ನಿವೃತ್ತಿಗೆ ಮುನ್ನ ಇಪಿಎಫ್ ಹಣ ಹಿಂಪಡೆದರೆ ಏನು ಸಮಸ್ಯೆ? ಯಾವ ಕ್ರಮ ಜರುಗುವ ಸಾಧ್ಯತೆ?
EPF premature withdrawals: ಉದ್ಯೋಗಿಗಳ ಭವಿಷ್ಯದ ಭದ್ರತೆಗೆಂದು ಇಪಿಎಫ್ ಸ್ಕೀಮ್ ರೂಪಿಸಲಾಗಿದೆ. ನಿವೃತ್ತಿ ನಂತರ ಹಣ ಸಿಗಲೆಂದು ಇಪಿಎಫ್ ಸ್ಕೀಮ್ ಇದೆ. ಮಧ್ಯದಲ್ಲಿ ನಿರುದ್ಯೋಗ, ಮದುವೆ, ಅನಾರೋಗ್ಯ ಇತ್ಯಾದಿ ತುರ್ತು ಅಗತ್ಯಗಳಿಗೆ ವೆಚ್ಚಕ್ಕೆಂದು ವಿತ್ಡ್ರಾ ಮಾಡಲು ಅವಕಾಶ ಇದೆ. ಆದರೆ, ಸುಳ್ಳು ಕಾರಣ ನೀಡಿ ಹಣ ವಿತ್ಡ್ರಾ ಮಾಡಿದರೆ ನಿಮ್ಮ ಮೇಲೆ ಕ್ರಮ ಜರುಗಬಹುದು.

ಖಾಸಗಿ ಉದ್ಯೋಗಿಗಳಿಗೆ ನಿವೃತ್ತಿ ನಂತರ ಪಿಂಚಣಿ ಇರೋದಿಲ್ಲ. ಅಂಥವರ ನಿವೃತ್ತಿ ಬದುಕಿಗೆ ಸಹಾಯವಾಗಲೆಂದು ಸರ್ಕಾರದ ವತಿಯಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ ಸ್ಕೀಮ್ (EPFO) ನಡೆಸುತ್ತದೆ. ಈಗ ಇಪಿಎಫ್ ಹಣವನ್ನು ನಿವೃತ್ತಿಗೆ ಮುನ್ನವೇ ಬಹಳಷ್ಟು ಜನರು ವಿತ್ಡ್ರಾ ಮಾಡುತ್ತಿದ್ದಾರೆ. ಆನ್ಲೈನ್ನಲ್ಲಿ ವಿತ್ಡ್ರಾ ಮಾಡಬಹುದಾದಷ್ಟು ಸರಳಗೊಂಡಿರುವ ಪ್ರಕ್ರಿಯೆಯನ್ನು ದುರುಪಯೋಗಿಸಿಕೊಳ್ಳುವವರ ಸಂಖ್ಯೆ ಬಹಳಷ್ಟಿದೆ. ಆದರೆ, ಇಪಿಎಫ್ ಕಾನೂನುಗಳು ಬೇರೆಯೇ ಇವೆ. ಅವುಗಳ ಬಗ್ಗೆ ತಿಳಿದಿರುವುದು ಉತ್ತಮ.
ಇಪಿಎಫ್ನಲ್ಲಿ ನಿವೃತ್ತಿಗೆ ಮುನ್ನ ಹಣವನ್ನು ಅಡ್ವಾನ್ಸ್ ರೂಪದಲ್ಲಿ ಪಡೆಯುವ ಅವಕಾಶ ಕೊಡಲಾಗಿದೆ. ತುರ್ತು ವೆಚ್ಚಕ್ಕೋ ಅಥವಾ ಮುಖ್ಯ ಕಾರಣಗಳಿಗೋ ಹಣ ವಿತ್ಡ್ರಾ ಮಾಡಲೆಂದು ಈ ವ್ಯವಸ್ಥೆ ಮಾಡಲಾಗಿದೆ. ಆದರೆ, ಬಹಳಷ್ಟು ಜನರು ಇಪಿಎಫ್ ಅಡ್ವಾನ್ಸ್ ಪಡೆಯುವಾಗ ನೀಡುವ ಕಾರಣ ಬೇರೆ, ಅದನ್ನು ವಿನಿಯೋಗಿಸುವುದೇ ಬೇರೆಯದಕ್ಕೆ. ಈ ರೀತಿ ಆದರೆ ಅದು ಇಪಿಎಫ್ಒ ನಿಯಮದ ಉಲ್ಲಂಘನೆಯಾಗಿರುತ್ತದೆ. ಇಪಿಎಫ್ಒ ನಿಮಗೆ ದಂಡ ವಿಧಿಸಬಹುದು, ಹಾಗೂ ಹಣವನ್ನು ವಾಪಸ್ ಪಡೆಯಬಹುದು. ಈ ಸಂಬಂಧ ಇಪಿಎಫ್ಒ ಸಂಸ್ಥೆ ಇತ್ತೀಚೆಗೆ ಒಂದು ಎಚ್ಚರಿಕೆಯನ್ನೂ ನೀಡಿತ್ತು.
ಇದನ್ನೂ ಓದಿ: 45ನೇ ವಯಸ್ಸಿಗೆ 4.7 ಕೋಟಿ ರೂ; ಬ್ಯುಸಿನೆಸ್ ಇಲ್ಲ, ಷೇರು ಇಲ್ಲ, ಆದರೂ ಸಂಪಾದಿಸಿದ್ದು ಹೇಗೆ?
