Abu Dhabi: ಅಬುಧಾಬಿ ವಿಮಾನ ನಿಲ್ದಾಣ ಪ್ರವೇಶಿಸಲು ಪಾಸ್​​ಪೋರ್ಟ್​, ಟಿಕೆಟ್ ಬೇಕಿಲ್ಲ; ಮುಖವೇ ಬೋರ್ಡಿಂಗ್ ಪಾಸ್!

| Updated By: Ganapathi Sharma

Updated on: Dec 20, 2022 | 12:31 PM

ವಿಮಾನ ನಿಲ್ದಾಣದ ಹಲವಾರು ಟಚ್‌ಪಾಯಿಂಟ್‌ಗಳಲ್ಲಿ ಪ್ರಯಾಣಿಕರ ವಿವರಗಳನ್ನು ಪರಿಶೀಲಿಸಲು ಅತ್ಯಾಧುನಿಕ ಬಯೋಮೆಟ್ರಿಕ್ ಕ್ಯಾಮೆರಾಗಳನ್ನು ಬಳಸಲಾಗುವುದು. ಇದರಲ್ಲಿ ಸೆಲ್ಫ್ ಸರ್ವೀಸ್ ಬ್ಯಾಗೇಜ್ ಡ್ರಾಪ್, ಪಾಸ್‌ಪೋರ್ಟ್ ನಿಯಂತ್ರಣ, ಬ್ಯುಸಿನೆಸ್ ಕ್ಲಾಸ್ ವಿಶ್ರಾಂತಿ ಕೊಠಡಿ ಮತ್ತು ಬೋರ್ಡಿಂಗ್ ಗೇಟ್‌ಗಳು ಸೇರಿವೆ ಎಂದು ವರದಿ ಹೇಳಿದೆ.

Abu Dhabi: ಅಬುಧಾಬಿ ವಿಮಾನ ನಿಲ್ದಾಣ ಪ್ರವೇಶಿಸಲು ಪಾಸ್​​ಪೋರ್ಟ್​, ಟಿಕೆಟ್ ಬೇಕಿಲ್ಲ; ಮುಖವೇ ಬೋರ್ಡಿಂಗ್ ಪಾಸ್!
ಸಾಂದರ್ಭಿಕ ಚಿತ್ರ (ಕೃಪೆ -ಎಎನ್​ಐ)
Image Credit source: ANI
Follow us on

ಅಬುಧಾಬಿ: ಯುಎಇ ರಾಜಧಾನಿ ಅಬುಧಾಬಿ ವಿಮಾನ ನಿಲ್ದಾಣ (Abu Dhabi Airport) ಪ್ರವೇಶಿಸಬೇಕಿದ್ದರೆ ಇನ್ನು ಟಿಕೆಟ್ (Ticket), ಪಾಸ್​ಪೋರ್ಟ್ (Passport) ಅಗತ್ಯವಿಲ್ಲ. ಪ್ರಯಾಣಿಕರ ಮುಖವೇ ಬೋರ್ಡಿಂಗ್ ಪಾಸ್ (Boarding Pass) ಆಗಲಿದೆ! ಹೌದು, ಪ್ರಯಾಣಿಕರ ಮುಖವನ್ನೇ ಸ್ಕ್ಯಾನ್ ಮಾಡಿ ಒಳ ಬಿಡುವಂಥ ಬಯೋಮೆಟ್ರಿಕ್ (Biometric) ವ್ಯವಸ್ಥೆಯನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ ಎಂದು ‘ಖಲೀಜ್ ಟೈಮ್ಸ್’ ಮಾಧ್ಯಮ ವರದಿ ಮಾಡಿದೆ. ಸದ್ಯ ಈ ಫೇಸ್ ರೆಕಗ್ನಿಷನ್ (Face Recognition) ಸೇವೆ ಆಯ್ದ ಬ್ಯಾಗೇಜ್ ಟಚ್​ಪಾಯಿಂಟ್​ಗಳಲ್ಲಿ, ವಲಸೆ ಇ-ಗೇಟ್​ಗಳಲ್ಲಿ ಮತ್ತು ಬೋರ್ಡಿಂಗ್ ಗೇಟ್​ಗಳಲ್ಲಿ ಲಭ್ಯವಿದೆ ಎಂದು ವರದಿ ತಿಳಿಸಿದೆ.

