Adani Enterprises FPO: ಅದಾನಿ ಎಂಟರ್​ಪ್ರೈಸಸ್ ಎಫ್​ಪಿಒ ದಿನಾಂಕ ಘೋಷಣೆ; ಇಲ್ಲಿದೆ ವಿವರ

| Updated By: Ganapathi Sharma

Updated on: Jan 18, 2023 | 6:30 PM

Adani Enterprises FPO Date; ಒಟ್ಟಾರೆಯಾಗಿ 20,000 ಕೋಟಿ ರೂ. ಬಂಡವಾಳ ಸಂಗ್ರಹದ ಗುರಿ ಹೊಂದಿದ್ದು, ಈ ಪೈಕಿ 10,869 ಕೋಟಿ ರೂ. ಅನ್ನು ಗ್ರೀನ್ ಹೈಡ್ರೋಜನ್ ಯೋಜನೆಗಳು, ವಿಮಾನ ನಿಲ್ದಾಣ ಸೌಲಭ್ಯ ಹಾಗೂ ಗ್ರೀನ್​ಫೀಲ್ಡ್ ಎಕ್ಸ್​​ಪ್ರೆಸ್​ ವೇ ನಿರ್ಮಾಣಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.

Adani Enterprises FPO: ಅದಾನಿ ಎಂಟರ್​ಪ್ರೈಸಸ್ ಎಫ್​ಪಿಒ ದಿನಾಂಕ ಘೋಷಣೆ; ಇಲ್ಲಿದೆ ವಿವರ
ಅದಾನಿ ಸಮೂಹ
Image Credit source: Reuters
Follow us on

ಮುಂಬೈ: ಅದಾನಿ ಸಮೂಹದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅದಾನಿ ಎಂಟರ್​ಪ್ರೈಸಸ್ (Adani Enterprises) ಎಫ್​ಪಿಒ (Follow-On Public Offer) ದಿನಾಂಕ ಪ್ರಕಟಗೊಂಡಿದೆ. ಹೊಸ ಷೇರುಗಳ ಬಿಡುಗಡೆ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಕಂಪನಿ ಹೊಂದಿದ್ದು, ದೇಶದ ಅತಿದೊಡ್ಡ ಪ್ರಮಾಣದ ಎಫ್​ಪಿಒ ಇದಾಗಿರಲಿದೆ. ಎಫ್​ಪಿಒಗೆ ಸಂಬಂಧಿಸಿ ಅದಾನಿ ಸಮೂಹದ ಕಂಪನಿ ಸೋಮವಾರ ಮಾರುಕಟ್ಟೆ ನಿಯಂತ್ರಕ ಸೆಬಿಗೆ (Sebi) ದಾಖಲೆಗಳನ್ನು ಸಲ್ಲಿಸಿತ್ತು. ಜನವರಿ 27ರಿಂದ 31ರ ವರೆಗೆ ಎಫ್​ಪಿಒ ನಡೆಯಲಿದೆ. ಕಂಪನಿಯು ಭಾಗಶಃ ಪಾವತಿ ಆಧಾರದ ಮೇಲೆ ಷೇರುಗಳನ್ನು ಬಿಡುಗಡೆ ಮಾಡಲಿದೆ. ಆದಾಗ್ಯೂ ಎಫ್​ಪಿಒ ಷೇರುಗಳ ದರದ ಬಗ್ಗೆ ಕಂಪನಿ ಇನ್ನೂ ಮಾಹಿತಿ ಬಹಿರಂಗಪಡಿಸಿಲ್ಲ. ಇದಕ್ಕಾಗಿ ಕಂಪನಿಯು ಮರ್ಚೆಂಟ್ ಬ್ಯಾಂಕರ್​​ಗಳ ಅನುಮೋದನೆಗಾಗಿ ಕಾಯುತ್ತಿದೆ ಎನ್ನಲಾಗಿದೆ.

ಬಂಡವಾಳ ವೆಚ್ಚದ ಅಗತ್ಯ ಮತ್ತು ಕೆಲವು ಘಟಕಗಳ ಸಾಲ ತೀರಿಸುವಿಕೆಗಾಗಿ ಅದಾನಿ ಸಮೂಹದ ಕಂಪನಿ ಎಫ್​ಪಿಒ ಬಿಡುಗಡೆಗೆ ನಿರ್ಧರಿಸಿದೆ. ಒಟ್ಟಾರೆಯಾಗಿ 20,000 ಕೋಟಿ ರೂ. ಬಂಡವಾಳ ಸಂಗ್ರಹದ ಗುರಿ ಹೊಂದಿದ್ದು, ಈ ಪೈಕಿ 10,869 ಕೋಟಿ ರೂ. ಅನ್ನು ಗ್ರೀನ್ ಹೈಡ್ರೋಜನ್ ಯೋಜನೆಗಳು, ವಿಮಾನ ನಿಲ್ದಾಣ ಸೌಲಭ್ಯ ಹಾಗೂ ಗ್ರೀನ್​ಫೀಲ್ಡ್ ಎಕ್ಸ್​​ಪ್ರೆಸ್​ ವೇ ನಿರ್ಮಾಣಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ. ಅದಾನಿ ಏರ್​ಪೋರ್ಟ್​ ಹೋಲ್ಡಿಂಗ್ಸ್, ಅದಾನಿ ರೋಡ್ ಟ್ರಾನ್ಸ್​​ಪೋರ್ಟ್, ಮುದ್ರಾ ಸೋಲಾರ್ ಅಂಗ ಸಂಸ್ಥೆಗಳ ಸಾಲ ತೀರಿಸಲು 4,165 ಕೋಟಿ ಬಳಸಲಾಗುವುದು ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: Adani One App: ವಿಮಾನ ನಿಲ್ದಾಣ ಸೇವೆಗಳಿಗಾಗಿ ಅದಾನಿ ಸಮೂಹದಿಂದ ಅದಾನಿ ವನ್ ಆ್ಯಪ್ ಬಿಡುಗಡೆ

