
ನವದೆಹಲಿ, ಸೆಪ್ಟೆಂಬರ್ 28: ವಿಶ್ವದ ಅತಿದೊಡ್ಡ ಐಟಿ ಸರ್ವಿಸ್ ಕಂಪನಿಗಳಲ್ಲಿ ಒಂದೆನಿಸಿದ ಅಕ್ಸೆಂಚರ್ (Accenture) ತನ್ನ 11,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದೆ. ವಿಶ್ವಾದ್ಯಂತ ಇರುವ ತನ್ನ ವಿವಿಧ ಕಚೇರಿಗಳಲ್ಲಿನ ಉದ್ಯೋಗಿಗಳನ್ನು ಕಳೆದ ಮೂರು ತಿಂಗಳಿಂದ ಕೆಲಸದಿಂದ ತೆಗೆದುಹಾಕಿರುವುದು ವರದಿಯಾಗಿದೆ. ಕಂಪನಿಯ ಆದಾಯ ಏರಿಕೆಯಾಗಿದ್ದರೂ ಕಾರ್ಪೊರೇಟ್ ಬೇಡಿಕೆ ಕಡಿಮೆ ಆಗಿರುವುದು ಮತ್ತು ಎಐ ಟೆಕ್ನಾಲಜಿ ಅಳವಡಿಕೆ ಹೆಚ್ಚುತ್ತಿರುವುದು ಈ ಭಾರೀ ಪ್ರಮಾಣದ ಲೇ ಆಫ್ಗೆ ಕಾರಣ ಎಂದು ಹೇಳಲಾಗುತ್ತಿದೆ.
ಅಕ್ಸೆಂಚರ್ ಸಂಸ್ಥೆಯ ಸಿಇಒ ಜೂಲೀ ಸ್ವೀಟ್ ಅವರು ಈ ಲೇ ಆಫ್ ನಿರ್ಧಾರದ ಹಿಂದಿನ ಅನಿವಾರ್ಯತೆಯನ್ನು ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ, ಕಂಪನಿಗೆ ಬೇಕಾದ ಕೌಶಲ್ಯಗಳಿಗಾಗಿ ಈಗಿರುವ ಕೆಲ ಉದ್ಯೋಗಿಗಳಿಗೆ ರೀಸ್ಕಿಲ್ಲಿಂಗ್ ಮಾಡಿ ಭರಿಸಲು ಆಗುವುದಿಲ್ಲವಂತೆ.
ಇದನ್ನೂ ಓದಿ: ಪಾಕಿಸ್ತಾನ, ಚೀನಾ ಗಡಿಭಾಗದಲ್ಲಿ ದೇಶದ ರಕ್ಷಣೆಗೆ ಅನಂತ್ ಶಸ್ತ್ರ ಕ್ಷಿಪಣಿ: ಬಿಇಎಲ್ಗೆ ಗುತ್ತಿಗೆ
ಅಂದರೆ, ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳ ಬೇಡಿಕೆಗೆ ಅನುಗುಣವಾಗಿ ಎಲ್ಲಾ ಉದ್ಯೋಗಿಗಳೂ ವೇಗವಾಗಿ ಅಳವಡಿಸಿಕೊಳ್ಳಲು ಆಗುವುದಿಲ್ಲ. ಅಂಥವರಿಗೆ ಅಕ್ಸೆಂಚರ್ ಹೊರಗಿನ ಬಾಗಿಲು ತೋರಿದೆ.
2025ರ ಜೂನ್ ತಿಂಗಳಲ್ಲಿ ಅಕ್ಸೆಂಚರ್ನ ಒಟ್ಟೂ ಉದ್ಯೋಗಿಗಳ ಸಂಖ್ಯೆ 7,91,000 ಇತ್ತು. ಆಗಸ್ಟ್ ತಿಂಗಳ ಕೊನೆಯಲ್ಲಿ ಈ ಸಂಖ್ಯೆ 7,79,000ಕ್ಕೆ ಇಳಿದಿದೆ. ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಲೇ ಆಫ್ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ನವೆಂಬರ್ ತಿಂಗಳವರೆಗೂ ಇದು ಚಾಲನೆಯಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜಾಗತಿಕ ಸಾಲ 21 ಟ್ರಿಲಿಯನ್ ಡಾಲರ್ ಏರಿಕೆ; ಎಲ್ಲಾ ದೇಶಗಳ ಸಾಲ ಸೇರಿಸಿದರೆ ಎಷ್ಟಾಗುತ್ತೆ ಗೊತ್ತಾ?
ಈ ಲೇ ಆಫ್ನಿಂದ ಅಕ್ಸೆಂಚರ್ ಕಂಪನಿಗೆ ಒಂದು ಬಿಲಿಯನ್ ಡಾಲರ್ಗೂ ಹೆಚ್ಚಿನ ಹಣ ಉಳಿತಾಯವಾಗುವ ನಿರೀಕ್ಷೆ ಇದೆ. ಇದೇ ವೇಳೆ, ಎಐ ಕೇಂದ್ರಿತ ಪ್ರಾಜೆಕ್ಟ್ಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಪ್ರತಿಭೆಗಳನ್ನು ಉಳಿಸಿಕೊಳ್ಳಲೂ ಅಕ್ಸೆಂಚರ್ ಪ್ರಯತ್ನಿಸುತ್ತಿದೆ. ಹಾಗೆಯೇ, ಹೊಸ ಮಾದರಿ ಸಾಧನಗಳೆನಿಸಿದ ಏಜೆಂಟಿಕ್ ಎಐ ಮೇಲೆ ಕೇಂದ್ರಿತವಾಗಿ ಕೌಶಲ್ಯಮರುಪೂರಣ ಯೋಜನೆಗಳಲ್ಲಿ, ಅಥವಾ ಅಪ್ಸ್ಕಿಲ್ಲಿಂಗ್ ಪ್ರೋಗ್ರಾಮ್ಗಳಲ್ಲಿ ಅಕ್ಸೆಂಚರ್ ಹೂಡಿಕೆ ಮಾಡುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