Postal Life Insurance: ಅಂಚೆ ಜೀವ ವಿಮೆಗೆ ಬೋನಸ್ ಪ್ರಕಟಿಸಿದ ಸರ್ಕಾರ; ವಿವರ ಇಲ್ಲಿದೆ
ಅಂಚೆ ವಿಮಾ ಪಾಲಿಸಿದಾರರಿಗೆ ಖುಷಿಯ ಸುದ್ದಿ. ಪೋಸ್ಟಲ್ ಹೋಲ್ ಲೈಫ್ ಇನ್ಷೂರೆನ್ಸ್ ಪಾಲಿಸಿದಾರರಿಗೆ ಸರ್ಕಾರ ಪ್ರತೀ ಸಾವಿರ ರೂಗೆ 76 ರೂ ಬೋನಸ್ ಪ್ರಕಟಿಸಿದೆ. ಎಂಡೋಮೆಂಟ್ ಪಾಲಿಸಿದಾರರಿಗೆ 52 ರೂ ಬೋನಸ್ ಘೋಷಿಸಲಾಗಿದೆ. ಟರ್ಮಿನಲ್ ಬೋನಸ್ ಕೂಡ ಪ್ರಕಟಿಸಲಾಗಿದೆ.
ಮುಂದಿನ ಹಣಕಾಸು ವರ್ಷಕ್ಕೆ ಅಂಚೆ ಜೀವ ವಿಮೆ ಅಥವಾ ಪೋಸ್ಟಲ್ ಲೈಫ್ ಇನ್ಷೂರೆನ್ಸ್ ಪಾಲಿಸಿಗಳಿಗೆ (Postal Life Insurance) ಕೇಂದ್ರ ಸರ್ಕಾರ ಬೋನಸ್ (Bonus) ಪ್ರಕಟಿಸಿದೆ. ವಿವಿಧ ಪಾಲಿಸಿಗಳಿಗೆ ಶೇ 7.6ರವರೆಗೂ ಬೋನಸ್ ಘೋಷಿಸಲಾಗಿದೆ. 2023 ಏಪ್ರಿಲ್ 1ರಿಂದ ಇದು ಅನ್ವಯ ಆಗುತ್ತದೆ. ಅಂಚೆ ಜೀವ ವಿಮಾ ನಿರ್ದೇಶನಾಲಯ ಈ ಪ್ರಕಟಣೆ ಹೊರಡಿಸಿದ್ದು, ಗಜೆಟ್ನಲ್ಲಿ ಈ ಆದೇಶವನ್ನು ಪ್ರಕಟಿಸಲಾಗಿದೆ. ಪೋಸ್ಟಲ್ ಲೈಫ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಪ್ರಕಟಿಸಲಾಗಿರುವ ಬೋನಸ್ ಗಳ ವಿವರ ಇಲ್ಲಿದೆ.
1) ಹೋಲ್ ಲೈಫ್ ಇನ್ಷೂರೆನ್ಸ್ (ಡಬ್ಲ್ಯೂಎಲ್ಎ)- ಪ್ರತೀ ಸಾವಿರ ರೂ ಮೊತ್ತಕ್ಕೆ 76 ರೂ ಬೋನಸ್.
2) ಎಂಡೋಮೆಂಟ್ ಅಷೂರೆನ್ಸ್ (ಇಎ)- ಪ್ರತೀ ಸಾವಿರ ರೂ ಮೊತ್ತಕ್ಕೆ 52 ರೂ ಬೋನಸ್.
3) ಆಂಟಿಸಿಪೇಟೆಡ್ ಎಂಡೋಮೆಂಟ್ ಅಷೂರೆನ್ಸ್ (ಎಇಎ) – ಪ್ರತೀ ಸಆವಿರ ರೂ ಮೊತ್ತಕ್ಕೆ 48 ರೂ ಬೋನಸ್.
4) ಕನ್ವರ್ಟಿಬಲ್ ಹೋಲ್ ಲೈಫ್ ಅಷೂರೆನ್ಸ್ (ಸಿಡಬ್ಲ್ಯೂಎಲ್ಎ)- ಪ್ರತೀ ಸಾವಿರ ರೂ ಮೊತ್ತಕ್ಕೆ 76 ರೂ ಅಥವಾ 52 ರೂ ಬೋನಸ್ ಕೊಡಲಾಗುತ್ತದೆ.
5) ಹೋಲ್ ಲೈಫ್ ಅಷೂರೆನ್ಸ್ ಮತ್ತು ಎಂಡೋಮೆಂಟ್ ಅಷೂರೆನ್ಸ್ ಪಾಲಿಸಿದಾರರಿಗೆ ಟರ್ಮಿನಲ್ ಬೋನಸ್ ಆಗಿ ಪ್ರತೀ 10 ಸಾವಿರ ರೂಪಾಯಿಗೆ 20 ರೂ ಕೊಡಲಾಗುತ್ತದೆ.