ಇಪಿಎಫ್ ಹಣ ಯಾವ್ಯಾವ ಕಾರಣಗಳಿಗೆ ವಿತ್ಡ್ರಾ ಸಾಧ್ಯ?
- 58 ವರ್ಷ ವಯಸ್ಸಿಗೆ ನಿವೃತ್ತಿಯಾದ ನಂತರ ಪೂರ್ಣ ಹಣವನ್ನು ಹಿಂಪಡೆಯಬಹುದು.
- ಸತತ ಎರಡು ತಿಂಗಳು ನಿರುದ್ಯೋಗಿಯಾಗಿದ್ದರೆ ಪೂರ್ಣ ಇಪಿಎಫ್ ಹಣ ಹಿಂಪಡೆಯಬಹುದು.
- ಕನಿಷ್ಠ ಒಂದು ತಿಂಗಳು ನಿರುದ್ಯೋಗಿಯಾಗಿದ್ದರೆ ಶೇ. 75ರಷ್ಟು ಪಿಎಫ್ ಹಣವನ್ನು ಹಿಂಪಡೆಯಲು ಅವಕಾಶ ಇರುತ್ತದೆ.
- 54 ವರ್ಷ ವಯಸ್ಸು ದಾಟಿದ ಬಳಿಕ ಶೇ. 90ರಷ್ಟು ಪಿಎಫ್ ಹಣ ವಿತ್ಡ್ರಾ ಮಾಡಬಹುದು.
ಇಪಿಎಫ್ ಅಡ್ವಾನ್ಸ್ ಪಡೆಯಲು ಇರುವ ಐದು ಕಾರಣಗಳು
- ಖಾತೆದಾರ, ಅವರ ಸಂಗಾತಿ ಅಥವಾ ಅವಲಂಬಿತರು ಯಾರಿಗಾದರೂ ವೈದ್ಯಕೀಯ ಚಿಕಿತ್ಸೆ ಅಗತ್ಯ ಇದ್ದಾಗ.
- ಗೃಹಸಾಲ ಮರುಪಾವತಿ, ಆಸ್ತಿ ಖರೀದಿ, ಮನೆ ನಿರ್ಮಾಣ.
- ಮನೆ ನವೀಕರಣ
- ಉನ್ನತ ಶಿಕ್ಷಣ
- ವೈವಾಹಿಕ ವೆಚ್ಚ
ಐದು ವರ್ಷ ಸೇವಾವಧಿ ಮುಗಿಯುವುದರೊಳಗೆ ಇಪಿಎಫ್ ವಿತ್ಡ್ರಾ ಮಾಡಿದರೆ?
ಇಪಿಎಫ್ ಖಾತೆದಾರ ವೃತ್ತಿಜೀವನ ಆರಂಭಿಸಿ ಐದು ವರ್ಷ ಮುಗಿಯುವುದರೊಳಗೆ ಇಪಿಎಫ್ ಹಣವನ್ನು ಹಿಂಪಡೆದರೆ ಟಿಡಿಎಸ್ ಕಡಿತ ಆಗುತ್ತದೆ.
ಇದನ್ನೂ ಓದಿ: ಜಾಗತಿಕ ಸಾಲ 21 ಟ್ರಿಲಿಯನ್ ಡಾಲರ್ ಏರಿಕೆ; ಎಲ್ಲಾ ದೇಶಗಳ ಸಾಲ ಸೇರಿಸಿದರೆ ಎಷ್ಟಾಗುತ್ತೆ ಗೊತ್ತಾ?
ಸುಳ್ಳು ಕಾರಣ ನೀಡಿ ವಿತ್ಡ್ರಾ ಮಾಡಿದರೆ?
ಸುಳ್ಳು ಕಾರಣ ನೀಡಿ ಇಪಿಎಫ್ ಹಣ ವಿತ್ಡ್ರಾ ಮಾಡುವುದು ತಪ್ಪು. ಇಪಿಎಫ್ಒ ಸಂಸ್ಥೆ ನಿಮ್ಮ ಮೇಲೆ ಕ್ರಮ ಜರುಗಿಸಬಹುದು. ಇಪಿಎಫ್ಒಗೆ ಅನುಮಾನ ಬಂದರೆ ನಿಮ್ಮ ವೆಚ್ಚ ಎಲ್ಲಿಗೆ ಹೋಯಿತು ಎಂದು ವಿಚಾರಿಸಬಹುದು. ಬೇರೆ ಕಾರಣಕ್ಕೆ ವೆಚ್ಚ ಮಾಡಿದಲ್ಲಿ ಆ ಹಣವನ್ನು ಹಿಂಪಡೆಯುವ ಅಧಿಕಾರ ಇಪಿಎಫ್ಒಗೆ ಇರುತ್ತದೆ. ಜೊತೆಗೆ ದಂಡ ಹಾಗೂ ಬಡ್ಡಿಯನ್ನೂ ವಸೂಲಿ ಮಾಡಲಾಗುತ್ತದೆ. ಅಥವಾ ಮುಂದಿನ ಮೂರು ವರ್ಷಗಳವರೆಗೆ ಅವರು ಯಾವುದೇ ಕಾರಣಕ್ಕೂ ವಿತ್ಡ್ರಾ ಮಾಡಲು ಅವಕಾಶ ನೀಡಲಾಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




