ನೀವು ಇವತ್ತು ಪ್ರತಿಷ್ಠಿತ ಆನ್ಲೈನ್ ಶಿಕ್ಷಣ ಸಂಸ್ಥೆಗಳಿಗೆ (Ed-Tech Companies) ಮಕ್ಕಳನ್ನು ಸೇರಿಸಬೇಕೆಂದರೆ ಏನಿಲ್ಲವೆಂದರೂ ಒಂದು ಕೋರ್ಸ್ಗೆ ದುಬಾರಿ ಫೀಸ್ ಕಟ್ಟಬೇಕು. ಅದರಲ್ಲೂ ಸಿಇಟಿ, ನೀಟ್ ಹಾಗೂ ಇತರ ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳಿಗೆ ಲಕ್ಷಾಂತರ ಶುಲ್ಕ ಪಾವತಿಸಬೇಕು. ಆದರೆ, ಕೆಲವೇ ವರ್ಷಗಳ ಹಿಂದೆ ಆರಂಭವಾದ ಪ್ರೆಪ್ಇನ್ಸ್ಟಾ (PrepInsta Technologies) ವರ್ಷಕ್ಕೆ ಕೇವಲ 6,000 ರೂಪಾಯಿ ಹಣಕ್ಕೆ ಕೋರ್ಸ್ ಆಫರ್ ಮಾಡುತ್ತಿದೆ. ಶಿಕ್ಷಣ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರೆಪ್ಇನ್ಸ್ಟಾ ದೊಡ್ಡ ಮಟ್ಟಕ್ಕೆ ಸಂಚಲನವನ್ನೇ ಸೃಷ್ಟಿಸುತ್ತಿದೆ. ವಿದ್ಯಾರ್ಥಿಗಳ, ಅದರಲ್ಲೂ ಕೆಳಸ್ತರದ ನಗರ ಮತ್ತು ಪಟ್ಟಣವಾಸಿ ಮಕ್ಕಳ ಪಾಲಿಗೆ ಆಶಾಕಿರಣವಾಗುತ್ತಿದೆ ಪ್ರೆಪ್ಇನ್ಸ್ಟಾ. ಈ ಸಂಸ್ಥೆಯ ರೂವಾರಿ ಹಾಗೂ ಸಹ–ಸಂಸ್ಥಾಪಕ ಆಶಯ್ ಮಿಶ್ರಾ. 2018ರಲ್ಲಿ ಇವರು ಹಾಗೂ ಇತರ ಇಬ್ಬರು ಸೇರಿ ಆರಂಭಿಸಿದ ಪ್ರೆಪ್ಇನ್ಸ್ಟಾ ಇವತ್ತು ವರ್ಷಕ್ಕೆ 20-25 ಕೋಟಿ ರೂ ಆದಾಯ ಮಾಡುತ್ತಿರುವ ಸಂಸ್ಥೆಯಾಗಿ ಬೆಳೆದಿದೆ.
ಆಶಯ್ ಮಿಶ್ರಾ, ಅತುಲ್ಯ ಕೌಶಿಕ್ ಮತ್ತು ಮನೀಶ್ ಅಗರ್ವಾಲ್ ಅವರು ಪ್ರೆಪ್ಇನ್ಸ್ಟಾ ಟೆಕ್ನಾಲಜೀಸ್ ಸಂಸ್ಥೆಯ ಸ್ಥಾಪಕರು. 2018ರಲ್ಲಿ ಕೇವಲ 99 ರೂ ಬಂಡವಾಳದೊಂದಿಗೆ ಈ ಕಂಪನಿ ಆರಂಭವಾಗಿತ್ತು. ಪೂರ್ಣಪ್ರಮಾಣದಲ್ಲಿ ವ್ಯವಹಾರಕ್ಕಿಳಿಯಲು ಎರಡು ವರ್ಷ ಬೇಕಾಯಿತು. ಆ ಬಳಿಕ ಪ್ರಿಪ್ಇನ್ಸ್ಟಾ ಸಂಸ್ಥೆ ಹಿಂದಿರುಗಿ ನೋಡಿದ್ದೇ ಇಲ್ಲ. ಇದರ ಸಕ್ರಿಯ ವಿದ್ಯಾರ್ಥಿಗಳ ಸಂಖ್ಯೆ 2.25 ಲಕ್ಷಕ್ಕೆ ಬೆಳೆದಿದೆ. ಈ ವರ್ಷ ಪ್ರಿಪ್ಇನ್ಸ್ಟಾ ಟೆಕ್ನಾಲಜೀಸ್ನ ಆದಾಯ ಸುಮಾರು 20-25ರಷ್ಟು ಇರುವ ಅಂದಾಜಿದೆ. ಇದು ನಿಜವೇ ಆದಲ್ಲಿ ಹಿಂದಿನ ಮೂರು ವರ್ಷಕ್ಕಿಂತ ಈ ಬಾರಿ ಅದರ ಆದಾಯ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಈ ಕಂಪನಿಯ ಇಬಿಐಟಿಡಿಎ (ತೆರಿಗೆ ಪಾವತಿಗೆ ಮುಂಚಿನ ಲಾಭದ ಮೊತ್ತ) ಕೂಡ ಶೇ. 40ರಷ್ಟು ಇದೆ.
