ಮುಂಬೈ: ಎಫ್ಪಿಒ (Follow-On Public Offer) ಮೂಲಕ ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವ ಅದಾನಿ ಎಂಟರ್ಪ್ರೈಸಸ್ (Adani Enterprises) ದೊಡ್ಡ ಪ್ರಮಾಣದ ಹೂಡಿಕೆದಾರರಿಗೆ ಶೇ 10ರಿಂದ 15ರ ವರೆಗೆ ರಿಯಾಯಿತಿ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಹೊಸ ಷೇರುಗಳ ಬಿಡುಗಡೆ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಕಂಪನಿ ಹೊಂದಿದ್ದು, ಷೇರು ಬೆಲೆ 3,112 ರೂ.ನಿಂದ 3,276 ರೂ. ನಡುವೆ ಇರಲಿದೆ ಎಂಬುದು ಕಂಪನಿಯು ಮಾರುಕಟ್ಟೆ ನಿಯಂತ್ರಕಕ್ಕೆ ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬಂದಿದೆ. ದೊಡ್ಡ ಹೂಡಿಕೆದಾರರಿಗೆ ಈಗಿನ ಮಾರುಕಟ್ಟೆ ದರದಲ್ಲಿ ಶೇ 10ರ ರಿಯಾಯಿತಿ ದೊರೆಯುವ ಸಾಧ್ಯತೆ ಇದೆ ಎಂದು ‘ಬ್ಲೂಮ್ಬರ್ಗ್’ ತಾಣ ಈಗಾಗಲೇ ವರದಿ ಮಾಡಿದೆ. ಜನವರಿ 27ರಿಂದ 31ರ ವರೆಗೆ ಎಫ್ಪಿಒ ನಡೆಯಲಿದ್ದು, ದೇಶದ ಅತಿದೊಡ್ಡ ಐಪಿಒ ಇದಾಗಿರಲಿದೆ.
ಷೇರು ಮಾರಾಟದಿಂದ ದೊರೆತ ಒಟ್ಟು ಮೊತ್ತದ ಅರ್ಧದಷ್ಟನ್ನು ವಿಮಾನ ನಿಲ್ದಾಣಗಳ ವಿಸ್ತರಣೆ, ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಬಳಸಿಕೊಳ್ಳಲು ಕಂಪನಿ ಉದ್ದೇಶಿಸಿದ್ದು, ಉಳಿದ ಮೊತ್ತದಲ್ಲಿ ಒಂದು ಪಾಲನ್ನು ಅಂಗಸಂಸ್ಥೆಗಳ ಸಾಲ ತೀರಿಸಲು ಬಳಸಲು ಉದ್ದೇಶಿಸಿದೆ. ಆ್ಯಂಕರ್ ಇನ್ವೆಸ್ಟರ್ಗಳಿಗೆ (ಸಾರ್ವಜನಿಕರಿಗೆ ಷೇರುಗಳನ್ನು ಮಾರಾಟ ಮಾಡುವ ಮೊದಲು ನಿಗದಿತ ಬೆಲೆಗೆ ಷೇರು ಖರೀದಿಸಲು ಮುಂದಾಗುವ ಸಂಸ್ಥೆಗಳು) ಜನವರಿ 25ರಂದು ಅವಕಾಶ ನೀಡಲಾಗಿದೆ. ನಂತರ ಜನವರಿ 27ರಿಂದ 31ರ ವರೆಗೆ ಎಫ್ಪಿಒ ನಡೆಯಲಿದೆ.
ಇದನ್ನೂ ಓದಿ: Adani Enterprises FPO: ಅದಾನಿ ಎಂಟರ್ಪ್ರೈಸಸ್ ಎಫ್ಪಿಒ ದಿನಾಂಕ ಘೋಷಣೆ; ಇಲ್ಲಿದೆ ವಿವರ
ಅಪಾರ ಪ್ರಮಾಣದ ಷೇರು ಮಾರಾಟದಿಂದ ಅದಾನಿಗೆ ಹಲವು ಗುರಿಗಳನ್ನು ಸಾಧಿಸಲು ಸಾಧ್ಯವಾಗಲಿದೆ. ಹೂಡಿಕೆಯ ನೆಲೆ ವಿಸ್ತರಣೆಯೂ ಸಾಧ್ಯವಾಗಲಿದೆ. ಅದಾನಿ ಎಂಟರ್ಪ್ರೈಸೆಸ್ ಷೇರುಗಳು ಕಳೆದ ಒಂದು ವರ್ಷದಲ್ಲಿ ಶೇ 95ರಷ್ಟು ವೃದ್ಧಿಯಾಗಿ 3,596.7 ರೂ.ಗೆ ತಲುಪಿದೆ. ಕಂಪನಿಯ ಷೇರು ಒಂದು ವರ್ಷದ ಮುಂಗಡ ಗಳಿಕೆಗಿಂತ 141 ಪಟ್ಟು ಹೆಚ್ಚು ಮೌಲ್ಯದಲ್ಲಿ ವಹಿವಾಟು ನಡೆಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ಎಫ್ಪಿಒ ಮೂಲಕ 20,000 ಕೋಟಿ ರೂ. ಸಂಗ್ರಹಿಸುವ ಪ್ರಸ್ತಾವನೆಗೆ 2022ರ ನವೆಂಬರ್ನಲ್ಲಿ ಅದಾನಿ ಎಂಟರ್ಪ್ರೈಸಸ್ನ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿತ್ತು. ಶೇ 3.5ರಷ್ಟು ಷೇರುಗಳನ್ನು ಎಫ್ಪಿಒ ಮೂಲಕ ಮಾರಾಟ ಮಾಡಲು ಅದಾನಿ ಎಂಟರ್ಪ್ರೈಸಸ್ ಉದ್ದೇಶಿಸಿದೆ. ಪ್ರಸ್ತುತ ಪ್ರವರ್ತಕರ ಸಮೂಹವು ಶೇ 72.63ರಷ್ಟು ಷೇರುಗಳನ್ನು ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