ಇಲ್ಲಿ ಪಟ್ಟಿಯಲ್ಲಿರುವ ನಾಲ್ಕನೇ ಪಾಲಿಸಿಯು ಕನ್ವರ್ಟಿಬಲ್ ಪಾಲಿಸಿಯಾಗಿದೆ. ಇಲ್ಲಿ ಹೋಲ್ ಲೈಫ್ ಅಷೂರೆನ್ಸ್ ಪಾಲಿಸಿಗೆ ನೀಡಲಾಗುವ 76 ರೂ ಬೋನಸ್ ಅನ್ನು ಕನ್ವರ್ಟಿಬಲ್ ಪಾಲಿಸಿದಾರರಿಗೂ ನೀಡಲಾಗುತ್ತದೆ. ಒಂದು ವೇಳೆ ಪಾಲಿಸಿ ಕನ್ವರ್ಷನ್ ಆಯ್ಕೆ ಮಾಡಿಕೊಂಡಿದ್ದರೆ ಎಂಡೋಮೆಂಟ್ ಪಾಲಿಸಿದಾರರಿಗೆ ನೀಡಲಾಗುವ 52 ರೂ ಬೋನಸ್ ಸಿಗುತ್ತದೆ.
ಇದನ್ನೂ ಓದಿ: Saving Schemes: ಪಿಪಿಎಫ್, ಎನ್ಎಸ್ಸಿ ಖಾತೆಗಳು ಮೆಚ್ಯೂರಿಟಿ ಅವಧಿ ಬಳಿಕ ನಿಷ್ಕ್ರಿಯಗೊಂಡಿದ್ದರೆ ಏನು ಮಾಡಬೇಕು?
ಇನ್ನು, ಟರ್ಮಿನಲ್ ಬೋನಸ್ ಎಂದರೆ ಪಾಲಿಸಿ ಅವಧಿ ಮುಗಿದು ಮೆಚ್ಯೂರ್ ಆದಾಗ ಸೆಟಲ್ಮೆಂಟ್ ವೇಳೆ ನೀಡಲಾಗುವ ಬೋನಸ್ ಹಣವಾಗಿದೆ. ಹೋಲ್ ಲೈಫ್ ಅಷೂರೆನ್ಸ್ ಮತ್ತು ಎಂಡೋಮೆಂಟ್ ಅಷೂರೆನ್ಸ್ ಪಾಲಿಸಿದಾರರಿಗೆ ಸರ್ಕಾರ ಟರ್ಮಿನಲ್ ಬೋನಸ್ ಹಣವನ್ನು ಘೋಷಿಸಿದೆ. ಆದರೆ, 20 ವರ್ಷಕ್ಕೂ ಹೆಚ್ಚು ಅವಧಿಯ ಪಾಲಿಸಿದಾರರಿಗೆ ಮಾತ್ರ ಟರ್ಮಿನಲ್ ಬೋನಸ್ ಅನ್ವಯ ಆಗುತ್ತದೆ.
ಪೋಸ್ಟಲ್ ಇನ್ಷೂರೆನ್ಸ್ ಇತಿಹಾಸ
ಪೋಸ್ಟಲ್ ಇನ್ಷೂರೆನ್ಸ್ ಮೊದಲು ಆರಂಭಗೊಂಡಿದ್ದು 1884ರಲ್ಲಿ. ಅಂಚೆ ಇಲಾಖೆಯ ನೌಕರರಿಗೆ ವಿಮೆ ಒದಗಿಸುವುದು ಮೂಲೋದ್ದೇಶವಾಗಿತ್ತು. ಆದರೆ, 2017ರಲ್ಲಿ ಇದನ್ನು ಸಾರ್ವಜನಿಕರಿಗೂ ಮುಕ್ತಗೊಳಿಸಲಾಯಿತು. ವೈದ್ಯರು, ಎಂಜಿನಿಯರು ಇತ್ಯಾದಿ ವೃತ್ತಿಪರರಿಗೆ ಪ್ರಿಯವಾಗುವ ರೀತಿಯಲ್ಲಿ ಪಾಲಿಸಿಗಳನ್ನು ರೂಪಿಸಲಾಯಿತು. ಒಟ್ಟು ಆರು ಪೋಸ್ಟಲ್ ಪಾಲಿಸಿಗಳಿವೆ. ಅದರಲ್ಲಿ ಮಕ್ಕಳ ಇನ್ಷೂರೆನ್ಸ್ ಪಾಲಿಸಿಯೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