2020ರಲ್ಲಿ ಇದು ಪೂರ್ಣ ವ್ಯವಹಾರ ಆರಂಭಿಸಿದ ಮೊದಲ ವರ್ಷ. ಆಗಲೇ ಅದು ನಿವ್ವಳ ಲಾಭ ದಾಖಲಿಸಿತ್ತು. ಅದರಲ್ಲೂ ಕಡಿಮೆ ಶುಲ್ಕ ಪಡೆದೂ ಕಂಪನಿ ಲಾಭ ಮಾಡಿದ್ದು ಗಮನಾರ್ಹ. ಎಜು ಟೆಕ್ ಸಂಸ್ಥೆಗಳು ಈ ರೀತಿಯ ಮೊದಲ ವರ್ಷವೇ ಲಾಭ ಮಾಡುವುದು ಬಹಳ ಅಪರೂಪ. ಪ್ರಿಪ್ಇನ್ಸ್ಟಾ ಟೆಕ್ನಾಲಜೀಸ್ಗೆ ಮೊದಲ ಹೆಜ್ಜೆಯೇ ಯಶಸ್ಸಿನ ಮೆಟ್ಟಿಲಾಗಿದೆ.
ಪ್ರೆಪ್ಇನ್ಸ್ಟಾ ಟೆಕ್ನಾಲಜೀಸ್ ಒಂದು ಒಟಿಟಿ ಪ್ಲಾಟ್ಫಾರ್ಮ್ ಆಗಿ ರೂಪಿತವಾಗಿದ್ದು 200ಕ್ಕೂ ಹೆಚ್ಚು ಕೋರ್ಸ್ಗಳನ್ನು ಮಕ್ಕಳಿಗೆ ಆಫರ್ ಮಾಡುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇಂಥದ್ದೇ ರೀತಿಯ ಬೇರೆ ಕಂಪನಿಗಳು ಕೋರ್ಸ್ಗಳಿಗೆ ಲಕ್ಷಾಂತರ ರೂ ಶುಲ್ಕ ಪಡೆದರೆ ಪ್ರೆಪ್ಇನ್ಸ್ಟಾ ಕೇವಲ 6,000 ರೂ ಚಾರ್ಜ್ ಮಾಡುತ್ತದೆ. ಸಾಂಪ್ರದಾಯಿಕ ಪದವಿ, ಸ್ನಾತಕೋತ್ತರ ಪದವಿ ಪಡೆದು ಕೆಲಸಕ್ಕೆ ಹೋಗಲು ಅಣಿಗೊಳ್ಳುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಸೇರಲು ಬೇಕಾದ ಸಿದ್ಧತೆಯನ್ನು ಪ್ರಿಪ್ಇನ್ಸ್ಟಾ ತನ್ನ ವಿವಿಧ ಕೋರ್ಸ್ಗಳ ಮೂಲಕ ಒದಗಿಸುತ್ತದೆ.
ಇದನ್ನೂ ಓದಿ: Lady Duped: ವರ್ಕ್ ಫ್ರಂ ಹೋಮ್ ಆಸೆಗೆ ಬಿದ್ದ ಯುವತಿಗೆ 11ಲಕ್ಷ ರೂ ಪಂಗನಾಮ; ದುಷ್ಕರ್ಮಿಗಳ ಚಾಕಚಕ್ಯತೆ ಬಗ್ಗೆ ಹುಷಾರ್..!
ಶಿಕ್ಷಣ ನೀಡುವುದರ ಜೊತೆಗೆ ಜಾಬ್ ಇಂಟರ್ವ್ಯೂಗೆ ಸಿದ್ಧತೆ ನಡೆಸುವುದು, ಕೌಶಲ್ಯ ಬೆಳೆಸುವ ಪ್ರೋಗ್ರಾಮ್ಗಳು, ಪ್ಲೇಸ್ಮೆಂಟ್ ನೆರವು ಇತ್ಯಾದಿ ಪೂರಕ ವಿಚಾರಗಳಿಗೂ ಗಮನ ಹರಿಸಲಾಗುತ್ತದೆ. ಪ್ರಿಪ್ಇನ್ಸ್ಟಾದಲ್ಲಿ ಕಲಿತ ವಿದ್ಯಾರ್ಥಿಗಳು ಮೈಕ್ರೋಸಾಫ್ಟ್, ಅಮೇಜಾನ್, ಸಿಸ್ಕೋ, ಅಡೋಬ್, ಗೂಗಲ್, ಅಕ್ಸೆಂಚರ್, ಇನ್ಫೋಸಿಸ್, ಎಚ್ಸಿಎಲ್ ಮೊದಲಾದ ಸಂಸ್ಥೆಗಳಿಗೆ ನೇಮಕವಾಗಿದ್ದಾರೆ.
ಆಶಯ್ ಮಿಶ್ರಾ ತಮಿಳುನಾಡಿನ ಪ್ರಸಿದ್ಧ ವೇಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಟೆಕ್ ಎಂಜಿನಿಯರಿಂಗ್ ಓದಿದವರು. ಅತುಲ್ಯ ಕೌಶಿಕ್ ಮತ್ತು ಮನೀಶ್ ಅಗರ್ವಾಲ್ ಜೊತೆ ಸೇರಿ ಪ್ರೆಪ್ಇನ್ಸ್ಟಾ ಟೆಕ್ನಾಲಜೀಸ್ ಸ್ಥಾಪನೆ ಮಾಡಿದ ಆಶಯ್ ಮಿಶ್ರಾ ಸಿಒಒ ಆಗಿ ಕಂಪನಿಯ ಬೆಳವಣಿಗೆಯಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ.
ಆಶಯ್ ಮಿಶ್ರಾ ಸೇರದಿಂತೆ ಪ್ರಿಪ್ಇನ್ಸ್ಟಾದ ಮೂವರು ಸಂಸ್ಥಾಪಕರು 2023ರ ಅಂಡರ್ 30 ವಯೋಮಾನದ 30 ಸಾಧಕರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Published On - 3:42 pm, Sun, 23 April 23