ಅತ್ಯಾಧುನಿಕ ಕೃತಕಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಬುಧಾಬಿ ಮೂಲದ ಟೆಕ್ ಕಂಪನಿ ನೆಕ್ಸ್ಟ್​50 (NEXT50) ಅಭಿವೃದ್ಧಿಪಡಿಸಿದೆ. ಕಂಪನಿಯು ಐಡಿಇಎಂಐಎ ಮತ್ತು ಎಸ್​ಟಿಎ ಪಾಲುದಾರಿಕೆಯೊಂದಿಗೆ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಕೃತಕಬುದ್ಧಿಮತ್ತೆ ತಂತ್ರಜ್ಞಾನ ಸೇವೆ ಒದಗಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೊಸ ತಂತ್ರಜ್ಞಾನವು ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲಿದೆ. ಮಿಡ್​ಫೀಲ್ಡ್ ಟರ್ಮಿನಲ್ ಬ್ಯುಲ್ಡಿಂಗ್​​​ನಲ್ಲಿಯೂ ಅಳವಡಿಸುವುದರೊಂದಿಗೆ ಎಲ್ಲ ಪ್ರಯಾಣಿಕ ಟಚ್​ಪಾಯಿಂಟ್​ಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಬುಧಾಬಿ ವಿಮಾನ ನಿಲ್ದಾಣ ಗುರುತಿಸಿಕೊಳ್ಳಲಿದೆ ಎಂದು ವರದಿ ತಿಳಿಸಿದೆ. ಎಮಿರೇಟ್ಸ್​ನ ಡಿಜಿಟಲ್ ರೂಪಾಂತರ ದೃಷ್ಟಿಕೋನದ ಅಂಗವಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ನೆಕ್ಸ್ಟ್50 ಸಿಇಒ ಇಬ್ರಾಹಿಂ ಅಲ್ ಮನೀ ತಿಳಿಸಿದ್ದಾರೆ.

ಇದನ್ನೂ ಓದಿ: Xiaomi Layoffs: ಉದ್ಯೋಗಿಗಳಿಗೆ ಶಾಕ್ ನೀಡಿದ ಶವೋಮಿ; ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ

ಯೋಜನೆ ಪೂರ್ತಿಯಾಗಿ ಪೂರ್ತಿಯಾಗಿ ಅನುಷ್ಠಾನಗೊಂಡ ನಂತರ ಈ ಪ್ರದೇಶದಲ್ಲಿ ಎಲ್ಲ ಪ್ರಯಾಣಿಕ ಟಚ್​ಪಾಯಿಂಟ್​ಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿದ ಏಕೈಕ ವಿಮಾನ ನಿಲ್ದಾಣವಾಗಿ ಗುರುತಿಸಿಕೊಳ್ಳಲಿದೆ. ವಿಶ್ವದಲ್ಲೇ ಅತ್ಯುತ್ತಮ ತಂತ್ರಜ್ಞಾನ ಆಧಾರಿತ ಸೇವೆ ನೀಡಬೇಕು. ಆ ಮೂಲಕ ಪ್ರಯಾಣಿಕರಿಗೆ ತಡೆರಹಿತ ಸೇವೆ ಒದಗಿಸಬೇಕು ಎಂಬುದು ಅಬಿಧಾಬಿ ವಿಮಾನ ನಿಲ್ದಾಣದ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ. ಬಯೋಮೆಟ್ರಿಕ್ ವ್ಯವಸ್ಥೆಯು ಪ್ರಯಾಣಿಕಸ್ನೇಹಿ, ಸರಳ ಹಾಗೂ ಸಂಪರ್ಕರಹಿತ ಆಗಿರಲಿದೆ. ಪ್ರಯಾಣಿಕರ ಕಾಯುವಿಕೆ ಅವಧಿಯನ್ನೂ ಕಡಿಮೆ ಮಾಡಲಿದೆ ಎಂದು ‘ಖಲೀಜ್ ಟೈಮ್ಸ್’ ವರದಿ ಹೇಳಿದೆ.

ವಿಮಾನ ನಿಲ್ದಾಣದ ಹಲವಾರು ಟಚ್‌ಪಾಯಿಂಟ್‌ಗಳಲ್ಲಿ ಪ್ರಯಾಣಿಕರ ವಿವರಗಳನ್ನು ಪರಿಶೀಲಿಸಲು ಅತ್ಯಾಧುನಿಕ ಬಯೋಮೆಟ್ರಿಕ್ ಕ್ಯಾಮೆರಾಗಳನ್ನು ಬಳಸಲಾಗುವುದು. ಇದರಲ್ಲಿ ಸೆಲ್ಫ್ ಸರ್ವೀಸ್ ಬ್ಯಾಗೇಜ್ ಡ್ರಾಪ್, ಪಾಸ್‌ಪೋರ್ಟ್ ನಿಯಂತ್ರಣ, ಬ್ಯುಸಿನೆಸ್ ಕ್ಲಾಸ್ ವಿಶ್ರಾಂತಿ ಕೊಠಡಿ ಮತ್ತು ಬೋರ್ಡಿಂಗ್ ಗೇಟ್‌ಗಳು ಸೇರಿವೆ ಎಂದು ವರದಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Tue, 20 December 22