ಎಫ್​ಪಿಒ ಮೂಲಕ 20,000 ಕೋಟಿ ರೂ. ಸಂಗ್ರಹಿಸುವ ಪ್ರಸ್ತಾವನೆಗೆ 2022ರ ನವೆಂಬರ್​​ನಲ್ಲಿ ಅದಾನಿ ಎಂಟರ್​ಪ್ರೈಸಸ್​​​ನ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿತ್ತು. ಶೇ 3.5ರಷ್ಟು ಷೇರುಗಳನ್ನು ಎಫ್​ಪಿಒ ಮೂಲಕ ಮಾರಾಟ ಮಾಡಲು ಅದಾನಿ ಎಂಟರ್​ಪ್ರೈಸಸ್ ಉದ್ದೇಶಿಸಿದೆ. ಪ್ರಸ್ತುತ ಪ್ರವರ್ತಕರ ಸಮೂಹವು ಶೇ 72.63ರಷ್ಟು ಷೇರುಗಳನ್ನು ಹೊಂದಿದೆ.

ಎಫ್​ಪಿಒ ಎಂದರೇನು? ಐಪಿಒಗಿಂತ ಹೇಗೆ ಭಿನ್ನ?

ಎಫ್​​ಪಿಒ ಇದರ ವಿಸ್ತೃತ ರೂಪ ‘ಫಾಲೋ ಆನ್ ಪಬ್ಲಿಕ್ ಆಫರಿಂಗ್’. ಇದು ಐಪಿಒ (ಇನಿಷಿಯಲ್ ಪಬ್ಲಿಕ್ ಆಫರಿಂಗ್)​ ಅಥವಾ ಆರಂಭಿಕ ಸಾರ್ವಜನಿಕ ಕೊಡುಗೆಗಿಂತ ಭಿನ್ನ. ಆರಂಭಿಕ ಸಾರ್ವಜನಿಕ ಕೊಡುಗೆ ಎಂದರೆ ಕಂಪನಿಯೊಂದು ಷೇರುಗಳನ್ನು ಮಾರಾಟ ಮಾಡುವ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸುವ ಹಂತ. ಸರಳವಾಗಿ ಹೇಳುವುದಾದರೆ ಇದರ ನಂತರದ ಹಂತವೇ ಎಫ್​ಪಿಒ. ಹೆಸರೇ ಹೇಳುವಂತೆ ಎಫ್​ಪಿಒ ಎಂದರೆ ಆರಂಭಿಕ ಸಾರ್ವಜನಿಕ ಕೊಡುಗೆಯ ನಂತರದ ಹಂತ. ಕಂಪನಿಯೊಂದು ಐಪಿಒ ಮೂಲಕ ಷೇರು ಮಾರಾಟ ಮಾಡಿದ ನಂತರದಲ್ಲಿ, ಮತ್ತಷ್ಟು ಬಂಡವಾಳ ಸಂಗ್ರಹಕ್ಕಾಗಿ ಹೆಚ್ಚುವರಿಯಾಗಿ ಷೇರುಗಳನ್ನು ಬಿಡುಗಡೆ ಮಾಡುವುದೇ ‘ಫಾಲೋ ಆನ್ ಪಬ್ಲಿಕ್ ಆಫರಿಂಗ್ ಅಥವಾ ಎಫ್​ಪಿಒ’. ಉದ್ಯಮದ ವಿಸ್ತರಣೆಗಾಗಿ, ಸಾಲ ತೀರಿಸಲು ಮತ್ತು ಇತರ ಮುಖ್ಯ ಉದ್ದೇಶಗಳಿಗಾಗಿ ದೊಡ್ಡ ಮಟ್ಟದ ಬಂಡವಾಳ ಸಂಗ್ರಹಣೆ ಗುರಿಯೊಂದಿಗೆ ಕಂಪನಿಗಳು ಎಫ್​ಪಿಒ ಹಮ್ಮಿಕೊಳ್ಳುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