಧಾರ್ ಹಾಗೂ ಪಾನ್​ ಕಾರ್ಡ್​ಗಳು ಲಿಂಕ್​ ಆಗದೆ ಇದ್ದರೆ ಬೇಗ ಮಾಡಿಕೊಂಡುಬಿಡಿ.

ಪ್ರಸ್ತುತ ಇರುವ ಕಾನೂನಿನ ಅಡಿ ಆದಾಯ ತೆರಿಗೆ ಸಲ್ಲಿಸಲು (ITR) ಆಧಾರ್ ಕಾರ್ಡ್ ಹಾಗೂ ಪಾನ್​ ಕಾರ್ಡ್​ಗಳು ಲಿಂಕ್ ಆಗಿರುವುದು ಕಡ್ಡಾಯ. ಆದರೆ ಅವರಷ್ಟೇ ಅಲ್ಲದೆ, ಭಾರತದ ಪ್ರತಿ ನಾಗರಿಕನೂ ಕೊಟ್ಟ ಅವಧಿಯ ಒಳಗೆ ಆಧಾರ್​-ಪಾನ್​ನ್ನು ಕಡ್ಡಾಯವಾಗಿ ಲಿಂಕ್ ಮಾಡಿಕೊಳ್ಳಬೇಕು ಎಂದು ಕೇಂದ್ರ ನೇರತೆರಿಗೆಗಳ ಮಂಡಳಿ (ಸಿಬಿಡಿಟಿ) ಸ್ಪಷ್ಟಪಡಿಸಿದೆ. ಒಂದೊಮ್ಮೆ ಯಾರಾದರೂ ಪಾನ್​ ಕಾರ್ಡ್ ಮತ್ತು ಆಧಾರ್​ ಕಾರ್ಡ್​ ಲಿಂಕ್ ಮಾಡಿಕೊಳ್ಳದೆ ಇದ್ದರೆ, ಅವರಿಗೆ ಯಾವುದೇ ಹಣಕಾಸು ವ್ಯವಹಾರ ಅಂದರೆ ಬ್ಯಾಂಕ್​ ಅಕೌಂಟ್​ ಓಪನ್​ ಮಾಡಲು, ಸರ್ಕಾರದಿಂದ ಸಿಗುವ ಪಿಂಚಣಿ, ಸ್ಕಾಲರ್​ಶಿಪ್​, ಎಲ್​ಪಿಜಿ ಸಬ್ಸಿಡಿ ಪಡೆಯಲು ಪಾನ್​ ಕಾರ್ಡ್ ಬಳಕೆ ಮಾಡಲು ಸಾಧ್ಯವಿಲ್ಲದಂತೆ ಆಗುತ್ತದೆ ಎಂದೂ ತಿಳಿಸಿದೆ.

ನೀವು ಆನ್​​ಲೈನ್​ ಮೂಲಕವೇ ಆಧಾರ್​-ಪಾನ್​ ಲಿಂಕ್​ ಮಾಡಿಕೊಳ್ಳಬಹುದು. ಅದಕ್ಕೆ ಇಲ್ಲಿದೆ ನೋಡಿ ಮಾರ್ಗ
ಮೊದಲು ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್​ಕಾರ್ಡ್​ನ್ನು ರೆಡಿ ಆಗಿಟ್ಟುಕೊಳ್ಳಿ.

ಐಟಿ ಇಲಾಖೆಯ ಇ-ಫೈಲಿಂಗ್​ (E-Filing) ಪೋರ್ಟಲ್​ www.incometaxindiaefiling.gov.in ಗೆ ಭೇಟಿ ನೀಡಿ
ಹೋಂ ಪೇಜ್​ನಲ್ಲಿ ನಿಮ್ಮ ಎಡಗಡೆ ಕಾಣುವ ಲಿಸ್ಟ್​​ನಲ್ಲಿ ಲಿಂಕ್ ಆಧಾರ್​ ( Link Aadhaar) ಎಂಬಲ್ಲಿ ಕ್ಲಿಕ್​ ಮಾಡಿ.
ಆಗ ಒಂದು ಹೊಸ ಪೇಜ್​ ತೆರೆದುಕೊಳ್ಳುತ್ತದೆ. ಇದರಲ್ಲಿ ನಿಮ್ಮ ಪಾನ್​ ಸಂಖ್ಯೆ, ಆಧಾರ್ ಕಾರ್ಡ್​ ಸಂಖ್ಯೆ, ಆಧಾರ್ ಕಾರ್ಡ್​ನಲ್ಲಿರುವಂತೆಯೇ ಹೆಸರು ಬರೆಯಲು ಕಾಲಂ ಇರುತ್ತದೆ. ಅದರಲ್ಲಿ ಸರಿಯಾಗಿ ತುಂಬಿ.
ಆಧಾರ್ ಕಾರ್ಡ್​ನಲ್ಲಿ ನಿಮ್ಮ ಜನನ ವರ್ಷ ಮಾತ್ರ ನಮೂದಾಗಿದ್ದರೆ ಈ ಪೇಜ್​ನಲ್ಲಿ ಕಾಣಿಸಿಕೊಳ್ಳುವ ಬಾಕ್ಸ್​ನಲ್ಲಿ ಚೆಕ್​ ಮಾಡಿ. ಇಲ್ಲದಿದ್ದರೆ ಹಾಗೇ ಬಿಡಿ.

I agree to validate my Aadhar details with UIDAI ಎಂಬ ಸಾಲಿನ ಹಿಂದೆ ಇರುವ ಬಾಕ್ಸ್​ನಲ್ಲಿ ಕೂಡ ಟಿಕ್ ಮಾಡಿ. ಅದಾದ ಬಳಿಕ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳುವ captcha codenನ್ನು ನಮೂದಿಸಿ. ಇದರಲ್ಲಿ ಸಮಸ್ಯೆ ಆಗುತ್ತಿದ್ದರೆ ನೀವು ಒಟಿಪಿಗೆ ರಿಕ್ವೆಸ್ಟ್ ಮಾಡಬಹುದು. ಬಳಿಕ ಕೆಳಗೆ ಕಾಣಿಸಿಕೊಳ್ಳುವ Link Aadhaar ಮೇಲೆ ಕ್ಲಿಕ್ ಮಾಡಿದರೆ ಆಯಿತು.

ಮೊಬೈಲ್​ನಲ್ಲೂ ಲಿಂಕ್ ಮಾಡಿಕೊಳ್ಳಿ
ಮೊಬೈಲ್​ನಲ್ಲಿ ಕೂಡ ಸಿಂಪಲ್ ಆಗಿ ಆಧಾರ್​ ಮತ್ತು ಪಾನ್ ಕಾರ್ಡ್​ ಲಿಂಕ್​ ಮಾಡಿಕೊಳ್ಳಬಹುದಾಗಿದೆ. UIDPAN< ಆಧಾರ್​ ಕಾರ್ಡ್​ನ 12 ಸಂಖ್ಯೆಗಳು >< ಪಾನ್​ ಕಾರ್ಡ್​ನ 10 ಡಿಜಿಟ್​ಗಳು> ಈ ಫಾರ್ಮೇಟ್​ನಲ್ಲಿ ಬರೆದು, 567678 ಅಥವಾ 56161ಕ್ಕೆ ಎಸ್​ಎಂಎಸ್ ಮಾಡಿದರೆ ಆಯಿತು.

ಉದಾಹರಣೆಗೆ ನಿಮ್ಮ ಆಧಾರ್​ ನಂಬರ್ 108956743120 ಮತ್ತು ಪಾನ್ ನಂಬರ್ ABCD1234F ಎಂದಿಟ್ಟುಕೊಳ್ಳೋಣ. ಈಗ ನೀವು ಮೊದಲು UIDAI ಅಂತ ಟೈಪ್​ ಮಾಡಿ ಒಂದು ಸ್ಪೇಸ್​ ಕೊಟ್ಟು, 108956743120 ABCD1234F ಅಂತ ಬರೆದು 567678 or 56161ಕ್ಕೆ ಕಳಿಸಿ. ನಿಮ್ಮ ಆಧಾರ್​ ಮತ್ತು ಪಾನ್​ ಕಾರ್ಡ್ ಲಿಂಕ್​ ಆದ ತಕ್ಷಣ ನಿಮಗೆ ಒಂದು ನೋಟಿಫಿಕೇಶನ್ ಬರುತ್ತದೆ.

ಇದನ್ನೂ ಓದಿ: PAN-Aadhaar Linking: ಆನ್​ಲೈನ್ ಮೂಲಕ ಸುಲಭವಾಗಿ ಮಾಡಿಕೊಳ್ಳುವ ವಿಧಾನ ಇಲ್ಲಿದೆ ನೋಡಿ…

ಇದನ್ನೂ ಓದಿ: ಆಧಾರ್​- ಪ್ಯಾನ್​ ಲಿಂಕ್ ನಿರ್ಲಕ್ಷ್ಯ ಮಾಡಿದರೆ ಎದುರಾಗುವ ತೊಡಕುಗಳು ಹಲವು

Published On - 8:46 pm, Wed, 31 March 21